ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ; ಕ್ರಮ ಸಾಲದು

Last Updated 22 ಡಿಸೆಂಬರ್ 2010, 9:35 IST
ಅಕ್ಷರ ಗಾತ್ರ

ಪೂರೈಕೆ ಅಭಾವದಿಂದಾಗಿ ಅಂಕೆಗೆ ನಿಲುಕದೆ ಏರುಗತಿಯಲ್ಲಿಯೇ ಸಾಗಿರುವ ಈರುಳ್ಳಿ ಬೆಲೆಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡು ರಫ್ತು ನಿಷೇಧಿಸಲು ಮುಂದಾಗಿದೆ. ಜನವರಿ 15ರವರೆಗೆ ರಫ್ತು ನಿಷೇಧಿಸಿರುವುದು ಮತ್ತು ರಫ್ತು ನಿರ್ಬಂಧಿಸಲು ಈರುಳ್ಳಿಯ ಕನಿಷ್ಠ ರಫ್ತು ಬೆಲೆಯನ್ನೂ ಎರಡು ಪಟ್ಟು ಹೆಚ್ಚಿಸಿರುವುದು ದೇಶಿ ಮಾರುಕಟ್ಟೆಯಲ್ಲಿ ಪೂರೈಕೆ ಪರಿಸ್ಥಿತಿಯು ತಕ್ಷಣಕ್ಕೆ ಸುಧಾರಿಸಲು ನೆರವಾಗುವ ನಿರೀಕ್ಷೆ ಇದೆ. ಆದರೂ, ಇದರಿಂದಷ್ಟೇ ಏರಿದ ಬೆಲೆ ಇಳಿಯಲಾರದು. ಬಳಕೆದಾರರ ಪಾಲಿಗೆ ಈರುಳ್ಳಿ ಗಗನಕುಸುಮವಾಗುತ್ತಿರುವುದನ್ನು ತಡೆಯುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ರಾಜ್ಯ ಸರ್ಕಾರವೂ ಪೂರಕವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸೊಸೈಟಿಗಳ  (ಹಾಪ್‌ಕಾಮ್ಸ್ ಮಳಿಗೆ) ಮೂಲಕವಾದರೂ ಮಾರುಕಟ್ಟೆ ದರದ ಅರ್ಧಕ್ಕೆ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಮುಂಚಿತವಾಗಿಯೇ ಕಾರ್ಯಪ್ರವೃತ್ತವಾಗಿದ್ದರೆ ಇಂತಹ ಪರಿಸ್ಥಿತಿ ಉದ್ಭವಗೊಳ್ಳುತ್ತಿರಲಿಲ್ಲ. ಪೂರೈಕೆ ಅಭಾವದ ಜೊತೆಗೆ ರಫ್ತು ವಹಿವಾಟು, ಅಕ್ರಮ ದಾಸ್ತಾನು ಮತ್ತು ಬೆಲೆಗಳು ಇನ್ನಷ್ಟು ಏರುವ ಊಹಾಪೋಹಗಳೂ ಈ ಬಿಕ್ಕಟ್ಟಿಗೆ ನೀರೆರೆಯುತ್ತಿವೆ. ಪರಿಸ್ಥಿತಿಯ ದುರ್ಲಾಭ ಪಡೆಯುವ ಮಧ್ಯವರ್ತಿಗಳು ಮತ್ತು ವರ್ತಕರು ಬೆಳೆಗಾರರನ್ನು ಶೋಷಿಸುವ, ಗ್ರಾಹಕರನ್ನು ಸುಲಿಯುವ ವಂಚಕ ಪ್ರವೃತ್ತಿಗೂ ನಿರ್ಬಂಧ ಹಾಕಬೇಕಾಗಿದೆ. ಅಗತ್ಯ ಬಿದ್ದರೆ ಅವಶ್ಯಕ ವಸ್ತುಗಳ ಕಾಯ್ದೆ ಬಳಸಲೂ ಸರ್ಕಾರ ಹಿಂಜರಿಯಬಾರದು.

ಆಹಾರ ವಸ್ತುಗಳ ಬೆಲೆ ಏರಿಕೆಯ ಲಾಭವು ಬೆಳೆಗಾರರಿಗೆ ದೊರೆಯದಿರುವುದು ಸದ್ಯದ ಮಾರುಕಟ್ಟೆ ವ್ಯವಸ್ಥೆಯ ದೊಡ್ಡ ದುರಂತ. ಬೆಲೆ ಪಾತಾಳಕ್ಕೆ ಕುಸಿದು ಬೆಳೆಗಾರರು ಫಸಲನ್ನು ರಸ್ತೆಗೆ ಸುರಿದು ಕಣ್ಣೀರು ಸುರಿಸಿ ಈರುಳ್ಳಿ ಬದಲಿಗೆ ಬೇರೆ ಬೆಳೆಗಳನ್ನು ಬೆಳೆಯಲು ಮುಂದಾಗಿರುವುದೂ ಉತ್ಪಾದನೆ ಮೇಲೆ ಪರಿಣಾಮ ಬೀರಿರುವುದು ಸುಳ್ಳಲ್ಲ. ದಿನನಿತ್ಯದ ಅಡುಗೆ, ತಿಂಡಿ ತಯಾರಿಕೆಯಲ್ಲಿ ಅಗತ್ಯವಾಗಿ ಬಳಕೆಯಾಗುವ ಈರುಳ್ಳಿಯ ದುಬಾರಿ ಬೆಲೆ ಜನಸಾಮಾನ್ಯರಿಂದ ಹಿಡಿದು ಸಿರಿವಂತರ ಪಾಲಿಗೂ ಖರೀದಿ ಸಂದರ್ಭದಲ್ಲಿ ಕಣ್ಣೀರು ತರಿಸುತ್ತಿರುವುದು ಕಳವಳಕಾರಿ ಬೆಳವಣಿಗೆ.
 
ಕೆಲ ಹೋಟೆಲ್‌ಗಳ ತಿನಿಸುಗಳ ಪಟ್ಟಿಯಲ್ಲಿ ಈರುಳ್ಳಿ ದೋಸೆ ಕಾಣೆಯಾಗುತ್ತಿರುವುದೂ ಅಭಾವ ಪರಿಸ್ಥಿತಿಯ ತೀಕ್ಷ್ಣತೆಗೆ ಕನ್ನಡಿ ಹಿಡಿಯುತ್ತದೆ. ಬೆಲೆ ಪರಿಸ್ಥಿತಿ ಇದೇ ಬಗೆಯಲ್ಲಿ ಏರುತ್ತಲೇ ಇದ್ದರೆ ಗೃಹಿಣಿಯರೂ ಬೆಲೆ ಇಳಿಯುವವರೆಗೆ ಈರುಳ್ಳಿ ಬಳಕೆಯನ್ನು ನಿಯಂತ್ರಿಸಬೇಕಾಗಿ ಬರಬಹುದು. ಅಕಾಲಿಕ ಮಳೆಯ ಪ್ರತಿಕೂಲ ಪರಿಣಾಮದಿಂದ ಶೇ 30ರಿಂದ 35ರಷ್ಟು ಫಸಲು ಹಾನಿಗೀಡಾಗಿರುವ ಅಂದಾಜು ಇದೆ. ಮಾರುಕಟ್ಟೆಗೆ ಪೂರೈಕೆಯಾದ ಈರುಳ್ಳಿಯಲ್ಲಿ ಕೇವಲ ಶೇ 10ರಷ್ಟಿರುವ ಉತ್ತಮ ಗುಣಮಟ್ಟದ ಉತ್ಪನ್ನಕ್ಕೆ ತುಂಬಾ ಬೇಡಿಕೆ ಇರುವುದರಿಂದಲೂ ಬೆಲೆ ಗಗನಕ್ಕೆ ಏರುತ್ತಿದೆ. ಶೀಘ್ರವಾಗಿ ಕೊಳೆತು ಹೋಗುವ ಈರುಳ್ಳಿ ಫಸಲು ಸಂಗ್ರಹಿಸಿ ಇಡಲು ಸಾಕಷ್ಟು ಪ್ರಮಾಣದಲ್ಲಿ ಶೈತ್ಯಾಗಾರಗಳ ನಿರ್ಮಾಣ, ತ್ವರಿತ ಸಾಗಣೆಗೆ ಅಗತ್ಯ ಮೂಲ ಸೌಕರ್ಯ, ಮಾರುಕಟ್ಟೆ ಬೆಂಬಲ ಮತ್ತಿತರ ಸೌಲಭ್ಯ ಕಲ್ಪಿಸಲು ಸರ್ಕಾರಗಳು ದೀರ್ಘಾವಧಿ ಕಾರ್ಯಕ್ರಮ ಹಮ್ಮಿಕೊಂಡರೆ ಮಾತ್ರ ಬೆಳೆಗಾರರು ಮತ್ತು ಗ್ರಾಹಕರ ಹಿತಾಸಕ್ತಿ ರಕ್ಷಣೆ ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT