ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಗೊಳದಲ್ಲಿ ಪುಟಾಣಿಗಳ ಸಂಭ್ರಮ

Last Updated 17 ಸೆಪ್ಟೆಂಬರ್ 2011, 8:55 IST
ಅಕ್ಷರ ಗಾತ್ರ

ಮೈಸೂರು: ತಿಳಿನೀಲಿ ಬಣ್ಣದ ನೀರು ತುಂಬಿದ ಈಜುಗೊಳದಲ್ಲಿ ಪುಟ್ಟ ಪುಟ್ಟ ಮಕ್ಕಳು ಜಿಗಿದು ಮೀನಿನಂತೆ ಈಜಿದರೆ, 73ರ ಹರೆಯದ ವ್ಯಕ್ತಿಯೊಬ್ಬರ ನೀರಿನ ಮೇಲೆ ಯೋಗಾಸನಗಳನ್ನು ತೋರಿಸಿ ಬೆರಗು ಮೂಡಿಸಿದರು!

ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಶುಕ್ರವಾರ ಉದ್ಘಾಟನೆಯಾದ ನೂತನ ಈಜುಗೊಳದಲ್ಲಿ ಈ ಎರಡೂ ದೃಶ್ಯಗಳನ್ನು ಕಂಡುಬಂದವು. ಈಜುಗೊಳ ಉದ್ಘಾಟಿಸಿದ ಅಂತರ ರಾಷ್ಟ್ರೀಯ ಈಜುಪಟು ಶುಭಾ ಚಿತ್ತರಂಜನ್ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ ಬಿಲ್ವ, ವಿಕ್ರಂ, ಜಾರಾ ಮತ್ತು ಸಂಗಡಿಗರು ನೀರಿಗೆ  ಧುಮುಕಿ ಚುರುಕಿನಿಂದ ಈಜಿ ಚಪ್ಪಾಳೆ ಗಿಟ್ಟಿಸಿಕೊಂಡರು.

ನಂತರ ಲಿಮ್ಕಾ ದಾಖಲೆ ನಿರ್ಮಿಸಿರುವ ಹಿರಿಯ ಜಲಯೋಗ ಪಟು ಟಿ. ಮುರಳೀಧರನ್ ಪದ್ಮಾಸನ, ಮತ್ಸೇಂದ್ರಿಯಾಸನ, ಸೂರ್ಯ ನಮಸ್ಕಾರ, ಚಕ್ರಾಸನ, ಗೋಮು ಖಾಸನ, ವೃಕ್ಷಾಸನ ಮತ್ತಿತರ ಆಸನಗಳನ್ನು ನೀರಿನ ಮೇಲೈಯಲ್ಲಿ ಪ್ರದರ್ಶಿಸಿದರು. ಅವರ ಚಟುವಟಿಕೆ ಯನ್ನು ಪುತ್ರಿ ಮನೀಷಾ ವಿವರಿಸಿದರು. ಈ ಕೌಶಲವನ್ನು  ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು, ಪಾಲಕರು ಅಚ್ಚರಿಯಿಂದ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶುಭಾ ಚಿತ್ತರಂಜನ್, `ನಗರ ಪ್ರದೇಶದ ಎಷ್ಟೋ ಶಾಲೆಗಳಲ್ಲಿ ಇವತ್ತು ಆಟದ ಮೈದಾನಗಳೇ ಇಲ್ಲ. ಆದರೆ ಈ ವಿದ್ಯಾಲಯವು ಇಷ್ಟು ಸುಸಜ್ಜಿತ ಮತ್ತು ಸುಂದರವಾದ ಈಜುಗೊಳವನ್ನು ನಿರ್ಮಿಸಿರುವುದು ಸಂತಸದ ವಿಷಯ. ಯಾವುದೇ ಸೌಲಭ್ಯವು ಸದುಪಯೋಗ ವಾದರೆ ಮಾತ್ರ ಸಾರ್ಥಕವಾಗುತ್ತದೆ. ಈ ಶಾಲೆಯಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಈಜುಪಟುಗಳು ಬೆಳೆಯಲಿ~ ಎಂದು ಶುಭ ಹಾರೈಸಿದರು.

`ಕರ್ನಾಟಕ ರಾಜ್ಯವು ಈಜಿನಲ್ಲಿ ಅಗ್ರಸ್ಥಾನದಲ್ಲಿದೆ. ಅತ್ಯುತ್ತಮ ಈಜುಪಟುಗಳನ್ನು ಹೊಂದಿದೆ. ಆದರೆ ಕ್ರಿಕೆಟ್‌ಗೆ ಸಿಕ್ಕಷ್ಟು ಪ್ರೋತ್ಸಾಹ ಈ ಆಟಕ್ಕೆ ಸಿಗುತ್ತಿಲ್ಲ. ಇದರಿಂದ ಧೃತಿಗೆಡುವುದು ಬೇಡ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವ ಸರ್ವಾಂಗ ಸುಂದರ ವ್ಯಾಯಾಮವಾಗಿದ್ದು, ಪ್ರತಿಯೊಬ್ಬರೂ  ಈಜು ಕಲಿಯಲೇಬೇಕು~ ಎಂದು ಹೇಳಿದರು.

ಕಾರ್ಯಕ್ರಮ ಅತಿಥಿ, ಪಾಲಿಕೆ ಮಾಜಿ ಸದಸ್ಯ ಎಂ.ಎಸ್. ಸತ್ಯನಾರಾಯಣ, `ಕ್ರೀಡೆಯಲ್ಲಿ ಜಾತಿ, ತಾರತಮ್ಯ, ಅಸಮಾನತೆಗಳು ಇಲ್ಲ. ಇಲ್ಲಿ ಎಲ್ಲರೂ ಒಂದು. ಸಾಮರ್ಥ್ಯ ಮತ್ತು ಪ್ರತಿಭೆ ಇದ್ದವರು  ಮುಂದೆ ಬರುತ್ತಾರೆ. ತರಬೇತುದಾರರು ಮಕ್ಕಳಲ್ಲಿ ಕ್ರೀಡಾ ಮನೋಭಾವ, ಧೈರ್ಯ, ಆತ್ಮವಿಶ್ವಾಸ ತುಂಬಬೇಕು~ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಆರ್. ರಘು ವಹಿಸಿದ್ದರು. ಪ್ರಾಚಾರ್ಯೆ ಎಲ್. ಸವಿತಾ ಮತ್ತಿತರರು ಹಾಜರಿದ್ದರು. ಕುಮಾರಿ ರಾಜಶ್ರೀ ಸ್ವಾಗತಿಸಿದರು, ಕೌಶಿಕ್ ನಂದನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT