ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ದಿಢೀರ್ ಕುಸಿತ

Last Updated 23 ಡಿಸೆಂಬರ್ 2010, 6:25 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮದಿಂದಾಗಿ ಗಗನಮುಖಿಯಾಗಿದ್ದ ಈರುಳ್ಳಿ ಬೆಲೆ ಸಗಟು ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಈ ಕುಸಿತದ ಲಾಭ ಗ್ರಾಹಕರಿಗೆ ಸಿಗಲು ಒಂದೆರಡು ದಿನ ಆಗಬಹುದು.

  ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಂಗಳವಾರ ಒಂದು ಕೆ.ಜಿ ಈರುಳ್ಳಿಗೆ 70 ರೂಪಾಯಿ ಇದ್ದದ್ದು, ಬುಧವಾರ 45 ರಿಂದ 50 ರೂಪಾಯಿಗೆ ಕುಸಿದಿದೆ. ‘ಉತ್ತಮ ಗುಣಮಟ್ಟದ ಈರುಳ್ಳಿಯ (50 ಕೆ.ಜಿ) ಸಗಟು ಬೆಲೆ ಬುಧವಾರ 2,000 ರೂಪಾಯಿಗೆ ಇಳಿಕೆ ಕಂಡಿದೆ.

  ಸಗಟು ಮಾರುಕಟ್ಟೆಯಿಂದ ಚಿಲ್ಲರೆ ಮಾರುಕಟ್ಟೆಗೆ ಬಂದು ಗ್ರಾಹಕರಿಗೆ ತಲುಪುವಲ್ಲಿ ಈರುಳ್ಳಿ ದರದಲ್ಲಿ ತುಸು ಹೆಚ್ಚಾಗಲಿದೆ. ಇದರಲ್ಲಿ ಸಾರಿಗೆ ವೆಚ್ಚ, ದಲ್ಲಾಳಿ ಕಮಿಷನ್ ಮತ್ತು ಇತರೆ ವೆಚ್ಚಗಳು ಸೇರಿರುತ್ತವೆ. ಇದೆಲ್ಲಾ ವೆಚ್ಚಗಳು ಸೇರಿದರೂ ಕೆ.ಜಿ.ಗೆ 45 ರಿಂದ 50 ರೂಪಾಯಿ ಆಗುತ್ತದೆ. ಇದೇ ದರದಲ್ಲಿ ಗ್ರಾಹಕರಿಗೆ ಈರುಳ್ಳಿ ಸಿಗಲಿದೆ.

ಮಧ್ಯಮ ಗಾತ್ರದ ಈರುಳ್ಳಿಯು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 20 ರಿಂದ 25 ರೂಪಾಯಿಗೆ ಮಾರಾಟವಾಗಲಿದೆ. ಅಂತೆಯೇ ಸಣ್ಣ ಗಾತ್ರದ ಈರುಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ.

 ‘ಈರುಳ್ಳಿ ಬೆಲೆ ಕಡಿಮೆಯಾಗಲು ರಫ್ತು ನಿಷೇಧವೇ ಕಾರಣ’ ಎಂದು ನಗರದ ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಈರುಳ್ಳಿ ರಫ್ತುದಾರರೊಬ್ಬರು ಹೇಳುತ್ತಾರೆ.
 ‘ಮಂಗಳವಾರ ಉತ್ತಮ ಗುಣಮಟ್ಟದ 50 ಕೆ.ಜಿ ಈರುಳ್ಳಿ ಮೂಟೆಗೆ ಮೂರು ಸಾವಿರ ರೂಪಾಯಿ ಇತ್ತು. ಬುಧವಾರ 500 ರಿಂದ 1000 ರೂಪಾಯಿ ಇಳಿಕೆಯಾಗಿದೆ.

ಮಾರುಕಟ್ಟೆಗಳಲ್ಲಿ ಬೆಲೆ  ಕಡಿಮೆಯಾಗುವ ಮೊದಲು ಸಗಟು ದರದಲ್ಲಿ ಸಾಕಷ್ಟು ಈರುಳ್ಳಿ ಖರೀದಿಸಿದ್ದ ವ್ಯಾಪಾರಿಗಳು ಬೆಲೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ’ ಎಂದು ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿ ಮೂರ್ತಿ ತಿಳಿಸಿದರು.

‘ಮಹಾರಾಷ್ಟ್ರದ ಪುಣೆಯಿಂದ 120 ಲಾರಿಗಳಲ್ಲಿ ಒಟ್ಟು ಎರಡು ಸಾವಿರ ಟನ್ ಈರುಳ್ಳಿಯನ್ನು ಎಪಿಎಂಸಿ ಮಾರುಕಟ್ಟೆಗೆ ಬುಧವಾರ ತರಿಸಿಕೊಳ್ಳಲಾಗಿದೆ. ಈಗಿನ ದರವೇ ಇನ್ನು 15 ದಿನಗಳ ಕಾಲ ಮುಂದುವರಿಯಲಿದೆ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ’ ಎಂದು ಅವರು ಹೇಳಿದರು.

ನಗರದ ಕೆಲವು ಮಳಿಗೆಗಳಲ್ಲಿ ಬುಧವಾರ ಕೆ.ಜಿ ಈರುಳ್ಳಿಯನ್ನು ಹಿಂದಿನ ದರದಲ್ಲೇ ಅಂದರೆ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು ಕೆಲವರು ಈಗಿನ ದರದಲ್ಲೇ ಮಾರಾಟ ಮಾಡುತ್ತಿದ್ದಾರೆ. ಈರುಳ್ಳಿ ಮಂಗಳವಾರ ಖರೀದಿಸಿರುವ ಪರಿಣಾಮ ಅದೇ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆಂದು ವ್ಯಾಪಾರಿಗಳು ತಿಳಿಸಿದರು.

ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಉತ್ಪಾದನೆಯಲ್ಲಿ ಕುಸಿತ ಉಂಟಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ರಾಜ್ಯದಲ್ಲಿ ಕಡಿಮೆ ಉತ್ಪಾದನೆಯಾಗಿತ್ತು. ಪರಿಣಾಮ ಈರುಳ್ಳಿ ಬೆಲೆ ದಿಢೀರ್ ಹೆಚ್ಚಳವಾಗಿತ್ತು ಎನ್ನುವುದನ್ನು ಸ್ಮರಿಸಬಹುದು.

  ಹುಬ್ಬಳ್ಳಿ ವರದಿ: ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದರಿಂ ರೊಚ್ಚಿಗೆದ್ದ ರೈತರು ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ. 

  ಒಂದೇ ದಿನದಲ್ಲಿ ಈರುಳ್ಳಿಯ ಸಗಟು ಬೆಲೆ ರೂ. 1500ರಷ್ಟು ಇಳಿಕೆ ಕಂಡಿದ್ದೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.  ಈರುಳ್ಳಿಯ ಬೆಲೆ ನಿರಂತರವಾಗಿ ಏರುತ್ತಿದ್ದರಿಂದ ಹರ್ಷಗೊಂಡಿದ್ದ ರೈತರು, ಹುಬ್ಬಳ್ಳಿ ನಗರದ ಎಪಿಎಂಸಿಗೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿಯನ್ನು ಮಾರಾಟಕ್ಕೆ ತಂದಿದ್ದರು. ಆದರೆ, ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂಬುದು ತಿಳಿಯುತ್ತಿದ್ದಂತೆಯೇ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಲು ರೈತರು ನಿರಾಕರಿಸಿದರು. ಅಲ್ಲದೆ ಸೀದಾ ಹೆದ್ದಾರಿಗೆ ತೆರಳಿ ರಸ್ತೆ ಬಂದ್ ಮಾಡಿದರು.

  ಮಂಗಳವಾರ ಕ್ವಿಂಟಲ್ ಈರುಳ್ಳಿಗೆ ಗರಿಷ್ಠ ರೂ. 6,200 ಪಡೆದಿದ್ದ ರೈತರು, ಬುಧವಾರದ ಹೊತ್ತಿಗೆ ದರ ರೂ. 4,800ಕ್ಕೆ ಇಳಿದಿದ್ದನ್ನು ಕೇಳಿ ಕಂಗಾಲಾದರು. ಹೆಚ್ಚಿನ ದರಕ್ಕೆ ಪಟ್ಟು ಹಿಡಿದು ಕುಳಿತ ರೈತರನ್ನು ಪೊಲೀಸರು ಮತ್ತು ಎಪಿಎಂಸಿ ಅಧಿಕಾರಿಗಳು ಮನವೊಲಿಸಲು ಹರಸಾಹಸ ಮಾಡಿದರು.

‘ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ವಿಧಿಸಿದ್ದೇ ದರ ದಿಢೀರ್ ಕುಸಿಯಲು ಕಾರಣ’ವೆಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT