ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ನಡೆದು ಬಂದ ದಾರಿ

Last Updated 13 ಜುಲೈ 2012, 5:45 IST
ಅಕ್ಷರ ಗಾತ್ರ

ಶಿವಮೊಗ್ಗ:  ಕೆ.ಎಸ್. ಈಶ್ವರಪ್ಪ ಅವರದ್ದು ಸಾಮಾನ್ಯ ಕುಟುಂಬ. ತಂದೆ ಕೌಡಿಕಿ ಶರಣಪ್ಪ ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಬಂದವರು. ಅವರ ನಾಲ್ಕು ಗಂಡು, ಎರಡು ಹೆಣ್ಣುಮಕ್ಕಳ ಪೈಕಿ ಈಶ್ವರಪ್ಪ ಕೊನೆಯವರು. ಈಶ್ವರಪ್ಪ ಪತ್ನಿ ಜಯಲಕ್ಷ್ಮೀ, ನಾಲ್ಕು ಹೆಣ್ಣುಮಕ್ಕಳು, ಒಬ್ಬ ಮಗ, ಕಾಂತೇಶ ಉದ್ಯಮಿ.

ಈಶ್ವರಪ್ಪ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಸಂಘದ ವಿವಿಧ ಜವಾಬ್ದಾರಿ ನಿರ್ವಹಿಸಿದವರು. ಕಾಲೇಜು ದಿನಗಳಲ್ಲಿ ಎಬಿವಿಪಿ ಕಾರ್ಯಕರ್ತ, ವಿದ್ಯಾರ್ಥಿ ನಾಯಕ. ಶಿವಮೊಗ್ಗ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದ ಅವರು, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ತುರ್ತುಸ್ಥಿತಿ ವಿರೋಧಿಸಿ ಹೋರಾಟದಲ್ಲಿ ಸೆರೆಮನೆ ವಾಸ ಅನುಭವಿಸಿದವರು. ಪದವಿ ಪಡೆದ ನಂತರ ನೆಹರು ರಸ್ತೆಯಲ್ಲಿ ಸ್ಟೇಶನರಿ ಅಂಗಡಿ ನಡೆಸುತ್ತಿದ್ದರು.

ಬಿಜೆಪಿಯ ಆರಂಭದ ದಿನಗಳಲ್ಲಿ ಶಿವಮೊಗ್ಗ ನಗರದ ಅಧ್ಯಕ್ಷ, ನಂತರ ಕ್ಷೇತ್ರ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಣೆ. 1989ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ. ತಮ್ಮ ಹೋರಾಟದ ಮೂಲಕ ಇಡೀ ರಾಜ್ಯಕ್ಕೆ ಪರಿಚಿತರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಜತೆ ಬಿಜೆಪಿ ಕಟ್ಟಲು ಅವರು ಇಡೀ ರಾಜ್ಯ ಸುತ್ತಿದರು; ಹೋರಾಟಗಳಲ್ಲಿ ಭಾಗವಹಿಸಿದರು.

1994ರಲ್ಲಿ ಮತ್ತೆ ಶಿವಮೊಗ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆ. 1999ರ ಚುನಾವಣೆಯಲ್ಲಿ ಸೋಲು. ಆದರೆ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದ್ದರಿಂದ ಈಶ್ವರಪ್ಪ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದರು. 2001ರಲ್ಲಿ ಕನಕಪುರದಲ್ಲಿ ದೇವೇಗೌಡ ಅವರ ವಿರುದ್ಧ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧೆ- ಸೋಲು.

2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಸಂದರ್ಭದಲ್ಲಿ ಮತ್ತೆ ಶಿವಮೊಗ್ಗದಿಂದ ಈಶ್ವರಪ್ಪ ಆಯ್ಕೆಯಾದರು. 2006ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಈಶ್ವರಪ್ಪ ಮೊದಲ ಬಾರಿಗೆ ಮಂತ್ರಿ, ಜಲಸಂಪನ್ಮೂಲ ಖಾತೆ ಇವರ ತೆಕ್ಕೆಗೆ. 

 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕೆ.ಎಸ್. ಈಶ್ವರಪ್ಪ ಇಂಧನ ಸಚಿವರಾದರು. ಪಕ್ಷದ ಆದೇಶದಂತೆ 1996 ನಂತರ ಅವರು 2010ರಲ್ಲಿ ಎರಡನೇ ಬಾರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತರು. ಈಗ ಉಪ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT