ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡಿಯಟ್ಸ್ ಆಗಮನ

Last Updated 17 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಜನ ನಮ್ಮ ಸಿನಿಮಾ ನೋಡಿ ನಗದೇ ಇದ್ದರೆ ಅವರು ಕೇಳಿದ್ದನ್ನು ಕೊಡುತ್ತೇನೆ...’ ಹೀಗೆನ್ನುತ್ತಾ ಎದೆಸೆಟೆದು ನಿಂತವರು ಆನಂದ್. ಅವರ ಚೊಚ್ಚಿಲ ನಿರ್ದೇಶನದ ‘5 ಈಡಿಯಟ್ಸ್’ಗೆ ಈ ವಾರ ತೆರೆಕಾಣುವ ಭಾಗ್ಯ. ಆ ಖುಷಿಯಲ್ಲಿ ಅವರ ಆತ್ಮವಿಶ್ವಾಸ ತುಳುಕಿ, ಸಭಾಂಗಣದಲ್ಲೆಲ್ಲಾ ಚೆಲ್ಲಾಡಿತು. ವೆಂಕಟ್ ಬರೆದ ಅನೇಕ ಡೈಲಾಗ್‌ಗಳನ್ನು ಕೂಡ ಅವರು ಚೆಲ್ಲಾಡುತ್ತಾ ಹೋದರು.

‘ಎಸ್ಸೆಸ್ಸೆಲ್ಸಿ ನನ್ಮಕ್ಳು’ ಧಾರಾವಾಹಿ ನಿರ್ದೇಶನದ ಅನುಭವದ ಚುಂಗು ಹಿಡಿದೇ ಅವರು ಈ ಸಿನಿಮಾಗೆ ಕಥೆ ಹೆಣೆದಿದ್ದಾರಂತೆ. ಚಿತ್ರದ ಮೊದಲರ್ಧದಲ್ಲಿ ಚಿದಾನಂದ ಅವರ ಪಾತ್ರ ಹೈಲೈಟ್ ಆದರೆ, ದ್ವಿತೀಯಾರ್ಧದಲ್ಲಿ ತಮ್ಮ ಬಾಡಿ ಬ್ರಹ್ಮಾಂಡ ತೋರಿಸಲು ಮಿಮಿಕ್ರಿ ದಯಾನಂದ ಎಂಟ್ರಿ ಕೊಡಲಿದ್ದಾರೆ. ‘ಮಜಾ ವಿತ್ ಸೃಜಾ’ ಟಿವಿ ಮನರಂಜನಾ ಕಾರ್ಯಕ್ರಮದಲ್ಲಿ ಬಳಕೆಯಾಗುತ್ತಿರುವ ದಯಾನಂದ ಅವರ ಪಾತ್ರವನ್ನು ಮೊದಲು ಕಟೆದದ್ದೇ ಆನಂದ್ ಅವರಂತೆ. ನಮ್ಮ ಸಿನಿಮಾ ರಿಲೀಸ್ ಸ್ವಲ್ಪ ಲೇಟ್ ಆಗಿದ್ದರಿಂದ ಅದೇ ಕಾನ್ಸೆಪ್ಟನ್ನು ‘ಮಜಾ ವಿತ್ ಸೃಜಾ’ದಲ್ಲಿ ಅಳವಡಿಸಿಕೊಂಡರಷ್ಟೆ ಎಂಬ ಆನಂದ್ ಮಾತು ಇದನ್ನು ಸ್ಪಷ್ಟಪಡಿಸಿತು.

ರೇಣು ಕ್ಯಾಮೆರಾ, ಶ್ರೀಧರ್ ವಿ.ಸಂಭ್ರಮ್ ಹಿನ್ನೆಲೆ ಸಂಗೀತ, ಡ್ರಮ್ಸ್ ದೇವಾ ಹಾಡುಗಳಿಗೆ ಹಾಕಿರುವ ಟ್ಯೂನ್‌ಗಳು, ಸಾಹಿತ್ಯವೇ ಇಲ್ಲದ ಒಂದು ಹಾಡು, ಜನಪ್ರಿಯವಾಗಿರುವ ‘ರಿಂಗ ರಿಂಗ’ ಗೀತೆ ಎಲ್ಲವನ್ನೂ ಆನಂದ್ ಒಂದೇ ಉಸಿರಿನಲ್ಲಿ ಹೇಳುತ್ತಾ ಸುಖಿಸಿದರು. ‘ಕ್ರಿಕೆಟ್ ವರ್ಲ್ಡ್‌ಕಪ್‌ನಲ್ಲಿ ಇಂಡಿಯಾ ಗೆಲ್ಲಲಿ... ಜನರ ಮನಸ್ಸನ್ನು ನಾವು ಗೆಲ್ಲುತ್ತೇವೆ’ ಎಂದು ಮಾತು ಮುಗಿಸಿದ ಅವರ ಮೊಗದಲ್ಲಿ ಭರ್ತಿ ಆತ್ಮವಿಶ್ವಾಸ.

ನವೀನ್‌ಕೃಷ್ಣ ಕೂಡ ಚಿತ್ರದ ಸಂಭಾಷಣೆಯೊಂದನ್ನು ಮೆಲುಕು ಹಾಕಿದರು. ನಗೆಗಡಲಲ್ಲಿ ತೇಲುವ ಅವಕಾಶ ಕೊಟ್ಟು, ಸ್ಟಾರ್ ರೇಂಜ್‌ಗೆ ತಮ್ಮನ್ನು ಪರಿಚಯಿಸಿದ ನಿರ್ದೇಶಕ ಆನಂದ್ ಕುರಿತು ಅವರ ಮಾತಿನಲ್ಲಿ ಹೊಗಳಿಗೆ ತುಂಬಿತ್ತು.

ನಿರ್ಮಾಪಕರಲ್ಲಿ ಒಬ್ಬರಾದ ಲೋಕೇಶ್‌ಮೂರ್ತಿ ಫ್ಯಾಷ್‌ಬ್ಯಾಕ್‌ಗೆ ಹೋದರು. ನಿರ್ದೇಶನದ ಹೊಣೆಯನ್ನು ಹೊರಿಸಿದಾಗ ಆನಂದ್ ಇನ್ನೂ ಅವಿವಾಹಿತ. ಆದರೆ, ಆಮೇಲೆ ಮದುವೆಯಾಗಿ ಅವರು ಮಗುವಿನ ಅಪ್ಪ ಕೂಡ ಆಗಿದ್ದಾರೆ. ಹಾಗಾಗಿ ಪಿಕ್ಚರ್ ರಿಲೀಸ್‌ಗೆ ಮುಂಚೆಯೇ ಅವರ ಬದುಕಿನ ಅಧ್ಯಾಯಗಳು ರಿಲೀಸ್ ಆಗಿವೆ ಎಂದು ಲೋಕೇಶ್‌ಮೂರ್ತಿ ಸಿನಿಮಾ ಧಾಟಿಯಲ್ಲೇ ಮಾತಾಡಿದರು. ನಟ ವಾಸು ಕೂಡ ಆನಂದ್, ನವೀನ್ ಕೃಷ್ಣ ಹಾಗೂ ನಿರ್ಮಾಪಕ ಮೂವರೂ ಅಪ್ಪಂದಿರಾದ ಸಂಗತಿಯನ್ನು ಹೇಳಿದರು.

‘ಸಿನಿಮಾ ಹದಿನೆಂಟನೇ ತಾರೀಕು ಬಿಡುಗಡೆಯಾಗುತ್ತಿದೆ. 18ರಲ್ಲಿ 1, 8 ಉಂಟು. ಎರಡನ್ನೂ ಸೇರಿಸಿದರೆ 9. ಅದು ನನ್ನ ಲಕ್ಕಿ ನಂಬರ್’ ಎಂದು ಸಂಖ್ಯಾಶಾಸ್ತ್ರದ ನಂಬಿಕೆ ಅನಾವರಣಗೊಳಿಸಿದ್ದು ನಾಯಕಿಯರಲ್ಲಿ ಒಬ್ಬರಾದ ತಾವರೆ.

ನೆಗೆಟಿವ್ ನೆರಳಿನ ಕಾಮಿಡಿ ಪಾತ್ರದಲ್ಲಿ ವಿಗ್ ಧರಿಸುವ ಅವಕಾಶ ಸಿಕ್ಕಿದ್ದಕ್ಕೆ ಪೆಟ್ರೋಲ್ ಪ್ರಸನ್ನ ಕೃತಾರ್ಥರಾದರೆ, ಇನ್ನಿಬ್ಬರು ನಿರ್ಮಾಪಕರಾದ ಶಿವಾರೆಡ್ಡಿ ಹಾಗೂ ಮೋಹನ್ ಚಿತ್ರವನ್ನು ಬಿಡುಗಡೆ ಮಾಡಲು ಪಟ್ಟ ಕಷ್ಟವನ್ನು ಹೇಳಿಕೊಂಡರು.

ಹರ್ಷಿಕಾ ಪೂಣಚ್ಚ, ನಮ್ರತಾ ಹೆಗ್ಡೆ, ಟೆನಿಸ್ ಕೃಷ್ಣ, ಕರಿಬಸವಯ್ಯ ಮೊದಲಾದವರು ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಈಡಿಯಟ್ಸ್’ ಎಷ್ಟರ ಮಟ್ಟಿಗೆ ಕಚಗುಳಿ ಇಟ್ಟೀತೆಂಬುದು ಸದ್ಯದಲ್ಲೇ ಸ್ಪಷ್ಟವಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT