ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರಿದ ಹರಕೆ: ದೇವರಿಗೆ ಕೃತಜ್ಞತೆ

Last Updated 7 ಫೆಬ್ರುವರಿ 2012, 8:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಅಸಾರ್ ಮೊಹಲ್ಲಾದ ಮಸೀದಿ ಸುತ್ತಮುತ್ತ ಸೋಮವಾರ ಮಹಿಳೆಯರದೇ ಓಡಾಟ. ಅವರಲ್ಲಿ ಬುರ್ಖಾ ಧರಿಸಿದವರು, ಹಣೆಗೆ ಕುಂಕುಮ ಇಟ್ಟುಕೊಂಡವರೂ ಇದ್ದರು. ವರ್ಷಕ್ಕೊಮ್ಮೆ ಮಾತ್ರ ತಮಗಾಗಿ `ತೆರೆದಿದ್ದ~ ಮಸೀದಿಗೆ ತೆರಳಿದ ಅವರಲ್ಲಿ ಅನೇಕರು ಹರಕೆ ಹೊತ್ತುಕೊಂಡು ಬಂದಿದ್ದರು. ಹೆಚ್ಚಿನವರು ಇಷ್ಟಾರ್ಥ ಸಿದ್ಧಿಯಾದ ಹಿನ್ನೆಲೆಯಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಲು ಸೋಮವಾರ `ಬೀಡಾ~ದೊಂದಿಗೆ ಆಗಮಿಸಿದ್ದರು.

ಪ್ರತಿ ವರ್ಷ ಈದ್ ಮಿಲಾದ್ ಹಬ್ಬದ ಮರುದಿನ ಇಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮಸೀದಿಯ ಮುಖಂಡರ ಪ್ರಕಾರ ಈದ್ ಮಿಲಾದ್ ಅಂಗವಾಗಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿರುವ ರಾಜ್ಯದ ಏಕೈಕ ಮಸೀದಿ ಇದು. ಹರಕೆ ಹೊತ್ತು, ಬಯಕೆ ಈಡೇರಿದ ನಂತರ ಅದಕ್ಕೆ ಕೃತಜ್ಞತೆ ಸಲ್ಲಿಸುವುದು ಇಲ್ಲಿನ ಪ್ರಾರ್ಥನೆಯ ವೈಶಿಷ್ಟ್ಯ.

ಇಲ್ಲಿ ಮಹಮ್ಮದ್ ಪೈಗಂಬರರ ಮೀಸೆಯ ಒಂದು ಕೇಶದ ಪ್ರದರ್ಶನ ನಡೆಯುತ್ತದೆ. ಈ ಮೀಸೆಯನ್ನು ಗಾಜಿನ ಪೆಟ್ಟಿಗೆಯಲ್ಲಿ ಬೀಗ ಹಾಕಿ ಇರಿಸಲಾಗಿದೆ. ಈದ್ ಮಿಲಾದ್ ಹಬ್ಬದಂದು ಅದನ್ನು ತೆಗೆದು ಪ್ರಾರ್ಥನೆ (ಮೂಯೆ ಮುಬಾರಕ್) ಸಲ್ಲಿಸಲಾಗು ತ್ತದೆ. ಅಂದೇ ಸಂಜೆ ಮತ್ತೆ ಪೆಟ್ಟಿಗೆಯಲ್ಲಿ ಇಡಲಾ ಗುತ್ತದೆ. ಹೀಗಾಗಿ ಮಹಿಳೆಯರಿಗೆ ಅದನ್ನು ನೋಡುವ ಅವಕಾಶವಿರುವುದಿಲ್ಲ.

ಹರಕೆ ಹೊತ್ತವರು ಮನೆಯಿಂದ ವೀಳ್ಯದೆಲೆ, ಕೊಬ್ಬರಿ, ಉತ್ತತ್ತಿ ಇತ್ಯಾದಿಗಳನ್ನು ತೆಗೆದುಕೊಂಡು ಬಂದು ಪೈಗಂಬರರ ಮೀಸೆ ಇರುವ ಪೆಟ್ಟಿಗೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ, ಗುಲಾಬಿ ಹೂಗಳನ್ನು ಸಲ್ಲಿಸುತ್ತಾರೆ.

`ಬೀಡಾ~ವನ್ನು ಮಸೀದಿಯಲ್ಲಿ ಅಥವಾ ಮನೆಯಲ್ಲಿ ಸೇವಿಸುತ್ತಾರೆ. ಇದೇ ಸಂದರ್ಭದಲ್ಲಿ ಇಷ್ಟಾರ್ಥ ಸಿದ್ಧಿ ಆದವರು 50ರಿಂದ 100 ಬೀಡಾ ತೆಗೆದುಕೊಂಡು ಬಂದು `ಸಂದಾಯ~ ಮಾಡುತ್ತಾರೆ. ಹೊಸತಾಗಿ ಹರಕೆ ಹೊತ್ತವರಿಗೆ ಬೀಡಾ ಹಸ್ತಾಂತ ರಿಸುವ ಸಂಪ್ರದಾಯವೂ ಇದೆ. ಅನ್ಯಧರ್ಮೀಯರು ಕೂಡ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗಾಗಿ ಧಾರ್ಮಿಕ ಸಮನ್ವಯ ಕಾಪಾಡುವ ಕೇಂದ್ರವಾಗಿಯೂ ಮಸೀದಿ ಗಮನ ಸೆಳೆದಿದೆ.

ಸೋಮವಾರ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ವಿವಿಧ ತಾಲ್ಲೂಕು ಗಳ ಸಹಸ್ರಾರು ಮಂದಿ ಮಸೀದಿಗೆ ಭೇಟಿ ನೀಡಿದ್ದಾರೆ.

`ಮಕ್ಕಳ ಯೋಗ, ಪತಿಗೆ ಉದ್ಯೋಗ, ಕುಟುಂಬದ ಆರೋಗ್ಯ ಇತ್ಯಾದಿಗಳಿಗಾಗಿ ಇಲ್ಲಿ ಹರಕೆ ಹೊತ್ತು ಹೋಗುವವರು ಮುಂದಿನ ವರ್ಷ ಬಂದು ಸಂತಸ ದಿಂದ ಕಾಣಿಕೆ ಅರ್ಪಿಸುತ್ತಾರೆ. ಇಲ್ಲಿ ಬಂದು ಹರಕೆ ಹೊತ್ತವರು ನಿರಾಶರಾಗುವುದಿಲ್ಲ ಎಂಬುದು ನಂಬಿಕೆ~ ಎಂದು ಅಸಾರ್ ಮೊಹಲ್ಲಾ ಪಂಚ ಕಮಿಟಿ ಸದಸ್ಯ ಮಹಮ್ಮದ್ ಗೌಸ್ `ಪ್ರಜಾವಾಣಿ~ಗೆ ತಿಳಿಸಿದರು.

`ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡು ಹೋದೆ. ಈಗ ಎರಡು ವರ್ಷ ವಯಸ್ಸಿನ ಮಗು ಇದೆ~ ಎಂದು ಅತ್ತಿಗೆ ಯೊಂದಿಗೆ ಬಂದಿದ್ದ ಅರವಿಂದ ನಗರದ ಅನ್ನಪೂರ್ಣ ಸಂತಸ ವ್ಯಕ್ತಪಡಿಸಿದರು.

`ಮಸೀದಿಗೆ ಬರಲು ಅಂಜಿಕೆಯಾಗಲಿ, ಮುಜುಗರವಾಗಲಿ ಆಗಲಿಲ್ಲ. ಮಂದಿರಕ್ಕೆ ಹೋದ ಹಾಗೆಯೇ ಮಸೀದಿಗೂ ಬಂದಿದ್ದೇವೆ. ಇವೆರಡರ ನಡುವೆ ಭೇದ ಯಾಕೆ~ ಎಂದು ಅವರು ಪ್ರಶ್ನಿಸಿದರು.

`ಕುಟುಂಬದ ಎಲ್ಲ ಮಹಿಳೆಯರು ಪ್ರತಿ ವರ್ಷ ಇಲ್ಲಿಗೆ ಆಗಮಿಸುತ್ತೇವೆ, ಆರೋಗ್ಯ, ನೌಕರಿ ಇತ್ಯಾದಿ ಕರುಣಿಸು ಎಂದು ಪ್ರಾರ್ಥಿಸುತ್ತೇವೆ~ ಎಂದು ಕೃಷ್ಣಾಪುರ ಓಣಿಯ ಶಬಾನಾ ಬೇಗಂ ಹೇಳಿದರು.

ಮಸೀದಿಯ ಮುಂದೆ ಇರುವ ಸಣ್ಣ ಮೈದಾನದಲ್ಲಿ ಆಟಿಕೆಗಳು, ಆಭರಣಗಳು, ಆಹಾರ ಪದಾರ್ಥ, ಪ್ರಾರ್ಥನೆಗೆ ಬೇಕಾದ ಸಾಮಗ್ರಿಗಳು ಇತ್ಯಾದಿಗಳ ಮಾರಾಟ ನಡೆಯುತ್ತಿತ್ತು. ಅಲ್ಲಿ `ಜಾತ್ರೆ~ಯ ಸಂಭ್ರಮ ಮನೆಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT