ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್: ಗಾಂಧಿ ತತ್ವ ಪಾಲನೆಗೆ ಅಮೆರಿಕದ ಸಲಹೆ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್, ಕೈರೊ (ಪಿಟಿಐ): ಈಜಿಪ್ಟ್‌ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿಗೆ ಅಹಿಂಸಾ ಸ್ವರೂಪದ ಪರಿಹಾರ ಸಿಗಬೇಕು ಮತ್ತು ಅಧಿಕಾರ ಬದಲಾವಣೆ ಆಗಬೇಕು ಎಂದು ಅಮೆರಿಕದ ಒಬಾಮ ಆಡಳಿತ ಬಯಸಿದೆ. ಸ್ವತಃ ಒಬಾಮ ಅವರು ಮಹಾತ್ಮಾ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ವಿಚಾರಧಾರೆಯಲ್ಲಿ ನಂಬಿಕೆ ಹೊಂದಿದವರಾಗಿರುವುದರಿಂದ ಈ ಅಭಿಪ್ರಾಯಕ್ಕೆ ಹೆಚ್ಚು ಒತ್ತು ಸಿಕ್ಕಿದೆ.

ಕಳೆದ ಎರಡು ವಾರಗಳಿಂದೀಚೆಗೆ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ನೀಡುತ್ತಿರುವ ಪ್ರತಿಯೊಂದು ಹೇಳಿಕೆಯಲ್ಲೂ ಮಹಾತ್ಮಾ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಬೋಧಿಸಿದ ಅಹಿಂಸಾ ತತ್ವ ಪ್ರತಿಫಲಿಸಿದೆ. ಈಜಿಪ್ಟ್‌ನಲ್ಲಿ ಅಧಿಕಾರ ಬದಲಾವಣೆ ನಿಟ್ಟನಲ್ಲಿ ಶಾಂತಿಯುತ ಚಳವಳಿಗೆ ನಾವು ಮೂರು ರೀತಿಯ ಸ್ಪಷ್ಟ ಸಂದೇಶ ನೀಡಿದ್ದೇವೆ ಎಂದು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಬೆನ್ ರ್ಹೋಡ್ಸ್ ತಿಳಿಸಿದ್ದಾರೆ.

‘ಪ್ರತಿಭಟನೆಗಳು ಶಾಂತಿಯುತವಾಗಿರಬೇಕು, ಪ್ರತಿಭಟನಾಕಾರರ ಬಗ್ಗೆ ಸರ್ಕಾರ ಸಂಯಮದಿಂದಿರಬೇಕು. ಜನತೆಯ ಹಕ್ಕುಗಳನ್ನು ಗೌರವಿಸಬೇಕು. ಜನತೆ ಬಯಸಿದಂತೆ ತಕ್ಷಣ ಅಧಿಕಾರ ಬದಲಾವಣೆ ಆಗಬೇಕು ಎಂಬುದು ಅಮೆರಿಕದ ಸ್ಪಷ್ಟ ಸಂದೇಶ. ಈ ಎಲ್ಲಾ ಬದಲಾವಣೆಗಳೂ ಶಾಂತಿಯುತವಾಗಿ ನಡೆಯಬೇಕು, ಗಾಂಧಿ ತತ್ವಗಳೇ ಎಲ್ಲದಕ್ಕೂ ಮೂಲವಾಗಬೇಕು ಎಂಬುದು ನಮ್ಮ ನೀತಿಯಾಗಿದೆ’ ಎಂದು ಅವರು ತಿಳಿಸಿದರು. ಸೆನೆಟ್‌ನ ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷ ಹಾಗೂ ಒಬಾಮ ಅವರ ನಿಕಟವರ್ತಿಯಾದ ಜಾನ್ ಕೆರ್ರಿ ಸಹ ಗಾಂಧಿ ತತ್ವ ಅನುಸರಿಸಲು ಈಜಿಪ್ಟ್‌ನ ಜನತೆಗೆ ಆರಂಭದಲ್ಲೇ ಸಲಹೆ ನೀಡಿದ್ದರು.

ಈ ನಡುವೆ ಅಧ್ಯಕ್ಷ ಒಬಾಮ ಅವರು ಸೌದಿ ಅರೇಬಿಯಾದ ದೊರೆ ಅಬ್ದುಲ್ಲಾ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಈಜಿಪ್ಟ್‌ನ ಪರಿಸ್ಥಿತಿಗಳನ್ನು ಅವಲೋಕಿಸಿದ್ದಾರೆ. ಈ ಪ್ರದೇಶದಲ್ಲಿ ದೀರ್ಘಾವಧಿಗೆ ಶಾಂತಿ ನೆಲೆಗೊಳ್ಳುವ ನಿಟ್ಟನಲ್ಲಿ ಅಮೆರಿಕದ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು. ಅಲ್‌ಖೈದಾ ಉಗ್ರರೂ ಪರಾರಿ:  ಕೈರೊದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಹಲವು ಮಂದಿ ಜೈಲುಗಳಿಂದ ಪರಾರಿಯಾಗಿದ್ದು,  ಇವರಲ್ಲಿ ಅಲ್ ಖೈದಾ ಮತ್ತು ಇತರ ಕೆಲವು ಉಗ್ರಗಾಮಿ ಗುಂಪುಗಳ ಉಗ್ರರು ಸಹ ಸೇರಿದ್ದಾರೆ ಎಂದು ಈಜಿಪ್ಟ್‌ನ ಉಪಾಧ್ಯಕ್ಷ ಒಮರ್ ಸುಲೇಮಾನ್ ಹೇಳಿದ್ದಾರೆ.

ಇದೊಂದು ಗಂಭೀರ ವಿಚಾರವಾಗಿದ್ದು, ಇವರನ್ನು ಮತ್ತೆ ಜೈಲಿಗೆ ಹಾಕಲೇಬೇಕಾಗಿದೆ. ಇವರಾರೂ ಹಿಂಸಾಚಾರ ಕೈಬಿಡುವುದಕ್ಕೆ ಒಪ್ಪಿಲ್ಲವಾದ ಕಾರಣ ಇವರು ಹೊರಗಡೆ ಇದ್ದಷ್ಟೂ ಕಾಲ ಅಪಾಯವೇ ಇದೆ ಎಂದು ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಿರುವಂತೆ ಜನತೆಯನ್ನು ಸಮಾಧಾನಪಡಿಸಲು ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಲು ಅಧ್ಯಕ್ಷ ಮುಬಾರಕ್ ಅವರು ಆಯೋಗವೊಂದನ್ನು ರಚಿಸಿದ್ದು,  ಸಂವಿಧಾನಕ್ಕೆ ಆರು ತಿದ್ದುಪಡಿಗಳನ್ನು ತರಲು ಸಮಿತಿ ನಿರ್ಧರಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಎಂಇಎನ್‌ಎ ವಾರ್ತಾಸಂಸ್ಥೆ ವರದಿ ಮಾಡಿದೆ.

ಇಂತಹ ತಿದ್ದುಪಡಿಯಲ್ಲಿ ಅಧ್ಯಕ್ಷರ ಅಧಿಕಾರ ಅವಧಿಯನ್ನು ಮೊಟಕುಗೊಳಿಸುವ ಸಲಹೆ ಇದ್ದರೂ, ದಶಕಗಳ ಕಾಲ ಜಾರಿಯಲ್ಲಿರುವ ತುರ್ತು ಪರಿಸ್ಥಿತಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ಹೇಳಲಾಗಿದೆ. ಹೀಗಾಗಿ ದೇಶದಲ್ಲಿ ಇನ್ನು ಮುಂದೆಯೂ ವಾಕ್ ಸ್ವಾತಂತ್ರ್ಯಕ್ಕೆ ಒದಗಿರುವ ಧಕ್ಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಈ ಮಧ್ಯೆ, ಒಂಬತ್ತು ದಿನಗಳ ಹಿಂದೆಯಷ್ಟೇ ಸಂಸ್ಕೃತಿ ಸಚಿವರಾಗಿ ಸಂಪುಟಕ್ಕೆ ಸೇರಿದ್ದ ಗಬೇರ್ ಅಸ್ಫೋರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇದಕ್ಕೆ ನಿರ್ದಿಷ್ಟ ಕಾರಣವನ್ನು ತಿಳಿಸದಿದ್ದರೂ, ಜನರ ಪ್ರತಿಭಟನೆಯ ಒತ್ತಡಕ್ಕೆ ಮಣಿದು ಅವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಮುಬಾರಕ್ ಕಿತ್ತೊಗೆಯುವ ಪ್ರತಿಭಟನೆಯಲ್ಲಿ ಇದೀಗ ದೇಶದ ಹಲವು ಕೈಗಾರಿಕೆಗಳ ಉದ್ಯೋಗಿಗಳೂ ಪಾಲ್ಗೊಳ್ಳತೊಡಗಿದ್ದಾರೆ. ಕಾರ್ಮಿಕ ಸಂಘಟನೆಗಳ ಈ ನಿರ್ಧಾರದಿಂದ  ಪ್ರತಿಭಟನೆಗೆ ಮತ್ತಷ್ಟು ಶಕ್ತಿ ದೊರೆತಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT