ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಳೆಗೆ ರೋಗವೇ?

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಈರುಳ್ಳಿ ಬೆಳೆ (ಪೈರು) ನಿನ್ನೆ ಚೆನ್ನಾಗಿತ್ತು. ಇವತ್ತು ಎಲೆಗಳ ತುದಿ ಹಳದಿ ಬಣ್ಣಕ್ಕೆ ತಿರುಗಿವೆ. ಬೆಳೆ ಒಣಗುತ್ತಿದೆ.  ಹೀಗೇಕೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಈರುಳ್ಳಿ ಬೆಳೆಗಾರರು ನಿತ್ಯ ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ಮಹಾ ವಿದ್ಯಾಲಯಗಳಿಗೆ ಬರುತ್ತಾರೆ.

ಈರುಳ್ಳಿ ಬೆಳೆಗೆ ಬರುವ ರೋಗಗಳಲ್ಲಿ ನೇರಳೆ ರೋಗ, ಅಂಗಮಾರಿ ರೋಗ, ಕಾಡಿಗೆ ರೋಗ, ಬುಡ ಕೊಳೆ ರೋಗ ಮತ್ತು ಸಸಿ ಕೊಳೆ ರೋಗ ಇತ್ಯಾದಿಗಳು ಪ್ರಮುಖವಾದವು. ಅಲ್ಲದೆ ಥ್ರಿಪ್ಸ್‌ನುಸಿ ಮತ್ತು ಕಾಂಡ ಕತ್ತರಿಸುವ ಹುಳುಗಳ ಹಾವಳಿಯೂ ಕಂಡುಬರುತ್ತವೆ.

ನೇರಳೆ ಮಚ್ಚೆರೋಗವು ಆಲ್ಟರ್‌ನೇರಿಯಾ ಪೊರಿ ಎಂಬ ಶಿಲೀಂದ್ರದಿಂದ ಬರುತ್ತದೆ. ರೋಗದ ಲಕ್ಷಣಗಳೆಂದರೆ ಮೊದಲಿಗೆ ಎಲೆಗಳ ಮೇಲೆ ಕಾಣಿಸಿಕೊಂಡು ನಂತರ ಕಂದು ಬಣ್ಣಕ್ಕೆ ತಿರುಗುತ್ತವೆ. ಚುಕ್ಕೆಗಳು ಬೆಳೆದಂತೆಲ್ಲಾ ಎಲೆಯ ತುಂಬಾ ಹರಡಿಕೊಂಡು ಎಲೆಗಳ ಅಂಚು ಮಬ್ಬು ಬಣ್ಣಕ್ಕೆ ತಿರುಗುತ್ತವೆ.

ವಾತಾವರಣದಲ್ಲಿ ತೇವಾಂಶ ಇರುವಾಗ ಈ ಚುಕ್ಕೆಗಳ ಮೇಲೆ ಕಂದು ಅಥವಾ ಕಪ್ಪು ಬಣ್ಣದ ಬೀಜಕಣಗಳಿದ್ದು, ರೋಗದ ಬಾಧೆ ತೀವ್ರವಾದಂತೆ ಎಲೆಗಳು ಸಂಕುಚಿತಗೊಂಡು ಹಳದಿ ಬಣ್ಣಕ್ಕೆ ತಿರುಗಿ ನಂತರ ಪೈರು ಸಂಪೂರ್ಣ ನಾಶವಾಗುತ್ತವೆ.

ಈ ರೋಗ ನಿಯಂತ್ರಣಕ್ಕೆ ಮೊದಲ ಪರಿಹಾರ, ಬೆಳೆ ಪರಿವರ್ತನೆ ಮಾಡುವುದು. ಬಿತ್ತನೆಗೆ ಮುಂಚೆ ಪ್ರತಿ ಕಿಲೋ ಬೀಜಕ್ಕೆ 3 ಗ್ರಾಂ ಮ್ಯೋಂಕೊಜೆಬ್ ಶಿಲೀಂದ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ರೋಗದ ಹತೋಟಿಗೆ 2.5 ಗ್ರಾಂ ಮಾಂಕೊಜೆಬ್ ಅಥವಾ 1.5 ಮಿ.ಲೀ. ಇಪ್ರೊಬೆನ್ ಫಾಸ್ ಅಥವಾ 2.5 ಗ್ರಾಂ ಎಂಥ್ರಾಕಾಲ್‌ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕೇದಿಗೆ ರೋಗ ಪೆರನೋಸ್ಪೂರಾ ಡಿಸ್ಟರಕ್ಟರ್ ಎಂಬ ಶಿಲೀಂದ್ರದಿಂದ ಬರುತ್ತದೆ. ರೋಗ ಪೀಡಿತ ಸಸ್ಯಗಳ ಬೆಳವಣಿಗೆ ಕುಂಠಿತಗೊಂಡು ಎಲೆಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳ ಮಧ್ಯ ಭಾಗದಲ್ಲಿ ರೋಗದ ಲಕ್ಷಣಗಳು ಕಂಡುಬಂದು ನಂತರ ಬಾಡಿ ಜೋಲಾಡುತ್ತಿರುತ್ತವೆ.

ಈ ರೋಗ ಬಾರದಂತೆ ತಡೆಯಲು ಬಿತ್ತನೆಗೆ ರೋಗರಹಿತ ಗಡ್ಡೆಗಳನ್ನು ಆಯ್ದುಕೊಳ್ಳಬೇಕು. ರೋಗ ಕಂಡು ಬಂದ ಕೂಡಲೇ ಶಿಲೀಂದ್ರನಾಶಕಗಳಾದ 1.5 ಗ್ರಾಂ ಮೆಟಾಲಾಕ್ಸಿಲ್ ಎಂ-ಝಡ್‌ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು.

ಬುಡ ಕೊಳೆ ರೋಗ ಪ್ಯುಸೇರಿಯಂ ಎಂಬ ಮಣ್ಣಿನಲ್ಲಿ ವಾಸ ಮಾಡುವ ಶಿಲೀಂದ್ರದಿಂದ ಬರುತ್ತದೆ. ಗಡ್ಡೆಗಳು ದೊಡ್ಡದಾಗುತ್ತಿರುವ ಸಮಯದಲ್ಲಿ ಬುಡಗಳು ಕೊಳೆಯಲು ಪ್ರಾರಂಭಿಸಿ ನಂತರ ಎಲೆಗಳು ಸಂಪೂರ್ಣವಾಗಿ  ಹಳದಿಯಾಗಿ ಸಾಯುತ್ತವೆ. ಇದರಿಂದ ಈರುಳ್ಳಿ ಗಡ್ಡೆ ಸಂಪೂರ್ಣ ಕೊಳೆಯುತ್ತವೆ.

ರೋಗದ ನಿರ್ವಹಣೆಗೆ ಬಿತ್ತನೆಗೆ ಮುಂಚೆ ಒಂದು ಕಿಲೋ ಟ್ರೈಕೊಡರ್ಮವನ್ನು ಒಂದು ಚಕ್ಕಡಿಯಷ್ಟು ಕೊಟ್ಟಿಗೆ ಗೊಬ್ಬರದ ಜೊತೆಗೆ ಬೆರೆಸಿ ಕೊಡಬೇಕು. ಬೆಳೆ ಪರಿವರ್ತನೆ ಮಾಡಬೇಕು. ರೋಗ ಕಂಡು ಬಂದರೆ 1 ಗ್ರಾಂ  ಕಾರ್ಬನ್ ಡೈಜಿಮ್‌ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ರೋಗ ಪೀಡಿತ ಈರುಳ್ಳಿ ಪೈರಿನ ಬುಡಕ್ಕೆ ಹಾಕಬೇಕು.

ಥ್ರಿಪ್ಸ್ ನುಸಿಗಳು ಎಲೆಯ ಮೇಲೆ ಹೆಚ್ಚಾಗಿ ಕಂಡು ಬಂದು ಪ್ರಾಯದ ಹಾಗೂ ಮರಿ ಕೀಟಗಳು ಎಲೆಗಳ ಮೇಲೆ ಬಾಯಿಂದ ಉಜ್ಜಿ ಬರುವ ರಸವನ್ನು ಹೀರುತ್ತವೆ. ಅಂತಹ ಎಲೆಗಳು ಮುದುಡುತ್ತವೆ. ನಂತರ ತುದಿಯ ಕಡೆಯಿಂದ  ಒಣಗುತ್ತವೆ.

ನುಸಿ ನಿಯಂತ್ರಣಕ್ಕೆ 0.25 ಮಿ.ಲೀ. ಇಮಿಡಾ ಕ್ಲೊಪ್ರಿಡ್ ಅಥವಾ 1 ಮಿ.ಲೀ. ರಿಜೆಂಟ್ ಅಥವಾ 2 ಮಿ.ಲೀ ಕ್ಯುರಾಕ್ರಾನ್‌ಅನ್ನು  ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ಈರುಳ್ಳಿ ಹೊಲದ ಸುತ್ತಲೂ ಎರಡು ಸಾಲು ಗೋವಿನ ಜೋಳವನ್ನು ಹಾಕುವುದರಿಂದ ಥ್ರಿಪ್ಸ್‌ನುಸಿಯ ಹಾರಾಟ ತಡೆಗಟ್ಟಬಹುದು. ಇದರಿಂದ ನುಸಿ ಬಾಧೆಯನ್ನು ಸ್ವಲ್ಪಮಟ್ಟಿಗೆ ತಡೆಯಬಹುದಾಗಿದೆ. 

 ಕಾಂಡ ಕತ್ತರಿಸುವ ಹುಳದ ಹೆಣ್ಣು ಪತಂಗಗಳು ಗುಂಪು ಗುಂಪಾಗಿ ಎಲೆಗಳ ಮೇಲೆ ಮೊಟ್ಟೆಯನ್ನಿಡುತ್ತವೆ. ಮರಿ ಹುಳಗಳು ಮೊಟ್ಟೆಗಳಿಂದ ಹೊರಬಂದಾಗ 2 ರಿಂದ 3 ದಿನ ಒಟ್ಟಾಗಿದ್ದು, ಎಲೆಗಳನ್ನು ಕೆರೆದು ತಿನ್ನುತ್ತವೆ. ಇವು ಹಗಲಿನಲ್ಲಿ ಅಡಗಿಕೊಂಡಿದ್ದು, ರಾತ್ರಿ ಹೊತ್ತಿನಲ್ಲಿ ಸಸಿಗಳನ್ನು ಬುಡದಲ್ಲಿ ಕತ್ತರಿಸಿ ತಿನ್ನುತ್ತವೆ.

ಈ ಕೀಟಗಳ ಹಾವಳಿ ತಡೆಯಲು 2 ಮಿ.ಲೀ. ಕ್ಲೊರೋಫೈರಿಫಾಸ್ ಅಥವಾ 2 ಮಿ.ಲೀ. ಕ್ಯುರಾಕ್ರಾನ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ರೋಗ ಮತ್ತು ಕೀಟಗಳ ನಿರ್ವಹಣೆಗೆ  ಔಷಧಿಗಳನ್ನಷ್ಟೇ ಉಪಯೋಗಿಸದೇ ಕೊಟ್ಟಿಗೆ ಗೊಬ್ಬರ, ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಸಮತೋಲನ ಪ್ರಮಾಣದಲ್ಲಿ ಕೊಡುವುದರಿಂದ ರೋಗ ಮತ್ತು ಕೀಟಗಳ ನಿರ್ವಹಣೆ  ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT