ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರುವುದೇ ಭಾರತದ ಗೆಲುವಿನ ಆಸೆ?

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್: ಬಲ ಕಳೆದುಕೊಂಡ ಭಾರತದವರ ಮನದಲ್ಲಿ ಭಯ ಮನೆ ಮಾಡಿದೆ. ಮತ್ತೊಂದು ಸೋಲು ಎದುರಾಗುವ ಆತಂಕ ಬೆನ್ನುಬಿಟ್ಟಿಲ್ಲ. ಆದರೂ ಜಯದ ನಿರೀಕ್ಷೆಯ ಆಸೆಯ ಎಳೆಯನ್ನು ಹಿಡಿದು ಒಂದರ ಹಿಂದೊಂದು ಪಂದ್ಯಗಳನ್ನು ಕಳೆದಾಗಿದೆ. ಇನ್ನಾದರೂ ಈಡೇರುವುದೇ ಇಂಗ್ಲೆಂಡ್ ವಿರುದ್ಧ ಗೆಲುವು?
ಇಂಥದೊಂದು ಪ್ರಶ್ನೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹಾಗೆಯೇ ಉಳಿದಿದೆ.

ಗೆಲುವೆನ್ನುವ ಬೆಳಕಿನ ಕಿರಣವನ್ನೇ ಕಾಣದ ಭಾರತವು ಸಾಲು ಸಾಲು ಸೋಲಿನ ಕತ್ತಲೆಯ ಗೂಡಿನಲ್ಲಿ ಮುದುಡಿ ಕುಳಿತಿದೆ. ಉತ್ಸಾಹ ನೀಡುವಂಥ ಜಯವೊಂದು ಈಗ ಅಗತ್ಯ. ಶುಕ್ರವಾರ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಗೆದ್ದು ಮಾನ ಉಳಿಸಿಕೊಳ್ಳಲು ಮಹೇಂದ್ರ ಸಿಂಗ್ ದೋನಿ ಪ್ರಯತ್ನ ಮಾಡಿದರೆ ಒಳಿತು.

ಭಾರತ ತಂಡವು ನಿರಂತರವಾಗಿ ಸೋಲುತ್ತಿದ್ದರೆ ಕ್ರಿಕೆಟ್‌ಗೂ ಅಪಾರ ನಷ್ಟ ಎನ್ನುವ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಬಲವಾಗಿದೆ. ಚೆಂಡು-ದಾಂಡಿನ ಆಟವನ್ನು ನೋಡುವವರು ಅಪಾರ ಸಂಖ್ಯೆಯಲ್ಲಿರುವ ಭಾರತದ ತಂಡವು ಕ್ರಿಕೆಟ್ ಹಿತಕ್ಕಾಗಿಯಾದರೂ ಮತ್ತೆ ಗೆಲುವಿನ ಹಾದಿ ಹಿಡಿಯಬೇಕು.

ಇಲ್ಲದಿದ್ದರೆ ಟೆಲಿವಿಷನ್‌ನಲ್ಲಿ ಕ್ರಿಕೆಟ್ ನೇರ ಪ್ರಸಾರವನ್ನು ವೀಕ್ಷಿಸುವವರ ಕೋಟಿ ಕೋಟಿ ಸಂಖ್ಯೆ ಕುಸಿಯುವ ಅಪಾಯ ಸದ್ಯಕ್ಕೆ ಎದುರಾಗಿದೆ.ಈಗ ಕ್ರಿಕೆಟ್‌ಗೆ ಮಾತ್ರವಲ್ಲ ಕೋಟಿ ಕೋಟಿ ಅಭಿಮಾನಿಗಳಲ್ಲಿ ಉತ್ಸಾಹ ತುಂಬುವ ಜವಾಬ್ದಾರಿ `ಮಹಿ~ ಪಡೆಯ ಮೇಲಿದೆ. ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಮಳೆಗೆ ಆಹುತಿ ಆಯಿತು.
 
ಎರಡನೇ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಂತರದಿಂದ ಗೆದ್ದ ಇಂಗ್ಲೆಂಡ್ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಟೆಸ್ಟ್ ಸರಣಿಯಲ್ಲಿನಂತೆ ನಿಗದಿತ ಓವರುಗಳ ಪಂದ್ಯಗಳಲ್ಲಿಯೂ ಭಾರತವು ಎಡವುತ್ತಾ ಸಾಗಿದರೆ ಅದೊಂದು ದೊಡ್ಡ ಆಘಾತ.

ಆತಿಥೇಯ ಇಂಗ್ಲೆಂಡ್‌ನವರಂತೂ 4-0ಯಲ್ಲಿ ಸರಣಿಯನ್ನು ತಮ್ಮದಾಗಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಅವರು ಆಡುತ್ತಿರುವ ರೀತಿಯನ್ನು ನೋಡಿದರೆ ಈ ಸಾಧ್ಯತೆಯನ್ನು ಅಲ್ಲಗಳೆಯುವುದೂ ಕಷ್ಟ. ಭಾರತದ್ದು ಮಾತ್ರ ಕಷ್ಟಗಳ ನಡುವಣ ತೊಳಲಾಟ.

ಗಾಯದ ಸಮಸ್ಯೆಯು ಅನೇಕ ಪ್ರಮುಖ ಆಟಗಾರರನ್ನು ಕಿತ್ತುಕೊಂಡಿತು. ಆದ್ದರಿಂದ ತಂಡವು ಹೊಸ ರೂಪವನ್ನೇ ಪಡೆಯಬೇಕಾಯಿತು. ಈಗ ಲಭ್ಯ ಆಟಗಾರರ ಬಲದೊಂದಿಗೆ ಛಲದಿಂದ ಹೋರಾಡಬೇಕು. ಅದೊಂದೇ ಉಳಿದಿರುವ ಮಾರ್ಗ.

ಪ್ರಮುಖ ಆಟಗಾರರು ಗಾಯಗೊಂಡಿದ್ದರಿಂದ ತಂಡದ ಪ್ರದರ್ಶನ ಮಟ್ಟದಲ್ಲಿ ಕುಸಿತವಾಯಿತು ಎನ್ನುವ ನೆಪವನ್ನು ಹೇಳಿ ಕ್ರಿಕೆಟ್ ಪ್ರೇಮಿಗಳನ್ನು ಸಮಾಧಾನ ಪಡಿಸುವುದಕ್ಕೆ ಆಗದು. ಅವರಿಗೆ ಸಂತಸವಾಗುವುದು ತಂಡ ಗೆದ್ದಾಗ ಮಾತ್ರ.
 
ಆದ್ದರಿಂದ ದೋನಿ ಬಳಗವು ಇಂಗ್ಲೆಂಡ್ ಪ್ರವಾಸದಲ್ಲಿ ಇನ್ನು ಬಾಕಿ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು ಎನ್ನುವ ದಿಟ್ಟತನ ತೋರುವುದೇ ಒಳಿತು. ಆಗ 3-1ರಲ್ಲಿ ಸರಣಿ ವಿಜಯ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ದಿ ಓವಲ್ ಪಂದ್ಯವು ಯಶಸ್ಸಿನ ಮುನ್ನುಡಿ ಆಗಬೇಕು.

ವಿಶ್ವಕಪ್ ಗೆದ್ದ ತಂಡವು ಇಂಗ್ಲೆಂಡ್‌ನಲ್ಲಿ ಮುಗ್ಗರಿಸಿ ಬಿದ್ದಿದೆ. ಇನ್ನಷ್ಟು ಕುಸಿದು ಹೋಗಬಾರದು. ಅದಕ್ಕಾಗಿ ಯುವ ಆಟಗಾರರು ತಂಡಕ್ಕೆ ಹೊಸ ಚೈತನ್ಯ ನೀಡಬೇಕು. ಸೌಥ್ಯಾಂಪ್ಟನ್ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ಅಜಿಂಕ್ಯಾ ರಹಾನೆ ಹೊಸ ಭರವಸೆಗೆ ಕಾರಣವಾಗಿದ್ದಾರೆ.
 
ಪಾರ್ಥಿವ್ ಪಟೇಲ್ ಹಾಗೂ ಅನುಭವಿ ರಾಹುಲ್ ದ್ರಾವಿಡ್ ಭಾರಿ ದೊಡ್ಡ ಮೊತ್ತ ಪೇರಿಸದಿದ್ದರೂ, ತೀರ ನಿರಾಸೆಗೊಳಿಸಿಲ್ಲ. ಸುರೇಶ್ ರೈನಾ ಬ್ಯಾಟಿಂಗ್‌ನಿಂದಲೂ ರನ್‌ಗಳು ಹರಿದಿವೆ. ಆದರೆ ಇಂಗ್ಲೆಂಡ್‌ಗೆ ಸವಾಲಾಗುವಂಥ ಮೊತ್ತವನ್ನು ಭಾರತವು ಸೇರಿಸಲಿಲ್ಲ ಎನ್ನುವ ಅಂಶವನ್ನು ಮರೆಯುವಂತಿಲ್ಲ.

ಬೌಲಿಂಗ್ ವಿಭಾಗವೂ ಕುಗ್ಗಿದೆ. ಪ್ರವೀಣ್ ಕುಮಾರ್ ನಿರೀಕ್ಷೆ ಹುಸಿಮಾಡಿದರು. ನಾಲ್ಕು ಓವರುಗಳಲ್ಲಿ 41 ರನ್ ನೀಡಿದ ಅವರು ದುಬಾರಿ ಎನಿಸಿದರು. ಈ ದೌರ್ಬಲ್ಯ ನೀಗಬೇಕು. ಆಗಲೇ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಒತ್ತಡದಲ್ಲಿಡಲು ಸಾಧ್ಯ.

ಆರ್.ವಿನಯ್ ಕುಮಾರ್ ಹಾಗೂ ಆರ್.ಅಶ್ವಿನ್ ಸಿಕ್ಕ ಅವಕಾಶದಲ್ಲಿ ಸಮಾಧಾನಕರ ಎನಿಸುವಂತೆ ಬೌಲಿಂಗ್ ಮಾಡಿದ್ದಾರೆ. ಶುಕ್ರವಾರದ ಪಂದ್ಯದಲ್ಲಿಯೂ ಅವರಿಂದ ಉತ್ತಮ ಫಲವನ್ನು ನಿರೀಕ್ಷಿಸುವುದು ಸಹಜ.

ಇಂಗ್ಲೆಂಡ್
: ಆಲಿಸ್ಟರ್ ಕುಕ್ (ನಾಯಕ), ಜೇಮ್ಸ ಆ್ಯಂಡರ್ಸನ್, ಇಯಾನ್ ಬೆಲ್, ರವಿ ಬೋಪರಾ, ಟಿಮ್  ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ಜೇಡ್ ಡೆರ್ನ್‌ಬಾಕ್, ಸ್ಟೀವನ್ ಫಿನ್, ಕ್ರೇಗ್ ಕೀಸ್ವೆಟರ್, ಸಮಿತ್ ಪಟೇಲ್, ಬೆನ್ ಸ್ಟೋಕ್ಸ್, ಗ್ರೇಮ್ ಸ್ವಾನ್ ಮತ್ತು ಜೋನಾಥನ್ ಟ್ರಾಟ್.

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಅಜಿಂಕ್ಯಾ ರಹಾನೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಮನೋಜ್ ತಿವಾರಿ, ಸುರೇಶ್ ರೈನಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್.ಪಿ.ಸಿಂಗ್, ವಿನಯ್ ಕುಮಾರ್, ಆರ್.ಅಶ್ವಿನ್, ಅಮಿತ್ ಮಿಶ್ರಾ, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜಾ ಮತ್ತು ವರುಣ್ ಆಯರನ್.
ಪಂದ್ಯ ಆರಂಭ (ಭಾರತೀಯ ಕಾಲಮಾನ): ಸಂಜೆ 5.30ಕ್ಕೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT