ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಡಬತ್ತಿಕೆರೆಗೆ ಪ್ರತ್ಯೇಕ ರೂ.35 ಲಕ್ಷ ಮಂಜೂರು

Last Updated 9 ಜನವರಿ 2011, 7:35 IST
ಅಕ್ಷರ ಗಾತ್ರ

ಮೈಸೂರು: ಉಂಡಬತ್ತಿಕೆರೆಯಲ್ಲಿ ಟೆಂಪೊ ಮುಳುಗಿ 31 ಮಂದಿ ಬಲಿ ತೆಗೆದುಕೊಂಡ ದುರಂತ   ಅಧಿಕಾರಿಗಳ ಕಣ್ತೆರೆಸಿದ್ದು, ಶೀಘ್ರವೇ ಕೆರೆಗಳಿಗೆ ತಡೆಗೋಡೆ ಮತ್ತು ಡಾಂಬರೀಕರಣ ಮಾಡಲು ಸರ್ಕಾರ ಮುಂದಾಗಿದೆ.

‘ಮೈಸೂರು-ನಂಜನಗೂಡು ರಸ್ತೆಯ ದಳವಾಯಿ ಕೆರೆ, ಮಂಡಕಳ್ಳಿ ಬಳಿಯ ಶೆಟ್ಟಿಕೆರೆ ಹಾಗೂ ತಿ.ನರಸೀಪುರ ರಸ್ತೆಯ ವರುಣಾ ಕೆರೆಗೆ ರೂ.1.6 ಕೋಟಿ ವೆಚ್ಚದಲ್ಲಿ ತಡೆಗೋಡೆ ಗಳನ್ನು ಹಾಕಲು ಸರ್ಕಾರ ನಿರ್ಣಯ ತೆಗೆದು ಕೊಂಡಿದೆ.

ಹಣಕಾಸು ಇಲಾಖೆಗೆ ನಿರ್ಣಯ ವನ್ನು ಸಲ್ಲಿಸಲಾಗಿದೆ. ಈ ಇಲಾಖೆಯು ಒಪ್ಪಿಗೆ ನೀಡುತ್ತಿದ್ದಂತೆಯೇ ಇ-ಟೆಂಡರ್ ಕರೆಯಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಉಂಡಬತ್ತಿಕೆರೆಗೆ ಪ್ರತ್ಯೇಕವಾಗಿ ರೂ.35 ಲಕ್ಷವನ್ನು ಸರ್ಕಾರವನ್ನು ಮಂಜೂರು ಮಾಡಿದೆ. ಜ.12ರ ಒಳಗೆ ಇ-ಟೆಂಡರ್ ಕರೆದು ತಡೆಗೋಡೆ ಹಾಕಲು ಗುತ್ತಿಗೆ ನೀಡಲಾಗುವುದು. ಅಲ್ಲದೆ ಕೆರೆ ಪಕ್ಕದ ರಸ್ತೆಗೆ ಡಾಂಬರೀಕರಣ ಕಾಮಗಾರಿಯನ್ನು ಇದರ ಬೆನ್ನ ಹಿಂದೆಯೇ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಮೈಸೂರು-ನಂಜನಗೂಡು ರಸ್ತೆಯ ಉಂಡಬತ್ತಿಕೆರೆ ಯಲ್ಲಿ ಆದ ದುರಂತವನ್ನು ಮನಗಂಡು ಸರ್ಕಾರ ಹಣ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಾಡು ಮಾಡಲಿದೆ. ರಾಜ್ಯ ಸರ್ಕಾರದ ವತಿಯಿಂದ ಪ್ರಥಮವಾಗಿ ಕೆರೆಗಳಿಗೆ ತಡೆಗೋಡೆ ಮತ್ತು ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಸಿದ್ದು ನೇರ ಹೊಣೆ: ‘ಉಂಡಬತ್ತಿಕೆರೆ ದುರಂತಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ನೇರ ಹೊಣೆ’ ಎಂದು ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಆರೋಪಿಸಿದರು.

‘ಆರು ಬಾರಿ ಶಾಸಕರಾಗುವ ಮೂಲಕ ಈ ಭಾಗವನ್ನು ಪ್ರತಿನಿಧಿಸಿರುವ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ, ಹಣಕಾಸು ಸಚಿವರಾಗಿದ್ದಾಗ ಉಂಡಬತ್ತಿಕೆರೆಗೆ ಖಾಸಗಿ ಬಸ್ ನುಗ್ಗಿ ಸಾವು-ನೋವು ಸಂಭವಿಸಿತ್ತು. ಆದರೆ ಅವರು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ’ ಎಂದು ತಿಳಿಸಿದರು.

‘ದುರಂತದ ಬಗ್ಗೆ ಸರ್ಕಾರವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ ಕೆರೆಗಳಿಗೆ ತಡೆಗೋಡೆ ಹಾಕಲು, ಡಾಂಬರೀಕರಣ ಮಾಡಲು ಬಿಜೆಪಿ ಸರ್ಕಾರದ ಹಣವೇ ಬೇಕಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT