ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಗೊಳದಲ್ಲಿ ಜನರ ಬದಲು ಜಲಚರ..!

Last Updated 7 ಫೆಬ್ರುವರಿ 2011, 10:25 IST
ಅಕ್ಷರ ಗಾತ್ರ

ಹಾವೇರಿ: ವರ್ಷದ ಹಿಂದೆ ನಿರ್ಮಿಸಲಾದ ಸುಸಜ್ಜಿತ ಈಜುಗೊಳ ಉದ್ಘಾಟನೆಗೊಂಡು ನಾಲ್ಕು ತಿಂಗಳು ಗತಿಸಿವೆ. ಅದರ ಉಪಯೋಗ ಇಂದಾಗಬಹುದು, ನಾಳೆ ಆಗಬಹುದು ಎಂಬ ಸಾರ್ವಜನಿಕರ ನಿರೀಕ್ಷೆ ಇಂದಿಗೂ ನಿರೀಕ್ಷೆಯಾಗಿಯೇ ಉಳಿದಿದೆ.ಒಂದೆಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಈಜುಗೊಳವು ಬಳಕೆಯಾಗದೇ ನಿರುಪಯುಕ್ತವಾಗಿದ್ದರೆ, ಇನ್ನೊಂದೆಡೆ ನಿರ್ವಹಣೆ ಇಲ್ಲದೇ ಬಳಕೆಗೂ ಮುನ್ನವೇ ಹಾಳಾಗುವ ಸ್ಥಿತಿಗೆ ತಲುಪಿದೆ.

ಇದು ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಜಂಟಿಯಾಗಿ ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಈಜುಗೊಳದ ಪರಿಸ್ಥಿತಿ. ಜನರ ಬಹುದಿನಗಳ ಬೇಡಿಕೆಯಂತೆ ಈಜುಗೊಳ ಮಂಜೂರಿಯಾಯಿತು. ಸುಮಾರು ನಾಲ್ಕು ವರ್ಷಗಳ ಕಾಲ ಕುಂಟುತ್ತಾ ತೆವಳುತ್ತಾ ಸಾಗಿದ ಕಾಮಗಾರಿ ಒಂದು ವರ್ಷದ ಹಿಂದೆ ಪೂರ್ಣಗೊಂಡಿತ್ತು. ಅದಾದ ಆರು ತಿಂಗಳ ನಂತರ ಅಕ್ಟೋಬರ್ 25ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದನ್ನು ಭರ್ಜರಿ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಜನರಿಗೆ ಅರ್ಪಿಸಿದರು.

ಕೊನೆಗೂ ಈಜುಗೊಳ ಉದ್ಘಾಟನೆಯಾಯಿತಲ್ಲ ಎಂದು ಸಂತಸಪಟ್ಟ ಜನರು ಈವರೆಗೆ ಈಜಲು ಅವಕಾಶ ದೊರೆಯದ ಕಾರಣ ನಿರಾಶೆ ಅನುಭವಿಸಬೇಕಾಗಿದೆ. ನಾಲ್ಕು ತಿಂಗಳು ಗತಿಸಿದರೂ ಮುಚ್ಚಿದ ಈಜುಗೊಳದ ಬಾಗಿಲು ತೆಗೆಯದಿರುವುದೇ ಇದಕ್ಕೆ ಕಾರಣ.ಈಗ ಜನ ಬಳಕೆ ಇಲ್ಲದೇ ಹಾಗೂ ಸಂಬಂಧಿಸಿದ ಇಲಾಖೆಯವರು ಉದ್ಘಾಟನೆಯಾದ ನಂತರ ಅತ್ತ ಸುಳಿಯದಿರುವುದರಿಂದ ಈಜುಗೊಳದಲ್ಲಿ ತುಂಬಿಸಿರುವ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ನೀರಿನಲ್ಲಿ ಪಾಚಿ ಹುಟ್ಟಿಕೊಂಡು ಕೊಳೆತು ನಾರುತ್ತಿದೆ. ಜನರು ಈಜಾಡುವ ಬದಲು ಕಪ್ಪೆ ಹಾಗೂ ಜಲಚರಗಳು ಈಜಾಡುತ್ತಿವೆ. ಇನ್ನೂ ಈಜುಗೊಳದ ಆವರಣದಲ್ಲಿ ಸುಂದರವಾಗಿ ಬೆಳೆಸಲಾದ ಹುಲ್ಲು ಹಾಗೂ ಹೂವಿನ ಗಿಡಗಳು ಒಣಗಿ ಹೋಗಿವೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿರುವ ಈಜುಗೊಳ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಪಯೋಗಿಸುವ ಮುನ್ನವೇ ಹಾಳಾಗುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

‘ಕೆಲವು ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು ಈಜುಗೊಳ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯುವಜನ ಮತ್ತು ಕ್ರೀಡಾ  ಇಲಾಖೆ ಅಧಿಕಾರಿಗಳು ಸಹ ಈ ಬಗ್ಗೆ ಗಮನ ಹರಿಸಿಲ್ಲ. ಇದರಿಂದ ಇಂದಿಗೂ ಈಜುಗೊಳ ಸಾರ್ವಜನಿಕರ ಉಪಯೋಗದಿಂದ ದೂರ ಉಳಿದುಕೊಂಡಿದೆ’ ಎಂದು ಹೇಳುತ್ತಾರೆ ನಗರದ ನಿವಾಸಿ ರವಿಕುಮಾರ.

‘ಈಜುಗೊಳದ ನಿರ್ವಹಣೆ ಇಲಾಖೆಗೆ ದುಬಾರಿಯಾಗುತ್ತಿರುವುದರಿಂದ ಅದನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಟೆಂಡರ್ ಸಹ ಕರೆಯಲಾಗಿದೆ. ಆದರೆ, ಇನ್ನೂ ಟೆಂಡರ್ ತೆರೆದಿಲ್ಲ. ಒಂದೆರಡು ದಿನಗಳಲ್ಲಿ ಟೆಂಡರ್ ತೆರೆದು ಗುತ್ತಿಗೆ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಈಜುಗೊಳ ಕಾರ್ಯಾರಂಭ ಮಾಡಲಿದೆ’ ಎಂದು ನಿರ್ಮಿತಿ ಕೇಂದ್ರದ ಮುಖ್ಯಸ್ಥ ತಿಮ್ಮೇಶ್ ತಿಳಿಸುತ್ತಾರೆ.

ಈಜುಗೊಳವನ್ನು ಆಡಳಿತ ವಲಯದಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜನ ಬಳಕೆಗೆ ನೀಡುತ್ತಾರೆಯೋ ಅಥವಾ ಹಾಗೆ ಬಿಟ್ಟು ಅದನ್ನು ಹಾಳು ಮಾಡುತ್ತಾರೆಯೋ ಎಂಬುದು ಜನರ ಈಗಿನ ಆತಂಕ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಮುಗಿಸಿ ಸೂಕ್ತ ನಿರ್ವಹಣೆ ಮಾಡುವ ವ್ಯಕ್ತಿಗಳಿಗೆ ಈಜುಗೊಳದ ಜವಾಬ್ದಾರಿ ನೀಡಬೇಕೆಂಬುದು ನಗರದ ನಾಗರಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT