ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಉಕ್ಕಿನ ಮಹಿಳೆ' ಥ್ಯಾಚರ್ ನಿಧನ

ಬ್ರಿಟನ್ ರಾಜಕೀಯದಲ್ಲಿ ಛಾಪು ಮೂಡಿಸಿದ ಮೊದಲ ಮಹಿಳಾ ಪ್ರಧಾನಿ
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): `ಉಕ್ಕಿನ ಮಹಿಳೆ' ಎಂದೇ ಖ್ಯಾತರಾಗಿದ್ದ ಬ್ರಿಟನ್ನಿನ ಮೊದಲ  ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ (87)   ಸೋಮವಾರ ಪಾರ್ಶ್ವವಾಯುವಿನಿಂದಾಗಿ ನಿಧನರಾದರು.

20ನೇ ಶತಮಾನದ ಜಗತ್ತಿನ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದ  ಮಾರ್ಗರೇಟ್ ಥ್ಯಾಚರ್ ಅವರಿಗೆ ಪುತ್ರ ಮಾರ್ಕ್ ಹಾಗೂ ಪುತ್ರಿ ಕ್ಯಾರೋಲ್ ಥ್ಯಾಚರ್ ಇದ್ದಾರೆ.

ಕಳೆದ ಕ್ರಿಸ್‌ಮಸ್ ಹಬ್ಬಕ್ಕೂ ಮುನ್ನ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಕೋಶದಲ್ಲಿ ಬೆಳೆದಿದ್ದ ದುರ್ಮಾಂಸ ತೆಗೆಸುವುದಕ್ಕಾಗಿ ಅವರು ಶಸ್ತ್ರಕ್ರಿಯೆಗೂ ಒಳಗಾಗಿದ್ದರು. ಅನಾರೋಗ್ಯದ ಕಾರಣ ಇತ್ತೀಚಿನ ದಿನಗಳಲ್ಲಿ ಅವರು  ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಕೆಲವು ಸಮಯ ಮಿದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಅವರು, ತಮ್ಮ ಕೊನೆಯ ದಿನಗಳಲ್ಲಿ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ ಐಷಾರಾಮಿ ರಿಟ್ಜ್ ಹೋಟೆಲ್‌ನಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ.

ಬ್ರಿಟನ್ನಿನ ಘ್ರಾಂಥಮ್‌ನಲ್ಲಿ 1925ರಲ್ಲಿ ಜನಿಸಿದ್ದ ಥ್ಯಾಚರ್ ಅವರ ಮೂಲ ಹೆಸರು ಮಾರ್ಗರೇಟ್ ರಾಬರ್ಟ್ಸ್.

ಕನ್ಸರ್ವೇಟಿವ್ ಪಕ್ಷದ ಥ್ಯಾಚರ್ ಅವರು 1979ರಿಂದ 1990ರವರೆಗೆ ಬ್ರಿಟನ್ನಿನ ಪ್ರಧಾನಿಯಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದರು.

ಸಂತಾಪ: ಮಾರ್ಗರೇಟ್ ಥ್ಯಾಚರ್ ನಿಧನಕ್ಕೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಸಂತಾಪ ಸೂಚಿಸಿದ್ದಾರೆ.

`ಒಬ್ಬ ಶ್ರೇಷ್ಠ ನಾಯಕಿ, ಉತ್ತಮ ಪ್ರಧಾನಿ ಹಾಗೂ ಶ್ರೇಷ್ಠ ಬ್ರಿಟಿಷ್ ಪ್ರಜೆಯನ್ನು ನಾವು ಕಳೆದುಕೊಂಡಿದ್ದೇವೆ' ಎಂದು ಕ್ಯಾಮರಾನ್ ಹೇಳಿದ್ದಾರೆ.

ಶೋಕಿಸಿದ ರಾಣಿ:  ಮಾರ್ಗರೇಟ್ ಥ್ಯಾಚರ್ ನಿಧನಕ್ಕೆ ಬ್ರಿಟನ್ ರಾಣಿ ಎಲಿಜಬೆತ್ ಶೋಕ ವ್ಯಕ್ತಪಡಿಸಿದ್ದಾರೆ.

  `ನಿಧನ ವಾರ್ತೆಯಿಂದ ರಾಣಿ ಅವರು ದುಃಖಿತರಾಗಿದ್ದಾರೆ. ಥ್ಯಾಚರ್ ಕುಟುಂಬಕ್ಕೆ ಸಾಂತ್ವನ ಹೇಳಿ ರಾಣಿ ಅವರು ಖಾಸಗಿ ಸಂದೇಶ ರವಾನಿಸಲಿದ್ದಾರೆ' ಎಂದು ಬಕಿಂಗ್‌ಹ್ಯಾಮ್ ಅರಮನೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT