ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ರಫ್ತು ನಿಷೇಧ ರದ್ದು ಇಲ್ಲ

Last Updated 1 ಫೆಬ್ರುವರಿ 2011, 17:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುವುದನ್ನು ಸೋಮವಾರದಿಂದ ನಿಲ್ಲಿಸಿದ್ದರೂ ಈರುಳ್ಳಿ ರಫ್ತಿನ ಮೇಲೆ ಹೇರಿರುವ ನಿಷೇಧವನ್ನು ಸದ್ಯದಲ್ಲಿ ರದ್ದುಪಡಿಸುವುದಿಲ್ಲ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ವಿ.ಥಾಮಸ್ ತಿಳಿಸಿದ್ದಾರೆ.

‘ಗಗನಕ್ಕೇರಿದ್ದ ಈರುಳ್ಳಿ ಬೆಲೆ ಗಣನೀಯವಾಗಿ ಇಳಿದಿದ್ದರೂ ರಫ್ತನ್ನು ಕೂಡಲೇ ನಿಲ್ಲಿಸುವ ಪರಿಸ್ಥಿತಿಗೆ ನಾವು ತಲುಪಿಲ್ಲ’ ಎಂದು ಅವರು ತಿಳಿಸಿದ್ದಾರೆ.ಈಗ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ಬೇರೆ ದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದ ಈರುಳ್ಳಿ ಬೆಳೆ ನಾಶವಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದ ಈರುಳ್ಳಿ ಆವಕವಾಗಿದ್ದರಿಂದ ಬೆಲೆ ಗಗನಕ್ಕೇರಿತ್ತು. ಆಗ ಕೇಂದ್ರ ಸರ್ಕಾರವು ಸರ್ಕಾರಿ ಸಂಸ್ಥೆಗಳಾದ ಪಿಇಸಿ ಮತ್ತು ಎಸ್‌ಟಿಸಿ ಮೂಲಕ ಪಾಕಿಸ್ತಾನದಿಂದ ಒಂದು ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿತ್ತು ಎಂದು ಥಾಮಸ್ ತಿಳಿಸಿದ್ದಾರೆ.

ಈಗ ನಿರಾಳ: ಕೃಷಿ ಸಚಿವ ಶರದ್ ಪವಾರ್ ಈಗ ಆಹಾರ ಮತ್ತು ಗ್ರಾಹಕರ ವ್ಯವಹಾರ ಖಾತೆಯಲ್ಲಿರ ಇಲ್ಲದಿರುವುದರಿಂದ ಈ ಇಲಾಖೆಯನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವುದು ಕೊಂಚ ನಿರಾಳ ಎನಿಸಿದೆ ಎಂದು ಥಾಮಸ್ ತಿಳಿಸಿದ್ದಾರೆ.ಮೊದಲು ಥಾಮಸ್ ಅವರು ಶರದ್ ಪವಾರ್ ಅಧೀನದಲ್ಲಿ ಈ ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇತ್ತೀಚಿಗೆ ಸಂಪುಟ ಪುನರ್‌ರಚಿಸಿದ ನಂತರ ಥಾಮಸ್ ಅವರಿಗೆ ಈ ಖಾತೆಯ ಸ್ವತಂತ್ರ ನಿರ್ವಹಣೆಯ ಅವಕಾಶ ದೊರೆತಿದೆ.ಸ್ವತಂತ್ರ ನಿರ್ವಹಣೆಯ ಜವಾಬ್ದಾರಿ ವಹಿಸಿದ ನಂತರ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವ ಹುಮ್ಮಸ್ಸು ಮೂಡಿದೆ ಎಂದು ಅವರು ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದಾಗ ಕೃಷಿ, ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ನೀರ್ವಹಿಸುತ್ತಿದ್ದ ಪವಾರ್ ವಿರುದ್ಧ ವಿರೋಧ ಪಕ್ಷಗಳು ಮತ್ತು ಯುಪಿಎ ಅಂಗ ಪಕ್ಷಗಳು ಭಾರಿ ಟೀಕೆ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT