ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯದ ಮಕ್ಕಳಿಗೆ ಆಸರೆಯಾದ ಸುತ್ತೂರು ಶಾಲೆ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಮೈಸೂರು: ನಕ್ಸಲೀಯರ ಹಾವಳಿ, ಉಗ್ರಗಾಮಿ ಚಟುವಟಿಕೆ, ನಿರಂತರ  ಪ್ರತಿಭಟನೆ ಹೀಗೆ ನಾನಾ ಕಾರಣಗಳಿಂದ  ಓದು ಮುಂದುವರಿಸಲು ಸಾಧ್ಯವಾಗದ ಮೇಘಾಲಯ, ಮಣಿಪುರ ಮತ್ತು ಜಾರ್ಖಂಡ್‌ನ ಮಕ್ಕಳಿಗೆ ಮೈಸೂರು ಜಿಲ್ಲೆ ಸುತ್ತೂರು ಕ್ಷೇತ್ರದ ಜೆಎಸ್‌ಎಸ್‌ನ ಸುತ್ತೂರು ಶಾಲೆ ವಿದ್ಯೆ ನೀಡುತ್ತಿದೆ.

ಮೇಘಾಲಯದ 100, ಮಣಿಪುರದ 55, ಜಾರ್ಖಂಡ್‌ನ ಇಬ್ಬರು ಬಾಲಕಿಯರು ಹಾಗೂ ನಾಲ್ವರು ಬಾಲಕರು, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ಬಡ ಮಕ್ಕಳು ಈ ಶಾಲೆಯಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ.

ಈ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದರೂ ಕನ್ನಡ ಕಲಿತು, ಕನ್ನಡದಲ್ಲಿಯೇ ಮಾತನಾಡುತ್ತಾರೆ. ಜತೆಗೆ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಮಠದಲ್ಲಿ ನಡೆಯುವ ಪ್ರಾರ್ಥನೆ ವೇಳೆ ಶರಣರ ವಚನ ಹಾಗೂ ಪ್ರಾರ್ಥನಾ ಗೀತೆಗಳನ್ನು ಹಾಡುತ್ತಾರೆ.

ಮಣಿಪುರದ ಸೇನಾಪತಿ ಜಿಲ್ಲೆಯ ಕಾಂಕೋಪಿಯಿಂದ ಬಂದ ರಕ್ಷಾ ಗೋವಾಲಿ 3 ವರ್ಷಗಳಿಂದ ಓದುತ್ತಿದ್ದಾಳೆ. `ಅಪ್ಪ-ಅಮ್ಮ ಬಡವರಾದರೂ ಅಲ್ಲಿಯ ಶಾಲೆಗೆ ಕಳಿಸಲು ಮುಂದಾಗಿದ್ದರು. ಆದರೆ ಧರಣಿ, ಪ್ರತಿಭಟನೆಯಿಂದಾಗಿ ತರಗತಿಗಳು ನಡೆಯುತ್ತಲೇ ಇರಲಿಲ್ಲ. ಹೀಗಾಗಿ ಸ್ವಯಂಸೇವಾ ಸಂಸ್ಥೆಯ ನೆರವಿನಿಂದ 8ನೇ ತರಗತಿಗೆ ಇಲ್ಲಿಗೆ ಬಂದು ಸೇರಿಕೊಂಡೆ. ಸದ್ಯ ಎಸ್‌ಎಸ್‌ಎಲ್‌ಸಿಯಲ್ಲಿ ಓದುತ್ತಿರುವೆ' ಎಂದು ಹೇಳುವಾಗ ಆಕೆಯ ಕಣ್ಣಲ್ಲಿ ಹೊಳಪು.

4ನೇ ತರಗತಿಯಲ್ಲಿ ಓದುತ್ತಿರುವ ಮೇಘಾಲಯದ ಹಿಸ್‌ಪೇಟೆಯ ರಿಲಾಂಗ್, ಎಸ್‌ಎಸ್‌ಎಲ್‌ಸಿಯಲ್ಲಿ ಓದುತ್ತಿರುವ ಕಾಸಿ ಜಿಲ್ಲೆಯ ಸಫಿ  ಮೊದಲಾದವರೆಲ್ಲ ತಮಗಿಂತ ಕಿರಿಯರನ್ನು ತಾಯಿಯಂತೆ ಆರೈಕೆ ಮಾಡುತ್ತಾರೆ. ಇವರೊಂದಿಗೆ ರಾಜ್ಯದ ವಿವಿಧ ಜಿಲ್ಲೆಯ ಮಕ್ಕಳೂ ಇಲ್ಲಿ ಓದುತ್ತಿದ್ದಾರೆ. ಅನಾಥ, ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿಯ ಬಸವೇಶ್ವರ ಹಾಗೂ ಅಕ್ಕಮಹಾದೇವಿ ವಿದ್ಯಾರ್ಥಿನಿಲಯಗಳಲ್ಲಿ ಆಶ್ರಯ ಪಡೆದಿದ್ದಾರೆ.

ಓದಿನ ಜತೆಗೆ ಸಂಗೀತ, ಟೆರ‌್ರಾಕೋಟ, ಮಲ್ಲಕಂಬ, ಎನ್‌ಸಿಸಿ, ಸ್ಕೌಟ್ಸ್, ಗೈಡ್ಸ್ ... ಹೀಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತರಬೇತಿ ಪಡೆದು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಉತ್ತಮ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯ, ಮಲ್ಟಿ ಜಿಮ್ ಸೌಲಭ್ಯ ಶಾಲೆಯಲ್ಲಿದೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಈ ಶಾಲೆಯ ಫಲಿತಾಂಶ ಶೇ 91. ಈ ಶಾಲೆ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ದಾನಿಗಳು ಹಾಗೂ ಮಠದ ಆಶ್ರಯದಲ್ಲಿ ನಡೆಯುತ್ತಿದೆ.
ಮಾಹಿತಿಗೆ ದೂರವಾಣಿ ಸಂಖ್ಯೆ.0821-232323/232653 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT