ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್ ಕ್ರಾಂತಿ ಫೇಸ್‌ಬುಕ್, ಟ್ವಿಟರ್‌ಗಳಿಂದ ಆಯಿತೇ?

Last Updated 19 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಈಜಿಪ್ಟ್‌ನಲ್ಲಿ ಇತ್ತೀಚೆಗೆ ನಡೆದ ರಕ್ತರಹಿತ ಕ್ರಾಂತಿಯ ಹಿಂದೆ ಇದ್ದ ಶಕ್ತಿಗಳಾವುವು ಎಂಬ ಬಗ್ಗೆ ಜಗತ್ತಿನಾದ್ಯಂತ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ. ಈ ಕ್ರಾಂತಿಗೆ ಆಧುನಿಕ ಸಂಪರ್ಕ ಮಾಧ್ಯಮಗಳಾದ ಇಂಟರ್‌ನೆಟ್, ಟ್ವಿಟರ್, ಫೇಸ್‌ಬುಕ್, ಮೊಬೈಲ್, ಯು ಟ್ಯೂಬ್, ಡಿಜಿ ಕ್ಯಾಮರಾಗಳೇ ಕಾರಣ ಎಂದು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ತಜ್ಞರು ಹೇಳಿದರೆ ಸಮಾಜ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು ಅದು ಉತ್ಪ್ರೇಕ್ಷೆ ಎಂದು ಹೇಳುತ್ತಿದ್ದಾರೆ. ಪರ-ವಿರೋಧಿ ಬಣಗಳ ವಾದ ಎಷ್ಟು ಪ್ರಬಲವಾಗಿದೆಯೆಂದರೆ ಇದನ್ನು ಮಾಧ್ಯಮ ತಂತ್ರಜ್ಞಾನ ಲೋಕದಲ್ಲಿ ಕಂಡುಬಂದಿರುವ ದೊಡ್ಡ ಸ್ಫೋಟವೆಂದೇ ವರ್ಣಿಸಲಾಗುತ್ತಿದೆ.

ಈಜಿಪ್ಟ್ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದರೂ ಆರ್ಥಿಕವಾಗಿ ಬಲಿಷ್ಠವಾದ ದೇಶ ಅಲ್ಲ.ಕಂಪ್ಯೂಟರ್ ಸಾಕ್ಷರತೆ ಕಡಿಮೆ.ಈಗ ಬಹಿರಂಗವಾಗಿರುವ ಮಾಹಿತಿ ಪ್ರಕಾರ ದೇಶದ ನೂರು ಜನರಲ್ಲಿ  ಒಬ್ಬರು ಮಾತ್ರ ಫೇಸ್ ಬುಕ್ ಅಕೌಂಟ್ ಹೊಂದಿದ್ದಾರೆ.ಟ್ವಿಟರ್ ಬಳಸುವವರು ಇನ್ನೂ ಕಡಿಮೆ.ಹಾಗೆ ನೋಡಿದರೆ ಯುಎಇ, ಕತಾರ್, ಸೌದಿ ಅರೇಬಿಯಾದಲ್ಲಿ ಹೆಚ್ಚು ಫೇಸ್‌ಬುಕ್ ಬಳಕೆದಾರರು ಇದ್ದಾರೆ.ಪರಿಸ್ಥಿತಿ ಹೀಗಿರುವಾಗ ಈಜಿಪ್ಟ್‌ನಲ್ಲಿ ಕ್ರಾಂತಿಯಾದದ್ದು ಫೇಸ್ ಬುಕ್, ಟ್ವಿಟರ್ ಮತ್ತು ಸಾಮಾಜಿಕ ಸಂಪರ್ಕ ಸಾಧನಗಳಿಂದ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಸಮಾಜ ವಿಜ್ಞಾನಿಗಳು ಕೇಳುತ್ತಿದ್ದಾರೆ.

 ಮಾಧ್ಯಮಗಳ ಪಾತ್ರವನ್ನು ಎತ್ತಿ ಹೇಳುವವರು ತಮ್ಮ ವಾದದ ಸಮರ್ಥನೆಗೆ ಕೆಲವು ನಿಖರ ಉದಾಹರಣೆಗಳನ್ನು ಕೊಡುತ್ತಾರೆ. ಮಾದಕ ವಸ್ತು ಜಾಲವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳೆದ ಜೂನ್ 6 ರಂದು ಯುವ ವ್ಯಾಪಾರಿ ಖಲೀದ್ ಸಯದ್ ಎಂಬುವರನ್ನು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ನಗರದಲ್ಲಿ ಬಂಧಿಸಿ ಚಿತ್ರಹಿಂಸೆ ನೀಡುತ್ತಾರೆ.ಅವರ ಮೃತ ದೇಹವನ್ನು ಬೀದಿಯೊಂದರಲ್ಲಿ ಎಸೆದು  ಹೋಗುತ್ತಾರೆ.ಈ ಘಟನೆಯಿಂದ ತೀವ್ರ ಆಘಾತಗೊಂಡ ವೇಲ್  ಗೋನಿಮ್ ಎಂಬ ಯುವಕ ಕಳೆದ ಜೂನ್ ತಿಂಗಳಲ್ಲಿ ಆಧುನಿಕ ಸಮೂಹ ಸಂಪರ್ಕ ಮಾಧ್ಯಮ  ‘ಫೇಸ್ ಬುಕ್’ನಲ್ಲಿ  ‘ವಿ ಆರ್ ಆಲ್  ಸಯದ್’( ನಾವೆಲ್ಲಾ ಖಲೀದ್ ಸಯದ್‌ರೇ) ಎಂಬ ಪುಟವನ್ನು ರೂಪಿಸಿ ಸಂದೇಶ ರವಾನಿಸುತ್ತಾರೆ.

ಶವಾಗಾರದಲ್ಲಿದ್ದ ಸಯದ್ ಮುಖದ ಫೋಟೊವೊಂದನ್ನು ಆ ಪೇಜಲ್ಲಿ ಮುದ್ರಿಸುತ್ತಾರೆ.ಆ ನಂತರ ಪೊಲೀಸರ ದೌರ್ಜನ್ಯ ಕುರಿತ ಅನೇಕ ವೀಡಿಯೋಗಳು,ಫೋಟೋಗಳು ಯು ಟ್ಯೂಬ್‌ನಲ್ಲಿ,ಫೇಸ್ ಬುಕ್ ಪುಟಗಳಲ್ಲಿ ಹರಿದಾಡುತ್ತವೆ.ಈ ಫೇಸ್‌ಬುಕ್‌ನ ಈ ಪೇಜನ್ನು ಈಜಿಪ್ಟ್‌ನ ಜನರು ನೋಡುತ್ತಾರೆ.ಯುವಕರು ಅದರಲ್ಲಿಯೂ ಕಂಪ್ಯೂಟರ್ ಜ್ಞಾನ ಇದ್ದವರು, ಇಂಟರ್‌ನೆಟ್ ಕೆಫೆಗೆ ಹೋಗಿ ವಿಷಯ ಜಾಲಾಡಿ ಬರುವವರು ತಮ್ಮ ಮಿತ್ರರಿಗೆ, ಪರಿಚಿತರಿಗೆ ವಿಷಯ ತಿಳಿಸುತ್ತ ಹೋಗುತ್ತಾರೆ. ಕ್ರಾಂತಿಯ ಮೊದಲ ಅಲೆ ಕಾಣಿಸಿಕೊಂಡಿದ್ದೇ ಇಲ್ಲಿ ಎಂದು ತಂತ್ರಜ್ಞಾನದ ಪಾರಮ್ಯವನ್ನು ಕೊಂಡಾಡುವವರು ವಾದಿಸುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಪುಟ ನಿರ್ಮಿಸಿದ ವ್ಯಕ್ತಿ ಮೂಲಭೂತವಾಗಿ ಈಜಿಪ್ಟ್‌ನ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತ ಬಂದವರೇನಲ್ಲ.ಗೋನಿಮ್ ಮೂಲತಃ ಕಂಪ್ಯೂಟರ್ ತಜ್ಞ. ದುಬಾಯ್‌ನಲ್ಲಿ ನೆಲೆಸಿ ವಿಶ್ವ ಸಂಪರ್ಕ ಜಾಲ  ‘ಗೂಗಲ್’ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಅಗಿದ್ದರು.ಸಣ್ಣ ಉದ್ಯಮ ಸಂಸ್ಥೆಗಳಿಗೆ ಸಣ್ಣ ಪುಟ್ಟ ಸಾಫ್ಟ್‌ವೇರ್‌ಗಳನ್ನು ರೂಪಿಸಿಕೊಡುತ್ತಿದ್ದರು.

ಅರಬ್ ಭಾಷೆಯ ವೆಬ್ ಸೈಟೊಂದನ್ನು ಸ್ಥಾಪಿಸಿ ಇ- ಮೇಲ್ ಮೂಲಕ ಸಂದೇಶ ಮಾಡುವುದು, ಮೇಲ್ ಹುಡುಕುವುದು, ಹಾಗೂ ಸಂಭಾಷಣೆ ನಡೆಸುವುದು ಹೇಗೆ ಎಂಬ ಬಗ್ಗೆ ಕಂಪ್ಯೂಟರ್ ಮೂಲಕ ಪಾಠ ಹೇಳಿಕೊಡುತ್ತಿದ್ದವರು.ಸಯದ್ ಸಾವು ಈಜಿಪ್ಟ್ ದೇಶವರೇ ಆದ ಗೋನಿಮ್ ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ.ಪೊಲೀಸರು ನಡೆಸುತ್ತಿರುವ ದೌರ್ಜನ್ಯ ಎಲ್ಲರಿಗೆ ಗೊತ್ತಾಗಲಿ ಎಂದು ಫೇಸ್‌ಬುಕ್‌ನಲ್ಲಿ ಸಯದ್ ಪುಟ ಪ್ರಕಟ ಮಾಡುತ್ತಾರೆ.ಹಾಗೆ ನೋಡಿದರೆ ದೌರ್ಜನ್ಯದ ವಿರುದ್ಧ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ದನಿಗಳು ಕೇಳಿಬಂದಿದ್ದವು.

ಏಪ್ರಿಲ್ ತಿಂಗಳಲ್ಲಿ ಸ್ವಲ್ಪ ಭಿನ್ನವಾದ ಪ್ರಯತ್ನವನ್ನು ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಯುವತಿ ಅಸ್ಮಾ ಮಹಫೂಜ್ ಮಾಡಿದ್ದರು.ಅವರು ಯೂಟೈಬ್‌ನಲ್ಲಿ  ವೀಡಿಯೊ ಒಂದನ್ನು ಬಿತ್ತರಿಸಿದ್ದರು.‘ನಾವು ಇನ್ನೆಷ್ಟು ಕಾಲ ಭೀತಿಯ ವಾತಾವರಣದಲ್ಲಿ ಬದುಕುವುದು..?’ ಎಂದು ಅವರು ತಮ್ಮ ವೀಡಿಯೊದಲ್ಲಿ ಜನರನ್ನು ಕೇಳಿದ್ದರು.ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದರೂ ಬಹಿರಂಗವಾಗಿ ಈ ರೀತಿ ಜನರನ್ನು ಕೇಳಿದ ಅವರ ಧೈರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

 ಈ ಬೆಳವಣಿಗೆಗಳನ್ನು ಪೊಲೀಸರು ಗಮನಿಸದೆ ಇರಲಿಲ್ಲ. ಯುವಕರು ಮುಬಾರಕ್ ಆಡಳಿತದ ವಿರುದ್ಧ ಒಳಗೊಳಗೇ ಕುದಿಯುತ್ತಿದ್ದರು. ನಿರುದ್ಯೋಗ, ಬಡತನದಿಂದ ಬಳಲಿಹೋಗಿದ್ದರು. ತುರ್ತು ಪರಿಸ್ಥಿತಿಯಿಂದಾಗಿ ನಿರ್ಮಾಣವಾಗಿದ್ದ ಉಸಿರುಕಟ್ಟುವಂಥ ವಾತಾವರಣ ಜನರನ್ನು ಕಂಗೆಡಿಸಿತ್ತು. ಮುಬಾರಕ್ ಸರ್ಕಾರ ವಿರೋಧಿಗಳನ್ನು ಬಗ್ಗುಬಡಿಯುತ್ತ ಬಂದಿತ್ತು. ಸರ್ಕಾರದ ವಿರುದ್ಧ ದನಿ ಎತ್ತಿದ ಸಾವಿರಾರು ಮಂದಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ.

ಟ್ಯುನೀಷಿಯಾದಲ್ಲಿ ನಡೆದ ಜನಾಂದೋಲನದಿಂದ  ಅಧ್ಯಕ್ಷ ಅಬಿದಿನ್ ಬಿನ್ ಅಲಿ ಪಲಾಯನ ಮಾಡಿದ ನಿದರ್ಶನ ಜನರ ಮುಂದಿತ್ತು. ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೈರೋದಲ್ಲಿ ಒಂದು ದಿನ ಪ್ರತಿಭಟನೆ ಮಾಡುವ ಕರೆಗಳು ಇಂಟರ್‌ನೆಟ್, ಫೇಸ್ ಬುಕ್, ಟ್ವಿಟರ್‌ಗಳಲ್ಲಿ ಹರಿದಾಡಿದವು.ಜನವರಿ 25 ಕೈರೋದ ತಹ್ರೀರ್ ಚೌಕದಲ್ಲಿ ಪ್ರತಿಭಟನೆ ಮಾಡುವುದೆಂದು ಕೆಲವು ಯುವಕರು ನಿರ್ಧರಿಸಿ ಸಂದೇಶ ಬಿತ್ತರಿಸಿದರು.ಸಾವಿರಾರು ಸಂದೇಶಗಳು ಕೆಲವೇ ದಿನಗಳಲ್ಲಿ ಆಧುನಿಕ ಸಂಪರ್ಕ ಮಾಧ್ಯಮದಲ್ಲಿ ಹರಿದಾಡಿದವು. ಪೊಲೀಸರು ಎಚ್ಚರಗೊಂಡು ಕಂಪ್ಯೂಟರ್ ಸರ್ವರ್‌ಗಳನ್ನು ಸ್ಥಗಿತ ಮಾಡುವ ವೇಳೆಗೆ ಸಂದೇಶ ಸಾವಿರ ಸಾವಿರ ಸಂಖ್ಯೆಯಲ್ಲಿ ರವಾನೆಯಾಗಿ ಹೋಗಿತ್ತು. 

ಸರ್ವರ್‌ಗಳು ಸ್ಥಗಿತಗೊಂಡ ಮೇಲೆ ಕೂಡ ಪರ್ಯಾಯ ಸಂಪರ್ಕ ಜಾಲಗಳನ್ನು ಬಳಸಿಕೊಂಡು ಪೊಲೀಸರ ಭದ್ರತೆ ಎಲ್ಲಿ ಹೆಚ್ಚಿದೆ, ಯಾವ ರಸ್ತ್ತೆಯಲ್ಲಿ ಬರಬೇಕು ಮುಂತಾದ ಸೂಚನೆಗಳನ್ನು ಕಳುಹಿಸುವಲ್ಲಿ ಯುವಕರು ಯಶಸ್ವಿಯಾದರು. ಜನವರಿ 25ರಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಸೇರಿದರು.

ದಿನೇ ದಿನೇ ಅಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಯಿತು. ತಹ್ರೀರ್ ಚೌಕದಲ್ಲಿ ಸೇರಿದ್ದ ಜನರನ್ನು ನೋಡಿದರೆ ಅವರೆಲ್ಲರೂ ಇಂಟರ್‌ನೆಟ್, ಯು ಟ್ಯೂಬ್ ಬಳಕೆದಾರರು ಎಂದು ಹೇಳಲು ಸಾಧ್ಯವಿಲ್ಲ.ಅಥವಾ ಫೇಸ್ ಬುಕ್, ಟ್ವಿಟರ್ ಸಂದೇಶಗಳಿಂದ ಪ್ರೇರಿತರಾಗಿ ಅಲ್ಲಿಗೆ ಬಂದವರಾಗಿರಲಿಲ್ಲ.ಮುಬಾರಕ್ ಆಡಳಿತದ ಬಗ್ಗೆ ಅಸಮಾಧಾನ ಮತ್ತು ಧೈರ್ಯ ಇರುವವರು ಅಲ್ಲಿ ಸೇರಿದ್ದರು.ಮುಬಾರಕ್ ಕೊನೆಗೂ ರಾಜೀನಾಮೆ ನೀಡಿ ಪಲಾಯನ ಮಾಡಿದರು.ಮುಬಾರಕ್ ಅಧಿಕಾರಕ್ಕೆ ತ್ಯಾಗಕ್ಕೆ ಜನರ ಒತ್ತಡ ಎಷ್ಟು ಕಾರಣವೋ ಅಷ್ಟೇ ಕಾರಣ ಅಮೆರಿಕ ತಂದ ಒತ್ತಡ ಎನ್ನುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಸರ್ವಾಧಿಕಾರಿಗಳ ಆಡಳಿತವಿರುವ ದೇಶಗಳಲ್ಲಿ ಸಂಪರ್ಕ ಮಾಧ್ಯಮಗಳು ವ್ಯವಸ್ಥೆಯ ಭಾಗವಾಗಿಯೇ ಕೆಲಸಮಾಡುತ್ತ ಬಂದಿವೆ.ಅವುಗಳ ಮೇಲೆ ಆಡಳಿತ ವ್ಯವಸ್ಥೆ ನಿಯಂತ್ರಣ ಸಾಧಿಸಿರುತ್ತದೆ.ಹೀಗಾಗಿ ಅಂಥ ವ್ಯವಸ್ಥೆಯಲ್ಲಿ ಮಾಧ್ಯಮಗಳು ಜನರ ಪರವಾಗಿ ನಿಲ್ಲುವ ಸಾಧ್ಯತೆ ಇಲ್ಲ.ಆದರೆ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ ಮತ್ತು ಬಂಡುಕೋರರ ಜೊತೆ ಗುರುತಿಸಿಕೊಂಡು ಕೆಲಸಮಾಡಿದ ಮಾಧ್ಯಮಗಳು ಇತಿಹಾಸದುದ್ದಕ್ಕೂ ಕಾಣುತ್ತವೆ.ಸಾಹಿತ್ಯ, ಕಲೆ, ಸಂಗೀತ, ಗೋಡೆ ಬರಹಗಳು,ಬಿತ್ತಿ ಪತ್ರ, ಪತ್ರಿಕೆಗಳು ಶೀತಲ ಸಮರದ ಕಾಲದಲ್ಲಿ ಹೋರಾಟದ ಭಾಗವಾಗಿಯೇ ಬೆಳೆದಿವೆ.ಛಾಯಾಗ್ರಹಣ,ಚಲನ ಚಿತ್ರ ಮಾದ್ಯಮಗಳು ಕ್ರಾಂತಿಗೆ ನೆರವಾಗಿವೆ.ಸೋವಿಯತ್ ದೇಶ ಛಿದ್ರವಾದ ನಂತರ ಅದರಲ್ಲಿಯೂ ಕಮ್ಯುನಿಸ್ಟ್ ಸಿದ್ಧಾಂತ ಆಧರಿತ ಆಡಳಿತ ವ್ಯವಸ್ಥೆ ಕುಸಿದ ನಂತರ ಮಾಧ್ಯಮ ಪ್ರಪಂಚ ದೊಡ್ಡ ಬದಲಾವಣೆಗೆ ಒಳಗಾಗಿದೆ.

ಅಮೆರಿಕ ಏಕೈಕ ಬಲಿಷ್ಠ ರಾಷ್ಟ್ರವಾಗಿ ಮೂಡಿದ ನಂತರ ಮುಕ್ತ ಆರ್ಥಿಕ ವ್ಯವಸ್ಥೆಯ ಅಲೆ ಎದ್ದಿತು.ಬಂಡವಾಳಶಾಹಿ ಆಡಳಿತ ವಿಧಾನ ಮಾದರಿಯಾಯಿತು.ತಂತ್ರಜ್ಞಾನ ಆಧುನಿಕ ಬದುಕಿನ ಮುಂಚೂಣಿಗೆ ಬಂತು.ತಂತ್ರಜ್ಞಾನದ  ಬೆಳವಣಿಗೆ ಮಾಧ್ಯಮಗಳ ಸ್ಫೋಟಕ್ಕೆ ಕಾರಣವಾಯಿತು.ಇರಾಕ್ ಯುದ್ಧ ಜನರ ಕಣ್ಣ ಮುಂದೆಯೇ ಬಂದಂತಾಯಿತು.ಯುದ್ಧದ ಇನ್ನೊಂದು ಮುಖ ಆಗ ಗೊತ್ತಾಗಲಿಲ್ಲ.ಏಕೆಂದರೆ ಮಾಧ್ಯಮಗಳವರು ಮಿಲಿಟರಿಯ ಜೊತೆಯೇ ಇದ್ದರು.ಆದರೆ ಕ್ರಮೇಣ ಮಾಧ್ಯಮಗಳ ಬಣ್ಣ ಬಯಲಾಯಿತು.ಯುದ್ಧದ ಇನ್ನೊಂದು ಮುಖವನ್ನೂ ಮಾಧ್ಯಮಗಳು ಬಿಚ್ಚಿಟ್ಟವು.

 ಸರ್ವಾಧಿಕಾರಿಗಳನ್ನು ಅಧಿಕಾರದಿಂದ ಕೆಳಗಿಳಿಸುವವರು ಜನರೇ ಹೊರತು ಮಾಧ್ಯಮಗಳಲ್ಲ.ಮಾನವ ಇತಿಹಾಸದಲ್ಲಿ ಅಂಥ ಉದಾಹರಣೆಗಳಿಲ್ಲ.ಫ್ರೆಂಚ್,ಬೊಲ್ಷೆವಿಕ್ ಕ್ರಾಂತಿ, ಬರ್ಲಿನ್ ಗೋಡೆ ನಾಶ ಮುಂತಾದ ಇತಿಹಾಸದ ಬಹುಮುಖ್ಯ ಘಟನೆಗಳು ನಡೆದುದು ಇಂಟರ್‌ನೆಟ್ ಮತ್ತು ಫೇಸ್‌ಬುಕ್‌ನಿಂದ ಅಲ್ಲ. ಜನಶಕ್ತಿಯಿಂದ ಆದ ಬೆಳವಣಿಗೆಗಳು.ಈಜಿಪ್ಟಿನಲ್ಲಿ ಈಗ ಆಗಿರುವುದು ನಿಜವಾದ ಕ್ರಾಂತಿಯಲ್ಲ ಎಂದು ಮಾರ್ಕ್ಸ್‌ವಾದಿ ಚಿಂತಕರು ಹೇಳುತ್ತಾರೆ.

ಜನರು ಸರ್ವಾಧಿಕಾರರಿಂದ ಬಿಡುಗಡೆ ಪಡೆದು ಮಿಲಿಟರಿ ಸರ್ವಾಧಿಕಾರದಲ್ಲಿ ಸಿಕ್ಕಿಕೊಂಡಿದ್ದಾರೆ ಎನ್ನುತ್ತಾರವರು.ವ್ಯವಸ್ಥೆಯ ತುಳಿತಕ್ಕೊಳಗಾದ ಜನರ ಹೋರಾಟದಿಂದ ಮಾತ್ರ ಕ್ರಾಂತಿ ಆಗಲು ಸಾಧ್ಯ.ತಂತ್ರಜ್ಞಾನ ಮತ್ತು ಆಧುನಿಕ ಸಮೂಹ ಮಾಧ್ಯಮಗಳು ಉಳ್ಳವರ ಗೆಳೆಯರಷ್ಟೆ ಎಂಬ ಮಾರ್ಕ್ಸ್‌ನ ಮಾತನ್ನು ಅವರು ಉದಾಹರಿಸುತ್ತಾರೆ.ಬಂದೂಕಿನಿಂದ ಶಕ್ತಿ ಚಿಮ್ಮುತ್ತದೆ.ಆ ಶಕ್ತಿಯಿಂದ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಮಾವೋತ್ಸೆ ತುಂಗ್ ಹಿಂದೆಯೇ ಹೇಳಿದ್ದರು.

ಸರ್ವಾಧಿಕಾರಿಗಳಿಂದ ಬಿಡುಗಡೆಯಾಗಬೇಕೆಂದು ಬಯಸುವರಾದರೆ ಜನರಿಗೆ ಇಂಟರ್‌ನೆಟ್ ಸೌಲಭ್ಯ ಕೊಡಿ ಎಂದು ಈಜಿಪ್ಟ್‌ನ ಹೀರೋ ವೇಲ್ ಗೋನಿಮ್ ಇದೀಗ ಕರೆ ನೀಡಿದ್ದಾರೆ.ಅವರೇ ಹೇಳುವ ಪ್ರಕಾರ ಈಜಿಪ್ಟ್‌ನಲ್ಲಿ ಕ್ರಾಂತಿ ಆದದ್ದು ಜನರಿಂದ. ಪೇಸ್‌ಬುಕ್, ಇಂಟರ್‌ನೆಟ್ ನಿಂದಾಗಿ ಅಲ್ಲ.ಮಾಧ್ಯಮದಲ್ಲಾಗುವ ಬದಲಾವಣೆಗೂ ಮತ್ತು ಜನರ ಹೋರಾಟಗಳಿಗೂ ಸಂಬಂಧ ಕಲ್ಪಿಸಹೋಗುವುದೇ ಸರಿಯಲ್ಲ.

ವಾಣಿಜ್ಯ ಮುಖಗಳಿರುವ ಫೇಸ್‌ಬುಕ್, ಇಂಟರ್‌ನೆಟ್ ಅಥವಾ ಟ್ವಿಟರ್‌ಗಳೇನೂ ಜನರ ಹೋರಾಟಗಳಿಗೆ ಬೇಕಾಗಿಲ್ಲ.ಬೇಕಾಗಿರುವುದು ಜನರ ಇಚ್ಛಾಶಕ್ತಿ ಮತ್ತು ಸಂಘಟನೆ ಎಂದು ಪ್ರಖ್ಯಾತ ಸಾಮಾಜಿಕ ವಿಜ್ಞಾನಿ ಮಾಲ್ಕಮ್ ಗ್ಲಾಡ್‌ವೆಲ್ ಹೇಳುತ್ತಾರೆ.

ಆಧುನಿಕ ಸಂಪರ್ಕ ಮಾಧ್ಯಮಗಳಿಗೆ ಹೋರಾಟಗಳು ಬೇಕು. ಅದರಿಂದ ಮಾರುಕಟ್ಟೆ ವಿಸ್ತರಣೆಯಾಗುತ್ತದೆ.ಆದರೆ ಹೋರಾಟಗಳಿಗೆ ಸಂಪರ್ಕ ಮಾಧ್ಯಮಗಳು ಬೇಕೇಬೇಕೆಂದೇನೂ ಇಲ್ಲ.ಈ ಸಂಪರ್ಕ ಮಾಧ್ಯಮ ಕ್ರಾಂತಿಯನ್ನು ಬಳಸಿಕೊಂಡು ಸರ್ವಾಧಿಕಾರಿಗಳು ಜನರನ್ನು ಮತ್ತಷ್ಟು ತುಳಿಯಬಹುದಾದ ಸಾಧ್ಯತೆಗಳೇ ಹೆಚ್ಚು. ಈಜಿಪ್ಟ್‌ನಲ್ಲಿ ಆದ ಬದಲಾವಣೆಗಳು ಸಂಪರ್ಕ ಮಾಧ್ಯಮಗಳದ್ದು ಎಂಬ ತಪ್ಪು ಸಂದೇಶದ ಕೆಟ್ಟ ಪರಿಣಾಮಗಳನ್ನು ಲಿಬಿಯಾ, ಯೆಮೆನ್, ಇರಾನ್ ಮತ್ತಿತರ ರಾಷ್ಟ್ರಗಳಲ್ಲಿ ಈಗ  ನಡೆಯುತ್ತಿರುವ ಚಳವಳಿಗಳಲ್ಲಿ ಕಾಣಬಹುದು.

(ಲೇಖಕರು  ‘ಚರಕ’ (ಕನ್ನಡ): ಅಭಿವೃದ್ಧಿ-ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT