ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿ ಹರಿದ ಕೃಷ್ಣೆ; ಭೀಮೆ ಇನ್ನೂ ಖಾಲಿ...

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದರೆ, ಜಿಲ್ಲೆಯ ಇನ್ನೊಂದು ಗಡಿಯಲ್ಲಿರುವ ಭೀಮಾ ನದಿ ಸಿಂದಗಿ ತಾಲ್ಲೂಕಿನ ದೇವಣಗಾಂವದಿಂದ ಮುಂಭಾಗದಲ್ಲಿ ಬತ್ತಿ ಬರಿದಾಗಿದೆ. ಇದರಿಂದಾಗಿ ವಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳ 140ಕ್ಕೂ ಹೆಚ್ಚು ಗ್ರಾಮಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

`ಕೃಷ್ಣಾ ನದಿಯ ಪ್ರವಾಹದ ನೀರು ಹರಿದು ಸಮುದ್ರ ಸೇರುತ್ತಿದೆ. ಇಂಡಿ ಶಾಖಾ ನಾಲೆ ಮೂಲಕ ಭೀಮಾ ನದಿಗೆ ನೀರು ಬಿಡಬೇಕು' ಎಂಬ ಬೇಡಿಕೆಯೂ ಆ ಭಾಗದ ರೈತರಿಂದ ಬರುತ್ತಿದೆ.

`ದೇವಣಗಾಂವ ಗ್ರಾಮದ ಹತ್ತಿರ ಸೊನ್ನ ಏತ ನೀರಾವರಿ ಯೋಜನೆಗಾಗಿ ನಿರ್ಮಿಸಿರುವ ಬ್ಯಾರೇಜ್‌ವರೆಗೆ  ನೀರು ಸಂಗ್ರಹವಾಗಿದೆ. ಅಲ್ಲಿಂದ ಮುಂಭಾಗದಲ್ಲಿ ನದಿಯಲ್ಲಿ ನೀರು ಇಲ್ಲ. ನದಿಗೆ ನೀರು ಬಿಡದ ಕಾರಣ ದೇವಣಗಾಂವ, ಕಡ್ಲೇವಾಡ, ಶಂಭೇವಾಡ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ' ಎಂದು ರೈತ ಗುರು ಹಿರೇಮಠ ಆರೋಪಿಸಿದರು.

`ಭೀಮಾ ನದಿಯಲ್ಲಿ ನೀರು ಹರಿಯಬೇಕಾದರೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡಬೇಕು. ಈಗ ಬರುತ್ತಿರುವ ಅಲ್ಪಸ್ವಲ್ಪ ನೀರನ್ನು ಕರ್ನಾಟಕ-ಮಹಾರಾಷ್ಟ್ರ ಸಮಾನಾಂತರ ಗಡಿಯಲ್ಲಿರುವ ಎಲ್ಲ ಎಂಟು ಬ್ಯಾರೇಜ್‌ಗಳಲ್ಲಿ ತುಂಬಿಸಿಕೊಳ್ಳಲಾಗುತ್ತಿದೆ' ಎಂದು ಅಧಿಕಾರಿಗಳೂ ಹೇಳುತ್ತಿದ್ದಾರೆ.

`ದೇವಣಗಾಂವ ಬ್ಯಾರೇಜ್‌ನಲ್ಲಿ ಸದ್ಯ ಒಂಬತ್ತು ಮೀಟರ್ ನೀರಿದ್ದು, ಇನ್ನೊಂದು ಮೀಟರ್ ನೀರು ಸಂಗ್ರಹವಾದ ನಂತರವಷ್ಟೇ ವಿದ್ಯುತ್ ಘಟಕದ ಮೂಲಕ ನದಿಗೆ ನೀರು ಬಿಡಲು ಸಾಧ್ಯ' ಎನ್ನುತ್ತಾರೆ ಅಲ್ಲಿಯ ಜಲ ವಿದ್ಯುತ್ ಘಟಕದ ಅಧಿಕಾರಿ ಬಿ.ಅರ್ಜುನ.

`ಕರ್ನಾಟಕದ 165 ಗ್ರಾಮಗಳು ಭೀಮಾ ನದಿ ನೀರಿನ್ನು ಅವಲಂಬಿಸಿದ್ದು, 140ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ಇಲ್ಲದೆ ತೊಂದರೆಯಾಗಿದೆ. ಇಂಡಿ ಶಾಖಾ ನಾಲೆಯ ನೀರನ್ನು ಅಗರಖೇಡ ಹತ್ತಿರದ ನಾದ ಹಳ್ಳದ ಮೂಲಕ ಭೀಮಾ ನದಿಗೆ ಬಿಡಬೇಕು' ಎಂಬುದು ಭೀಮಾ ನದಿ ನೀರು ರಕ್ಷಣಾ ರೈತ ವರ್ಗ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT