ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪಗೆ ಆಯೋಗ ಛೀಮಾರಿ

Last Updated 23 ಏಪ್ರಿಲ್ 2013, 19:39 IST
ಅಕ್ಷರ ಗಾತ್ರ

ನವದೆಹಲಿ: ಕೋಮು ಭಾವನೆ ಕೆರಳಿಸುವ ಪ್ರಚೋದನಾಕಾರಿ ಭಾಷಣ ಮಾಡಿದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಚುನಾವಣಾ ಆಯೋಗ ಛೀಮಾರಿ ಹಾಕಿದ್ದು, ಇನ್ನು ಮುಂದೆ ಹೀಗೆ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿದೆ.

ಶಿವಮೊಗ್ಗ ನಗರದಿಂದ ವಿಧಾನಸಭೆಗೆ ಸ್ಪರ್ಧಿಸಿರುವ ಈಶ್ವರಪ್ಪ ಏಪ್ರಿಲ್ 9ರಂದು `ಅಲ್ಪಸಂಖ್ಯಾತ ಸಮುದಾಯದ ಯುವಕರು 68 ಯುವತಿಯರನ್ನು ಅಪಹರಿಸಿದ್ದಾರೆ. ಉದ್ಯೋಗ ಮತ್ತಿತರ ಆಮಿಷವೊಡ್ಡಿ ಅವರನ್ನು ಎಳೆದೊಯ್ದು 6 ತಿಂಗಳು, ವರ್ಷದ ಬಳಿಕ ಬೀದಿಗೆ ಬಿಸಾಡಿದ್ದಾರೆ' ಎಂದು ಮಾಡಿರುವ ಪ್ರಚೋದನಕಾರಿ ಭಾಷಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಮಂಗಳವಾರ ಛೀಮಾರಿ ಹಾಕಿತು.

`ಸಮಾಜದ ಶಾಂತಿ ಹಾಗೂ ಸಾಮರಸ್ಯ ಕದಡುವ ಉದ್ದೇಶದಿಂದ ಕೂಡಿರುವ ಭಾಷಣ ಮಾದರಿ ನೀತಿ ಸಂಹಿತೆ, ಪ್ರಜಾಪ್ರತಿನಿಧಿ ಕಾಯ್ದೆ- 1951 ಮತ್ತು ಭಾರತ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳ ಉಲ್ಲಂಘನೆ ಆಗಿದೆ. ಇನ್ನು ಮುಂದೆ ಈ ರೀತಿ ನಡೆದುಕೊಳ್ಳಬಾರದು ಎಂದು  ರಾಜ್ಯ ಬಿಜೆಪಿ  ಮಾಜಿ ಅಧ್ಯ ಕ್ಷರೂ ಆಗಿರುವ  ಈಶ್ವರಪ್ಪ ಅವ ರನ್ನು ಆಯೋಗ ಎಚ್ಚರಿಸಿದೆ.

ಈಶ್ವರಪ್ಪನವರ ಪ್ರಚೋದನಕಾರಿ ಭಾಷಣ ಕುರಿತು ಚುನಾವಣಾ ಆಯೋಗಕ್ಕೆ ದೂರು ಬಂದಿತ್ತು. ದೂರಿನ ಜತೆ ಭಾಷಣದ ಸಿಡಿ ಲಭ್ಯವಾಗಿತ್ತು. ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಆಯೋಗ ಉಪ ಮುಖ್ಯಮಂತ್ರಿಗೆ ಸೂಚಿಸಿತ್ತು. ಏ.13ರೊಳಗೆ ಉತ್ತರಿಸಲು ಸಮಯಾವಕಾಶ ನೀಡಲಾಗಿತ್ತು. ಆದರೆ, ಈಶ್ವರಪ್ಪ ಅವರ ಮನವಿ ಹಿನ್ನೆಲೆಯಲ್ಲಿ ಎರಡು ಸಲ ಗಡುವು ವಿಸ್ತರಿಸಿ, ಏಪ್ರಿಲ್ 22ರವರೆಗೆ ಕಾಲಾವಕಾಶ ನೀಡಲಾಗಿತ್ತು.

ಈಶ್ವರಪ್ಪ ನೀಡಿರುವ ಉತ್ತರವನ್ನು ಪರಿಶೀಲಿಸಿದ ಬಳಿಕ ಚುನಾವಣಾ ಆಯೋಗ ಅವರಿಗೆ ಛೀಮಾರಿ ಹಾಕಿ ಎಚ್ಚರಿಕೆ ನೀಡಿದೆ. `ಪ್ರಚೋದನಾಕಾರಿ ಭಾಷಣ ಮಾಡಿರುವುದನ್ನು ನೀವು ನಿರಾಕರಿಸಿಲ್ಲ. ಆದರೆ, ಭಾಷಣ ಮಾಡಿದ ಏಪ್ರಿಲ್ 9ರಂದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರಲಿಲ್ಲ. ನೀತಿ ಸಂಹಿತೆ ಏಪ್ರಿಲ್ 10ರಂದು ಚುನಾವಣೆ ಅಧಿಸೂಚನೆ ಪ್ರಕಟಣೆ ಬಳಿಕ ಜಾರಿಗೆ ಬಂದಿದೆ ಎಂದಿದ್ದೀರಿ. ಇದಕ್ಕೆ ಪೂರಕವಾಗಿ ಕರ್ನಾಟಕ ಹೈಕೋರ್ಟ್ 2011ರ ಮಾರ್ಚ್ 22ರಂದು ಪ್ರಕರಣವೊಂದರ ಸಂಬಂಧದಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದೀರಿ'.

ಆದರೆ, ಕರ್ನಾಟಕ ಹೈಕೋರ್ಟ್ ಚುನಾವಣೆಯೊಂದಕ್ಕೆ ಸಂಬಂಧಿಸಿದ ವಿವಾದದಲ್ಲಿ ಸುಪ್ರೀಂ ಕೋರ್ಟ್ 2001ರ ಏಪ್ರಿಲ್ 26ರಂದು ನೀಡಿದ ತೀರ್ಪನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪಿನಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟವಾದ ದಿನದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಅದರಂತೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಮಾರ್ಚ್ 20ರಂದೇ ಜಾರಿಗೆ ಬಂದಿದೆ ವಿನಾ ಚುನಾವಣೆ ಅಧಿಸೂಚನೆ ಪ್ರಕಟವಾದ ದಿನದಿಂದಲ್ಲ ಎಂದು ಚುನಾವಣಾ ಆಯೋಗ ಮನವರಿಕೆ ಮಾಡಿಕೊಟ್ಟಿದೆ.

`ನಿಮ್ಮ ಭಾಷಣ ಸಮಾಜದ ವಿವಿಧ ವರ್ಗಗಳ ಜನರಲ್ಲಿ ದ್ವೇಷ ಹಾಗೂ ಮತೀಯ ಭಾವನೆ ಬೆಳೆಸುತ್ತದೆ. ಇದು ಚುನಾವಣೆ ನೀತಿಸಂಹಿತೆಗೆ ವಿರುದ್ಧವಾಗಿದೆ. ಇನ್ನು ಮುಂದೆ ಹೀಗೆ ನಡೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಲಾಗುತ್ತಿದೆ' ಎಂದು ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT