ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಳೆ ನಾಶ: ಕಂಗಾಲಾದ ಅನ್ನದಾತ

Last Updated 12 ಅಕ್ಟೋಬರ್ 2012, 10:45 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಲ್ಲಿ  ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ರೋಗ, ಮಳೆಯ ಕೊರತೆ, ಹವಾಮಾನ ವೈಪರಿತ್ಯಗಳಿಂದ ಬೆಳೆ ನಾಶವಾಗಿದೆ. 

  ಕಪ್ಪುಮಣ್ಣು (ಎರೆಹೊಲ) ಇರುವ ರಾಮಗಿರಿ ಹೋಬಳಿಯ ತಾಳಿಕಟ್ಟೆ, ಅರಬಗಟ್ಟ, ಹನುಮಲಿ, ರಾಮಘಟ್ಟ, ಆರ್.ಡಿ. ಕಾವಲು, ಗಂಗಸಮುದ್ರ, ದಾಸಿಕಟ್ಟೆ, ಮಲ್ಲಾಡಿಹಳ್ಳಿ, ದುಮ್ಮಿ ಸುತ್ತಮುತ್ತ ಈರುಳ್ಳಿ ಮತ್ತು ಮೆಣಸಿನ ಗಿಡ ಬಿತ್ತನೆ ಮಾಡಲಾಗಿದೆ. ಜುಲೈ ಅಂತ್ಯಕ್ಕೆ ಬಂದ ಮಳೆಗೆ ಹೆಚ್ಚಿನ ರೈತರು ಈರುಳ್ಳಿ ಬಿತ್ತನೆ ಮಾಡಿದ್ದು, ಬೆಳೆ ರೋಗಕ್ಕೆ ತುತ್ತಾಗಿ ಚಿಕ್ಕ ಗೆಡ್ಡೆಗಳು ಕೊಳೆತು ಹೋಗಿವೆ. ಅನೇಕ ರೈತರು ಹದಮಳೆ ಬಾರದೆ ಬಿತ್ತನೆ ಮಾಡಿ, ಬೀಜ ಮೊಳೆಯದೆ ನಷ್ಟ ಅನುಭವಿಸಿದ್ದರು. ಈಗ ಬೆಳೆದ ಈರುಳ್ಳಿಯೂ ಕೊಳೆತು ರೈತರು ಮತ್ತೆ ತೊಂದರೆಗೆ ಒಳಗಾಗಿದ್ದಾರೆ.

ಹೊಲಗಳಲ್ಲಿ ದುರ್ವಾಸನೆ: `ಈಗ ಎರಡು ತಿಂಗಳ ಬೆಳೆ ಇದ್ದು, ಗೋಲಿ ಗಾತ್ರವಿರುವ ಈರುಳ್ಳಿ ಗೆಡ್ಡೆಗಳು ಸಂಪೂರ್ಣ ಕೊಳೆತು ಹೋಗಿದೆ. ಗೆಡ್ಡೆಗಳು ಕೊಳೆತಿರುವುದರಿಂದ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಇದರಿಂದ ಬೇಸತ್ತ ಅನೇಕ ರೈತರು ಬೆಳೆಯ ಮೇಲೆಯೇ ಬೇಸಾಯ ಮಾಡುತ್ತಿದ್ದಾರೆ. ಬೆಳಗಿನ ಸಮಯದಲ್ಲಿ ಮಂಜು ಆವರಿಸಿದ್ದರಿಂದ ಮಜ್ಜಿಗೆ ರೋಗ ಬಂದಿದ್ದು, ಬೆಳೆ ಕೊಳೆತಿದೆ. ಮಂಜು ಬಿದ್ದರೂ ಸಂಜೆ ಮಳೆ ಬಂದರೆ ಮಾತ್ರ ಬೆಳೆ ಉಳಿಯುತ್ತಿತ್ತು. ಆದರೆ, ಮಳೆಯಿಲ್ಲದೆ ಬರೀ ಮಂಜು ಬಿದ್ದಿದ್ದರಿಂದ ಬೆಳೆ ಹಾಳಾಗಿದೆ. ಈ ಬಾರಿ ಇಡೀ ಗ್ರಾಮದಲ್ಲಿ ಈರುಳ್ಳಿಯಿಂದ ಒಂದು ರೂಪಾಯಿ ಆದಾಯವೂ ಬಂದಿಲ್ಲ~ ಎನ್ನುತ್ತಾರೆ ತಾಳಿಕಟ್ಟೆ ಗ್ರಾಮದ ಶಿಕ್ಷಕ ಹಾಗೂ ರೈತ ಕಲ್ಲೇಶಪ್ಪ.

ನಮ್ಮ ಗ್ರಾಮದಲ್ಲಿ ಈ ವರ್ಷ ಸುಮಾರು ಒಂದು ಸಾವಿರ ಎಕರೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಮೊದಲೆಲ್ಲಾ ನಮ್ಮ ಗ್ರಾಮದಿಂದ ಬೆಂಗಳೂರಿಗೆ ಸುಮಾರು 2 ಸಾವಿರ ಲೋಡ್ ಈರುಳ್ಳಿ ಕಳುಹಿಸುತ್ತಿದ್ದೆವು. ಒಂದು ಎಕರೆಯಲ್ಲಿ 250 ಪ್ಯಾಕೆಟ್ ಈರುಳ್ಳಿ ಬೆಳೆಯುತ್ತಿದ್ದೆವು. ಆದರೆ ಈ ಬಾರಿ ಇಡೀ ಗ್ರಾಮದಿಂದ ನೀರಾವರಿಯಲ್ಲಿ ಬೆಳೆದ ಒಬ್ಬಿಬ್ಬರು ರೈತರು ಒಂದೆರಡು ಲೋಡ್ ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಅವರೂ ಉತ್ತಮ ಬೆಲೆ ಸಿಗದೆ ನಷ್ಟ ಅನುಭವಿಸಿ ಬಂದಿದ್ದಾರೆ.

ಎಕರೆಗೆ 6ರಿಂದ 8 ಸೇರು ಬೀಜ ಬೇಕು. ಒಂದು ಸೇರಿಗೆ ರೂ300ರಿಂದ ರೂ500 ಬೆಲೆ ಇದ್ದು, ಬೀಜಕ್ಕೇ ರೂ4 ಸಾವಿರ, ಕೊಟ್ಟಿಗೆ ಗೊಬ್ಬರ, ರಸಗೊಬ್ಬರ, ಬೇಸಾಯಕ್ಕೆ ಸುಮಾರು ರೂ15ರಿಂದ 20 ಸಾವಿರ ಖರ್ಚಾಗುತ್ತದೆ. ಇನ್ನು ಕೂಲಿ ಆಳುಗಳ ಕತೆಯಂತೂ ಹೇಳತೀರದು. ಒಂದು ಆಳಿಗೆ ರೂ100ರಿಂದ 150 ಕೊಟ್ಟು ಕರೆ ತರಬೇಕು.

ಈರುಳ್ಳಿ ಸುಮಾರು 7 ಬಾರಿ ಕಳೆ ತೆಗೆಸಿಕೊಳ್ಳುತ್ತದೆ. ಹೀಗಿರುವಾಗ ಲೆಕ್ಕವಿಲ್ಲದಷ್ಟು ಖರ್ಚಾಗುತ್ತದೆ. ಇಷ್ಟೆಲ್ಲಾ ಮಾಡಿದರೂ ಈಗ ಒಂದು ರೂಪಾಯಿ ಆದಾಯವೂ ಸಿಕ್ಕಿಲ್ಲ. ಹೀಗಾದರೆ ರೈತರ ಗತಿ ಏನು ಎನ್ನುತ್ತಾರೆ ಮರಿಗೆಂಚಪ್ಪ, ಕಲ್ಲಪ್ಪ, ಬಸವರಾಜಪ್ಪ, ನಾಗರಾಜಪ್ಪ, ತಿಮ್ಮಪ್ಪ.

ಹಲವು ರೈತರು ಈರುಳ್ಳಿ ಮತ್ತು ಮೆಣಸಿನ ಗಿಡಗಳನ್ನು ಅಂತರ ಬೆಳೆಯಾಗಿ ಬೆಳೆದಿದ್ದು, ಕೆಲವರು ಇಡೀ ಹೊಲದಲ್ಲಿ ಮೆಣಸಿನ ಗಿಡ ಬೆಳೆದಿದ್ದಾರೆ. ಬೇಗ ಮಳೆ ಬಂದು ಬಿತ್ತನೆ ಮಾಡಿದ್ದರೆ ಈಗಾಗಲೇ ಮೆಣಸಿನ ಕಾಯಿಗಳಾಗಬೇಕಿತ್ತು. ಮಳೆ ತಡವಾದ್ದರಿಂದ ಮೆಣಸಿನ ಗಿಡ ಈಗ ಹೂವಿನ ಹಂತದಲ್ಲಿವೆ. ಆದರೆ, ಈಗಾಗಲೇ ಮೂಡಲ ಗಾಳಿ ಬೀಸುತ್ತಿದ್ದು, ಹೂ ಉದುರಿ ಹೋಗುವ ಆತಂಕ ಶುರುವಾಗಿದೆ. 15 ದಿನಗಳಿಂದ ಮಳೆಯೂ ಕೈಕೊಟ್ಟಿದ್ದು ಹೊಲಗಳಲ್ಲಿ ಬಿರುಕುಗಳಾಗಿವೆ. ಮಳೆ ಬಂದು ವಾತಾವರಣ ಉತ್ತಮವಾಗಿದ್ದರೆ ಮಾತ್ರ ಮೆಣಸಿನ ಕಾಯಿ ಆಗಬಹುದು ಎನ್ನುತ್ತಾರೆ ರೈತರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT