ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಳೆಯಲು ಮುಗಿಬಿದ್ದ ರೈತರು

ದಾಖಲೆ ಬೆಲೆಯಲ್ಲಿ ಬೀಜ ಮಾರಾಟ
Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಮುಂಗಾರು ಹಂಗಾ­ಮಿ­ನಲ್ಲಿ ಈರುಳ್ಳಿ ಬೆಳೆಗಾರರು ಗಣ­ನೀಯ ಲಾಭ ಪಡೆದುಕೊಂಡಿರುವ ಬೆನ್ನಲ್ಲಿ­ಯೇ ಬೇಸಿಗೆ ಹಂಗಾಮಿಗೂ ಈರುಳ್ಳಿ ನಾಟಿ ಮಾಡಲು ರೈತರು ಮುಗಿ ಬೀಳುತ್ತಿರುವುದು ಕಂಡುಬಂದಿದೆ.

ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆದ ನಂತರ ಮೆಕ್ಕೆಜೋಳ, ರಾಗಿ, ಶೇಂಗಾ ನಾಟಿ ಮಾಡಲಾಗುತ್ತಿತ್ತು. ಆದರೆ ಈ ಸಾರಿ ಮತ್ತೆ ಈರುಳ್ಳಿಯನ್ನೇ ನಾಟಿ ಮಾಡಲಾಗುತ್ತಿದೆ. ಜತೆಗೆ ಈರುಳ್ಳಿ ಬೆಳೆಯದ ರೈತರು ಸಹ ಬೇಸಿಗೆ ಹಂಗಾಮಿಗೆ ಈರುಳ್ಳಿಯನ್ನೇ ನಾಟಿ ಮಾಡಲು ಮುಂದಾಗುತ್ತಿರುವ ಕಾರಣ ನಾಟಿ ಪ್ರಮಾಣ ಹಲವು ಪಟ್ಟು ಏರಿಕೆಯಾಗಲಿದೆ. ಇದು ಕೇವಲ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕಿಗೆ ಸೀಮಿತವಾಗದೇ ಎಲ್ಲಾ ಕಡೆಯೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ರೈತರು ಬೆಳೆದ ಈರುಳ್ಳಿ ಬೀಜ ದರ ಪ್ರತಿ ಕೆ.ಜಿ.ಗೆ ₨ 250ರಿಂದ 350 ಇರುತ್ತಿತ್ತು. ಹೈಬ್ರಿಡ್ ಬೀಜ ದರ ₨ 1,000ದ ಆಸುಪಾಸಿನಲ್ಲಿ ಇರುತ್ತಿತ್ತು. ಆದರೆ, ಈ ವರ್ಷ ವಿಪರೀತ ಬೇಡಿಕೆ ಹಿನ್ನೆಲೆಯಲ್ಲಿ ರೈತರು ಬೆಳೆದ ಈರುಳ್ಳಿ ಬಿತ್ತನೆ ಬೀಜ ₨ 1,000ದಿಂದ 1200, ಕಂಪೆನಿಗಳ ಬೀಜ ₨ 1,200­ರಿಂದ 2,500ಕ್ಕೆ ಮಾರಾಟವಾಗುತ್ತಿದೆ.

ಇಷ್ಟೊಂದು ದರಕ್ಕೆ ಯಾವಾಗಲೂ ಈರುಳ್ಳಿ ಬೀಜ ಮಾರಾಟವಾದ ಉದಾ­ಹರ­ಣೆಯೇ ಇಲ್ಲ ಎಂದು ಬೆಳೆಗಾರರು ಹೇಳುತ್ತಿದ್ದಾರೆ ಎಂದು ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್‌.ವಿರೂಪಾಕ್ಷಪ್ಪ ಶನಿವಾರ ತಿಳಿಸಿದರು.

ಈ ಸಮಯದಲ್ಲಿ ಹೆಚ್ಚಾಗಿ ಮಹಾ­ರಾ­ಷ್ಟ್ರದ ನಾಸಿಕ್‌ ಭಾಗದಿಂದ ಬೀಜ ಪೂರೈಕೆಯಾಗುತ್ತದೆ. ಮಹಾರಾ­ಷ್ಟ್ರದಲ್ಲಿ ಈ ಸಮಯದಲ್ಲಿ ಮುಖ್ಯವಾಗಿ ಈರುಳ್ಳಿ ನಾಟಿ ಮಾಡುವ ಪರಿಣಾಮ, ಅಲ್ಲಿ ಉತ್ತಮ ಬೆಳೆ ಬಂದಲ್ಲಿ ನಮ್ಮ ರೈತರಿಗೆ ಹೆಚ್ಚಿನ ದರ ಸಿಗುವುದು ಕಷ್ಟಸಾಧ್ಯ. ಆದ್ದರಿಂದ ರೈತರು ಅವಸರಕ್ಕೆ ಒಳಗಾಗದೇ ನೋಡಿಕೊಂಡು ನಾಟಿಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ರಿಯಾಯಿತಿ ದರದಲ್ಲಿ ಈರುಳ್ಳಿ ಬೀಜ ವಿತರಣೆಗೆ ಕ್ರಮ ಕೈಗೊಂಡಿದ್ದರೂ ನೀಡುತ್ತಿರುವ ಪ್ರಮಾಣ ಕೇವಲ ಅರ್ಧ ಎಕರೆಗೆ ಮಾತ್ರ ನಾಟಿ ಮಾಡಬಹು­ದಾಗಿದೆ. ಹೆಚ್ಚಿನ ಬೀಜ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT