ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್‌ನಲ್ಲಿ ಮತ್ತೆ ಹಿಂಸಾಚಾರ-7 ಸಾವು

Last Updated 3 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ಕೈರೊ, (ಪಿಟಿಐ): ಅಧ್ಯಕ್ಷ ಹೋಸ್ನಿ ಮುಬಾರಕ್ ಬೆಂಬಲಿಗರು ಮತ್ತು ವಿರೋಧಿ ಗುಂಪುಗಳ ನಡುವಿನ ಘರ್ಷಣೆ ಗುರುವಾರ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಏಳು ಜನರು ಮೃತಪಟ್ಟಿದ್ದು ಗಲಭೆಗ್ರಸ್ತ ಈಜಿಪ್ಟ್‌ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
 
 ಈ ಮಧ್ಯೆ ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರ ರೂಪಿಸಲು ಈಜಿಪ್ಟ್‌ನ ಹೊಸ ಪ್ರಧಾನಿ ಅಹ್ಮದ್ ಶಫೀಕ್ ಮತ್ತು ಉಪಾಧ್ಯಕ್ಷ ಒಮರ್ ಸುಲೈಮಾನ್ ಅವರು ಈಜಿಪ್ಟ್‌ನ ವಿರೋಧಪಕ್ಷಗಳ ನಾಯಕರೊಂದಿಗೆ ಮಾತುಕತೆ ಆರಂಭಿಸಿದ್ದಾರೆ ಎಂದು ಗುರುವಾರ ಸಂಜೆ  ವರದಿಯಾಗಿದೆ.

ತಹ್ರೀರ್ ಚೌಕದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ಕೆಲವು ವಿರೋಧಪಕ್ಷಗಳು ಕೂಡ ಮಾತುಕತೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೋಸ್ನಿ ಅವರ ಪರ- ವಿರೋಧಿ ಗುಂಪುಗಳನ್ನು ಬೇರ್ಪಡಿಸಲು ಸೇನೆಯು ಕ್ರಮ ಕೈಗೊಂಡಿದ್ದು ವಿವಿಧೆಡೆ ಘರ್ಷಣೆ  ತಡೆಯಲು ಸೈನಿಕರನ್ನು ನೇಮಿಸಿದೆ. ಅಲ್ಲದೆ ಎರಡು ಗುಂಪುಗಳು ಮುಖಾಮುಖಿ ಆಗುವುದನ್ನು ತಡೆಯಲು ಗುಂಪುಗಳ ನಡುವೆ ಸಶಸ್ತ್ರಧಾರಿ ಸೈನಿಕರು ತಮ್ಮ ವಾಹನಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಾಯಿತು.


ರಾಜಧಾನಿಯ ಪ್ರಮುಖ ಸ್ಥಳವಾದ ತಹ್ರೀರ್ ಚೌಕ್‌ನಲ್ಲಿ ನೆರೆದಿದ್ದ ಪ್ರತಿಭಟನಾನಿರತರ ಮೇಲೆ ಕುದುರೆ, ಒಂಟೆಗಳ ಮೇಲೇರಿ ಬಂದ ಮುಬಾರಕ್ ಬೆಂಬಲಿಗರು ಏಕಾಏಕಿ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ವಿರೋಧಿ ಗುಂಪು ಗುಂಡಿನ ದಾಳಿ ನಡೆಸಿದಾಗ ಏಳು ಜನರು ಸಾವನ್ನಪ್ಪಿದ್ದು ಸುಮಾರು 700 ಮಂದಿ ಗಾಯಗೊಂಡರು.

ಮುಬಾರಕ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಳೆದ 10 ದಿನಗಳಿಂದ ನಡೆಯುತ್ತಿರುವ ಚಳವಳಿಯ ಕೇಂದ್ರವಾಗಿರುವ ತಹ್ರೀರ್ ಚೌಕ್ ತೊರೆಯಲು ನಿರಾಕರಿಸಿರುವ ಪ್ರತಿಭಟನಾನಿರತರ ಮೇಲೆ ಮತ್ತೆ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿದೆ. ಚಳವಳಿಯನ್ನು ಹತ್ತಿಕ್ಕಲು ಮಾರುವೇಷದಲ್ಲಿರುವ ಪೊಲೀಸರು ಮತ್ತು ಬಾಡಿಗೆ  ಬಂಟರನ್ನು ಸರ್ಕಾರ ನಿಯೋಜಿಸಿದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ. 

ಕಟ್ಟಡಗಳ ಮಾಳಿಗೆ ಮೇಲೆ ಅವಿತುಕೊಂಡಿರುವ ಉಭಯ ಗುಂಪುಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದ್ದು, ಬಾಂಬ್ ಸ್ಫೋಟ ಮತ್ತು ಗುಂಡಿನ ಶಬ್ದ ಕೇಳಿ ಬರುತ್ತಿದೆ. ಹಿಂಸಾಚಾರ ಹತ್ತಿಕ್ಕಲು ಸ್ಥಳದಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಟ್ಯಾಂಕರ್ ಮತ್ತು ಶಸ್ತ್ರಸಜ್ಜಿತ ಪಡೆಗಳು ಗಸ್ತು ತಿರುಗುತ್ತಿವೆ.

ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಬುಧವಾರ ರಾಷ್ಟ್ರವನ್ನು ಉದ್ದೇಶಿಸಿ ಟಿವಿಯಲ್ಲಿ ಭಾಷಣ ಮಾಡಿದ ಬಳಿಕ ಹಿಂಸಾಚಾರ ಮರುಕಳಿಸಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಟ್ಟು ಹಿಡಿದಿರುವ ಪ್ರತಿಭಟನಾನಿರತರು ಶುಕ್ರವಾರ ರಾಷ್ಟ್ರವ್ಯಾಪಿ ರ್ಯಾಲಿಗೆ ಕರೆ ನೀಡಿರುವ ಬೆನ್ನಲ್ಲೇ ಗಲಭೆ ಆರಂಭವಾಗಿದೆ.

ಪ್ರತಿಭಟನಾನಿರತರ ಮೇಲಿನ ದಾಳಿಯನ್ನು ಖಂಡಿಸಿರುವ ಅಮೆರಿಕ, ಶೀಘ್ರ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವಂತೆ ಈಜಿಪ್ಟ್ ಸರ್ಕಾರಕ್ಕೆ ಹೇಳಿದೆ. ಮುಬಾರಕ್ ಅವರ ಪುತ್ರ ಗಮಾಲ್ ಲಂಡನ್‌ದಲ್ಲಿರುವ ಕುರಿತು ಪ್ರಕಟವಾದ ಮಾಧ್ಯಮಗಳ ವರದಿಯನ್ನು ‘ಗಾಳಿಸುದ್ದಿ’ ತಳ್ಳಿ ಹಾಕಿರುವ ಬ್ರಿಟನ್ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಲ್ಲಿಯಂ ಹ್ಯೂಜ್, ಗಮಾಲ್ ಈಜಿಪ್ಟ್‌ನಲ್ಲಿಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂಸಾಚಾರದಲ್ಲಿ ವಿದೇಶಿ ಪತ್ರಕರ್ತರೂ ಗಾಯಗೊಂಡಿದ್ದಾರೆ. ಮುಬಾರಕ್ ಪರ ಎಂದು ಗುರುತಿಸಿಕೊಂಡ ಗುಂಪು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಮೆರಿಕ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳಿಂದ ಖಂಡನೆ ವ್ಯಕ್ತವಾಗುತ್ತಿದ್ದಂತೆ ಪ್ರಧಾನಿ ಶಫೀಕ್ ಅವರು ಕ್ಷಮೆ ಕೋರಿದ್ದಾರೆ. ಹಿಂಸಾಚಾರದ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT