ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಹೆಡ್ಲಿ, ಪತ್ನಿಯಿಂದ ಸಾಕ್ಷ್ಯ ಸಂಗ್ರಹದ ಗುರಿ

Last Updated 13 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈವರೆಗೂ ಭಾರತೀಯ ತನಿಖಾಧಿಕಾರಿಗಳಿಗೆ ಭೇಟಿಯ ಅವಕಾಶ ನೀಡದೆ ಹೊರಗಿಟ್ಟಿರುವ ಲಷ್ಕರ್-ಎ-ತೊಯ್ಬಾ ಉಗ್ರ ಡೇವಿಡ್ ಹೆಡ್ಲಿ ಮತ್ತು ಆತನ ಪತ್ನಿಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ಅಮೆರಿಕಕ್ಕೆ ತನಿಖಾ ಸಮಿತಿಯೊಂದನ್ನು ಕಳುಹಿಸುವ ನಿಟ್ಟಿನಲ್ಲಿ ಭಾರತ ಚಿಂತಿಸುತ್ತಿದೆ.

ಮುಂಬೈ ದಾಳಿಗೂ ಮುನ್ನ, ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಆರೋಪ ಹೊತ್ತಿರುವ ಪಾಕಿಸ್ತಾನಿ ಮೂಲದ ಈ ಉಗ್ರನ ವಿರುದ್ಧ ಶೀಘ್ರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಕಾರ್ಯಕ್ರಮ ರೂಪಿಸುತ್ತಿದೆ.

‘ಹೆಡ್ಲಿ, ಆತನ ಪತ್ನಿ ಹಾಗೂ ಇತರರಿಂದ ದಾಳಿಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಅಮೆರಿಕಕ್ಕೆ ಆದಷ್ಟು ಬೇಗ ತನಿಖಾ ಸಮಿತಿಯನ್ನು ಕಳುಹಿಸುವ ಬಗ್ಗೆ ಆ ದೇಶದ ಆಡಳಿತಗಾರರೊಂದಿಗೆ ಸಮಾಲೋಚನೆ ನಡೆಸಬೇಕಿದೆ’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಗೋಪಾಲ್ ಕೆ. ಪಿಳ್ಳೈ ಭಾನುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

‘ವಾಸ್ತವಿಕ ನೆಲೆಯಲ್ಲಿ ನಾವು ಸಂಪೂರ್ಣ ಸಾಕ್ಷ್ಯಗಳನ್ನು ಪಡೆಯಬೇಕಿದೆ. ಅವರನ್ನು ಭಾರತಕ್ಕೆ ಕರೆಸಿಕೊಂಡು ತನಿಖೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಹೆಡ್ಲಿ ಪತ್ನಿಯ ತನಿಖೆ ಅಮೆರಿಕ ಸರ್ಕಾರಕ್ಕೇ ಸಾಧ್ಯವಾಗಿಲ್ಲ. ನಮಗೆ ಈತನಕವೂ ಅವರ ಹಸ್ತಾಂತರದ ಬಗ್ಗೆ ಅಮೆರಿಕದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು  ಹೇಳಿದರು.

‘ಒಮ್ಮೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ಮೇಲೆ ಅದರ ಅನುಮತಿ ಪಡೆದು ಪ್ರತ್ಯೇಕ ಸಾಕ್ಷ್ಯ ಸಂಗ್ರಹಕ್ಕಾಗಿ ಅಮೆರಿಕ ಮತ್ತು ಪಾಕಿಸ್ತಾನಕ್ಕೆ ತನಿಖಾ ಆಯೋಗಗಳನ್ನು ಕಳುಹಿಸಲಾಗುವುದು. ಮುಂಬೈ ದಾಳಿಕೋರರು ಮತ್ತು ಹೆಡ್ಲಿಗೆ ನಿರ್ದೇಶನ ನೀಡಿದ ಎಲ್ಲ ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಮುಂಬೈ ದಾಳಿಯಲ್ಲಿ ಮೃತಪಟ್ಟ ಇಬ್ಬರು ಅಮೆರಿಕನ್ನರ ಬಂಧುಗಳು ಸಲ್ಲಿಸಿದ ಅರ್ಜಿಯ ಮೇರೆಗೆ ಅಮೆರಿಕದ ಬ್ರೂಕ್‌ಲಿನ್ ನ್ಯಾಯಾಲಯವು ದಾಳಿಯ ರೂವಾರಿಗಳಾದ ಐಎಸ್‌ಐ ಮುಖ್ಯಸ್ಥ ಮೇಜರ್ ಜನರಲ್ ಅಹಮದ್ ಶುಜಾ ಪಾಶಾ ಸೇರಿ ಹಿರಿಯ ಅಧಿಕಾರಿಗಳು ಹಾಗೂ ಲಷ್ಕರ್-ಎ-ತೊಯ್ಬಾ ನಾಯಕರಾದ ಹಫೀಜ್ ಸಯೀದ್ ಮತ್ತು ಜಾಕಿಯುರ್ ರೆಹಮಾನ್ ಲಖ್ವಿ ವಿರುದ್ಧ ಸಮನ್ಸ್ ಜಾರಿಗೊಳಿಸಿರುವುದನ್ನು ಅವರು ಸ್ಮರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT