ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್‌ನಲ್ಲಿ ಮತ್ತೆ ತಳಮಳ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಶ್ರೀಮಂತ ಪ್ರಾಚೀನ ಇತಿಹಾಸ ಹಾಗೂ ಪರಂಪರೆ ಹೊಂದಿರುವ ದೇಶ ಎನ್ನಿಸಿಕೊಂಡಿರುವ ಈಜಿಪ್ಟ್‌ನಲ್ಲಿ ಆಂತರಿಕ ಕಲಹಕ್ಕೆ ಕೊನೆಯೇ ಇಲ್ಲವೇ? ಈಜಿಪ್ಟ್ ಮತ್ತೆ ಗೊಂದಲದ ಗೂಡಾಗಿದೆ. ಸರ್ವಾಧಿಕಾರಿಗಳ ವಿರುದ್ಧ ಬಂಡಾಯ ಜಗವ್ಯಾಪಿ ಆಗಿದ್ದ ಕಾಲದಲ್ಲಿ ಟ್ಯುನೀಸಿಯಾದಲ್ಲಿ ಆರಂಭವಾದ ಬಂಡಾಯ. ಈಜಿಪ್ಟನ್ನು ವ್ಯಾಪಿಸಲು ಬಹಳಕಾಲ ಹಿಡಿಯಲಿಲ್ಲ. 30 ವರ್ಷಗಳ ಕಾಲ ಬಿಗಿಹಿಡಿತದ ಮೂಲಕ ಸರ್ವಾಧಿಕಾರಿಯಾಗಿ ಮೆರೆದ ಹೋಸ್ನಿ ಮುಬಾರಕ್ ವಿರುದ್ಧ ಬಂಡಾಯ ಎದ್ದಿದ್ದ ಜನ ಮಿಲಿಟರಿಯನ್ನೂ ಲೆಕ್ಕಿಸದೆ ಮುಬಾರಕ್ ಆಳ್ವಿಕೆಗೆ ಅಂತ್ಯಕಾಣಿಸಿದ್ದರು.

ಈಜಿಪ್ಟ್‌ನಲ್ಲಿ ಈಚಿನ ಕೆಲವು ಬೆಳವಣಿಗೆಗಳು ಅಲ್ಲಿ ಮತ್ತೆ ಜನದಂಗೆಗೆ ಕಾರಣವಾಗಿದೆ. ಇದರಿಂದಾಗಿ ಈಗಿನ ಆಡಳಿತದ ವಿರುದ್ದ ಶಾಂತಿಯುತವಾಗಿ ಪ್ರಾರಂಭವಾದ ಚಳವಳಿ ಈಗ ಹಿಂಸಾತ್ಮಕ ನೆಲೆಯನ್ನು ಪಡೆದುಕೊಳ್ಳುತ್ತಿದೆ.  

ಇಸ್ಲಾಂ ಧರ್ಮದ ಮೂಲಭೂತವಾದಿಗಳ ಬೆಂಬಲ ಪಡೆದಿರುವ ಅಧ್ಯಕ್ಷ ಮೊಹಮ್ಮದ್ ಮೋರ್ಸಿ ಮತ್ತು ಆಡಳಿತದ ಸುಧಾರಣೆಗಾಗಿ ಹೋರಾಟ ನಡೆಸುತ್ತಿರುವ ವಿರೋಧಿಗಳ ನಡುವೆ ನಡೆಯುತ್ತಿರುವ ಸಮರ ಈಗ ಈಜಿಪ್ಟ್ ದೇಶದಲ್ಲಿ ಹಿಂಸಾಚಾರದ ಅಲೆಯನ್ನು ಹೆಚ್ಚಿಸಿ ಎರಡು ಪಂಗಡಗಳು ಉಗ್ರ ನಿಲುವಿಗೆ ಅಂಟಿಕೊಳ್ಳುವಂತೆ ಮಾಡಿದೆ. ಹೀಗಾಗಿ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಈ ಸಂಘರ್ಷ ಜಗತ್ತಿನ ತಳಮಳವನ್ನು ಹೆಚ್ಚಿಸಿದೆ. ಈಗಾಗಲೇ ಅಲ್ಲಿ ಹಿಂಸಾಚಾರ ಆರಂಭವಾಗಿದೆ.

ಅಧ್ಯಕ್ಷ ಮೊಹಮ್ಮದ್ ಮೋರ್ಸಿ, ದೇಶದ ಸಂವಿಧಾನದಲ್ಲಿ ತರಬೇಕೆನ್ನುವ ಬದಲಾವಣೆಗಳ ಬಗ್ಗೆ ಈಜಿಪ್ಟ್‌ನಲ್ಲಿ ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಈ ಪ್ರಯತ್ನವನ್ನು ವಿರೋಧಿಸುತ್ತಿರುವವರು ಚಳವಳಿಯ ಮಾರ್ಗ ಹಿಡಿದಿದ್ದಾರೆ. ಇದು ಹಿಂಸಾತ್ಮಕ ತಿರುವು ಪಡೆದುಕೊಂಡಿರುವುದರಿಂದ ಮೋರ್ಸಿ ಬೆಂಬಲಿಗರು ಹಾಗೂ ವಿರೋಧಿಗಳ ನಡುವಿನ ತೀವ್ರ ಸಂಘರ್ಷ ಮುಸ್ಲೀಮರೇ ಹೆಚ್ಚಾಗಿರುವ ಈಜಿಪ್ಟ್‌ನ ರಾಜಕೀಯದ ಕಾವೇರಿಸಿದೆ. 

ಶುಕ್ರವಾರ ಮೋರ್ಸಿಯ `ಬ್ರದರ್ ಹುಡ್' ಸಂಘಟನೆಯನ್ನು ಮತ್ತು ಹೊಸ ಸಂವಿಧಾನ ತರಲು ಯತ್ನಿಸುತ್ತಿರುವ ನಿಲುವನ್ನು ವಿರೋಧಿಸುವವರ ತಂಡವೊಂದು ಅಧ್ಯಕ್ಷ ಮೋರ್ಸಿಯ ಅರಮನೆ ಎದುರೇ ಪ್ರತಿಭಟನೆ ಆರಂಭಿಸಿ ಅಧ್ಯಕ್ಷ ಮೋರ್ಸಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.(1928ರಲ್ಲಿ ಹುಟ್ಟಕೊಂಡ `ಮುಸ್ಲಿಂ ಬ್ರದರ್‌ಹುಡ್' ಸಂಘಟನೆ ಸೂಫಿ ಚಿಂತಕ ಅಲ್‌ಬನಾ ಕನಸಿನ ಕೂಸು. ನೈತಿಕ ಮೌಲ್ಯಗಳಿಗೆ ಇದು ಹೆಚ್ಚು ಒತ್ತುಕೊಡುತ್ತದೆ. ಅಹಿಂಸಾವಾದ ಇದರ ನೀತಿ) ಪ್ರತಿಭಟನಾಕಾರರು ಅರಮನೆಯ ಮುಂದೆ ಹಾಕಲಾಗಿದ್ದ ಮುಳ್ಳುತಂತಿಯನ್ನು ಕಿತ್ತೊಗೆದು ಅರಮನೆಯ ಹತ್ತಿರ ತೆರಳುತ್ತಿರುವಾಗಲೇ ಬಂಧಿತರಾದರು.

ದೇಶದಲ್ಲಿ ಶರಿಯಾ ಕಾನೂನನ್ನು  ತರಬೇಕೆಂದು ಒತ್ತಾಯಿಸುತ್ತಿರುವ ಮೊಹಮ್ಮದ್ ಮೋರ್ಸಿಯ ಬೆಂಬಲಿಗರು ಸಭೆ ನಡೆಸಿ ಕಳೆದ ಒಂದು ವಾರದಿಂದ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಲಿಯಾದ ಮೂಲಭೂತವಾದಿಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಮಾತನಾಡಿದರು. ಹೀಗಾಗಿ ಈಜಿಪ್ಟ್ ಒಂದು ವಾರದಿಂದ ಉಗ್ರ ಹೋರಾಟವನ್ನು ಕಾಣುವಂತಾಗಿದೆ. ಒಂದು ಕಡೆ ಮೋರ್ಸಿಯ ಬೆಂಬಲಿಗರೂ ಮತ್ತು ಮುಸ್ಲಿಂ ಮೂಲಭೂತವಾದಿಗಳು ಜೊತೆಯಾಗಿದ್ದರೆ, ಮತ್ತೊಂದೆಡೆ ಸುಧಾರಣಾವಾದಿಗಳು, ಕಮ್ಯುನಿಸ್ಟರು ಹಾಗೂ ಕ್ರೈಸ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಈಗಿನ ಸಂವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ತಂದು ಇಸ್ಲಾಮ್ ಧರ್ಮದ ಕೆಲವು ಕಾನೂನುಗಳನ್ನು ಹೊಸ ಸಂವಿಧಾನದಲ್ಲಿ ತರಬೇಕೆನ್ನುವ ತಮ್ಮ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ಬೇಡಿಕೆಯನ್ನು ತಿರಸ್ಕರಿಸಿರುವ ಅಧ್ಯಕ್ಷ ಮೊಹಮ್ಮದ್ ಮೋರ್ಸಿ, ಡಿಸೆಂಬರ್ 15ರಂದು ದೇಶದಲ್ಲಿ ಜನಮತ ಪಡೆದು ಹೊಸ ಸಂವಿಧಾನವನ್ನು ಜಾರಿಗೆ ತರಬೇಕೆಂದು ಪಟ್ಟು ಹಿಡಿದಿದ್ದಾರೆ. `ಪ್ರಸ್ತುತ ಕರಡು ಸಂವಿಧಾನವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದ್ದಾರಲ್ಲದೆ, 15ರಂದು ಜನಮತಗಣನೆ ನಡೆಸಲು ಬದ್ಧ ಎಂದು ತಮ್ಮ ದೃಢ ನಿಲುವಿಗೇ ಅಂಟಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಬಯಸುವ ಹಾಗೂ ಆಡಳಿತದಲ್ಲಿನ ಸುಧಾರಣೆಯ ಪರವಾಗಿ ನಿಂತಿರುವ ಮುಸ್ಲಿಮರನ್ನು ಕೆರಳಿಸಿದೆ. ಇವರ ಜೊತೆ ಈಜಿಪ್ಟ್‌ನಲ್ಲಿ ನೆಲೆಯೂರಿರುವ ಕ್ರೈಸ್ತರೂ ಸೇರಿಕೊಂಡಿದ್ದಾರೆ. 

ಕಳೆದ ನವೆಂಬರ್ 22 ರಂದು ಮೋರ್ಸಿ ಸರ್ಕಾರ ಕೆಲವು ಹೊಸ ನೀತಿಯನ್ನು ಪ್ರಕಟಿಸಿ ಈ ಮೂಲಕ ರಾಷ್ಟ್ರಾಧ್ಯಕ್ಷರಿಗೆ ಅಮಿತ ಅಧಿಕಾರ ನೀಡಿದ್ದೇ ಇಂದಿನ ಕ್ಲಿಷ್ಟ ರಾಜಕೀಯ ಸ್ಥಿತಿಗೆ ನಾಂದಿ ಹಾಡಿತು. ಈಜಿಪ್ಟ್‌ನಲ್ಲಿ ಸರ್ವಾಧಿಕಾರದ ಆಡಳಿತ ನಡೆಸಿದ ಹೋಸ್ನಿ ಮುಬಾರಕ್ ಅವರ ಸರ್ಕಾರವನ್ನು ಉರುಳಿಸಿದ ನಂತರದ ಒಂದೇ ವರ್ಷದಲ್ಲಿ ಇಂತಹ ತೀವ್ರ ವಿವಾದ ಸೃಷ್ಟಿಯಾಗಿದೆ.

ಮೋರ್ಸಿ ತರಬೇಕೆನ್ನುತ್ತಿರುವ ಹೊಸ ಸಂವಿಧಾನದ ಬದಲಾವಣೆಯ ಕರಡು ಪ್ರತಿಯನ್ನು ಓದಿದವರು ದೇಶದಲ್ಲಿ ಈಗಿನ ಸಂವಿಧಾನವನ್ನು ಬದಲಿಸಿ ಶರಿಯಾ ಕಾನೂನಿನ ಕೆಲವು ಅಂಶಗಳನ್ನು ಅಳವಡಿಸಬೇಕೆನ್ನುವ ಯತ್ನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶರಿಯಾ ಕಾನೂನನ್ನು ಅಳವಡಿಸಬೇಕೆನ್ನುವುದು ಇಸ್ಲಾಂನ ಮೂಲಭೂತವಾದಿಗಳ ಬೇಡಿಕೆ ಆಗಿದೆ. ಹೊಸ ಸಂವಿಧಾನ ಜಾರಿಯಾದಲ್ಲಿ ದೇಶದ ಆಡಳಿತವನ್ನು ಮೂಲಭೂತವಾದಿಗಳಿಗೆ ಹಾಗೂ ಮುಲ್ಲಾಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗುತ್ತದೆ ಎನ್ನುವುದು ಸಂವಿಧಾನದ ಬದಲಾವಣೆಗೆ ವಿರೋಧವಾಗಿರುವವರ ಅಭಿಪ್ರಾಯವಾಗಿದೆ. ಜೊತೆಗೆ ಅಲ್ಪ ಸಂಖ್ಯಾತರ, ಮಹಿಳೆಯರ ಮತ್ತು ಪತ್ರಕರ್ತರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಹೊಸ ಸಂವಿಧಾನದಲ್ಲಿ ಹೇರಳ ಅವಕಾಶಗಳಿವೆ ಎನ್ನುವುದು ವಿರೋಧಿಗಳ ಅಭಿಪ್ರಾಯ. ಇದಕ್ಕಾಗಿಯೇ ಮೋರ್ಸಿಯವರ ಬೆಂಬಲಿಗರು ಮತ್ತು ವಿರೋಧಿಗಳು ಬೀದಿ ಕಾಳಗಕ್ಕೆ ಇಳಿದಿದ್ದಾರೆ.    ಇಂದು ಈಜಿಪ್ಟ್‌ನಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅಸ್ಥಿರತೆಗೆ ಈ ಬೆಳವಣಿಗೆಗಳೇ ಕಾರಣ.

ಮೋರ್ಸಿಯವರ ಈ ನಿರ್ಧಾರ ವಿರೋಧಿಗಳನ್ನು ಎಷ್ಟು ಕೆರಳಿಸಿದೆ ಎಂದರೆ, ನೊಬೆಲ್ ಪ್ರಶಸ್ತಿ ಪುರಸ್ಕೃತ, ವಿರೋಧಿ ಮುಖಂಡ ಮಹಮದ್ ಎಲ್ ಬರದಾಯಿಯವರು, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಗೂಂಡಾಗಳಿಂದ ಮೂಲಭೂತವಾದಿಗಳು ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮೋರ್ಸಿ ಸರ್ಕಾರ ಈ ಸೇಡಿನ ಕ್ರಮದಿಂದ ಹೋಸ್ನಿ ಮುಬಾರಕ್ ಅವರ ಸರ್ವಾಧಿಕಾರಿ ಆಡಳಿತಕ್ಕಿಂತ ಕೆಟ್ಟದಾಗಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಎಲ್ ಬರದಾಯಿ ಹೇಳುತ್ತಾರೆ. 

`ನಾನು ಹೋಸ್ನಿ ಮುಬಾರಕ್ ಅವರನ್ನು ಅಧಿಕಾರದಿಂದ ಇಳಿಸಲು ಮೋರ್ಸಿಗೆ ಬೆಂಬಲಿಸಿದೆ. ಆದರೇ ಈಗ ನನಗೆ ಅಂತಹ ನಿರ್ಧಾರ ತೆಗೆದುಕೊಳ್ಳಬಾರದಾಗಿತ್ತು ಎಂದನ್ನಿಸುತ್ತಿದೆ. ದೇವರು ಮುಬಾರಕ್ ವಿರುದ್ಧದ ಕ್ರಾಂತಿಯ ಕಹಳೆ ಮೊಳಗಲು ಅವಕಾಶ ಮಾಡಿಕೊಟ್ಟಂತೆ ಮೋರ್ಸಿಯ ವಿರುದ್ಧವೂ ಪ್ರತಿಭಟನೆಯ ಧ್ವನಿ ಹೆಚ್ಚಲು ಅವಕಾಶ ಮಾಡಿಕೊಟ್ಟಿದ್ದಾನೆ' ಎಂದು ನಾಡಿಯಾ ಎಲ್ ಷಫಿ ಎನ್ನುವ ಮಹಿಳಾ ಸುಧಾರಣಾವಾದಿ ಈಚಿನ ಬೆಳವಣಿಗೆಗಳ ಬಗ್ಗೆ ತಮ್ಮ ಅಸಹನೆ ವ್ಯಕ್ತ ಪಡಿಸಿದ್ದಾರೆ. ಮೋರ್ಸಿಯವರು ಅಲ್ಪ ಸಂಖ್ಯಾತ ಕ್ರೈಸ್ತರನ್ನು, ಸುಧಾರಣಾವಾದಿಗಳನ್ನು ಹಾಗೂ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತೆಗೆದುಕೊಂಡ ಈ ನಿರ್ಧಾರ ಜಾರಿಗೆ ಬರಬಾರದು ಎನ್ನುವುದು ಎಲ್ ಷಫಿಯವರ ಅಭಿಪ್ರಾಯ. 

ಜೊತೆಗೆ ನವೆಂಬರ್ 22 ರಂದು ಇಸ್ಲಾಂ ಮೂಲಭೂತವಾದಿಗಳ ಬೆಂಬಲದಿಂದ ಸ್ವಯಂ ಅಮಿತಾಧಿಕಾರ ಪಡೆದುಕೊಂಡ ಮೋರ್ಸಿ, ಕೂಡಲೇ ಈ ಹೊಸ ಕಾನೂನನ್ನು ಹಿಂಪಡೆಯಬೇಕು ಎನ್ನುವುದು ಬರದಾಯಿ ಮತ್ತು ಇತರ ಸುಧಾರಣಾವಾದಿಗಳ ಬೇಡಿಕೆ ಆಗಿದೆ. ಆದರೇ ಮೋರ್ಸಿಯನ್ನು ಬೆಂಬಲಿಸಿರುವ `ಮುಸ್ಲಿಂ ಬ್ರದರ್ ಹುಡ್ ಗ್ರೂಪ್' ಸದಸ್ಯರು ಸುಧಾರಣಾವಾದಿಗಳ ವಿರುದ್ಧ ಹಿಂಸಾಚಾರದ ಸಮರಕ್ಕೆ ಇಳಿದು ಈಜಿಪ್ಟ್ ಅನ್ನು ಮತ್ತೆ ಅಶಾಂತಿಯ ಕೂಪವಾಗಿಸಿದ್ದಾರೆ. 

 ದೇಶದ ಪ್ರಜೆಗಳ ಪ್ರಜಾಪ್ರಭುತ್ವದ ಧ್ವನಿಯನ್ನು ಮಟ್ಟಹಾಕಲು ಮೋರ್ಸಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ  ಎನ್ನುವುದು ಮೋರ್ಸಿಯ ಬೆಂಬಲಿಗರ ವಾದ. ಸುಧಾರಣಾವಾದಿಗಳೆಂದು ಹೇಳಿಕೊಳ್ಳುವವರು ಉಗ್ರವಾಗಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಹು ಸಂಖ್ಯಾತರ ಅಭಿಪ್ರಾಯಗಳು ಜಾರಿಗೆ ಬರದಂತೆ ಪ್ರಯತ್ನಿಸುತ್ತಿದ್ದಾರೆ ಎಂದು ಹೊಸ ಸಂವಿಧಾನ ಜಾರಿಗೆ ಬರಬೇಕೆಂದು ಒತ್ತಾಯಿಸುತ್ತಿರುವವರು ಹೇಳುತ್ತಾರೆ.

ಪ್ರತಿಭಟನೆಗೆ ಇಳಿದವರನ್ನು ಸಮಾಧಾನ ಮಾಡಲು ಮೋರ್ಸಿ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಅಧ್ಯಕ್ಷರೊಂದಿಗೆ ಮಾತನಾಡುವ ಮೂಲಕ ಗೊಂದಲವನ್ನು ಪರಿಹರಿಸಿಕೊಳ್ಳಿ ಎಂದು ಪ್ರತಿಭಟನಾಕಾರರಿಗೆ ಈಜಿಪ್ಟ್ ನ ಉಪಾಧ್ಯಕ್ಷ ಮಹಮದ್ ಮೆಕ್ಕಿ ಸಲಹೆ ಮಾಡಿದ್ದರೂ ಅದನ್ನು ಹೊಸ ಸಂವಿಧಾನದ ಕರಡು ಪ್ರತಿಯನ್ನು ವಿರೋಧಿಸುತ್ತಿರುವವರು ಒಪ್ಪುತ್ತಿಲ್ಲ. ಮೋರ್ಸಿಯವರು ನವೆಂಬರ್ 22ರಂದು ಪ್ರಕಟಿಸಿದ ಹೊಸ ನೀತಿಯನ್ನು ಹಿಂತೆಗೆದುಕೊಳ್ಳುವವರೆಗೂ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಬರದಾಯಿಯವರು ಸ್ಪಷ್ಟ ಪಡಿಸಿದ್ದಾರೆ. ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಜನದಂಗೆ ಹಲವು ಆಯಾಮಗಳನ್ನು ಪಡೆದಿದ್ದು, ಸಂಕೀರ್ಣ ಸನ್ನಿವೇಶವನ್ನು ಸೃಷ್ಟಿಸಿದೆ.ಈಗ  ಮೋರ್ಸಿಯ ಹೊಸ ಸಂವಿಧಾನ ಜಾರಿಗೆ ಬಂದರೆ ಮುಂದಿನ ಫೆಬ್ರವರಿಯಲ್ಲೇ ಈಜಿಪ್ಟ್‌ನಲ್ಲಿ ಹೊಸ ಚುನಾವಣೆಗಳು ನಡೆದು ಮುಸ್ಲಿಂ ಮೂಲಭೂತವಾದಿಗಳ ಬೆಂಬಲಿತ ಸರ್ಕಾರ ಅಧಿಕಾರಕ್ಕೆ ಬರಬಹುದು ಎನ್ನುವ ನಿರೀಕ್ಷೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT