ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಕಾರಸ್ಥಾನವಾದ ಮುತ್ತಿನ ನಗರ

ಐಎಸ್‌ಐ ನಿರ್ದೇಶನ: 1990ರಿಂದ ವಿಧ್ವಂಸಕ ಕೃತ್ಯ
Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್: ಮುತ್ತುಗಳ ಜತೆಗೆ ಇತ್ತೀಚಿನ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ  ಹೈದರಾಬಾದ್ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆದದ್ದು ಒಂದೆಡೆಯಾದರೆ, ಭಯೋತ್ಪಾದನೆಯ ಪಾಶವೀ ಕೃತ್ಯಗಳು ಸಾಲು ಸಾಲಾಗಿ ನಡೆಯುತ್ತಿರುವುದು ಈ ಐತಿಹಾಸಿಕ ನಗರದ ಮತ್ತೊಂದು ಮುಖ.

1990ರಿಂದ ಈ ತನಕ ಹೈದರಾಬಾದ್ ಒಳಗೊಂಡಂತೆ ಆಂಧ್ರಪ್ರದೇಶದ ವಿವಿಧೆಡೆ ನಡೆದ ಉಗ್ರರ ಅಟ್ಟಹಾಸದ ದುಷ್ಕೃತ್ಯಗಳ ಒಂದು ಅವಲೋಕನ ಇಲ್ಲಿದೆ.

ಹೈದರಾಬಾದ್ ಭಯೋತ್ಪಾದನಾ ಕೃತ್ಯಗಳಿಗೆ ಬೆಂಗಾವಲಾಗಿ ನಿಂತದ್ದು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ. ಅಮಾಯಕ ಬಡ ಮುಸ್ಲಿಂ ಯುವಕರ ಮನವೊಲಿಸುವ ಐಎಸ್‌ಐ ಅವರನ್ನು ತನ್ನ ದೇಶದಲ್ಲಿ ತರಬೇತಿ ನೀಡಿ ಕಳುಹಿಸಿರುವುದು ಹತ್ತಾರು ಪ್ರಕರಣಗಳಲ್ಲಿ ಈಗಾಗಲೇ ಸಾಬೀತಾಗಿದೆ. ಭಾರತದಲ್ಲಿ ಐಎಸ್‌ಐ ಜಾಲಗಳನ್ನು ಭದ್ರಪಡಿಸಿದ್ದು, ಮುಖ್ಯವಾಗಿ ಆಂಧ್ರಪ್ರದೇಶದಲ್ಲಿ ಅದರಲ್ಲೂ ನಿಜಾಮರ ನಗರ ಹೈದರಾಬಾದ್‌ನಲ್ಲಿ.

ಪಾಕ್ ಒಳಗೊಂಡಂತೆ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರರ ಹಲವು ಸಂಘಟನೆಗಳು ಆಂಧ್ರಪ್ರದೇಶದೊಂದಿಗೆ ನೇರ ಸಂಪರ್ಕ ಹೊಂದಿರುವುದನ್ನು ಸಿಬಿಐ ಯಶಸ್ವಿಯಾಗಿ ಪತ್ತೆಹಚ್ಚಿದೆ.

ಸ್ಫೋಟದಂತಹ ಕಾರ್ಯಾಚರಣೆ ಯಶಸ್ವಿಯಾಗಲು ಮೊದಲು ತಮ್ಮ ಸೆಳೆತಕ್ಕೆ ಸಿಕ್ಕ ಯುವಕರಿಗೆ ತರಬೇತಿ ನೀಡುವುದಕ್ಕೆ ಇಂತಹ ಸಂಘಟನೆಗಳು ಆದ್ಯತೆ ನೀಡುತ್ತವೆ. ತರಬೇತಿ ಶಿಬಿರಗಳನ್ನು ಸುರಕ್ಷಿತವಾಗಿ ನಡೆಸುವಂತಾಗಲು ಉಗ್ರರ ಸಂಘಟನೆಗಳು ಆಯ್ದುಕೊಂಡದ್ದು ಹೈದರಾಬಾದ್ ನಗರ ಎಂಬುದು ಗಮನಾರ್ಹ.

ವಿಧ್ವಂಸಕ ಕೃತ್ಯಗಳ ತರಬೇತಿ ಕೊಡಿಸಲು ಹೈದರಾಬಾದ್‌ನಿಂದ ಯುವಕರನ್ನು ಬಾಂಗ್ಲಾದೇಶದ ಮೂಲಕ ಪಾಕ್‌ಗೆ ಕಳುಹಿಸುವ ಮತ್ತೆ ಅವರನ್ನು ನೇಪಾಳ ಮೂಲಕ ಹೈದರಾಬಾದ್‌ಗೆ ಕರೆತರುವ ಕಾರ್ಯವನ್ನು 1990ರ ಆರಂಭದಲ್ಲಿ ಪತ್ತೆ ಮಾಡಲಾಗಿತ್ತು.  ಲಷ್ಕರ್- ಎ- ತೈಯಬಾ, ಹಿಜಬುಲ್, ಇಕ್ವಾನ್ ಉಲ್ ಮುಸ್ಲಿಮಿನ್ (ಐಯುಎಂ), ಸಿಮಿ ಜತೆ ಸಂಪರ್ಕ ಇಟ್ಟುಕೊಂಡ ಸುಮಾರು 170 ಜನರನ್ನು ಬಂಧಿಸಲಾಗಿತ್ತು. ಬಂಧಿತ ಈ ಎಲ್ಲರೂ ಆಂಧ್ರದ ವಿವಿಧ ಭಾಗಗಳಿಂದ ತಮ್ಮ ಕಾರ್ಯಾಚರಣೆ ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂತು ಎಂದು ನಿವೃತ್ತ ಸಿಬಿಐ ಅಧಿಕಾರಿಯೊಬ್ಬರು ವಿವರಿಸಿದರು.

ಈ ಘಟನೆಯ ನಂತರ ವಿಶ್ವದ 14 ಪ್ರಮುಖ ಉಗ್ರರ ಸಂಘಟನೆಗಳು ತಮ್ಮ ಕಾರ್ಯಾಚರಣೆಗೆ ಹೈದರಾಬಾದ್ ನಗರವನ್ನು ಕಾರಸ್ಥಾನವನ್ನಾಗಿ ಬಳಕೆ ಮಾಡಿಕೊಳ್ಳುತ್ತಿರುವ ಸುದ್ದಿ ಎಲ್ಲರನ್ನು ಬೆಚ್ಚಿಬಿಳಿಸಿತು. ಪಾಕ್‌ನಲ್ಲಿ ತರಬೇತಿ ಪಡೆದ ಹಿಜಬುಲ್ ಮುಜಾಹಿದ್ದೀನ್ ತನ್ನ ಕಾರ್ಯಾಚರಣೆಗೆ ಇದೇ ನಗರವನ್ನು ಆಯ್ಕೆ ಮಾಡಿಕೊಂಡಿರುವ ಅಂಶ 1992ರಲ್ಲಿ ನಡೆದ ಎನ್‌ಕೌಂಟರ್ ಸಂದರ್ಭದಲ್ಲಿ ಬಯಲಾಯಿತು. ಘಟನೆಯಲ್ಲಿ ಹೆಚ್ಚುವರಿ ಎಸ್ಪಿ ಕೃಷ್ಣಪ್ರಸಾದ್ ಹಾಗೂ ಅವರ ಗನ್‌ಮೆನ್ ಬಲಿಯಾಗಿದ್ದರು. ಇದಾದ ಮರು ವರ್ಷವೇ ನಗರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿದ್ದ ಐಯುಎಂನ ಇಬ್ಬರು ಉಗ್ರರನ್ನು ಬಂಧಿಸಲಾಯಿತು.

1994ರಲ್ಲಿ ಅಲ್ ಜಿಹಾದ್‌ಗೆ ಸೇರಿದ ಬಿಲಾಲ್ ಅಹ್ಮದ್ ಗುರು ಎಂಬಾತನನ್ನು ಬಂಧಿಸಲಾಯಿತು. ಇದೇ ವರ್ಷ ಮುಸ್ಲಿಂ ಮುಜಾಹಿದ್ದೀನ್ ಸಂಘಟನೆಯ ಇಬ್ಬರನ್ನು ಬಂಧಿಸಿ ಅವರಿಂದ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿ ವಶಪಡಿಸಿಕೊಳ್ಳಲಾಗಿತ್ತು. 1999ರ ನವರಾತ್ರಿ, ಗಣೇಶ ಉತ್ಸವಗಳ ಸಂದರ್ಭದಲ್ಲಿ ಸರಣಿ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದ ಲಷ್ಕರ್- ಎ- ತೈಯಬಾ ಉಗ್ರರರನ್ನು ಬಂಧಿಸಿ ಅವರಿಂದ ಮೂರು ಕೆಜಿ ಆರ್‌ಡಿಎಕ್ಸ್ ಸ್ಫೋಟಕ ವಶಕ್ಕೆ ಪಡೆಯಲಾಗಿತ್ತು.

ಐಎಸ್‌ಐ ನಿರ್ದೇಶನದಡಿ ಉಗ್ರರ ತರಬೇತಿ ಶಿಬಿರ ನಡೆಸಿದ ದೀನದಾರ್ ಅಂಜುಮನ್‌ನ 20 ಭಯೋತ್ಪಾದಕರನ್ನು ಬಂಧಿಸಲಾಗಿದ್ದು, 1999ರ ಸ್ಫೋಟ ಪ್ರಕರಣದಲ್ಲಿ ಇವರ ಕೈವಾಡ ಇರುವುದು ತನಿಖೆಯಿಂದ ತಿಳಿದುಬಂತು. ಕೊಯಮತ್ತೂರು ಬಾಂಬ್ ಸ್ಫೋಟದಲ್ಲಿ ಪಾಲ್ಗೊಂಡ ಆರೋಪದಡಿ ಅಲ್ ಉಮ್ಮ ಸಂಘಟನೆಯ ಸದಸ್ಯರನ್ನು ರಾಜಮಂಡ್ರಿ ಹಾಗೂ ಹೈದರಾಬಾದ್‌ನಲ್ಲಿ ಬಂಧಿಸಲಾಯಿತು.

ಹೈದರಾಬಾದ್‌ನಿಂದ 70 ಕಿಮೀ ಆಸುಪಾಸಿನಲ್ಲಿ ಅದರಲ್ಲೂ ವಿಕಾರಾಬಾದ್‌ನ ಅನಂತಗಿರಿ ಬೆಟ್ಟ ಪ್ರದೇಶದಲ್ಲಿ ಪಾಕ್ ಬೆಂಬಲದೊಂದಿಗೆ `ಸಿಮಿ' ಕ್ರಿಯಾಶೀಲವಾಗಿರುವುದು ತನಿಖೆಯಿಂದ ಬಹಿರಂಗವಾಯಿತು. ಹೈದರಾಬಾದ್‌ನ ಹೃದಯಭಾಗದ ಲುಂಬಿಣಿ ಹಾಗೂ ಗೋಕುಲ್ ಚಾಟ್‌ನಲ್ಲಿ ನಡೆದ ಸ್ಫೋಟಗಳಿಗೆ ಇಂಡಿಯನ್ ಮುಜಾಹಿದ್ದೀನ್ ಹೊಣೆ ಹೊತ್ತುಕೊಂಡಿತು.

ಇದೀಗ ಸ್ಫೋಟ ಸಂಭವಿಸಿದ ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಕೆಲ ವರ್ಷಗಳ ಹಿಂದೆ ಶಕ್ತಿಶಾಲಿ ಬಾಂಬ್ ಒಂದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT