ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಉಕ್ಕಿನ ಮನುಷ್ಯ'ನಿಗೆ ಶ್ವೇತಾ ಸವಾಲು

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಅಹಮದಾಬಾದ್: `ಮಣಿನಗರ' ನರೇಂದ್ರ ಮೋದಿ ಕ್ಷೇತ್ರ. ಮುಖ್ಯಮಂತ್ರಿ ಕ್ಷೇತ್ರ ಎಂದ ಮೇಲೆ ಕೇಳಬೇಕೇ? ಇನ್ನಿಲ್ಲದ ಮಹತ್ವ. ಅಹಮದಾಬಾದಿನ 16 ವಿಧಾನಸಭಾ ಕ್ಷೇತ್ರಗಳಲ್ಲಿ ಸೇರಿರುವ `ಪ್ರತಿಷ್ಠಿತ ಮಣಿನಗರ' ಈಗ  ದೇಶದ ಗಮನ ಸೆಳೆದಿದೆ. ಗುಜರಾತಿನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪತ್ನಿ ಶ್ವೇತಾ ಭಟ್ ಗುಜರಾತಿನ `ಉಕ್ಕಿನ ಮನುಷ್ಯ'ನಿಗೆ ಸವಾಲೆಸೆದು ಸುದ್ದಿ ಮಾಡಿದ್ದಾರೆ.

ಶ್ವೇತಾ ಭಟ್ ವೃತ್ತಿಪರ ರಾಜಕಾರಣಿಯೇನಲ್ಲ. ಕಾನೂನು ಪದವಿ ಪಡೆದು ಮನೆಯಲ್ಲಿರುವ ಮಹಿಳೆ.  ಸಂಜೀವ್ ಭಟ್ `ಗೋದ್ರಾ ಹಿಂಸಾಚಾರಕ್ಕೆ ಪ್ರತಿಕಾರವಾಗಿ ನಡೆದ ನರೋಡ   ಪಟಿಯಾ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ ಅನುಮೋದನೆ ಇತ್ತು' ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದವರು. ಆ ತಪ್ಪಿಗಾಗಿ ಜೈಲಿಗೂ ಹೋದವರು. ಕರ್ತವ್ಯದಿಂದ ಸಸ್ಪೆಂಡ್ ಆದವರು.

ನರೇಂದ್ರ ಮೋದಿ ಸರ್ಕಾರದ ನಡವಳಿಕೆಯೇ ಶ್ವೇತಾ ಭಟ್ ಅವರನ್ನು ರಾಜಕೀಯಕ್ಕೆ ಎಳೆದು ತಂದಿದೆ. ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸುವಂತೆ ಮಾಡಿದೆ. ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿದೆ. ಕೇಶುಭಾಯ್ ಪಟೇಲರ  `ಗುಜರಾತ್ ಪರಿವರ್ತನಾ ಪಕ್ಷ' ಬೆಂಬಲ ಕೊಟ್ಟಿದೆ.

ಕಾಂಗ್ರೆಸ್ ಶ್ವೇತಾ ಅವರನ್ನು ಮುಖ್ಯಮಂತ್ರಿ ವಿರುದ್ಧ ಕಣಕ್ಕಿಳಿಸಿರುವುದು ಬಿಜೆಪಿ ನಾಯಕರ  ಕಣ್ಣು ಕೆಂಪಾಗಿಸಿದೆ. ಶ್ವೇತಾ ಭಟ್ ಯಾರು? ಇವರ ಹಿಂದೆ ಯಾರಿದ್ದಾರೆ? ಸಂಜೀವ್ ಭಟ್ ಅವರನ್ನು ಕಾಂಗ್ರೆಸ್ ಮುಂದಿಟ್ಟುಕೊಂಡು ಮೋದಿ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ಗುಡುಗುತ್ತಿದ್ದಾರೆ.

ಕಾಂಗ್ರೆಸ್ ಶ್ವೇತಾ ಕೈ ಹಿಡಿದಿದೆ. ಕೇಶುಭಾಯ್ ಬೆಂಬಲಕ್ಕೆ ನಿಂತಿದ್ದಾರೆ. ಇಲ್ಲದಿದ್ದರೆ ಸ್ಪರ್ಧೆ ಕಷ್ಟವಾಗುತ್ತಿತ್ತು. ಮೋದಿ ವಿರುದ್ಧ ಸ್ಪರ್ಧೆ ಹುಡುಗಾಟದ ವಿಷಯವಲ್ಲ. ಅದಕ್ಕೆ ತಾಕತ್ತು ಇರಬೇಕು. ಶ್ಚೇತಾ ಧೈರ್ಯ ಮಾಡಿದ್ದಾರೆ. ಅವರೀಗ ಏಕಾಂಗಿಯಲ್ಲ. ಪ್ರಬಲ ರಾಜಕೀಯ ಪಕ್ಷ ಆಸರೆ ನೀಡಿದೆ.

`ನಾನು ರಾಜಕೀಯದ ಬಗ್ಗೆ ಎಂದೂ ಆಲೋಚಿಸಿದವಳಲ್ಲ. ಬಿಜೆಪಿ ಸರ್ಕಾರ ನನ್ನ ಪತಿ ಮತ್ತು ಕುಟುಂಬಕ್ಕೆ ನೀಡಿದ ಕಿರುಕುಳದಿಂದ ಬೇಸತ್ತ ಬಳಿಕ ತಲೆಯೊಳಗೆ ಈ ಆಲೋಚನೆ ಮೊಳಕೆಯೊಡೆದಿದೆ' ಎಂದು ಅವರೇ ಹೇಳಿಕೊಂಡಿದ್ದಾರೆ.

ಶ್ವೇತಾ `ಒಡಿಸ್ಸಿ' ನೃತ್ಯ ಕಲಾವಿದೆ. `ಮೋದಿ ಧರಿಸಿರುವ ಅಭಿವೃದ್ಧಿ ಮುಖವಾಡ ಕಳಚಲು ರಾಜಕಾರಣಕ್ಕೆ ಬಂದಿದ್ದೇನೆ.

ಸತ್ಯವೇನೆಂದು ಜನರಿಗೆ ತಿಳಿಸಬೇಕಾಗಿದೆ. ಆ ಕೆಲಸ ಮಾಡುತ್ತೇನೆ. ಸುಳ್ಳು ಭರವಸೆ ನೀಡಿ ಮೋಸ ಮಾಡುವ ಜಾಯಮಾನ ನನ್ನದಲ್ಲ' ಎಂದು ಮತದಾರರ ಮನವೊಲಿಸುತ್ತಿದ್ದಾರೆ.

ಮಣಿನಗರದಲ್ಲಿ ಇನ್ನೂ ಚುನಾವಣಾ ವಾತಾವರಣ ಸೃಷ್ಟಿಯಾಗಿಲ್ಲ. ಕಾಂಗ್ರೆಸ್ ಪಕ್ಷ ಇನ್ನೂ ಪ್ರಚಾರ ಕಚೇರಿ ತೆರೆದಿಲ್ಲ. ಇದ್ಯಾವುದೂ ಶ್ವೇತಾ ಅವರಿಗೆ ಮುಖ್ಯವಾಗಿಲ್ಲ. ತಮ್ಮ ಪಾಡಿಗೆ ಪ್ರಚಾರ ಆರಂಭಿಸಿದ್ದಾರೆ. `ರೋಡ್ ಶೋ' ನಡೆಸುತ್ತಿದ್ದಾರೆ. ಸಂಜೀವ್ ಭಟ್ ಒಂದೆರಡು ಸಲ ಪತ್ನಿ ಜತೆ ಕಾಣಿಸಿಕೊಂಡಿದ್ದಾರೆ. ಶ್ವೇತಾ ಕುಟುಂಬದ ಉಳಿದ ಸದಸ್ಯರು, ಸ್ನೇಹಿತರು ರಾಜಕೀಯ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ.

ಮೂರನೇ ಚುನಾವಣೆ: ಮಣಿನಗರದಿಂದ ಎರಡು ಸಲ ಆಯ್ಕೆಯಾಗಿರುವ ಮೋದಿಗೆ ಇದು ಮೂರನೇ ಚುನಾವಣೆ. ನಾಮಪತ್ರ ಹಾಕಿ ಹೋದವರು ಕ್ಷೇತ್ರಕ್ಕೆ ಬಂದಿಲ್ಲ. ಮತದಾರರಿಗೆ ಮುಖ್ಯಮಂತ್ರಿ ಹೊಸಬರಲ್ಲ. ಕಾರ್ಯಕರ್ತರ ವೈಯಕ್ತಿಕ ಸಂಪರ್ಕವಿದೆ. ಬರದಿದ್ದರೂ ನಡೆಯುತ್ತದೆ. ನಾವೇ ಪ್ರಚಾರ ಮಾಡುತ್ತಿದ್ದೇವೆ' ಎಂದು ಮಣಿನಗರದ ಬಿಜೆಪಿ ಕಚೇರಿ ಉಸ್ತುವಾರಿ ಹೊತ್ತಿರುವ ಗಿರಿಶ್ ಷಾ ಹೇಳುತ್ತಾರೆ.

`ಪ್ರತಿ ಹಬ್ಬ- ಹರಿದಿನಗಳಲ್ಲೂ ಮೋದಿ ಕ್ಷೇತ್ರಕ್ಕೆ ಬರುತ್ತಾರೆ. ಕಾರ್ಯಕರ್ತರ ಜತೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಈಗಲೂ ಒಂದೆರಡು ಪ್ರಚಾರ ಸಭೆಗಳಿಗೆ ಬರಬಹುದು. ಮುಖ್ಯಮಂತ್ರಿಗೆ ಇದೊಂದೇ ಕ್ಷೇತ್ರವಲ್ಲ. 182 ಕ್ಷೇತ್ರಗಳಲ್ಲೂ ಓಡಾಡಬೇಕು.

ಪ್ರತಿ ಕ್ಷೇತ್ರದ ಪ್ರತಿ ಮತದಾರರನ್ನು ಖುದ್ದಾಗಿ ಭೇಟಿ ಮಾಡಲು ಮೋದಿ ಅವರಿಗೆ ಸಾಧ್ಯವಿಲ್ಲ. 3ಡಿ ತಂತ್ರಜ್ಞಾನ ಬಳಸಿಕೊಂಡು ಪ್ರಚಾರ ಮಾಡುವ ಮೂಲಕ ಎಲ್ಲರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ' ಎಂಬುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ.
2.25ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿರುವ ಮಣಿನಗರದಿಂದ ಮೋದಿ ಹಿಂದಿನ ಚುನಾವಣೆಯಲ್ಲಿ 75 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗ್ದ್ದಿದರು.

ಮಣಿನಗರದ ಬಹುತೇಕ ಮತದಾರರು ಪ್ರಜ್ಞಾವಂತರು. ಮಧ್ಯಮ ವರ್ಗದ ವಿದ್ಯಾವಂತರ ಸಂಖ್ಯೆಯೂ ಹೆಚ್ಚಿದೆ. ವಿಶಾಲ ರಸ್ತೆಗಳ ಬದಿಯಲ್ಲಿ ಅಮೀರರ ಬಂಗಲೆಗಳು, ಮುಗಿಲೆತ್ತರಕ್ಕೆ ನಿಂತ ಅಪಾರ್ಟ್‌ಮೆಂಟ್‌ಗಳ ನಡುವೆ ಗರೀಬರ ಜೋಪಡಿಗಳೂ ಇವೆ; ಆಟೊ , ಸ್ಕೂಟರ್ ನುಸುಳಲಾಗದ ಕಿಷ್ಕಿಂದೆಯಂಥ ರಸ್ತೆಗಳ ಮೇಲೆ ಬಡವರ ಬದುಕು ತೆರೆದುಕೊಳ್ಳುತ್ತದೆ. ಇದರರ್ಥ ಮೋದಿ ಏನು ಕೆಲಸ ಮಾಡಿಲ್ಲವೆಂದಲ್ಲ. ಮಾಡಿರುವ ಕೆಲಸಗಳು ಬಡವರಿಗೆ ಇನ್ನೂ ಮುಟ್ಟಿಲ್ಲ.

ಅರ್ಧಕ್ಕೆ ಓದು ಬಿಟ್ಟಿರುವ ಹಿತೇಂದ್ರ ಹೇಳ್ದ್ದಿದು ಇಷ್ಟು; `ಮೋದಿ ಆಡಳಿತದಲ್ಲಿ ಸಮಸ್ಯೆಗಳು ಕಡಿಮೆ. ಜನ ನೆಮ್ಮದಿಯಾಗಿದ್ದಾರೆ. ಮಧ್ಯರಾತ್ರಿವರೆಗೆ ಮಹಿಳೆಯರು ನಿಶ್ಚಿಂತೆಯಿಂದ ಓಡಾಡುವ ವಾತಾವರಣವಿದೆ. ಅಪರಾಧಗಳು ಕಡಿಮೆ'.

`ಮಣಿನಗರದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಸೇತುವೆ- ರಸ್ತೆಗಳು ಬಂದಿವೆ. ನೀರು, ವಿದ್ಯುತ್ ಸಮಸ್ಯೆ ಇಲ್ಲ. ಆಸ್ತಿ ಬೆಲೆ 10 ವರ್ಷದಲ್ಲಿ 10 ಪಟ್ಟು ಹೆಚ್ಚಿದೆ. ಆದರೆ, ಭ್ರಷ್ಟಾಚಾರ ಕಡಿಮೆ ಆಗಿಲ್ಲ. ಸರ್ಕಾರದ ಇಲಾಖೆಗಳಲ್ಲಿ ಕಾಸು ಕೊಟ್ಟರೆ ಮಾತ್ರ ಕೆಲಸ. ನಮ್ಮ ವ್ಯವಸ್ಥೆಯಲ್ಲೇ ದೋಷವಿದೆ. ಮೋದಿ ಅವರನ್ನು ದೂರುವುದು ಸರಿಯಲ್ಲ. ಸಾವಿರ ಹಜಾರೆಗಳು ಬಂದರೂ ಭ್ರಷ್ಟಾಚಾರ ನಿಯಂತ್ರಣ ಕಷ್ಟ' ಎಂದು ಮಣಿನಗರ `ಮಹೇಶ್ ಸೈಕಲ್ ವರ್ಕ್ಸ್' ಮಾಲೀಕ ನಾರಾಯಣ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾರೆ.

`ಮೂಲತಃ ಮಣಿನಗರ ಬಿಜೆಪಿ ಕ್ಷೇತ್ರ. ಅಲ್ಲದೆ, ಶ್ವೇತಾ ಈ ಕ್ಷೇತ್ರದವರಲ್ಲ. ಹೊರಗಿನಿಂದ ಬಂದಿದ್ದಾರೆ. ಸರ್ಕಾರದಿಂದ ಸಂಜೀವ್ ಭಟ್ ಅವರಿಗೆ ಅನ್ಯಾಯವಾಗಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಅವರು ಮೋದಿ ವಿರುದ್ಧ ಹೋಗಬಾರದಿತ್ತು' ಎಂಬುದು ಅಲ್ಲಿನ ಅನೇಕರ ನಿಲುವು.

`ಗುಜರಾತಿನಲ್ಲಿ ಮೋದಿ ಅವರಿಂದ ಬಿಜೆಪಿ ಇದೆಯೇ ವಿನಾ ಬಿಜೆಪಿಯಿಂದ ಮೋದಿ ಇಲ್ಲ. ಮೋದಿ ಶಕ್ತಿ ಮೇಲೇ ಬಿಜೆಪಿ ನಿಂತಿದೆ. `ಮೋದಿ ಜನಪ್ರಿಯತೆ, ಪ್ರಾಮಾಣಿಕತೆ, ಬದ್ಧತೆ ಬಹುತೇಕ ರಾಜಕಾರಣಿಗಳಲ್ಲಿ ಇಲ್ಲ. ಇದರಿಂದಾಗಿಯೇ ಅವರು ಬಹಳ ಎತ್ತರಕ್ಕೆ ಬೆಳೆದು ನಿಂತಿದ್ದಾರೆ' ಎಂದು ಮಂಡ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲ್ಲದ ವ್ಯಾಪಾರ ನಡೆಸುವ ಮೂಲತಃ ಮಣಿನಗರದ ಕೇತನ್ ಪಟೇಲ್ ವಿಶ್ಲೇಷಣೆ ಮಾಡುತ್ತಾರೆ. `ಮಣಿನಗರದ ಮತದಾರರು ನನ್ನನ್ನು ಆಯ್ಕೆ ಮಾಡುತ್ತಾರೆ. ನಾನು ಯಾರೆಂದು ಕೇಳುವವರಿಗೆ ತಕ್ಕ ಉತ್ತರ ನೀಡಲಿದೆ' ಎಂಬ ನಿರೀಕ್ಷೆ ಶ್ವೇತಾ ಸಂಜೀವ್ ಭಟ್ ಅವರಿಗಿದೆ.

(ಶುಕ್ರವಾರದ ಸಂಚಿಕೆಯಲ್ಲಿ ಭಾಗ  3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT