ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 3750 ಆಕ್ಷೇಪಣಾ ಅರ್ಜಿ ಸಲ್ಲಿಕೆ

Last Updated 9 ಸೆಪ್ಟೆಂಬರ್ 2011, 9:20 IST
ಅಕ್ಷರ ಗಾತ್ರ

ಉಡುಪಿ: ಮಂಗಳೂರು ವಿದ್ಯುತ್ ಪೂರೈಕೆ ಕಂಪೆನಿ (ಮೆಸ್ಕಾಂ) 2011-12ನೇ ಸಾಲಿನಲ್ಲಿ ಪ್ರತಿ ಯುನಿಟ್‌ಗೆ 88 ಪೈಸೆ ದರ ಏರಿಕೆ ಮಾಡುವ ಪ್ರಸ್ತಾವವನ್ನು ಉಡುಪಿ ಜಿಲ್ಲಾ ವಿದ್ಯುತ್ ಬಳಕೆದಾರರು ಸರ್ವಾನುಮತದಿಂದ ತಿರಸ್ಕರಿಸಿದ್ದಾರೆ.

ಬಳಕೆದಾರರ ವೇದಿಕೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯವೊಂದನ್ನು ತೆಗೆದುಕೊಳ್ಳಲಾಗಿದ್ದು ದರ ಏರಿಕೆ ತಿರಸ್ಕರಿಸುವ ಕಾರಣಗಳನ್ನು ಮತ್ತು ಮೆಸ್ಕಾಂ ಬಗ್ಗೆ ಕೆಲವು ಸಲಹೆಗಳನ್ನು ಮೆಸ್ಕಾಂ ಇದೇ 19ರಂದು ಮಂಗಳೂರಿನಲ್ಲಿ ಕರೆದಿರುವ ಸಭೆಯ ಮುಂದಿಡಲು ಕೂಡ ನಿರ್ಣಯಿಸಿದೆ.

ವಿದ್ಯುತ್ ಸೋರಿಕೆಯನ್ನು ತಡೆಗಟ್ಟುವ ಬಗ್ಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳದ ಮೆಸ್ಕಾಂ ಪ್ರತಿ ವರ್ಷ ದರ ಏರಿಕೆಗೆ ಮುಂದಾಗುವುದು ಸರಿಯಲ್ಲ. ಪ್ರಜ್ಞಾವಂತ ಗ್ರಾಹಕರು ಈ ಬೆಲೆ ಏರಿಕೆ ಖಂಡಿಸುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

`ಕೆಇಆರ್‌ಸಿ~ಗೆ ಉಡುಪಿಯಿಂದ ಆಕ್ಷೇಪಣೆಗಳ ಸುರಿಮಳೆ: `ಮೆಸ್ಕಾಂ~ನ ಬೆಲೆ ಏರಿಕೆ ಪ್ರಸ್ತಾವದ ಬಗ್ಗೆ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಸಾರ್ವಜನಿಕರಿಂದ ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಲು ಕೋರಿಕೊಂಡಿತ್ತು.

ಈವರೆಗೆ ಸಲ್ಲಿಕೆಯಾದ ಒಟ್ಟು 4,500 ಅರ್ಜಿಗಳಲ್ಲಿ 3,750 ಅರ್ಜಿ ಕೇವಲ ಉಡುಪಿ ಜಿಲ್ಲೆಯಿಂದ ಮಾತ್ರವೇ ಸಲ್ಲಿಕೆಯಾಗಿದೆ. ಅವುಗಳಲ್ಲಿ ಸುಮಾರು 2,800 ಅರ್ಜಿ ಭಾರತೀಯ ಕಿಸಾನ್ ಸಂಘದ ಮೂಲಕ ರೈತರು ಸಲ್ಲಿಸಿದ್ದಾರೆ ಎಂದು ಸಂಘದ ಸತ್ಯನಾರಾಯಣ ಉಡುಪ ತಿಳಿಸಿದರು.

`ಪ್ರತಿ ವರ್ಷ ಮೆಸ್ಕಾಂ ಬೆಲೆ ಏರಿಕೆ ಮಾಡುವ ಪ್ರಸ್ತಾವ ಮುಂದಿಡುತ್ತ ಬಂದಿದೆ. ಕಾನೂನಿನ ಪ್ರಕಾರ ಮೂರು ವರ್ಷಕ್ಕೊಮ್ಮೆ ಮಾತ್ರವೇ ಬೆಲೆ ಏರಿಕೆ ಪ್ರಸ್ತಾವ ಸಲ್ಲಿಸಲು ಅವಕಾಶವಿದೆ. ಹೀಗಾಗಿ ಈ ವರ್ಷ ಮತ್ತೆ ಬೆಲೆ ಏರಿಕೆ ಪ್ರಸ್ತಾವವನ್ನು ಮೆಸ್ಕಾಂ ಮುಂದಿಟ್ಟಿರುವುದು ಸರಿಯಲ್ಲ~ ಎಂದು ಅವರು ಹೇಳಿದರು.

ಕಳೆದ ವರ್ಷ `ಮೆಸ್ಕಾಂ~ ತನ್ನ ಪಾಲಿನ ಸುಮಾರು 537 ದಶಲಕ್ಷ ಯುನಿಟ್ ವಿದ್ಯುತ್ ಬಳಸಿಲ್ಲ. ಬಳಕೆಯಾಗದೇ ಉಳಿದ ವಿದ್ಯುತ್ ಅನ್ನು ಛತ್ತೀಸಗಡ ಮತ್ತಿತರ ಕಡೆಗಳ ಕಂಪೆನಿಗಳಿಗೆ ಹಂಚಿಕೆ ಮಾಡಿದೆ.
 
ದುರಂತವೆಂದರೆ ಇದೇ ವಿದ್ಯುತ್ ಅನ್ನು ರೂ.5.50 ಕ್ಕೆ ಖರೀದಿಸಿ ಅದನ್ನು ರೂ.2.85 ಪೈಸೆಗೆ ಹಂಚಿಕೆ ಮಾಡಿದೆ. ಆ ಮೂಲಕ ಅಪಾರ ನಷ್ಟವನ್ನು ಮೈಮೇಲೆ ಹಾಕಿಕೊಂಡಿದೆ ಎಂದರು. ಸರ್ಕಾರಕ್ಕೆ ಒಟ್ಟು 5 ಎಸ್ಕಾಂಗಳಿಂದ ಸುಮಾರು ರೂ.4500 ಕೋಟಿ ಹಣ ಬರಬೇಕಿದೆ.

ಅವನ್ನು ವಸೂಲು ಮಾಡುವ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ಅಲ್ಲದೇ ಮೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 21 ಸಾವಿರ ಅನಧಿಕೃತ ಸಂಪರ್ಕಗಳು ಇರುವುದು ಪತ್ತೆಯಾಗಿವೆ. ಇವೆಲ್ಲವುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಮೆಸ್ಕಾಂ ಇತರೆ ವಿಭಾಗಗಳ ವಿದ್ಯುತ್ ಕಂಪೆನಿಗಳಿಗಿಂತ ಲಾಭದಲ್ಲಿದೆ ಎನ್ನಲಾಗುತ್ತಿದೆ ಎಂದರು.

ಬಳಕೆದಾರರ ವೇದಿಕೆಯ ಎ.ಪಿ.ಕೊಡಂಚ ಮಾತನಾಡಿ, ಪ್ರತಿ ಯುನಿಟ್‌ಗೆ 88 ಪೈಸೆ ದರ ಏರಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ನಮ್ಮ ಜಿಲ್ಲೆಯಿಂದ ಅತಿ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ತನ್ನ ವೆಚ್ಚ ಕಡಿಮೆ ಮಾಡಿಕೊಳ್ಳಲು ಆಸಕ್ತಿ ವಹಿಸಿದ `ಮೆಸ್ಕಾಂ~ ದರ ಏರಿಕೆ ಮಾಡಲು ಪ್ರಸ್ತಾವ ಸಲ್ಲಿಸಿದ್ದು ವೈಜ್ಞಾನಿಕವಾಗಿಲ್ಲ.

ಮುಂದಿನ ಮೂರು ವರ್ಷ ದರ ಏರಿಕೆಯ ಬಗ್ಗೆ ಯಾವುದೇ ಪ್ರಸ್ತಾವ ಮಾಡಬಾರದು ಎನ್ನುವುದು ವಿದ್ಯುತ್ ಬಳಕೆದಾರರ ಅಭಿಪ್ರಾಯ ಎಂದರು. ಉದ್ಯಮಿ ರಬೀಂದ್ರ ನಾಯಕ್, ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ ಐತಾಳ್, ಶಾಂತರಾಜ ಐತಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT