ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಮಂಗಲ-ಬದಿನಾರು ರಸ್ತೆ ಸಂಚಾರ ಬಂದ್!

Last Updated 6 ಜೂನ್ 2011, 9:40 IST
ಅಕ್ಷರ ಗಾತ್ರ

ಪುತ್ತೂರು : ಇಲ್ಲಿ ಸೇತುವೆ ನಿರ್ಮಿಸುವ ನೆಪದಲ್ಲಿ ಇದ್ದ ಮೋರಿಯೊಂದನ್ನು ಅಗೆದು ತೆಗೆಯಲಾಗಿದೆ. ಮೂರು ತಿಂಗಳ ಹಿಂದೆಯೇ ಮೋರಿ ತೆರವು ಕೆಲಸ ನಡೆದಿದ್ದರೂ ಎರಡು ವಾರದ ಹಿಂದೆಯಷ್ಟೇ ಸೇತುವೆ ಕಾಮಗಾರಿ ಆರಂಭಿಸಲಾಗಿದೆ.  ಇದೀಗ ಮಳೆಗಾಲ ಆರಂಭಗೊಂಡ ಕಾರಣ ಜನತೆ ಮೋರಿಯೂ ಇಲ್ಲದೆ, ಸೇತುವೆಯೂ ಆಗದೆ  ಪರದಾಡುವ ಸ್ಥಿತಿ ಬಂದಿದೆ...

ಇದು ತಾಲ್ಲೂಕಿನ  ಈಶ್ವರಮಂಗಲ ಸಮೀಪದ ಗ್ರಾಮೀಣ ಪ್ರದೇಶದ  ಜನತೆಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆ. ಆ ಭಾಗದ ಜನತೆ ಬಹಳಷ್ಟು ತೊಂದರೆಗೊಳಗಾಗುವ ಪ್ರಮೇಯ ಎದುರಾಗ್ದ್ದಿದ ರೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಇನ್ನೂ ಸಮಸ್ಯೆ ಏನೆಂಬುದೇ ಅರ್ಥವಾಗಿಲ್ಲ. ಬಡ ಜನತೆಯ ಸಮಸ್ಯೆಗಳ ಕುರಿತು ಕಡೆಗಣನೆ ನೀತಿ ಅನುಸರಿಸುತ್ತಿರುವ  ಅಧಿಕಾರಿಗಳ  ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಇದು ಸಾರಿ ಹೇಳುತ್ತಿದೆ. 

 ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ  ಎಂಬುದು ಕೇವಲ ಜನಪ್ರತಿನಿಧಿಗಳ ಬೊಗಳೆ ಮಾತು. ಕಳೆದ 10 ವರ್ಷದ ಹಿಂದೆ  ಆರಂಭಗೊಂಡಿದ್ದ ಈಶ್ವರಮಂಗಲ-ಬದಿನಾರು ರಸ್ತೆ  ಇನ್ನೂ ಅಭಿವೃದ್ಧಿ ಕಾಣದೆ ಅಪೂರ್ಣ ಸ್ಥಿತಿಯಲ್ಲಿರುವುದೇ ಇದಕ್ಕೊಂದು ಉದಾಹರಣೆ.  
 
ಈಶ್ವರಮಂಗಲದಿಂದ ಪಡುವನ್ನೂರು ಗ್ರಾಮವಾಗಿ ಬಡಗನ್ನೂರು ಗ್ರಾಮದ ಮೈಂದನಡ್ಕಕ್ಕೆ ನೇರ ಸಂಪರ್ಕ ಕಲ್ಪಿಸುವ ಈಶ್ವರಮಂಗಲ ಬದಿನಾರು ಜಿಲ್ಲಾ ಪಂಚಾಯಿತಿ  ರಸ್ತೆ ಈ ಭಾಗದ ಅತ್ಯಗತ್ಯ ಸಂಪರ್ಕ ರಸ್ತೆ.  ಮುಳಿಪಡ್ಪು ಎಂಬಲ್ಲಿ ಈ ರಸ್ತೆಯ ಹಳ್ಳಕ್ಕೆ ರೂ.11 ಲಕ್ಷ ವೆಚ್ಚದಲ್ಲಿ  ಸೇತುವೆ ನಿರ್ಮಿಸುವ ಕಾಮಗಾರಿ  ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಆರಂಭಗೊಂಡಿತ್ತು.

ಮುಳಿಪಡ್ಪುವಿನ ಇಳಿಜಾರು ಪ್ರದೇಶದಲ್ಲಿ  ಈ ರಸ್ತೆಯ ತೋಡಿಗೆ ಈ ಹಿಂದೆ ಅಳವಡಿಸಲಾಗಿದ್ದ ಮೋರಿಯನ್ನು ಕಾಮಗಾರಿ ಹೆಸರಿನಲ್ಲಿ ಮೂರು ತಿಂಗಳ ಹಿಂದೆಯೇ  ತೆರವುಗೊಳಿಸಲಾಗಿತ್ತು. ಆದರೆ ಸೇತುವೆ ಕಾಮಗಾರಿ ಆರಂಭಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗಿದ್ದು, ಇದರಿಂದಾಗಿ ಇದೀಗ  ಸಮಸ್ಯೆ ಉದ್ಭವಿಸಿದೆ. 
 
ಪ್ರಯಾಣಿಕರ ಹಿಡಿಶಾಪ: ಇದೀಗ ಮಂಗಾರು ಮಳೆ ಆರಂಭಗೊಂಡಿದೆ. ಇದಕ್ಕೆ ಎರಡು ವಾರದ ಹಿಂದೆಯಷ್ಟೇ ಸೇತುವೆ ಕಾಮಗಾರಿ ಆರಂಭಿಸಲಾಗಿದ್ದು, ಅಡಿಪಾಯ ಹಾಕಿ ಪಿಲ್ಲರ್ ಅಳವಡಿಸುವ  ಕೆಲಸವಾಗಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಈಗ ಜನತೆ ತೋಡು ದಾಟುವಂತಿಲ್ಲ.

ಶಾಲೆಗೆ ಹೋಗುವ ಮಕ್ಕಳು ಸೇರಿದಂತೆ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ನೂರಾರು ಮಂದಿ  ಪ್ರಯಾಣಿಕರು ಹಾಗೂ ವಾಹನ ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಸಮಸ್ಯೆಗೆ ಕಾರಣರಾದವರಿಗೆ ಅವರು ಹಿಡಿ ಶಾಪ ಹಾಕುತ್ತಿದ್ದಾರೆ.

ಇದೇ ರಸ್ತೆಯನ್ನು ಈಶ್ವರಮಂಗಲ ಕಡೆಯಲ್ಲಿ ಆಂಜನೇಯ ಕ್ಷೇತ್ರ ವ್ಯಾಪ್ತಿಯಲ್ಲಿ ಡಾಂಬರೀಕರಣಗೊಳಿಸುವಲ್ಲಿ ಆಸಕ್ತಿ ವಹಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಡ ಜನತೆಯ ಸಮಸ್ಯೆಯ ಕೂಗಿಗೆ ಸ್ಪಂದನ ನೀಡಿಲ್ಲ. ಸೇತುವೆ ಕಾಮಗಾರಿಯನ್ನು ಬಿಟ್ಟು ಆ ಕೆಲಸದಲ್ಲಿ ಮುತುವರ್ಜಿ ವಹಿಸಿದ್ದಾರೆ.
 
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಡವರಿಗೊಂದು ಮತ್ತು ಶ್ರೀಮಂತರಿಗೊಂದು ನೀತಿ ಅನುಸರಿಸುತ್ತಿದ್ದಾರೆ, ಅವರುಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ನಮಗೆ ಸಮಸ್ಯೆಗಳಾಗಿವೆ ಎಂಬುದು ಆ ಭಾಗದ ಜನತೆಯ ಆರೋಪ.

ಮುಂದೆ ಮಳೆಗಾಲದಲ್ಲಿ ತೋಡು ತುಂಬಿ ಹರಿಯುತ್ತದೆ. ತೋಡು ದಾಟಲು ಪರ್ಯಾಯ ವ್ಯವಸ್ಥೆಯಿಲ್ಲ. ಅನಾರೋಗ್ಯ, ಆಪತ್ತು ಸಂಭವಿಸಿದರಂತೂ ಒಂದು ಕಿಲೋ ಮೀಟರ್ ಬದಲಿಗೆ 11ಕಿಮೀ ವ್ಯಯಿಸಿ ಈಶ್ವರಮಂಗಲಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂಬುದು ಆ ಭಾಗದ ಜನತೆಯ ಅಳಲು.

ಮಳೆಗಾಲ ಆರಂಭವಾಗುವುದರೊಂದಿಗೆ ಜನತೆಗೆ ಸಮಸ್ಯೆಯ ಅರಿವಾಗಿದೆ. ಅಷ್ಟರ ತನಕ ಸುಮ್ಮನಿದ್ದ ಜನತೆ ಇದೀಗ ರೊಚ್ಚಿಗೆದ್ದಿದ್ದು, ಸಂಬಂಧಪಟ್ಟ ಕಾಮಗಾರಿ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ದ  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 
ಈ ಸೇತುವೆಯ ಸಮೀಪದಲ್ಲೇ ಮೋರಿಯೊಂದನ್ನು ನಿರ್ಮಿಸಲಾಗಿದ್ದು, ನೀರು ತೋಡಿಗೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಮಳೆನೀರು ಸ್ಥಳೀಯರೊಬ್ಬರ ತೋಟಕ್ಕೆ ಹರಿದು ಹೋಗುತ್ತಿದೆ. ಮಳೆಗಾಲದಲ್ಲಂತೂ ತೋಟವೇ ಮುಳುಗಿ ಹೋಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
 
ಒಟ್ಟಿನಲ್ಲಿ ಇಲ್ಲಿ ನಿರ್ಲಕ್ಷ್ಯದ ಕೆಲಸಗಳಿಂದಾಗಿ ಅವ್ಯವಸ್ಥೆಗಳಾಗಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬುದು ಸ್ಪಷ್ಟ. ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ: ಈಶ್ವರಮಂಗಲ ಬದಿನಾರು ರಸ್ತೆಯ ಮುಳಿಪಡ್ಪುವಿನಲ್ಲಿ ರೂ.11 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದ್ದು, ಈಶ್ವರ ಮಂಗಲದ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಾಮಗಾರಿಯಲ್ಲಿ ವಿಳಂಬವಾಗಿದೆ.
 
ಎರಡು ಮೂರು ದಿನಗಳೊಳಗಾಗಿ ಪೈಪ್ ಅಳವಡಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಿ.ಪಂ. ಇಂಜಿನಿಯರ್ ನಾರಾಯಣ ನಾಯ್ಕ ತಿಳಿಸಿದ್ದಾರೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT