ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ-ಕಡ್ಡಾಯ ಶಿಕ್ಷಣ ಕಾಯ್ದೆಗೆ ಒತ್ತಾಯ

Last Updated 25 ಜನವರಿ 2011, 12:25 IST
ಅಕ್ಷರ ಗಾತ್ರ

ವಿಜಾಪುರ: ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ-2009ನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನದ ಗೋವಿಂದರಾಜು, ರಾಜ್ಯ ಅಂಗವಿಕಲರ ಐಕ್ಯತಾ ವೇದಿಕೆಯ ಪ್ರಮೀಳಾ ಆಗ್ರಹಿಸಿದರು. ಶಾಲಾ ಮಕ್ಕಳೊಂದಿಗೆ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ,  ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಮೂಲಸೌಲಭ್ಯ ಕಲ್ಪಿಸಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಮತ್ತು ಸಮಾನ ಶಾಲಾ ವ್ಯವಸ್ಥೆಗಾಗಿ ದುಡಿಯುತ್ತಿರುವ ‘ಸಮಾನ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ರಾಷ್ಟ್ರೀಯ ಮೈತ್ರಿ’ ಎಂಬ ಸಂಘಟನೆಯವರು ರಾಷ್ಟ್ರಮಟ್ಟದಲ್ಲಿ ‘ಶಿಕ್ಷಣ ಹಕ್ಕಿನ ಆಂದೋಲನ’ವನ್ನು ಮಕ್ಕಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದಾರೆ. ಇದರ ಅಂಗವಾಗಿರುವ ಸಾಮಾಜಿಕ ಪರಿವರ್ತನಾ ಜನಾಂದೋಲನವು ರಾಜ್ಯದಲ್ಲಿ ಈ ಆಂದೋಲನ ನಡೆಸುತ್ತಿದೆ ಎಂದರು.

ಕೇಂದ್ರ ಸರ್ಕಾರ ರೂಪಿಸಿರುವ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದರೆ ರೂ. 2500 ಕೋಟಿ ಬೇಕಾಗುತ್ತದೆ. ಇಷ್ಟೊಂದು ಹಣ ಇಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಈ ಕಾಯ್ದೆ ಜಾರಿಗೊಳಿಸುವುದನ್ನು ಮುಂದೂಡುತ್ತಿದೆ ಎಂದು ದೂರಿದರು. ರಾಜ್ಯದ 46,199 ಸರ್ಕಾರಿ ಶಾಲೆಗಳಲ್ಲಿ ಶೇ.50ರಷ್ಟು ಶಾಲೆಗಳಿಗೆ ಮೂಲ ಸೌಕರ್ಯಗಳಿಲ್ಲ ಎಂದು ಸ್ವತಃ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 2010ರಲ್ಲಿ ಹೈಕೋರ್ಟ್‌ಗೆ ಲಿಖಿತ ವಿವರಣೆ ನೀಡಿದ್ದಾರೆ.

ಆ ವಿವರಣೆ ಪ್ರಕಾರ ಶೇ.50ರಷ್ಟು ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಬಹುಮುಖ್ಯವಾಗಿ ಹೆಣ್ಣುಮಕ್ಕಳ ಶೌಚಾಲಯ ಇಲ್ಲ. ಶೇ.25ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೇ.51ರಷ್ಟು ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ಶೇ.72ರಷ್ಟು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅಡುಗೆ ಕೋಣೆ ಇಲ್ಲ. ಶೇ.49ರಷ್ಟು ಶಾಲೆಗಳಲ್ಲಿ ಅಂಗವಿಕಲ ಮಕ್ಕಳು ನಡೆದಾಡಲು ರ್ಯಾಂಪ್ ವ್ಯವಸ್ಥೆ ಇಲ್ಲ ಎಂದು ಹೇಳಿದರು.

ರಾಜ್ಯದ 4217 ಶಾಲೆಗಳಲ್ಲಿ ಇಂದಿಗೂ ಒಬ್ಬರೇ ಶಿಕ್ಷಕರಿದ್ದಾರೆ. ಎರಡು ತರಗತಿ ಕೊಠಡಿ ಹಾಗೂ ಇಬ್ಬರು ಅಥವಾ ಒಬ್ಬ ಶಿಕ್ಷಕರನ್ನು ಹೊಂದಿರುವ ಶೇ.75ರಷ್ಟು ಶಾಲೆಗಳಿವೆ. 4ನೇ ತರಗತಿಯಲ್ಲಿ ಓದುವ ಶೇ.87ರಷ್ಟು ಮಕ್ಕಳಿಗೆ ಸ್ಪಷ್ಟವಾಗಿ ಕನ್ನಡ ಓದಲು ಬರುವುದಿಲ್ಲ ಎಂದು  ಎನ್‌ಸಿಇಆರ್‌ಟಿ ಅಧ್ಯಯನ ತಿಳಿಸಿದೆ. ಸರ್ಕಾರಿ ಶಾಲೆಗಳ ಕಳಪೆ ಗುಣಮಟ್ಟದಿಂದಾಗಿ ರಾಜ್ಯದಲ್ಲಿ 2008-09ರಲ್ಲಿ 500, 2009-10ನೇ ಸಾಲಿನಲ್ಲಿ 485 ಶಾಲೆಗಳು ಮುಚ್ಚಿವೆ. ಇನ್ನೂ ಸುಮಾರು 850 ಶಾಲೆಗಳು ಮುಚ್ಚುವ ಹಂತದಲ್ಲಿವೆ. ಈ ಸಮಸ್ಯೆ ಪರಿಹರಿಸುವ ಬದಲು ಸರ್ಕಾರ ಖಾಸಗಿ ಶಾಲೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ದೂರಿದರು.

2003-2010ರ ಅವಧಿಯ ರಾಜ್ಯ ಯೋಜನೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 6ರಿಂದ 14 ವರ್ಷ ವಯೋಮಾನದ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 4.5 ಲಕ್ಷ. ಅವರಲ್ಲಿ 1.58 ಲಕ್ಷ ಮಕ್ಕಳು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ರಾಜ್ಯದ ಒಟ್ಟಾರೆ ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳಲ್ಲಿ ಶೇ.60.3ರಷ್ಟು ದಲಿತ, ಶೇ.56.6ರಷ್ಟು ಆದಿವಾಸಿ ಮಕ್ಕಳಿದ್ದಾರೆ. ಬಾಲಕಾರ್ಮಿಕ ಪದ್ಧತಿ ಇನ್ನೂ ನಿರ್ಮೂಲನೆಯಾಗಿಲ್ಲ. ಹೀಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದರು.

ಸಿಂದಗಿ ತಾಲ್ಲೂಕು ಬ್ಯಾಕೋಡ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸುನೀಲ್, ‘ಸಿಂದಗಿಗೆ ಸರಿಯಾಗಿ ಬಸ್ ಸೌಲಭ್ಯ ಇಲ್ಲ. ಬಸ್ ನಿಂತರೂ ಐವರು ವಿದ್ಯಾರ್ಥಿಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ. ಶಾಲೆಯಲ್ಲಿ ಬಿಸಿಯೂಟದ ಸಮಸ್ಯೆ ಇದೆ’ ಎಂದು ದೂರಿದ. ‘ತಮ್ಮ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಿಲ್ಲ. ಕಂಪ್ಯೂಟರ್, ಕೊಠಡಿ ಇಲ್ಲ’ ಎಂದು ಸಿಂದಗಿ ತಾಲ್ಲೂಕು ಕೋರಳ್ಳಿ ಶಾಲೆಯ ಸಂತೋಷ ಶಂಕರ ಹಣಮಶೆಟ್ಟಿ ದೂರಿದರೆ, ಅದೇ ತಾಲ್ಲೂಕು ಖೈನೂರ ಗ್ರಾಮದ ಅಂಗವಿಕಲೆ ಮಹಾಬೂಬಿ ತಮ್ಮ ಶಾಲೆಯಲ್ಲಿ ಶೌಚಾಲಯ ಇಲ್ಲ. ತನಗೆ ಉಚಿತ ಬಸ್‌ಪಾಸ್ ನೀಡಿಲ್ಲ. ಶಾಲೆಯಲ್ಲಿ ರ್ಯಾಂಪ್ ವ್ಯವಸ್ಥೆ ಇಲ್ಲ ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT