ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆ ಬೇಡ, ಸಮಯ ಬೇಕು!

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾರುಕಟ್ಟೆಯಲ್ಲಿರುವ ಎಲ್ಲ ಕಂಪೆನಿಗಳೂ ಪ್ರೇಮಿಗಳ ದಿನಕ್ಕೆ ಮುಗಿಬಿದ್ದು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ಪ್ರೇಮಿಗಳಿಗೆ ಇದ್ಯಾವುದೂ ಬೇಡವಾಗಿದೆಯಂತೆ.

ಅವರಿಗೆ ಬೇಕಿರುವುದು ಒಂದಿನಿತು ಏಕಾಂತ. ಏಕತಾನ ಬದುಕಿನಿಂದ ಬಿಡುಗಡೆ. ತಾನು-ತನ್ನ ಸಂಗಾತಿ ಮತ್ತು... ಎಂಬಂಥ ಭಾವ.

ಇಂಥದ್ದೊಂದು ಸತ್ಯವನ್ನು ಬಿಚ್ಚಿಡುತ್ತಿದೆ ಜೀವನ್‌ಸಾಥಿ.ಕಾಮ್.
6000 ಜನರನ್ನು ಸಮೀಕ್ಷೆಗೆ ಒಳಪಡಿಸಿದ ಜೀವನ್ ಸಾಥಿ.ಕಾಮ್ ಈ ಬಗ್ಗೆ ಅಂಕಿ ಅಂಶಗಳನ್ನು ಬಹಿರಂಗ ಪಡಿಸಿದೆ.

ಹುಡುಗಿಯರು ಈಗಲೂ ಉಡುಗೊರೆಗಳನ್ನು ಬಯಸುತ್ತಾರೆ. ಆದರೆ ಅದು ದೂರದ ಪ್ರವಾಸ, ನದಿ ತೀರದ ನಡಿಗೆ, ಗಿರಿ ಕಣಿವೆಗಳಲ್ಲಿನ ಕ್ಷಣಗಳು.. ಹೀಗೆಯೇ ಮುಂದುವರಿಯುತ್ತದೆ ಪಟ್ಟಿ.

21ರಿಂದ 30 ವರ್ಷ ವಯೋಮಿತಿಯ ಯುವಜನಾಂಗವನ್ನು ಪ್ರೇಮಿಗಳ ದಿನಾಚರಣೆಯ ಬಗ್ಗೆ ವಿವಿಧ ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. 153 ಜನ ಮಾತ್ರ ಈ ಸಲ ಆಚರಣೆಯನ್ನು ಯೋಜಿಸಿಲ್ಲ ಎಂದು ಉತ್ತರಿಸಿದ್ದರು.
 
ಇವರನ್ನು ಹೊರತು ಪಡಿಸಿದರೆ ಬಹುತೇಕ ಜನರು ರಮ್ಯ ತಾಣಗಳಿಗೆ ಪ್ರಣಯ ಪ್ರವಾಸಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.

ಶೇ 44.4ರಷ್ಟು ಜನರು ಒಂದಿನವಾದರೂ ಹೊರ ಹೋಗಿ, ತಮ್ಮದೇ ಆದ ಸಮಯ, ದಿನ ಕಳೆಯಬೇಕೆಂದು ಯೋಜಿಸಿದ್ದಾರೆ. ಪ್ರತಿ ಸಲವೂ ಮೊದಲ ಸ್ಥಾನದಲ್ಲಿರುತ್ತಿದ್ದ ಹೂ ಬೊಕ್ಕೆಗಳ ಉಡುಗೊರೆ ಶೇ 28ಕ್ಕೆ ಇಳಿದಿದೆ. ಬಾಡಿ ಹೋಗುವ ಹೂಗಳನ್ನು ತಮ್ಮ ಆದ್ಯತೆಯ ಪಟ್ಟಿಯಿಂದ ಪ್ರೇಮಿಗಳು ದೂರವಿರಿಸಿದ್ದಾರೆ.

ಇನ್ನು ಫೆಬ್ರುವರಿ ಕತ್ತಲೆಯ ಚಳಿಯಲ್ಲಿ ಮನದನ್ನೆಯ ಕಂಗಳಲ್ಲಿ ದೃಷ್ಟಿ ನೆಟ್ಟು ಮಂದ ಬೆಳಕಿನಲ್ಲಿ ಅವಳ ಕಂಗಳ ಕಾಂತಿಯನ್ನು ಅನುಭವಿಸುವ ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಕೊನೆಯ ಸ್ಥಾನ ದೊರೆತಿದೆ.

ಕೆಲ ವರ್ಷಗಳ ಹಿಂದೆ ನೆಚ್ಚಿನ ಆಹಾರ ಸವಿಯುತ್ತಲೇ ಭವಿಷ್ಯದ ಕನಸು ಕಾಣುವಂತಿರುತ್ತಿದ್ದ ಈ ಮಿಣುಕು ದೀಪದಡಿಯ ಊಟಕ್ಕೆ ಕೇವಲ ಶೇ 18ರಷ್ಟು ಜನ ಒಲವು ತೋರಿದ್ದಾರೆ. ಶೇ 10 ರಷ್ಟು ಜನ ಮಾತ್ರ ಪ್ರೇಮಕತೆಗಳ ಚಲನ ಚಿತ್ರ ನೋಡಿ, ನಂತರ ಲಾಂಗ್ ಡ್ರೈವ್‌ನ ಕನಸು ಬಿಚ್ಚಿಟ್ಟಿದ್ದಾರೆ.

ಜನರ ಬದಲಾಗುತ್ತಿರುವ ನಿಲುವು ಈ ದಿನ ತಮಗಾಗಿ ಎಂಬಂಥ ಮನೋಭಾವ ಜನರಲ್ಲಿ ಬೆಳೆದಿದೆ ಎಂಬುದನ್ನು ತೋರಿಸುತ್ತದೆ ಎಂದು ಜೀವನ್‌ಸಾಥಿ.ಕಾಮ್‌ನ ವಹಿವಾಟು ಮುಖ್ಯಸ್ಥ ರೋಹಿತ್ ಮಗ್ನಾನಿ ಅಭಿಪ್ರಾಯ ಪಟ್ಟಿದ್ದಾರೆ.

ಈಗ ಇದು ಕೇವಲ ಕ್ಷಣಗಳ ಆಚರಣೆಯಾಗಿ ಉಳಿದಿಲ್ಲ. ಹುಡುಗ -ಹುಡುಗಿಯರ ನಡುವೆ ಕೇವಲ ಕಾರ್ಡು, ಹೂ, ಉಡುಗೊರೆಗಳ ವಿನಿಮಯ. ನಂತರದ ಊಟ ಆಮೇಲೆ ವಿದಾಯ ಎಂಬಂಥ ಆಚರಣೆಯಾಗಿಲ್ಲ.
 
ಈಗ ಸಂಗಾತಿಗಳು ತಮ್ಮಿಬ್ಬರಿಗಾಗಿಯೇ ವಿಶೇಷ ಸಮಯ ಬೇಕೆಂದು ಬಯಸುತ್ತಿದ್ದಾರೆ. ಪ್ರಣಯದ ರಮ್ಯತಾಣಗಳಿಗೆ ಭೇಟಿ ನೀಡಲು ಇಷ್ಟ ಪಡುತ್ತಿದ್ದಾರೆ. ಇದು ಜನರ ಮನೋಭಾವ ಬದಲಾವಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಮೀಕ್ಷೆಯಲ್ಲಿ ಬಹುತೇಕ ಪುರುಷರು ಪ್ರವಾಸಕ್ಕೆ ಮೊದಲ ಆದ್ಯತೆ ನೀಡಿದ್ದರೆ ಮಹಿಳೆಯರು ಈಗಲೂ ಕೊಡುಗೆಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ.

ಒಟ್ಟಾರೆ ಪ್ರೀತಿ-ಪ್ರೇಮವನ್ನು ಆಚರಿಸುವ ಒಲವು-ನಿಲುವು ಎರಡೂ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT