ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡನ್ ಗಾರ್ಡನ್ಸ್‌ಗೆ ಐಸಿಸಿ ಹಸಿರು ನಿಶಾನೆ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ-ಇಂಗ್ಲೆಂಡ್ ನಡುವಣ ಲೀಗ್ ಪಂದ್ಯವನ್ನು ಸ್ಥಳಾಂತರಿಸಿದ ನಂತರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ವಿಶ್ವಕಪ್‌ನ ಬಾಕಿ ಮೂರು ಪಂದ್ಯಗಳನ್ನು ನಡೆಸಲು ಒಪ್ಪಿಗೆ ದೊರೆಯುವ ಬಗ್ಗೆ ಇದ್ದ ಅನುಮಾನಗಳು ಮಂಗಳವಾರ ದೂರವಾದವು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯು ಈ ಮೊದಲು ನಿಗದಿ ಮಾಡಿರುವ ಮೂರು ಪಂದ್ಯಗಳನ್ನು ಈಡನ್ ಗಾರ್ಡನ್ಸ್‌ನಲ್ಲಿಯೇ ನಡೆಸುವುದಕ್ಕೆ ಒಪ್ಪಿಗೆ ನೀಡಿದೆ. ಆದರೆ ಇಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಭಾರತ ತಂಡದ ಆಟವನ್ನು ನೋಡುವ ಅವಕಾಶ ಇಲ್ಲದಾಗಿರುವುದು ನಿರಾಸೆಗೊಳಿಸಿದೆ. ತಾಯ್ನಾಡಿನ ತಂಡವು ಆಡದ ಪಂದ್ಯಗಳನ್ನು ಮಾತ್ರ ನೋಡಿ ಸಂತೋಷ ಪಡಬೇಕು!

ಇಲ್ಲಿಯೇ ನಡೆಯಬೇಕಿದ್ದ ಇಂಗ್ಲೆಂಡ್-ಭಾರತ ನಡುವಣ ಪಂದ್ಯವು ಫೆಬ್ರುವರಿ 27ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದನ್ನು ಬಿಟ್ಟು ಮೂರು ಪಂದ್ಯಗಳು ಇಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾ-ಐರ್ಲೆಂಡ್ (ಮಾರ್ಚ್ 15), ಹಾಲೆಂಡ್-ಐರ್ಲೆಂಡ್ (ಮಾ.18) ಹಾಗೂ ಜಿಂಬಾಬ್ವೆ-ಕೀನ್ಯಾ (ಮಾ.20) ತಂಡಗಳ ನಡುವಣ ಪಂದ್ಯಗಳನ್ನು ಆಯೋಜಿಸುವುದಕ್ಕೆ ಈಗ ಐಸಿಸಿಯಿಂದ ಹಸಿರು ನಿಶಾನೆ ದೊರೆತಿದೆ.

ಸೋಮವಾರ ಕ್ರೀಡಾಂಗಣವನ್ನು ಪರಿಶೀಲಿಸಿದ್ದ ಐಸಿಸಿ ಪರಿಶೀಲನಾ ತಂಡವು ಮಾರ್ಚ್ 15ರ ಹೊತ್ತಿಗೆ ಎಲ್ಲವೂ ವ್ಯವಸ್ಥಿತವಾಗಿರುವ ಭರವಸೆಯೊಂದಿಗೆ ಹಿಂದಿರುಗಿತ್ತು. ತಾನು ಕಳುಹಿಸಿದ ಪ್ರತಿನಿಧಿಗಳು ನೀಡಿದ ವರದಿಯನ್ನು ಆಧರಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಮೂರು ಪಂದ್ಯಗಳು ನಿಗದಿಯಂತೆ ಈಡನ್ ಗಾರ್ಡನ್ಸ್‌ನಲ್ಲಿಯೇ ನಡೆಯಲಿವೆ ಎಂದು ಪ್ರಕಟಿಸಿದೆ.
ಐಸಿಸಿ ಪ್ರಧಾನ ವ್ಯವಸ್ಥಾಪಕ ಹರೂನ್ ಲಾರ್ಗಟ್ ಅವರು ಪಂದ್ಯಗಳು ನಡೆಯುವುದಕ್ಕೆ ಸಮ್ಮತಿ ಸೂಚಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಸಂದೇಶ ಕಳುಹಿಸಿದ್ದಾರೆ. ಅದನ್ನು ಬಿಸಿಸಿಐ ಅಧಿಕಾರಿಗಳು ಸಂಜೆಯ ಹೊತ್ತಿಗೆ ನಮಗೆ ತಿಳಿಸಿದರು ಎಂದು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಜಂಟಿ ಕಾರ್ಯದರ್ಶಿ ವಿಶ್ವರೂಪ್ ಡೇ ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT