ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಔಷಧಿ ನೀತಿ ಬೇಕು

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡ ಭಾರತದಲ್ಲಿ ಆರೋಗ್ಯಕ್ಕೆ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಕೇವಲ ಶೇ 1.5ರಷ್ಟು ಹಣವನ್ನು ಮೀಸಲಿಡಲಾಗುತ್ತಿದೆ. ಪರಿಣಾಮ ಇಂದು ಆರೋಗ್ಯ ಕ್ಷೇತ್ರವು ಖಾಸಗಿಯವರ ಪಾಲಾಗುತ್ತಿದೆ. ಜೀವರಕ್ಷಕ ಔಷಧಿಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ಔಷಧಿಗಳು ಜನಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ.

ಸರ್ಕಾರ ತಾನೇ ಮುಂದೆ ನಿಂತು ನಿರ್ವಹಿಸಬೇಕಾದ ಆರೋಗ್ಯ ಕ್ಷೇತ್ರವನ್ನು ಖಾಸಗಿಯವರಿಗೆ ಬಿಟ್ಟು ಕೊಡಲು ಉತ್ಸುಕವಾಗಿದೆ. ಸರ್ಕಾರೇತರ ಸಂಸ್ಥೆಗಳು, ಮಠಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನು ದತ್ತು ನೀಡುವ ಮೂಲಕ ಖಾಸಗೀಕರಣದತ್ತ ಮೊದಲ ಹೆಜ್ಜೆ ಇಟ್ಟಿದೆ. ಮತ್ತೊಂದೆಡೆ `ಔಷಧಿ ನಿಯಂತ್ರಣ'ವೆಂಬ ಪದವೇ ಹಾಸ್ಯಾಸ್ಪದವೆನಿಸುತ್ತಿದೆ. ಖಾಸಗಿ ಔಷಧಿ ತಯಾರಿಕಾ ಕಂಪೆನಿಗಳು ಹಾಗೂ ವೈದ್ಯರ ಅಪವಿತ್ರ ಮೈತ್ರಿಯಿಂದಾಗಿ ಬಡವರು ಅತಿ ಹೆಚ್ಚಿನ ಬೆಲೆಯನ್ನು ತೆತ್ತು ಔಷಧಿಗಳನ್ನು, ಚುಚ್ಚುಮದ್ದುಗಳನ್ನು ಖರೀದಿಸಬೇಕಾಗಿದೆ. ಆದರೆ ಪಕ್ಕದ ತಮಿಳುನಾಡಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಳೆದ 18 ವರ್ಷಗಳಿಂದ ಯಶಸ್ವಿ ಪ್ರಯೋಗವೊಂದು ನಡೆದಿದೆ. ಸರ್ಕಾರಿ ಆಸ್ಪತ್ರೆಗಳು ಉಚಿತ ಔಷಧಿಗಳನ್ನು ವಿತರಿಸಬೇಕು. ಅದಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನು `ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮ' (ಟಿಎನ್‌ಎಂಎಸ್‌ಸಿ) ಮಾಡಿದೆ. ಇದನ್ನು ಅನುಸರಿಸಿ ರಾಜಸ್ತಾನ, ಕೇರಳ, ಆಂಧ್ರಪ್ರದೇಶ ರಾಜ್ಯಗಳು ಮಾಡಿವೆ. ಟಿಎನ್‌ಎಂಎಸ್‌ಸಿಯ ಮಾದರಿಯನ್ನೇ ಯಥಾವತ್ ನಕಲು ಮಾಡಲು ಮುಂದಾದ ಒಡಿಶಾದಲ್ಲಿ ಇದು ವಿಫಲವಾಯಿತು. ಆ ಮಾತು ಬೇರೆ.

ತಮಿಳುನಾಡಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಚೆನ್ನೈನ ಟಿಎನ್‌ಎಂಎಸ್‌ಸಿ ಕಚೇರಿಯೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ವೈದ್ಯರು ರೋಗಿಗಳಿಗೆ ವಿತರಿಸುವ ಔಷಧಿಯನ್ನು ಅವರು ಕಂಪ್ಯೂಟರ್‌ನಲ್ಲಿ ನಮೂದು ಮಾಡಲೇಬೇಕು. ಔಷಧಿ ಇಲ್ಲವೆಂದು ಖಾಸಗಿಯವರಿಂದ ಖರೀದಿಸಿ ಎಂದು ಹೇಳುವಂತೆಯೇ ಇಲ್ಲ. ನಿಗಮವೇ ಅವರ ಅಗತ್ಯವನ್ನು ತಿಳಿದುಕೊಂಡು ಕೂಡಲೇ ಔಷಧಿ ಖರೀದಿಗೆ ಹಣ ಬಿಡುಗಡೆ ಮಾಡುತ್ತದೆ. ಆ ವ್ಯವಸ್ಥೆ ನಮ್ಮಲ್ಲಿಲ್ಲ. ರಾಜಸ್ತಾನ ಸರ್ಕಾರ ಈ ಯೋಜನೆಯನ್ನು ಆರಂಭಿಸಿ ಕಳೆದ ಅಕ್ಟೋಬರ್ 2ಕ್ಕೆ ಒಂದು ವರ್ಷವಾಯಿತು. ಯೋಜನೆಯ ಯಶಸ್ಸನ್ನು ಅರಿಯಲು ರಾಜ್ಯದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರಾಜಸ್ತಾನಕ್ಕೆ ತೆರಳಿದ್ದರು. ಅವರು ಹೋಗಿ ಬಂದದ್ದಷ್ಟೇ ಬಂತು. ಯೋಜನೆಯೇನೂ ಕಾರ್ಯರೂಪಕ್ಕೆ ಬರಲಿಲ್ಲ.

ಕರ್ನಾಟಕ ಸರ್ಕಾರ ಆರೋಗ್ಯ ಇಲಾಖೆಯ ಔಷಧಿ ಖರೀದಿಗೆ ಪ್ರತಿ ವರ್ಷ ಅಂದಾಜು ರೂ 180 ಕೋಟಿಗಳವರೆಗೆ ಅನುದಾನ ಬಿಡುಗಡೆ ಮಾಡುತ್ತದೆ. ಅದರೊಂದಿಗೆ ರೂ 120 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದರೂ ಸಾಕು ಎಲ್ಲ ರೋಗಿಗಳಿಗೂ ಸರ್ಕಾರವೇ ಔಷಧಿ ವಿತರಣೆ ಮಾಡಬಹುದು. ಆದರೆ ಸರ್ಕಾರಕ್ಕೆ ಆ ಇಚ್ಛಾಶಕ್ತಿ ಇಲ್ಲ.

ಹಿಂದಿನ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಎಸ್.ಎ.ರಾಮದಾಸ್ ಅವರು ಔಷಧಿಯೊಂದನ್ನು ಕೇವಲ ಅರ್ಧ ಬೆಲೆಗೆ ಖರೀದಿಸಿ ರೋಗಿಗಳಿಗೆ ವಿತರಿಸುವುದಾಗಿ ಹೇಳಿಕೆ ನೀಡಿ ಭಾರಿ ಪ್ರಚಾರ ಪಡೆದಿದ್ದರು. ಆದರೆ ಆ ಔಷಧಿ ಕಂಪೆನಿಯನ್ನು ನಡೆಸುವವರು ಅವರ ಸಂಬಂಧಿಗಳಾದ್ದರಿಂದ ಆ ಔಷಧಿ ಮಾರಾಟ ಮಾಡಲು ಸಚಿವರು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂಬುದನ್ನು ಅವರದೇ ಪಕ್ಷದ ಶಾಸಕರಾಗಿದ್ದ ಡಾ.ಸಾರ್ವಭೌಮ ಬಗಲಿ ಬಹಿರಂಗಪಡಿಸಿದ್ದನ್ನು ಜನ ಮರೆತಿಲ್ಲ.

ಆದರೆ, ತಮಿಳುನಾಡಿನಲ್ಲಿ ಉಚಿತ ಔಷಧಿ ವಿತರಣೆ ಎಂಬುದು ಒಂದು ರಾಜಕೀಯ ಪ್ರಣಾಳಿಕೆಯಾಗಿ ಘೋಷಣೆಯಾಗಿತ್ತು. ಅದನ್ನು ಅಷ್ಟೇ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.

ರಾಜ್ಯದ ದೊಡ್ಡ ನಗರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಂದಾಗಿ ಬಡಜನರಿಗೆ ಲಾಭವೇನೂ ಇಲ್ಲ. ಬಡವರಿಗೆ ಉತ್ತಮ ವೈದ್ಯೋಪಚಾರ ದೊರೆಯಬೇಕು ಎಂದರೆ ಪ್ರತಿ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಎಂಬಿಬಿಎಸ್, ಡಿಪ್ಲೊಮಾ ಪದವಿ ಪಡೆದ ಒಬ್ಬ ಸ್ತ್ರೀರೋಗ ತಜ್ಞರು, ಎಲುಬು ಕೀಲು ತಜ್ಞರು, ಒಬ್ಬ ಅರಿವಳಿಕೆ ತಜ್ಞರು ಹಾಗೂ ಒಬ್ಬ ಸಾಮಾನ್ಯ ವೈದ್ಯರನ್ನು ನಿಯೋಜಿಸಬೇಕು. ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ ನಾಲ್ಕು ವೈದ್ಯರಂತೆ ನೇಮಕ ಮಾಡಿದರೂ ಒಟ್ಟು ವೈದ್ಯರ ಸಂಖ್ಯೆ 1,000 ಮೀರುವುದಿಲ್ಲ. ಹಾಗೆಯೇ ಜೀವರಕ್ಷಕ ಮಾತ್ರೆಗಳನ್ನು ಉಚಿತವಾಗಿಯೇ ವಿತರಿಸಬೇಕು. ಆಸ್ಪತ್ರೆಗಳಲ್ಲಿ ಪ್ರವೇಶ ಶುಲ್ಕವನ್ನು ಪಡೆಯುವ ಪದ್ಧತಿಗೆ ಕಡಿವಾಣ ಹಾಕಬೇಕು. ಎಷ್ಟೋ ಜನ ಬಡವರಿಗೆ ಕನಿಷ್ಠ ಪ್ರವೇಶ ಶುಲ್ಕ ನೀಡಲೂ ಹಣವಿರುವುದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಅಮೆರಿಕದ ಆರೋಗ್ಯ ಕ್ಷೇತ್ರದ ಬಹುಪಾಲು ಖಾಸಗಿಯವರ ಹಿಡಿತದಲ್ಲಿದೆ. ಇಷ್ಟಾಗಿಯೂ ಅಮೆರಿಕ ಸರ್ಕಾರ ತನ್ನ ಬಜೆಟ್‌ನಲ್ಲಿ ಶೇ 14ರಷ್ಟು ಹಣವನ್ನು ಆರೋಗ್ಯಕ್ಕೆ ಮೀಸಲಿಡುತ್ತದೆ. ಆದರೆ ನಮ್ಮಲ್ಲಿ ಮಾತ್ರ ನಗಣ್ಯವೆನ್ನಬಹುದಾದ ಶೇ 1.5ರಷ್ಟು ಇದೆ. ಹಾಗಾಗಿ, ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನವನ್ನು ಮೀಸಲಿಡಬೇಕು. ತಮಿಳುನಾಡು ಮಾದರಿಯ ಉಚಿತ ಔಷಧಿ ವಿತರಿಸುವ ನೀತಿಯನ್ನು ಕೂಡಲೇ ಜಾರಿಗೆ ತರಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಬಲವರ್ಧನೆ ಮಾಡುವ ಮೂಲಕ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳತ್ತ ಬರುವುದಕ್ಕೆ ಪ್ರೋತ್ಸಾಹ ನೀಡಬೇಕು.

ಹೆಸರು ಬೇರೆ, ಗುಣ ಒಂದೇ
ಖಾಸಗಿ ಕಂಪೆನಿಗಳು ಹೆಚ್ಚಿನ ದುಡ್ಡನ್ನು ಜನರಿಂದ ದೋಚುವ ಆಸೆಗಾಗಿ ಒಂದೇ ಗುಣಮಟ್ಟ ಹಾಗೂ ಅಳತೆಯ ಔಷಧಿಯನ್ನು ವಿವಿಧ ಹೆಸರುಗಳಿಂದ ಮಾರಾಟ ಮಾಡುತ್ತಿವೆ. ಸರ್ಕಾರ, ಖಾಸಗಿ ಕಂಪೆನಿಗಳ ಇಂತಹ ಕಣ್ಣಾಮುಚ್ಚಾಲೆ ಆಟಕ್ಕೆ ಕಡಿವಾಣ ಹಾಕಬೇಕು. ಏಕ ಬಗೆಯ ಗುಣಗಳುಳ್ಳ ಔಷಧಿಯನ್ನು ಹೇಗೆ ಬೇರೆ ಹೆಸರಿನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತವೆ ಎಂಬುದನ್ನು ಗಮನಿಸೋಣ.

ಪ್ಯಾರಾಸಿಟಮಾಲ್ ಜನೆರಿಕ್ ಔಷಧಿಯ 500 ಮಿ.ಗ್ರಾಂ.ನ ಪ್ರತಿ ಹತ್ತು ಗುಳಿಗೆಗೆ ಥೆರಾಪೆಟಿಕ್ ಕಂಪೆನಿಯು ಎಕ್ನಿಲ್ ಬ್ರಾಂಡ್ ಹೆಸರಿನಲ್ಲಿ ರೂ 7, ಜಿಎಸ್‌ಕೆ ಕಂಪೆನಿಯು ಕ್ಯಾಲ್ಪಾಲ್ ಹೆಸರಿನಲ್ಲಿ ರೂ 11, ಕ್ರೋಸಿನ್ ರೂ 11.20, ಕ್ರೋಸಿನ್ ಕ್ವಿಕ್ ಹೆಸರಿನಲ್ಲಿ ರೂ 11.25ಕ್ಕೆ ಮಾರಾಟ ಮಾಡುತ್ತದೆ. ಐಪಿಸಿಎ ಕಂಪೆನಿಯು ಅತಿ ಹೆಚ್ಚು ಅಂದರೆ ರೂ 12.10ಕ್ಕೆ ಪ್ಯಾಸಿಮೊಲ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಇದರ ಅಂದಾಜು ಮಾರುಕಟ್ಟೆ ಬೆಲೆ ಒಂದಕ್ಕೆ ರೂ 1.10 ಆಗುತ್ತದೆ. ಆದರೆ ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮವು ಕೇವಲ 15 ಪೈಸೆಗೆ ಒಂದರಂತೆ ಮಾರಾಟ ಮಾಡುತ್ತದೆ! ಪರಿಸ್ಥಿತಿ ಹೀಗಿರುವಾಗ ಆರೋಗ್ಯ ಸೇವೆಗಳ ಖಾಸಗೀಕರಣ ಬೇಕೆ?

ದುಬಾರಿ ಔಷಧಿಗಳು ಉತ್ತಮ ಔಷಧಿಗಳೇ?
ದುಬಾರಿ ಔಷಧಿಗಳು ಉತ್ತಮ ಔಷಧಿಗಳೆಂಬುದು ತಪ್ಪು ಕಲ್ಪನೆ. ಕಡಿಮೆ ಬೆಲೆಯ ಔಷಧಿಗಳೂ ದುಬಾರಿ ಔಷಧಿಗಳಷ್ಟೇ ಪರಿಣಾಮಕಾರಿ ಆಗಬಲ್ಲವು. ಈ ಔಷಧದೊಳಗೆ ಏನಿದೆ ಎಂಬುದು ಮುಖ್ಯ. ದುರದೃಷ್ಟವಶಾತ್ ಬ್ರ್ಯಾಂಡ್ ಮತ್ತು ದುಬಾರಿ ಔಷಧಿಗಳೇ ಶ್ರೇಷ್ಠವೆಂದು ವೈದ್ಯರೂ ನಂಬುತ್ತಾರೆ. ರೋಗಿಗಳನ್ನೂ ನಂಬಿಸುತ್ತಾರೆ!

ಔಷಧದ ಗುಣಮಟ್ಟವು ಅವರ ಹೆಸರಿನ ಮೇಲೆ ಹೋಗುವುದಿಲ್ಲ. ಅದಲಿಗೆ ಚಿಕ್ಕ ಕಂಪೆನಿ ಇರಲಿ, ದೊಡ್ಡ ಕಂಪೆನಿ ಇರಲಿ, ಬ್ರ್ಯಾಂಡ್ ಇರಲಿ, ಜನೆರಿಕ್ ಕಂಪೆನಿ ಇರಲಿ ಭಾರತೀಯ ಔಷಧಶಾಸ್ತ್ರವು ಹಾಕಿರುವಂತಹ ಷರತ್ತುಗಳಿಗೆ ಅನುಗುಣವಾಗಿ ಔಷಧಿಗಳನ್ನು ತಯಾರಿಸುವುದು ಬಹಳ ಮುಖ್ಯ. ಔಷಧಶಾಸ್ತ್ರದಲ್ಲಿ ಒಂದೊಂದು ಔಷಧವನ್ನು ಯಾವ ರೀತಿಯಲ್ಲಿ ತಯಾರಿಸಬೇಕೆಂದು ಹೇಳಿದೆ. ಈ ಪುಸ್ತಕವನ್ನು ಸರ್ಕಾರವೇ ಪ್ರಕಟಿಸಿರುತ್ತದೆ.

ಖಾಸಗಿಯವರಿಗೆ ಉತ್ತೇಜನ ನೀಡುವ, ಎನ್‌ಜಿಒಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನು ದತ್ತು ನೀಡುವ ಬದಲು ತಾನೇ ಸ್ವತಃ ಆಸಕ್ತಿ ವಹಿಸಿ ಪುನಶ್ಚೇತನ ಮಾಡಬೇಕು. ಅದಕ್ಕಾಗಿ `ಕರ್ನಾಟಕ ಔಷಧ ಉಗ್ರಾಣ ಮತ್ತು ಲಾಜಿಸ್ಟಿಕ್ಸ್ ಸೊಸೈಟಿ'ಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಬೇಕು.

ಇಲ್ಲದಿದ್ದರೆ ಬಡ ರೋಗಿಗಳ ದುಃಸ್ಥಿತಿಯನ್ನು ನೋಡಿಯೂ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ಬರುತ್ತದೆ. ಆ ದಿನಗಳು ಬಾರದಿರಲಿ.

(ಲೇಖಕರು: `ಜನಾರೋಗ್ಯ ಆಂದೋಲನ ಕರ್ನಾಟಕ'ದ ಅಧ್ಯಕ್ಷರು)
ನಿರೂಪಣೆ: ಮನೋಜ್‌ಕುಮಾರ್ ಗುದ್ದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT