ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದರ ಏರಿಕೆ: ಶ್ರೀಸಾಮಾನ್ಯ ಸಂಕಷ್ಟದಲ್ಲಿ

Last Updated 19 ಸೆಪ್ಟೆಂಬರ್ 2013, 20:27 IST
ಅಕ್ಷರ ಗಾತ್ರ

ಬೆಂಗಳೂರು: ಈರುಳ್ಳಿಯ ಉತ್ಪಾದನೆಯಲ್ಲಿ ಎರಡನೇ ಸ್ಥಾನ ಹೊಂದಿರುವ ರಾಜ್ಯದಲ್ಲಿಯೇ  ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಬೆಲೆ ಕಂಡೇ  ಗ್ರಾಹಕರು ಕಣ್ಣೀರು ಸುರಿಸುವಂತಾಗಿದೆ!

ಹವಾಮಾನ ವೈಪರೀತ್ಯ, ರಫ್ತು  ಸೇರಿದಂತೆ ಇತರೆ ಕಾರಣಗಳಿಂದಾಗಿ ದರ  ಏರಿ  ಈರುಳ್ಳಿ ಸಾಮಾನ್ಯ ಗ್ರಾಹಕನ ಕೈಗೆಟುಕದಂತಾಗಿದೆ.
ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ರೂ 50 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ರೂ80 ದಾಟಿದೆ. ಪೂರೈಕೆ ಕೂಡ ಕಾರಣ:
‘ರಾಜ್ಯದಲ್ಲಿ  ಬೆಳೆಯುವ ಈರುಳ್ಳಿಯ ಒಟ್ಟು ಉತ್ಪಾದನೆಯಲ್ಲಿ  ಶೇ 17 ರಷ್ಟು ಪ್ರಮಾಣದ ಈರುಳ್ಳಿ ಚೆನ್ನೈ, ದೆಹಲಿ, ಕೋಲ್ಕತ್ತಾ, ಒರಿಸ್ಸಾ ಸೇರಿದಂತೆ ಹಲವು  ರಾಜ್ಯಗಳಿಗೆ ಪೂರೈಕೆ ಆಗುತ್ತಿದೆ.

ಆದರೆ ಈ ಬಾರಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರದ ನಾಸಿಕ್ ಹಾಗೂ ಪುಣೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಬೆಳೆ ಹಾನಿಯಾಗಿದೆ.
ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಮಹಾರಾಷ್ಟ್ರಕ್ಕೂ ಪೂರೈಕೆ ಆಗುತ್ತಿರುವುದರಿಂದ  ಈರುಳ್ಳಿಯ ಬೆಲೆ ಏರಿಕೆ ಕಂಡಿದೆ’ ಎಂದು ಎಪಿಎಂಸಿ ಯಾರ್ಡ್ ವರ್ತಕರ ಸಂಘದ ಅಧ್ಯಕ್ಷ ಬಿ.ಎಲ್.ಶಂಕರಪ್ಪ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

ಬೆಲೆ ಎಷ್ಟಿದೆ?: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ  ದೊಡ್ಡ ಗಾತ್ರದ ಈರುಳ್ಳಿ ಕೆ.ಜಿ. ಗೆ ರೂ40 ರಿಂದ 50 ಕ್ಕೆ ಸಗಟು ಮಾರಾಟ ಮಾಡಲಾಗುತ್ತಿದೆ. ಚಿಕ್ಕಗಾತ್ರದ ಈರುಳ್ಳಿಗೆ ರೂ30 ರಿಂದ 40 ಬೆಲೆ ಇದೆ. ಇದೇ ಮೊದಲ ಬಾರಿಗೆ  ಈ ಪ್ರಮಾಣದಲ್ಲಿ  ಈರುಳ್ಳಿಯ ದರ ಏರಿಕೆ ಕಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ಹೊಸ ಬೆಳೆ ಬರುವವರೆಗೂ ಈ ದರ ಮುಂದುವರಿಯುವ ಸಾಧ್ಯತೆಯಿದೆ. ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಇತರೆ ಕೃಷಿ ಮಾರುಕಟ್ಟೆಯಲ್ಲೂ ಈರುಳ್ಳಿ ಒಂದೇ ಧಾರಣೆಯನ್ನು ಕಾಯ್ದುಕೊಂಡಿದೆ’ ಎಂದರು.

ಹಾಪ್ ಕಾಮ್ಸ್ ನಲ್ಲಿ ರೂ77 !
ಹಾಪ್ ಕಾಮ್ಸ್ ಮಳಿಗೆಗಳಲ್ಲಿ  ಕೆ.ಜಿ. ಈರುಳ್ಳಿಗೆ ರೂ77 ಇದೆ.

‘ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ  ಬೆಳೆದ ಈರುಳ್ಳಿ ಈಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಮಳೆಯ ವ್ಯತ್ಯಯದಿಂದಾಗಿ ಈರುಳ್ಳಿ ಧಾರಣೆ ಏರಿದೆ’ ಎಂದು ಹಾಪ್ ಕಾಮ್ಸ್  ಅಧ್ಯಕ್ಷೆ ನಾಗವೇಣಿ ಚಂದ್ರಶೇಖರ್ ತಿಳಿಸಿದರು.

ಕೆ.ಜಿ ಮೆಂತ್ಯೆ ಸೊಪ್ಪು ರೂ100!: ಕೆಲವೆಡೆ ಅತಿ­ಯಾದ ಮಳೆಯಿಂದಾಗಿ ಸೊಪ್ಪು ನಾಶವಾಗಿದೆ. ಹಾಗಾಗಿ ಈರುಳ್ಳಿ ಜತೆಯಲ್ಲಿ ಮೆಂತ್ಯೆ ಸೊಪ್ಪಿನ ಬೆಲೆಯು ಇತಿಹಾಸದಲ್ಲೇ ಮೊದಲ ಬಾರಿಗೆ ರೂ100ಗೆ ಏರಿಕೆಯಾಗಿದೆ ಎಂದು ಹೇಳಿದರು.

‘ಅಕ್ಟೋಬರ್ ತಿಂಗಳಿನಲ್ಲಿ ಚಿತ್ರದುರ್ಗ, ಬಳ್ಳಾರಿಯಿಂದ ಈರುಳ್ಳಿಯು ಹೆಚ್ಚಿನ ಪ್ರಮಾಣದಲ್ಲಿ ಸಾಗಾಟವಾಗಲಿದ್ದು, ಆಗ ಬೆಲೆಯಲ್ಲಿ ಇಳಿಕೆಯಾಗಬಹುದು’ ಎಂದರು.

‘ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ಈರುಳ್ಳಿಗಾಗಿ ರಾಜ್ಯದ ಜನರು ಇತರೆ ರಾಜ್ಯ­ಗಳನ್ನು ಅವಲಂಬಿಸಿದ್ದೇವೆ. ನಾಸಿಕ್ ನ ರೈತರು ಹಂತ ಹಂತವಾಗಿ ದಾಸ್ತಾನುಗೊಂಡ ಈರುಳ್ಳಿ­ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿ­ರುವುದರಿಂದ ಈ  ದರ ಇನ್ನೆರಡು ದಿನಗಳಲ್ಲಿ ಇಳಿಯುವ ಸಾಧ್ಯತೆ ಇದೆ’ ಎಂದು ತೋಟಗಾ­ರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಎಂ.ಕೆ.ಶಂಕರಲಿಂಗೇಗೌಡ ಹೇಳಿದರು.

ಹೋಟೆಲ್‌ ಉದ್ಯಮದಾರರ ಅಭಿಪ್ರಾಯ
‘ಹೆಚ್ಚಿನ ದರ ವಿಧಿಸಿಲ್ಲ’

ಈರುಳ್ಳಿ ದರ ಹೆಚ್ಚಿರುವುದು ದೊಡ್ಡ ಸಮಸ್ಯೆಯಾಗಿದೆ. ದೊಡ್ಡ ಗಾತ್ರದ ಈರುಳ್ಳಿಯು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಇದು ಹೋಟೆಲ್ ಉದ್ಯಮಕ್ಕೆ ಹೆಚ್ಚು ಪೂರಕವಾಗಿರುತ್ತದೆ. ಸಾಮಾನ್ಯವಾಗಿ ಸಣ್ಣ ಗಾತ್ರದ ಈರುಳ್ಳಿಗಳಲ್ಲಿ ನೀರು ಹೆಚ್ಚಿರುವುದರಿಂದ ಒಗ್ಗರಣೆಯ ಸಂದರ್ಭದಲ್ಲಿ ನೀರು ಎಣ್ಣೆ ಸೇರಿಕೊಂಡು ಪದಾರ್ಥ ಕೆಡುತ್ತದೆ. ಹಾಗಾಗಿ ದರ ಹೆಚ್ಚಿದ್ದರೂ ದೊಡ್ಡ ಗಾತ್ರದ ಈರುಳ್ಳಿಯನ್ನೇ ಖರೀದಿಸುತ್ತಿದ್ದೇವೆ. ಈರುಳ್ಳಿಯಿಂದಾಗಿ  ಖಾದ್ಯಗಳ ಮೇಲೆ ಹೆಚ್ಚಿನ ದರ ವಿಧಿಸಿಲ್ಲ.
–ನಂದೀಶ್ ಗೌಡ,  ಗೌಡ್ರು ಹೋಟೆಲ್, ಇಂದಿರಾನಗರ.

‘ಈರುಳ್ಳಿ ದೋಸೆಗೆ ಕತ್ತರಿ ಬಿದ್ದಿದೆ’
‘ಈರುಳ್ಳಿ ಬೆಲೆ ಏರಿಕೆಯಾಗಿರುವುದರಿಂದ ವ್ಯಾಪಾರಕ್ಕೆ ಆಪತ್ತು ಎದುರಾಗಿದೆ. ಹಾಗಾಗಿ ಸ್ವಲ್ಪ ಈರುಳ್ಳಿ ಬಳಸಿ ಸಸ್ಯಾಹಾರ, ಮಾಂಸಾಹಾರ ಎರಡು ನಮೂನೆಯ ಖಾದ್ಯಗಳನ್ನು  ತಯಾರಿಸುತ್ತಿದ್ದೇನೆ. ಬೆಲೆ ಏರಿಕೆಯಾದಗಿನಿಂದ ಈರುಳ್ಳಿ ದೋಸೆಗೆ ಕತ್ತರಿ ಬಿದ್ದಿದೆ.
–ಹೊನ್ನಯ್ಯ, ತಳ್ಳುಗಾಡಿ ಮಾಲೀಕ, ಮಾರುತಿನಗರ

‘ಹೆಚ್ಚಿನ ದರ‘
ದಿನದಿಂದ ದಿನಕ್ಕೆ ಈರುಳ್ಳಿಯ ಬೆಲೆ ಏರಿಕೆಯಾಗುತ್ತಿದೆ. ಹಾಗಾಗಿ ಮನೆಯಲ್ಲಿ ಈರುಳ್ಳಿ ದೋಸೆ ಮಾಡುತ್ತಿಲ್ಲ. ಕೆಲವೆಡೆ ಚಿಲ್ಲರೆ ವ್ಯಾಪಾರಿಗಳು ಇರುವ ಬೆಲೆಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ’
– ರೇವಮ್ಮ, ಮಲ್ಲೇಶ್ವರ ನಿವಾಸಿ

‘ಅಡುಗೆ ಮನೆಯಲ್ಲಿ ಈರುಳ್ಳಿ ನಿಷೇಧ’
ಅಡುಗೆಯಲ್ಲಿ ಆದಷ್ಟು ಈರುಳ್ಳಿ ಬಳಕೆ ಮಾಡುವುದನ್ನು ತಪ್ಪಿಸುತ್ತಿದ್ದೇನೆ. ಬಹುತೇಕ ಸಾಂಬಾರಿಗೆ ಈರುಳ್ಳಿ, ಬೆಳ್ಳುಳ್ಳಿಯ ಒಗ್ಗರಣೆ ಅವಶ್ಯಕ.  ದರ ಹೆಚ್ಚಾಗಿರುವುದರಿಂದ  ಅಡುಗೆ ಮನೆಯಲ್ಲಿ ಈರುಳ್ಳಿ ಒಂದು ರೀತಿಯಲ್ಲಿ ನಿಷೇಧವಾಗಿದೆ.
–ಸವಿತಾ, ಬನಶಂಕರಿ ನಿವಾಸಿ

‘ಬಡವರ ಬದುಕು ದುಸ್ತರ’
‘ಈರುಳ್ಳಿ ದರ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ. ಇದೇ ಮೊದಲ ಬಾರಿಗೆ ಈ ಮಟ್ಟದಲ್ಲಿ ದರ ಏರಿಕೆ ಕಂಡಿದೆ. ಬಡವರ ಬದುಕು ನಿಜಕ್ಕೂ ದುಸ್ತರವಾಗಿದೆ’
– ಲಿಂಗಪ್ಪ, ಕೋಣಂದೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT