ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ, ಟೊಮೊಟೊ ಬೆಲೆ ಮತ್ತೆ ಗಗನಕ್ಕೆ

Last Updated 30 ಡಿಸೆಂಬರ್ 2010, 7:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಮತ್ತೆ ಗಗನಮುಖಿಯಾಗಿದೆ. ಕೆಲ ದಿನಗಳ ಹಿಂದೆ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದ್ದರಿಂದ ಗ್ರಾಹಕರು ನಿರಾಳರಾಗಿದ್ದರು. ಆದರೆ ಎರಡು ದಿನಗಳಿಂದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.  ವಾರದ ಹಿಂದೆ ಗುಣಮಟ್ಟದ ಈರುಳ್ಳಿ ಬೆಲೆ ಕೆ.ಜಿ ಗೆ 50 ರೂಪಾಯಿ ಇತ್ತು. ಈಗ  ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ದಪ್ಪ ಈರುಳ್ಳಿ ಬೆಲೆ ಕೆ.ಜಿ.ಗೆ 70 ರಿಂದ 75 ಮತ್ತು ಮಧ್ಯಮ ಗಾತ್ರದ ಈರುಳ್ಳಿ 50 ರಿಂದ 60 ರೂಪಾಯಿ ಆಗಿದೆ. ಹಾಗೆಯೇ ಚಿಲ್ಲರೆ ಮಾರಾಟದಲ್ಲಿ ಟೊಮೊಟೊ ಬೆಲೆ ಕೆ.ಜಿ.ಗೆ 40 ರಿಂದ 45 ರೂಪಾಯಿ ಇದೆ. ಈ ದರ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಸ್ಪಷ್ಟಪಡಿಸಿವೆ.

ಬೆಲೆಯ ಹಗ್ಗ ಜಗ್ಗಾಟ: ‘ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ 50 ಕೆ.ಜಿ. ಚೀಲಕ್ಕೆ 3000 ದಿಂದ 3500 ರೂಪಾಯಿಗೆ ಏರಿಕೆಯಾಗಿದೆ. ಮಧ್ಯಮ ಗಾತ್ರದ ಈರುಳ್ಳಿ 3200 ರೂಪಾಯಿ ಇದೆ. ಸಗಟು ಮಾರುಕಟ್ಟೆಯಿಂದ ಚಿಲ್ಲರೆ ಮಾರುಕಟ್ಟೆಗೆ ಈರುಳ್ಳಿ ತಲುಪುವಾಗ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತದೆ. ಇದಕ್ಕೆ ಸಾಗಣೆ ವೆಚ್ಚ, ದಲ್ಲಾಳಿಗಳ ಕಮಿಷನ್ ಹಾಗೂ ಇತರ ವೆಚ್ಚಗಳೇ ಕಾರಣ’ ಎಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವಾರ 50 ಕೆ.ಜಿ ಈರುಳ್ಳಿ ಬೆಲೆ ಚೀಲಕ್ಕೆ 2000ದಿಂದ 2500 ರೂಪಾಯಿ ಇತ್ತು. ಕೇಂದ್ರ ಸರ್ಕಾರ ರಫ್ತು ನಿಷೇಧಿಸಿದ್ದರಿಂದ ಮಾರುಕಟ್ಟೆಯಲ್ಲಿ  ಹೆಚ್ಚಿನ ಈರುಳ್ಳಿ ದಾಸ್ತಾನು ಆಗಿತ್ತು. ಇದರಿಂದಾಗಿ ಬೆಲೆ ಇಳಿಕೆಯಾಯಿತು. ಆದರೆ ಈಗ ಮತ್ತೆ ಈರುಳ್ಳಿಯ ಕೊರತೆ ಕಂಡು ಬಂದಿದ್ದರಿಂದ ಬೆಲೆ ಹೆಚ್ಚಳವಾಗಿದೆ.  ಮಂಗಳವಾರ ಒಂದು ಚೀಲ ಈರುಳ್ಳಿಗೆ 2800 ರೂಪಾಯಿ ಇತ್ತು. ಬುಧವಾರದ ವೇಳೆಗೆ 400 ರಿಂದ 600 ರೂಪಾಯಿ ಹೆಚ್ಚಾಗಿದೆ. ಬೆಲೆ ಇನ್ನೂ ದಾಖಲೆ ಮಟ್ಟದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


‘ಗದಗ, ಹುಬ್ಬಳ್ಳಿ, ವಿಜಾಪುರದ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ಅಲ್ಲಿಂದ ಈರುಳ್ಳಿ ಬರುತ್ತಿಲ್ಲ. ಮಹಾರಾಷ್ಟ್ರದಿಂದ ಬರುವ ಈರುಳ್ಳಿ ಕಳಪೆ ಮಟ್ಟದ್ದಾಗಿದೆ. ಕೊಳೆತ ಮತ್ತು ಮೊಳಕೆ ಬಂದಿರುವ ಈರುಳ್ಳಿ ಅಲ್ಲಿಂದ ಬರುತ್ತಿದೆ. ಪರಿಣಾಮ ಈರುಳ್ಳಿಯ ಅಭಾವ ಸೃಷ್ಟಿಯಾಗಿದೆ. ಆದರೆ ಬೆಳ್ಳುಳ್ಳಿ ಚಿಲ್ಲರೆ ಮಾರಾಟ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಕೆ.ಜಿ.ಗೆ 160 ರೂಪಾಯಿ ಆಗಿದೆ’ ಎಂದು ಅವರು ತಿಳಿಸಿದರು.

ಲಾಭವಿಲ್ಲದೆ ಮಾರಾಟ: ‘ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಕೆ.ಜಿ. ಈರುಳ್ಳಿಯನ್ನು 59 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಟೊಮೊಟೊವನ್ನು 45 ರೂಪಾಯಿಗೆ ಮಾರಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಈರುಳ್ಳಿ ಮತ್ತು ಟೊಮೊಟೊ ಮಾರಾಟ ಮಾಡಲಾಗುತ್ತಿದೆ’ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪರಶಿವಮೂರ್ತಿ ಹೇಳಿದರು.

‘ಗ್ರಾಹಕರಿಂದ ಯಾವುದೇ ಲಾಭಾಂಶದ ಪ್ರತಿಫಲಾಪೇಕ್ಷೆಯಿಲ್ಲದೇ ಕಡಿಮೆ ದರಕ್ಕೆ ಈರುಳ್ಳಿ ಮತ್ತು ಟೊಮೊಟೊ ಮಾರಾಟ ಮಾಡಲಾಗುತ್ತಿದೆ. ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಹಾಪ್‌ಕಾಮ್ಸ್‌ಗೆ ಶೇ 10ರಷ್ಟು ನಷ್ಟ ಸಂಭವಿಸುತ್ತಿದೆ. ಟೊಮೊಟೊ ಗೆ ಉತ್ತಮ ಬೆಲೆ ನೀಡಿ ರೈತರಿಂದಲೇ ನಿತ್ಯ ಖರೀದಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.‘ಚಿತ್ರದುರ್ಗ, ದಾವಣಗೆರೆಗಳಲ್ಲಿ ನೀರಾವರಿ ಪ್ರದೇಶದಲ್ಲಿ ಬೆಳೆಯುತ್ತಿರುವ ಈರುಳ್ಳಿ ಫೆಬ್ರುವರಿಗೆ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಈರುಳ್ಳಿ ಬೆಲೆಯಲ್ಲಿ ಏರು ಪೇರು ಉಂಟಾಗುತ್ತಲೇ ಇರುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT