ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಡಬತ್ತಿ ಕೆರೆಗೆ ಕಾರು; ನವ ದಂಪತಿ ಪಾರು

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿಗೆ ಸಮೀಪದ ಉಂಡಬತ್ತಿ ಕೆರೆಗೆ ಟೆಂಪೊ ಮುಳುಗಿ 31 ಮಂದಿ ಸಾವಿಗೀಡಾದ  ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಸಚಿವ ಗೋವಿಂದ ಕಾರಜೋಳ ಅವರ ಸಹೋದರನ  ಮಗ ಮತ್ತು ಸೊಸೆ ಇದ್ದ ಕಾರು ಇದೇ ಕೆರೆಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ  ಭಾನುವಾರ ಬೆಳಿಗ್ಗೆ ನಡೆದಿದೆ.ಬೆಂಗಳೂರಿನ ಜೆ.ಪಿ.ನಗರದ ನಿವಾಸಿ, ಸಚಿವ ಗೋವಿಂದ ಕಾರಜೋಳ ಅವರ ಸಹೋದರ  ವಿಜಯಕುಮಾರ್ ಕಾರಜೋಳ ಅವರ ಪುತ್ರ ಸೂರ್ಯಕಾಂತ್ ಮತ್ತು ರಂಜನಿ ದುರಂತದಲ್ಲಿ ಪಾರಾದ ದಂಪತಿ.

ಮೂಲತಃ ವಿಜಾಪುರದವರಾದ ಸೂರ್ಯಕಾಂತ್ ಅವರು ರಂಜನಿ ಅವರನ್ನು ಒಂದೂವರೆ ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದರು. ಊಟಿಗೆ ಪ್ರವಾಸಕ್ಕಾಗಿ ಮಾರುತಿ ಎ-ಸ್ಟಾರ್ ಕಾರಿನಲ್ಲಿ ಬೆಳಿಗ್ಗೆ 6.30ರ ಸುಮಾರಿನಲ್ಲಿ ತೆರಳುತ್ತಿದ್ದರು. ಸೂರ್ಯಕಾಂತ್ ಅವರು ನಡೆಸುತ್ತಿದ್ದ ಕಾರು ಒಂದು ಟೆಂಪೊವನ್ನು ಹಿಂದಿಕ್ಕಲು ಹೋಗಿ ನಿಯಂತ್ರಣ ತಪ್ಪಿ ಕೆರೆಗೆ ಬಿತ್ತು. ಕೆರೆಯ ಬದಿಯ ಮರಕ್ಕೆ ಕಾರು ಸಿಲುಕಿತು. ಕಾರಿನ ಬಾಗಿಲುಗಳನ್ನು ತೆರೆದು ಹೊರಬಂದ ದಂಪತಿ ಈಜಿ ದಡ ಸೇರುವಾಗ ಮೀನು ಹಿಡಿಯುತ್ತಿದ್ದ ಮೀನುಗಾರರು ಅವರನ್ನು ದಡಕ್ಕೆ ತಂದು ಬಿಟ್ಟರು. ಬಳಿಕ  ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ತೆರಳಿದ್ದಾರೆ.

ಬೆಳಿಗ್ಗೆ 9.30ಕ್ಕೆ ಕೆಎಸ್‌ಆರ್‌ಟಿಸಿ ಕ್ರೇನ್‌ನ ಸಹಾಯದಿಂದ ಕಾರನ್ನು ಕೆರೆಯಿಂದ ಹೊರಕ್ಕೆ  ತೆಗೆಯಲಾಯಿತು. ಕೆರೆ ಏರಿಗೆ ಈಚೆಗಷ್ಟೆ ತಡೆಕಲ್ಲುಗಳನ್ನು ಹಾಕಲಾಗಿತ್ತು. ಆದರೆ ಕಾರು ಡಿಕ್ಕಿ ಹೊಡೆದ  ರಭಸಕ್ಕೆ ತಡೆಗೋಡೆ ಕಲ್ಲುಗಳು ಕಿತ್ತುಬಂದಿವೆ. ಕೆರೆಗೆ ಸರಿಯಾಗಿ ತಡೆಗೋಡೆ ಹಾಕಬೇಕು ಎಂದು ಹಲವಾರು ಸಂಘಸಂಸ್ಥೆಗಳು ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT