ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ನಿಯಂತ್ರಿಸಿ: ಬಿಸಿ ಮುಟ್ಟಿಸಿದ ಪ್ರಧಾನಿ

Last Updated 22 ಡಿಸೆಂಬರ್ 2010, 6:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈರುಳ್ಳಿ ಬೆಲೆ ಒಂದು ಕಡೆ ದಾಖಲೆ ಮಟ್ಟದಲ್ಲಿ ಏರುತ್ತಿದ್ದಂತೆಯೇ ಗ್ರಾಹಕರ ಹಿತವನ್ನು ಕಾಪಾಡಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಸ್ವತಃ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕೃಷಿ ಸಚಿವಾಲಯಕ್ಕೆ ಪತ್ರ ಬರೆದು ಕೇಳಿದ್ದಾರೆ.

ಆದರೆ, ಬೆಲೆ ಏರಿಕೆಯ ಬಿಸಿ ಆರಲು ಇನ್ನೂ ಎರಡು ಮೂರು ವಾರಗಳು ಬೇಕಾಗಬಹುದು ಎಂದು ಕೃಷಿ ಸಚಿವಾಲಯ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.
ಗ್ರಾಹಕರ ಹಿತರಕ್ಷಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ, ಎಡಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಮಾರುಕಟ್ಟೆ ಶಕ್ತಿಗಳಿಗೆ ಸರ್ಕಾರ ಶರಣಾಗಿದೆ ಎಂದೂ ಕಟು ಟೀಕೆ ಮಾಡಿವೆ. ಆಡಳಿತಾರೂಢ ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್ ಸಹ ಅಸಮಾಧಾನ ವ್ಯಕ್ತಪಡಿಸಿದೆ.

ಬೆಲೆ ಏರಿಕೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್‌ನ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದೂ ವರದಿಯಾಗಿದೆ.

ಪ್ರಧಾನಿ ತಾಕೀತು: ತೀವ್ರವಾಗಿ ಏರಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಣಕ್ಕೆ ತರಲು ತಕ್ಷಣ ಅಗತ್ಯ ಕ್ರಮ ತೆಗೆದುಕೊಳ್ಳಬೇಕು, ಪೂರೈಕೆ ಮತ್ತು ಬೆಲೆ ಮಟ್ಟದ ಮೇಲೆ ಪ್ರತಿದಿನ ನಿಗಾ ಇರಿಸಬೇಕು ಎಂದು ಪ್ರಧಾನಿಯವರು ತಮ್ಮ ಪತ್ರದಲ್ಲಿ ತಾಕೀತು ಮಾಡಿದ್ದಾರೆ.

ಸೋಮವಾರದಿಂದೀಚೆಗೆ ಪಾಕಿಸ್ತಾನದಿಂದ 450 ಟನ್‌ಗಳಷ್ಟು ಈರುಳ್ಳಿ ಪಂಜಾಬ್ ಗಡಿ ತಲುಪಿ ಪ್ರತಿ ಕೆ.ಜಿಗೆ ರೂ. 18ರಿಂದರೂ. 20ರ ಬೆಲೆಗೆ ಮಾರಾಟವಾಗುತ್ತಿದ್ದರೂ, ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ಈರುಳ್ಳಿ ಆಮದು ಮಾಡಿಕೊಳ್ಳುವ ಸಾಧ್ಯತೆಯನ್ನು ಶರದ್ ಪವಾರ್ ತಳ್ಳಿ ಹಾಕಿದ್ದಾರೆ. ಎರಡರಿಂದ ಮೂರು ವಾರಗಳ ನಂತರವೇ ಪೂರೈಕೆ ಪರಿಸ್ಥಿತಿ ಸುಧಾರಿಸಬಹುದು ಎಂದೂ  ಹೇಳಿದ್ದಾರೆ.

ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶಗಳಿಂದ ಈರುಳ್ಳಿಯು ಮಾರುಕಟ್ಟೆಗೆ ಆವಕವಾದ ನಂತರವೇ ಬೆಲೆಗಳು ಇಳಿಯಲು ಆರಂಭಿಸಬಹುದು. ಸದಕ್ಕಂತೂ ಈರುಳ್ಳಿ ಆಮದು ಮಾಡಿಕೊಳ್ಳುವ ಆಲೋಚನೆ ಸರ್ಕಾರದ ಮುಂದೆ ಇಲ್ಲ. ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ಅಕಾಲಿಕ ಮಳೆಯಿಂದ ಬೆಳೆ ಹಾಳಾಯಿತು. ಇಂಥ ನೈಸರ್ಗಿಕ ವಿಕೋಪಗಳನ್ನು ಹೇಗೆ ತಡೆಯಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಮಧ್ಯೆ, ದೇಶದಾದ್ಯಂತ ಬೆಲೆ ಮಟ್ಟ ಇನ್ನೂ ಏರುಗತಿಯಲ್ಲಿಯೇ ಸಾಗಿದ್ದು, ಕೆಲ ಚಿಲ್ಲರೆ ಮಾರುಕಟ್ಟೆಯಲ್ಲಿ  ್ಙ 85ಕ್ಕೆ ಕೆ.ಜಿಯಂತೆ ಮಾರಾಟವಾಗುತ್ತಿದೆ.
 ಗರಿಷ್ಠ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುವ ನಾಸಿಕ್‌ನಲ್ಲಿ ಸಗಟು ಮಾರಾಟ ಬೆಲೆಯೂ ಪ್ರತಿ ಕೆಜಿಗೆ ್ಙ 70ಕ್ಕೆ  ದಾಟಿದ್ದು, ದೇಶದಾದ್ಯಂತ ಚಿಲ್ಲರೆ ಮಾರಾಟ ಬೆಲೆಯು ಪ್ರತಿ ಕೆಜಿಗೆ ್ಙ 100ರ ಗಡಿ ಸಮೀಪಿಸಬಹುದು ಎಂದೂ ಆತಂಕಪಡಲಾಗಿದೆ.  ಬೆಂಗಳೂರಿನಲ್ಲಿ ಮಂಗಳವಾರ ಈರುಳ್ಳಿಯ ಬೆಲೆ ಕೆ.ಜಿ ಗೆ ರೂ 70 ರೂಪಾಯಿ ಇತ್ತು. ಅದು ಇನ್ನೂ ಹೆಚ್ಚಾಗಬಹುದು ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿತ್ತು.

ದೃಷ್ಟಕರ; ಪ್ರಣವ್ ಪ್ರತಿಕ್ರಿಯೆ: ಈರುಳ್ಳಿ ಬೆಲೆ ಗಮನಾರ್ಹವಾಗಿ ಏರಿಕೆಯಾಗಿರುವುದು ದುರದೃಷ್ಟಕರ ಎಂದು ಬಣ್ಣಿಸಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ‘ಮಾರುಕಟ್ಟೆಯಿಂದ ಗ್ರಾಹಕರಿಗೆ ಪೂರೈಕೆಯಾಗುವಲ್ಲಿ ಅಸಮತೋಲನ ಉಂಟಾಗಿದೆ. ಈ ಲೋಪ ನಿವಾರಿಸಬೇಕಾಗಿದ್ದು, ನಾನು ಸಂಬಂಧಿತ ಸಚಿವಾಲಯಗಳ ಜೊತೆ ಮಾತನಾಡುವೆ’ ಎಂದು ಹೇಳಿದ್ದಾರೆ.

ಪ್ರತಿಯೊಂದು ಅಂಗಡಿ ಮಳಿಗೆಗಳಲ್ಲಿನ ಬೆಲೆ ಮಟ್ಟದ ಮೇಲೆ ನಿಗಾ ಇಡಲು ಸರ್ಕಾರದಿಂದ ಸಾಧ್ಯವಾಗಲಾರದು ಎಂದು ಕಂಪೆನಿ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಅವರೂ ಅಭಿಪ್ರಾಯಪಟ್ಟಿದ್ದಾರೆ.

ಬೆಲೆ ಏರುತ್ತಿರುವುದಕ್ಕೆ ವರ್ತಕರ ಅಕ್ರಮ ಸಂಗ್ರಹವೇ ಕಾರಣ. ದೇಶದಲ್ಲಿ ಈರುಳ್ಳಿಯ ಸಾಕಷ್ಟು ಸಂಗ್ರಹ ಇದೆ ಎಂದು ವಾಣಿಜ್ಯ ಸಚಿವ ಆನಂದ ಶರ್ಮಾ ಸೋಮವಾರವಷ್ಟೇ ಹೇಳಿದ್ದರು.

ಕೇಂದ್ರ ಹೊಣೆ: ಯಡಿಯೂರಪ್ಪ
ಬೆಂಗಳೂರು : ‘ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಚಿತ್ರದುರ್ಗ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಇಲ್ಲಿನ ತಮ್ಮ ಮನೆಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿ ಮಾಡಿದ ಆಮದು ಮತ್ತು ರಫ್ತು ನೀತಿಯೇ ಅಗತ್ಯವಸ್ತುಗಳ ಬೆಲೆ ಏರಿಕೆಗೆ ಪ್ರಮುಖ ಕಾರಣ’ ಎಂದು ದೂರಿದರು.

‘ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವ ಸಂಬಂಧ ಒಂದೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಈ ಸಭೆಯಲ್ಲಿ ಬೆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ನಿರ್ಧರಿಸಲಾಗುವುದು ಎಂದು   ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT