ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್ ಗಲಭೆ: 25 ಜನರ ಸಾವು

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಕಾಪ್ಟಿಕ್ ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಸೇರಿದಂತೆ  ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾರೆ. 170ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕೈರೊವಿನ ಪ್ರಸಿದ್ಧ ತಹ್ರೀರ್ ಚೌಕ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಚರ್ಚ್‌ವೊಂದರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಕಾಪ್ಟಿಕ್ ಕ್ರಿಶ್ಚಿಯನ್ ಪಂಗಡದವರು ಪ್ರತಿಭಟನೆ ನಡೆಸಿದರು. ಈ ವೇಳೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಈ ಘರ್ಷಣೆ ಉಂಟಾಯಿತು.  ಗಲಭೆ ಪೀಡಿತ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.


ರಾಜಧಾನಿ ಕೈರೊವಿನ ಕೇಂದ್ರಭಾಗದಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ಕೂಡಲೇ ಸ್ಥಳ ತೆರವು ಮಾಡುವಂತೆ ವಿಶೇಷ ಪೊಲೀಸ್ ತುಕಡಿಯು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿತು. ಆದರೂ ಪ್ರತಿಭಟನಾಕಾರರು ಸ್ಥಳದಿಂದ ಕದಲದಿದ್ದಾಗ ಬಲವಂತದಿಂದ ಅವರನ್ನು ತೆರವುಗೊಳಿಸಲು ಪೊಲೀಸರು ಮುಂದಾದರು. ಆಗ ಹಿಂಸಾಚಾರ ಉಂಟಾಯಿತು."

ಈಜಿಪ್ಟ್‌ನ ಇತರ ಭಾಗಗಳಲ್ಲಿಯೂ ಕಾಪ್ಟಿಕ್ ಕ್ರಿಶ್ಚಿಯನ್ನರು ಪ್ರತಿಭಟನೆ ನಡೆಸಿದ್ದಾರೆ. ಅಲೆಕ್ಸಾಂಡ್ರಿಯಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇನಾ ಶಿಬಿರದ ಸುತ್ತ ಇದ್ದ ಕೆಲವು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಅಸ್ವಾನ್ ಪ್ರದೇಶದಲ್ಲಿನ ಚರ್ಚ್ ಮೇಲೆ ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಕಾಪ್ಟಿಕ್ ಕ್ರಿಶ್ಚಿಯನ್ನರು ಒಂದು ವಾರದಿಂದ ಪ್ರತಿಭಟನೆ ನಡೆಸಿದ್ದಾರೆ.

ಆದರೆ, ಕಾಪ್ಟಿಕ್ ಕ್ರಿಶ್ಚಿಯನ್ನರು ಅಗತ್ಯ ಅನುಮತಿಯನ್ನು ಪಡೆಯದೆ ಕಟ್ಟಡವೊಂದನ್ನು ಚರ್ಚನ್ನಾಗಿ ಪರಿವರ್ತಿಸಿದ್ದಾರೆ ಎಂದು ಮುಸ್ಲಿಮರು ದೂರಿದ್ದಾರೆ.

ಈ ಮಧ್ಯೆ ಕಟ್ಟಡವನ್ನು ಚರ್ಚ್ ಆಗಿ ಮಾರ್ಪಡಿಸಲು ಅನುಮತಿ ನೀಡುವಂತೆ ಯಾವುದೇ ಕೋರಿಕೆ ಬಂದಿಲ್ಲ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಪ್ಟಿಕ್ ಕ್ರಿಶ್ಚಿಯನ್ನರು, ಗವರ್ನರ್ ಅವರೇ ಸಹಿ ಮಾಡಿದ ಅನುಮತಿ ಪತ್ರವನ್ನು ದಿನ ಪತ್ರಿಕೆಯಲ್ಲಿ ಪ್ರಕಟ ಮಾಡಿದ್ದಾರೆ.

ನಾಗರಿಕರನ್ನು ಸೇನಾ ಕಾನೂನಿನಡಿ ಬಂಧಿಸಿ ಸೇನಾ ನ್ಯಾಯಾಲಯಗಳಿಗೆ ಹಾಜರು ಪಡಿಸುವುದನ್ನು ನಿಲ್ಲಿಸಬೇಕು ಎಂದು ಸೇನಾ ಆಡಳಿತ ಮಂಡಳಿಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಹುಸೇನ್ ತಂತ್ವಾಯಿ ಆದೇಶಿಸಿದ್ದರೂ, ಪ್ರತಿಭಟನಾಕಾರರನ್ನು ಭಾನುವಾರ ಕೂಡ ಭದ್ರತಾ ಪಡೆಯುವರು ಬಂಧಿಸಿದ್ದಾರೆ. ಇದರಿಂದ ಕೂಡ ಕುಪಿತರಾದ ಪ್ರತಿಭಟನಾಕಾರರು ಭದ್ರತಾ ಪಡೆಯವರ ಮೇಲೆ ದಾಳಿ ನಡೆಸಿದ್ದಾರೆ.
ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ಇಸ್ಸಾಂ ಷರಾಫ್ ತುರ್ತುಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT