ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆಯ ಹೊಸ ಜಮಾನ

Last Updated 18 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಆತ್ಮೀಯರ ಹುಟ್ಟುಹಬ್ಬ, ಮದುವೆ, ಗೃಹಪ್ರವೇಶ ಮೊದಲಾದ ಶುಭ ಸಮಾರಂಭಗಳಿಗೆ ‘ಉಡುಗೊರೆ’ ನೀಡುವುದು ಇತ್ತೀಚೆಗೆ ಫ್ಯಾಷನ್‌ ಆಗಿದೆ. ಕೆಲವರು ವಿಭಿನ್ನವಾದ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಲು ಪ್ರಯತ್ನಿಸುತ್ತಾರೆ. ಹೊಸತನ ತುಂಬಿದ ಉಡುಗೊರೆ ನೀಡಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ, ನಾವಂದುಕೊಂಡಂಥ ‘ಕನಸಿನ ಉಡುಗೊರೆ’ ಎಲ್ಲಿಂದ ತರುವುದು ಎಂಬುದೇ ಬಹುತೇಕ ಮಂದಿಯನ್ನು ಕಾಡುವ ಪ್ರಶ್ನೆ. 

ಜನರ ಮನದಲ್ಲಿ ಕಾಡುವ ಈ ಪ್ರಶ್ನೆಗಳಿಗೆ ಉತ್ತರವಾಗಿ ಮೂಡಿಬಂದಿರುವುದೇ ‘ಬುಟ್ಟಿಸ್ಟೋರ್‌.ಕಾಮ್‌’ (buttistore.com). ಗ್ರಾಹಕರ ಕನಸಿನಂತೆ ಇಲ್ಲಿ ಉಡುಗೊರೆಗಳು ರೂಪುಗೊಳ್ಳುತ್ತವೆ. ಗ್ರಾಹಕರು ಇಷ್ಟ ಪಟ್ಟಂತೆ ಪೆನ್ಸಿಲ್ ಸ್ಕೆಚ್, ಜಲವರ್ಣ, ತೈಲ ವರ್ಣ, ವ್ಯಂಗ್ಯ ಚಿತ್ರ ಮತ್ತು ಬೇಕಾದ ಗೀತೆಯನ್ನು ಇಲ್ಲಿ ತಯಾರಿಸಿಕೊಡುವುದು ವಿಶೇಷ. ಈ ಉಡುಗೊರೆಗಳ ಹಿಂದಿರುವುದು ಹಲವು ಯುವಮನಸ್ಸುಗಳ ಬಣ್ಣ ಬಣ್ಣದ ಆಲೋಚನೆಗಳು.

ಈ ಬುಟ್ಟಿ ಆನ್‌ಲೈನ್‌ ಸ್ಟೋರ್ ಆರಂಭಗೊಂಡಿದ್ದು ಜೂನ್‌ನಲ್ಲಿ. ಇದರ ವ್ಯಾಪ್ತಿ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಹೊರರಾಜ್ಯದಿಂದಲೂ ಕಲಾಕೃತಿ, ಗೀತೆಗಳಿಗೆ ಬೇಕಾದಷ್ಟು ಬೇಡಿಕೆ ಬರುತ್ತಿದೆ.

ಬುಟ್ಟಿ ಬಿಚ್ಚಿದ್ದು ಹೀಗೆ
21ರ ತರುಣ ಬಿಸಿಎ ಪದವೀಧರ ಶ್ರೀಮುಖ ಸುಳ್ಯ ಅವರು ತಮ್ಮ ಪ್ರೀತಿ ಪಾತ್ರರಿಗೆ ‘ಪ್ರೀತಿಯ ಉಡುಗೊರೆ’ ಕೊಡುವ ಬಗ್ಗೆ ಚಿಂತಿಸುತ್ತಿದ್ದರು. ನಮ್ಮ ಉಡುಗೊರೆಗೆ ಹೇಗೆ ಹೊಸತನವನ್ನು ತರಬಹುದು? ಎಂದು ಯೋಚಿಸುತ್ತಿದ್ದಾಗ ಅವರ ಮನದಲ್ಲಿ ‘ಬುಟ್ಟಿ’ಯ ಯೋಜನೆ ಬಿಚ್ಚಿಕೊಂಡಿತು. ಕನಸಿನ ಯೋಜನೆಯನ್ನು ತನ್ನ ಸ್ನೇಹಿತರಲ್ಲಿ ಹೇಳಿಕೊಂಡಾಗ ಅವರಿಂದ ಬೆಂಬಲದ ಮಾತು ಕೇಳಿಬಂತು. ಇದರಿಂದ ಸ್ಫೂರ್ತಿ ಪಡೆದ ಶ್ರೀಮುಖ, ತನ್ನ ಬಳಗದ ಕೆಲವು ಪ್ರತಿಭಾನ್ವಿತ ಸಂಗೀತ ಮತ್ತು ಚಿತ್ರ ಕಲಾವಿದರ ಕಲಾ ಕೌಶಲವನ್ನು ಬೆಳಕಿಗೆ ತರುವ ಯೋಜನೆಯನ್ನು ಸಿದ್ಧಪಡಿಸಿದರು.

ಆನ್‌ಲೈನ್‌ ಬುಕ್ಕಿಂಗ್‌: ತಮಗೆ ಬೇಕಾದವರಿಗೆ, ಅವರದೇ ಭಾವಚಿತ್ರವಿರುವ ಕಲಾಕೃತಿಯನ್ನು ನೀಡುವ ಅಪೇಕ್ಷೆ ಇದ್ದರೆ, ಅವರ ಕುರಿತ ವಿವರಗಳನ್ನು ಅಥವಾ ಭಾವಚಿತ್ರಗಳನ್ನು ಆನ್‌ಲೈನ್ ಮೂಲಕ ‘ಬುಟ್ಟಿಸ್ಟೋರ್‌.ಕಾಮ್‌’ಗೆ ಅಪ್‌ಲೋಡ್‌ ಮಾಡಬೇಕು. ಬುಟ್ಟಿಸ್ಟೋರ್‌ನ ಕಲಾವಿದರು ಗ್ರಾಹಕರಿಗೆ ಬೇಕಾದ ಅಳತೆಯಲ್ಲಿ ಗ್ರಾಹಕರ ಅಪೇಕ್ಷೆಯಂತೆ ಭಾವಚಿತ್ರಗಳನ್ನು ರಚಿಸಿ ನಿಗದಿತ ಅವಧಿಯೊಳಗೆ ಕಳುಹಿಸಿ ಕೊಡುತ್ತಾರೆ.

ಗ್ರಾಹಕರು ಹಾಡನ್ನು ಬಯಸಿದರೆ ಅವರು ಕೊಟ್ಟ ಮಾಹಿತಿಯ ಮೇರೆಗೆ ಹಾಡನ್ನು ರಚಿಸಿ, ರಾಗ ಸಂಯೋಜಿಸಿ, ಪಕ್ಕವಾದ್ಯಗಳೊಂದಿಗೆ ಧ್ವನಿ ಮುದ್ರಿಸಿ ತಿಳಿಸಿದ ವಿಳಾಸಕ್ಕೆ ತಲುಪಿಸುತ್ತಾರೆ. ಗ್ರಾಹಕರಿಗೆ ತೃಪ್ತಿಯಾಗದಿದ್ದಲ್ಲಿ ಹಾಡಿನ ಪರಿಷ್ಕರಣೆ ಮಾಡಿಕೊಡುತ್ತಾರೆ ಅಥವಾ ಬೇಡವೆಂದಾದಲ್ಲಿ ಹಣವನ್ನು ಮರುಪಾವತಿ ಮಾಡುತ್ತಾರೆ. ಹಣದ ವ್ಯವಹಾರ ಆನ್‌ಲೈನ್ ಮೂಲಕ ನಡೆಯುವುದರಿಂದ ಗ್ರಾಹಕರು ಮೋಸ ಹೋಗುವ ಸಾಧ್ಯತೆಗಳಿಲ್ಲ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಶ್ರೀಮುಖ.

ಬುಟ್ಟಿಯೇ ‘ಬುಟ್ಟಿಸ್ಟೋರ್‌’ ಆಗಿದ್ದು: ಬೀದಿ ಬದಿಯ ವ್ಯಾಪಾರಿಗಳು ಬುಟ್ಟಿಗಳನ್ನಿಟ್ಟುಕೊಂಡು ಪಟ್ಟಣಗಳಲ್ಲಿ ವ್ಯಾಪಾರ ಮಾಡುವುದನ್ನು ಕಾಣುತ್ತೇವೆ, ಕೆಲವು ಛಾಯಾಚಿತ್ರ ಗ್ರಾಹಕರೂ, ಚಿತ್ರಕಲಾವಿದರೂ ನಮಗೆ ಬೇಕಾದ ಚಿತ್ರಗಳನ್ನು ಮಾಡಿಕೊಡುವುದನ್ನು ನೋಡಿದ್ದೇವೆ. ಹೀಗೊಂದು ವಿಚಿತ್ರವಾದ ಎರಡರ ಸಮ್ಮಿಲನದ ಆಲೋಚನೆ ಬುಟ್ಟಿಸ್ಟೋರ್ ಹುಟ್ಟಿಗೆ ಕಾರಣವಾಯಿತು. ಬುಟ್ಟಿ ಸ್ಟೋರ್ ಬಳಗದ ಸದಸ್ಯರು ತಮ್ಮ ಕಲೆಯ ಬುಟ್ಟಿಯಿಂದ ಗ್ರಾಹಕರ ಕೈಗೆ ಬೇಕಾದ ಕಲಾಕೃತಿಯನ್ನು ನಿರ್ಮಿಸಿ ಕೊಡುವ ಪರಿಕಲ್ಪನೆ ಇದಾಗಿದೆ. ಹೀಗಾಗಿ, ‘ಬುಟ್ಟಿಸ್ಟೋರ್‌’ ಎಂದು ಹೆಸರಿಡಲಾಗಿದೆ.

ಇದೇ ಮೊದಲು: ಆನ್‌ಲೈನ್‌ನಲ್ಲಿ ಗ್ರಾಹಕ ಕೇಂದ್ರಿತ ಸಂಗೀತ, ಚಿತ್ರ ನಿರ್ಮಾಣ ಇದೇ ಮೊದಲು ಎನ್ನುತ್ತಾರೆ ಶ್ರೀಮುಖ. ಅವರ ಕನಸಿನ ಯೋಜನೆಗೆ ಸ್ನೇಹಿತರಾದ ಕೀರ್ತಿ ಸತ್ಯ, ಶಬರಿ ಗಾಣಿಗ, ರೇಷ್ಮಾ, ದಿಶಾಂತ್ ಮೊದಲಾದ ಯುವ ಕಲಾವಿದರೂ ತಂತ್ರಜ್ಞರೂ ಸಾಥ್‌ ನೀಡುತ್ತಿದ್ದಾರೆ. ಅತಿ ಅಗ್ಗದ ದರ, ಕಡಿಮೆ ಅವಧಿಯಲ್ಲಿ ಗ್ರಾಹಕರ ಮನೆ ಮತ್ತು ಮನ ತಲುಪುವುದು ಈ ಯುವ ತಂಡದ ಗುರಿಯಾಗಿದೆ.

ಕೈಗೆಟಕುವ ದರ: ‘ಬುಟ್ಟಿಸ್ಟೋರ್‌’ನಲ್ಲಿ ಒಂದು ಸಾವಿರದಿಂದ ಐದು ಸಾವಿರ ರೂಪಾಯಿ ದರದಲ್ಲಿ ಪೆನ್ಸಿಲ್ ಸ್ಕೆಚ್, ಜಲವರ್ಣ, ತೈಲ ವರ್ಣ, ವ್ಯಂಗ್ಯಚಿತ್ರ ತಯಾರಿಸಿ ಕೊಡಲಾಗುತ್ತದೆ. ಅದು ಚಿತ್ರದ ಆಕಾರ ಮತ್ತು ಗಾತ್ರವನ್ನು ಅವಲಂಬಿಸಿದೆ. ಕನ್ನಡ ಮಾತ್ರವಲ್ಲದೆ, ತುಳು, ಹಿಂದಿ, ಇಂಗ್ಲಿಷ್‌, ತಮಿಳು ಹಾಡನ್ನೂ ಸಂಯೋಜಿಸಿ ಕೊಡಲಾಗುತ್ತದೆ. ಇದೀಗ ಬುಟ್ಟಿಸ್ಟೋರ್‌ನಲ್ಲಿ 11 ಚಿತ್ರ ಕಲಾವಿದರು, 10 ಸಂಗೀತ ಕಲಾವಿದರು ಇದ್ದಾರೆ. ಮಾಹಿತಿಗೆ 1800–833–2800, ವೆಬ್‌ಸೈಟ್‌ info@buttistore.com ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT