ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ

Last Updated 5 ಜನವರಿ 2011, 10:10 IST
ಅಕ್ಷರ ಗಾತ್ರ

ಕಾರವಾರ:  ಜಿಲ್ಲೆಯ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಾದ್ಯಂತ ಜಯಭೇರಿ ಭಾರಿಸಿದೆ. ಕೆಲವೊಂದು ತಾ.ಪಂ. ಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರಕಿದರೆ ಮತ್ತೆ ಕೆಲವು ಕಡೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಅಂತಹ ಕಡೆಗಳಲ್ಲಿ ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಜಿಲ್ಲೆಯ 128 ತಾಲ್ಲೂಕು ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 55, ಬಿಜೆಪಿ 43, ಜೆಡಿಎಸ್ 15 ಹಾಗೂ ಪಕ್ಷೇತರರು 15 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. 36 ಜಿಲ್ಲಾ ಪಂಚಾಯಿತಿಗಳ ಪೈಕಿ ಕಾಂಗ್ರೆಸ್ 22, ಬಿಜೆಪಿ 9, ಜೆಡಿಎಸ್-1 ಹಾಗೂ ಪಕ್ಷೇತರರು 4 ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಆನಂದ ಅಸ್ನೋಟಿಕರ್  ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಕೇವಲ ಒಂದಕ್ಕೆ ಇಳಿದಿತ್ತು. ಪಕ್ಷದ ಸ್ಥಿತಿ ನೋಡಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದೇ ಭಾವಿಸಿದ್ದರು. ವಿಧಾಸನಭೆ ಉಪ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆಯ ಸೋಲಿನ ನಂತರವಂತೂ ಕಾಂಗ್ರೆಸ್ ಒಳಜಗಳದಲ್ಲೇ ಮುಳಗುತ್ತಿತ್ತು.

ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆರಳೆಣಿಕೆಯ ಸೀಟು ಗಳಿಸಿದರೆ ಅದು ದೊಡ್ಡ ಸಾಧನೆ ಎನ್ನುವಂತಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಫೀನಿಕ್ಸ್‌ನಂತೆ ಮೈಕೊಡವಿಕೊಂಡು ನಿಂತಿದೆ. ಉಳಿದ ಪಕ್ಷದವರು ಅಚ್ಚರಿ ಪಡುವ ರೀತಿಯಲ್ಲಿ ಸಾಧನೆ ಮಾಡಿದೆ.

 ಜಿಲ್ಲಾ ಪಂಚಾಯಿತಿ 36 ಸ್ಥಾನಗಳ ಪೈಕಿ 22 ಹಾಗೂ ತಾಲ್ಲೂಕು ಪಂಚಾಯಿತಿಯ 128 ಸ್ಥಾನಗಳ ಪೈಕಿ 55 ಸ್ಥಾನಗಳನ್ನು ಗೆಲ್ಲುವು ಮೂಲಕ ಆಡಳಿತರೂಢ ಬಿಜೆಪಿಗೆ ಸೆಡ್ಡು ಹೊಡೆದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತವರಿನಲ್ಲಿ ಬಿಜೆಪಿ ದೊಡ್ಡ ಜಯ ಸಾಧಿಸಿರುವುದು ಬಿಟ್ಟರೆ ಉಳಿದ ತಾಲ್ಲೂಕುಗಳಲ್ಲಿ ಬಿಜೆಪಿಗೆ ನಿರಾಸೆ ಆಗಿದೆ. ಭೀಮಣ್ಣ ನಾಯ್ಕ ಜಿಲ್ಲಾ ಕಾಂಗ್ರೆಸ್ ನೇತೃತ್ವ ವಹಿಸಿಕೊಂಡ ನಂತರ ನಡೆದ ಮೊದಲ ಚುನಾವಣೆಯಲ್ಲೇ ಪಕ್ಷಕ್ಕೆ ‘ಭೀಮ’ ಬಲ ಒದಗಿಸಿದ್ದಾರೆ. ಕಳೆದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 19 ಸ್ಥಾನಗಳನ್ನು ಹೊಂದಿದ್ದು ಈಗ ಅ ಬಲವನ್ನು 22ಕ್ಕೇರಿಸಿಕೊಂಡಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಈಗ ಜಿಲ್ಲೆಯ ರಾಜ ಕಾರಣದಲ್ಲಿ ಸಕ್ರೀಯವಾಗಿ ತೊಡ ಗಿಸಿಕೊಂಡಿರುವುದು ಕಾಂಗ್ರೆಸ್‌ಗೆ ಹೆಚ್ಚಿನ ಲಾಭವನ್ನೇ ತಂದುಕೊಟ್ಟಿದೆ. ವಿಧಾನಸಭೆ ಚುನಾವಣೆ, ಪಂಚಾಯಿತಿ ಚುನಾವಣೆಗಳ ಸೋಲಿನಿಂದ ಕಂಗೆಟ್ಟಿದ್ದ ದೇಶಪಾಂಡೆ ಅವರಿಗೆ ಈ ಜಯ ಹೊಸ ಹುಮ್ಮಸ್ಸು ನೀಡಿದೆ.ಹಳಿಯಾಳ ಹಾಗೂ ಮುಂಡಗೋಡ ತಾಲ್ಲೂಕಿನ ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ದೇಶಪಾಂಡೆ ಮಾಡಿರುವ ತಂತ್ರ ಯಶಸ್ಸು ಕಂಡಿದೆ. 

 ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾಗೇರಿ ಕರಾವಳಿ ತಾಲ್ಲೂಕುಗಳ ಬಗ್ಗೆ ಹೊಂದಿರುವ ತಾತ್ಸಾರ ಮನೋಭಾವ, ಜಿಲ್ಲಾ ಕೇಂದ್ರ ಕಾರವಾರದಿಂದ ಕೆಲವು ಕಚೇರಿಗಳನ್ನು ಶಿರಸಿಗೆ ಸ್ಥಳಾಂತರ ಮಾಡಿರುವುದು ಚುನಾವಣೆಯ ಮೇಲೆ ನೇರವಾದ ಪರಿಣಾಮವನ್ನೇ ಬಿರಿರುವುದು ಸ್ಪಷ್ಟವಾಗಿದೆ. 

ಮತ ಎಣಿಕೆ ಕೇಂದ್ರದ ಸುತ್ತ ನಿಷೇದಾಜ್ಞೆ ಮಾಡಿದ್ದರಿಂದ ಅಭ್ಯರ್ಥಿಗಳ ಬೆಂಬಲಿಗರಾಗಲಿ, ಪ್ರಮುಖ ರಾಜಕೀಯ ಪಕ್ಷದ ಕಾರ್ಯಕರ್ತರಾಗಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವುದು ಕಂಡುಬರಲ್ಲಿಲ್ಲ. ವಿಪರೀತ ಸೆಖೆ ಒಂದೆಡೆಯದಾರೆ, ಮತ ಎಣಿಕೆ ಕೇಂದ್ರದಿಂದ ಅಂದಾಜು 300 ಮೀಟರ್ ದೂರದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರಿಂದ ಮತ ಎಣಿಕೆ ಕೇಂದ್ರ ಸುತ್ತ ಜನಸ್ತೋಮ ನೆರೆದಿರುವುದು ಕಂಡುಬರಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT