ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್: ಹೋಸ್ನಿ ವಿರುದ್ಧ ಜನಸಾಗರ

Last Updated 1 ಫೆಬ್ರುವರಿ 2011, 18:35 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಪದಚ್ಯುತಗೊಳಿಸಲು ನಾಗರಿಕರು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿರುವ ಕಾರಣ ಚಳವಳಿಗಾರರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಈಜಿಪ್ಟ್ ಸೇನೆ ಸ್ಪಷ್ಟ ಪಡಿಸಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಮುಬಾರಕ್ ವಿರೋಧಿಗುಂಪುಗಳೊಂದಿಗೆ ಕೂಡಲೇ ಮಾತುಕತೆ ನಡೆಸುವ ಹೊಸ ಪ್ರಸ್ತಾವ ಮುಂದಿಟ್ಟಿದ್ದಾರೆ.

ಕೈರೊದಲ್ಲಿ ಮಂಗಳವಾರ ನಡೆದ ಹತ್ತು ಲಕ್ಷ ಜನರ ಬೃಹತ್ ರ್ಯಾಲಿ ಮತ್ತು ಚಳವಳಿಗಾರರ ಮೇಲೆ ಗುಂಡು ಹಾರಿಸಲು ಸೇನಾಪಡೆ ನಿರಾಕರಿಸಿರುವ ಕಾರಣ ತೀವ್ರ ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಮುಬಾರಕ್ ಈ ನಿರ್ಧಾರ ಕೈಗೊಂಡಿದ್ದಾರೆ.

‘ಸಂವಿಧಾನ ಮತ್ತು ಶಾಸನಬದ್ಧವಾಗಿ ಆಗಬೇಕಿರುವ ಎಲ್ಲ ರೀತಿಯ ಸುಧಾರಣೆಗಳ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಕೂಡಲೇ ಮಾತುಕತೆ ನಡೆಸಲು ಅಧ್ಯಕ್ಷರು ಸಿದ್ಧರಿರುವುದಾಗಿ ಹೇಳಿದ್ದಾರೆ’ ಎಂದು ಹೊಸದಾಗಿ ನೇಮಕವಾಗಿರುವ ಉಪಾಧ್ಯಕ್ಷ ಒಮರ್ ಸುಲೈಮಾನ್ ಸರ್ಕಾರಿ ಟಿ.ವಿ ವಾಹಿನಿಯಲ್ಲಿ ತಿಳಿಸಿದ್ದಾರೆ.

 ಲಕ್ಷಾಂತರ ಜನರು ನಡೆಸಿದ ರ್ಯಾಲಿ ಮತ್ತು ಅಧ್ಯಕ್ಷರ ವಿರುದ್ಧ ನಾಗರಿಕರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಕಂಡ ಸೇನಾಪಡೆ, ‘ಚಳವಳಿಗಾರರ ಹೋರಾಟ ನ್ಯಾಯಸಮ್ಮತವಾಗಿದೆ. ಆದ್ದರಿಂದ ಚಳವಳಿಯನ್ನು ಹತ್ತಿಕ್ಕುವುದಿಲ್ಲ ಮತ್ತು ಗುಂಡು ಹಾರಿಸುವುದಿಲ್ಲ’ ಎಂಬ ನಿರ್ಧಾರ ಕೈಗೊಂಡಿದೆ.

‘ನಾಗರಿಕರ ಒತ್ತಾಯ ಯುಕ್ತವಾಗಿದೆ ಮತ್ತು ಅದು ಅವರ ಹಕ್ಕು ಕೂಡ. ಶಾಂತಿಯುತವಾಗಿ ಪ್ರತಿಭಟನೆ ಮಾಡುವವರ ಮೇಲೆ ಯಾವುದೇ ಕಾರಣಕ್ಕೂ ಬಲಪ್ರಯೋಗ ಮಾಡುವುದಿಲ್ಲ’ ಎಂದು ಸೇನಾಪಡೆ ಬಿಡುಗಡೆ ಮಾಡಿದ ಹೇಳಿಕೆಯನ್ನು ಸರ್ಕಾರಿ ಟಿವಿ ವಾಹಿನಿ ಪ್ರಸಾರ ಮಾಡಿದೆ.

ರ್ಯಾಲಿ- ಕರ್ಫ್ಯೂ: ರ್ಯಾಲಿಯಲ್ಲಿ ಭಾಗವಹಿಸಲು ತಹ್ರಿರ್ ಚೌಕಕ್ಕೆ ಬರುತ್ತಿದ್ದ ಪ್ರತಿಯೊಬ್ಬರ ಗುರುತು ಪತ್ರವನ್ನು ಸೇನಾಪಡೆಯವರು ಪರಿಶೀಲಿಸಿಯೇ ಅಲ್ಲಿಗೆ ಬಿಡುತ್ತಿದ್ದರು. ಚಳವಳಿಗಾರರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿತ್ತು.

ಸಶಸ್ತ್ರ ವಾಹನಗಳು ಕೈರೊದ ಪ್ರತಿ ರಸ್ತೆಯಲ್ಲೂ ಬೀಡುಬಿಟ್ಟಿದ್ದವು. ಚಳವಳಿಗಾರರು ‘ಮುಬಾರಕ್ ಅಧಿಕಾರದಿಂದ ಕೆಳಗಿಳಿಯಬೇಕು’, ‘ಮುಬಾರಕ್‌ನ ಆಟ ಮುಗಿಯಿತು’ ಎಂಬ ಫಲಕಗಳನ್ನು ಪ್ರದರ್ಶಿಸಿದ್ದರು. ಈ ರ್ಯಾಲಿ ಈಜಿಪ್ಟ್‌ನ ಇತಿಹಾಸದಲ್ಲೇ ಸರ್ಕಾರದ ವಿರುದ್ಧ ನಡೆದ ಬಹುದೊಡ್ಡ ಪ್ರತಿಭಟನೆಯಾಗಿದೆ.  ಮುಬಾರಕ್ ಅವರ ಎರಡು ಪ್ರತಿಕೃತಿಗಳನ್ನು  ರ್ಯಾಲಿ ನಡೆದ ತಹ್ರಿರ್ ಚೌಕದಲ್ಲಿ ತೂಗುಹಾಕಲಾಗಿತ್ತಲ್ಲದೆ ‘ಕೊಲೆಗಡುಕ ಅಧ್ಯಕ್ಷ’ರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜಧಾನಿ ಕೈರೊ, ಅಲೆಕ್ಸಾಂಡ್ರಿಯಾ, ಸೂಯೆಜ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಈ ಕಾರಣ ಜನರಿಗೆ ಅತ್ಯಾವಶ್ಯಕ ಆಹಾರ ಪದಾರ್ಥಗಳು ದೊರಕದೆ ಪರದಾಡುವಂತಾಗಿದೆ. ಅತ್ತ ಪ್ರತಿಭಟನೆ ನಡೆಸುತ್ತಿರುವವರಿಗೆ ಆಹಾರ ಕೊರತೆ ಉಂಟಾಗಿದ್ದು, ಹಲವರು ನಿತ್ರಾಣಗೊಂಡು ಅಸ್ವಸ್ಥರಾಗಿದ್ದಾರೆ ಎಂದು ಕತಾರ್ ಮೂಲದ ಅಲ್‌ಜಜೀರಾ ವಾಹಿನಿ  ವರದಿ ಮಾಡಿದೆ.

ರೈಲು ಸಂಚಾರ ಸ್ಥಗಿತ: ಈ ಮಧ್ಯೆ ಕೈರೊದಲ್ಲಿ ನಡೆಸಿದಂತೆಯೇ ರೇವು ಪಟ್ಟಣವಾದ ಅಲೆಕ್ಸಾಂಡ್ರಿಯಾದಲ್ಲಿ ಹತ್ತು ಲಕ್ಷ ಜನರ ಬಹೃತ್ ರ್ಯಾಲಿ ಸಂಘಟಿಸಲು ಚಳವಳಿಗಾರರು ಆಲೋಚಿಸಿದ್ದಾರೆ. ಇದನ್ನು ತಡೆಯಲು ಈಜಿಪ್ಟ್‌ನಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಈಜಿಪ್ಟ್‌ನಲ್ಲಿ ಆಂತರಿಕ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ಮಧ್ಯಾಹ್ನ 3ಗಂಟೆಯಿಂದ ಬೆಳಿಗ್ಗೆ 8ಗಂಟೆಯವರೆಗೆ ಸ್ಥಗಿತಗೊಳಿಲಾಗಿದೆ. ಆದರೂ ವಿದೇಶಿ ಪ್ರವಾಸಿಗರನ್ನು ತಂತಮ್ಮ ದೇಶಗಳಿಗೆ ಕರೆಯಿಸಿಕೊಳ್ಳುವ ಪ್ರಯತ್ನಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಹೇಳಿದೆ.

ಈಜಿಪ್ಟ್‌ನಲ್ಲಿ ಉದ್ವಿಗ್ನ ಸ್ಥಿತಿಯಿದ್ದರೂ ಏಷ್ಯಾ ಮತ್ತು ಯೂರೋಪ್‌ಗೆ ಸಂಪರ್ಕಿಸುವ ಪ್ರಮುಖ ಕಡಲು ಮಾರ್ಗವಾದ ಸೂಯೆಜ್ ಕಾಲುವೆಯಲ್ಲಿ ಸಂಚಾರಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈಜಿಪ್ಟ್‌ನಲ್ಲಿ ಉಂಟಾಗಿರುವ ಅರಾಜಕತೆಯಿಂದಾಗಿ ಸೂಯೆಜ್ ಕಾಲುವೆಯಲ್ಲಿ ಸಂಚಾರಕ್ಕೆ ಅಡಚಣೆಯಾದರೆ ತೈಲ ಬೆಲೆ ಏರಬಹುದು ಎಂಬ ಆತಂಕ ಅಂತರರಾಷ್ಟ್ರೀಯ ವಲಯದಲ್ಲಿ ಉಂಟಾಗಿದೆ.

ಅಮೆರಿಕ ದೂತ
ಈಜಿಪ್ಟ್‌ನಲ್ಲಿ ಉದ್ಭವಿಸಿರುವ ರಾಜಕೀಯ ಅಸ್ಥಿರತೆಯನ್ನು ನಿಭಾಯಿಸಲು ಅಮೆರಿಕ ರಾಜ ತಾಂತ್ರಿಕ ಅಧಿಕಾರಿಗಳನ್ನು ಕಳುಹಿಸಿದೆ.  ಈಜಿಪ್ಟ್‌ನಲ್ಲಿ ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ಫ್ರಾಂಕ್ ಜಿ. ವಿಸ್ನರ್ ಕೈರೊಗೆ ಪ್ರಯಾಣಿಸಿದ್ದು, ಇವರು ಅಧ್ಯಕ್ಷ ಮುಬಾರಕ್ ಅವರನ್ನು ಅಧಿಕಾರ ತ್ಯಜಿಸುವಂತೆ ಮನವೊಲಿಸಲು ಅಮೆರಿಕ ಕಳುಹಿಸಿರುವ ದೂತರೇ ಎಂಬುದು ತಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT