ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಎಂಜಿಎಂ: ನಾಲ್ಕು ದಿನಗಳ ದೇಸಿ ಉತ್ಸವ-2011ಕ್ಕೆ ಚಾಲನೆ

Last Updated 18 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ಉಡುಪಿ: ಒಂದು ಕಾಲದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಾಮಾಜಿಕ ಪ್ರಭಾವ ಬೀರಿದ ಆರಾಧನಾ ಕಲೆಗಳು ಕಾಲಕ್ರಮೇಣ ನಶಿಸುತ್ತ ಸ್ಥಿತ್ಯಂತರಗೊಂಡು ಈಗ ಕೇವಲ ಪ್ರದರ್ಶನ ಕಲೆಯಾಗಿ ಮಾತ್ರವೇ ಉಳಿದಿವೆ. ಇಂತಹ ಸಂದರ್ಭದಲ್ಲಿ ಇವನ್ನು ಯಾವ ರೂಪದಲ್ಲಿ ಉಳಿಸಿಕೊಂಡು ಹೋಗಬೇಕು ಎನ್ನುವುದು ಬಹಮುಖ್ಯವಾದದ್ದು ಎಂದು ಹಿರಿಯ ಕಲಾ ವಿಮರ್ಶಕ ಎ.ಈಶ್ವರಯ್ಯ ಇಲ್ಲಿ ತಿಳಿಸಿದರು.

ಪ್ರಾದೇಶಿಕ ಜಾನಪದ ಕಲೆಗಳ ಅಧ್ಯಯನ ಕೇಂದ್ರ, ಎಂಜಿಎಂ ಕಾಲೇಜು, ಯಕ್ಷಗಾನ ಕೇಂದ್ರ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಸಹಯೋಗದಲ್ಲಿ ಗುರುವಾರದಿಂದ ಮುಂದಿನ 4 ದಿನಗಳ ಕಾಲ ನಡೆಯುವ ಆರಾಧನಾ ಕಲೆಗಳ ಪ್ರಾತ್ಯಕ್ಷಿಕೆಯ ‘ದೇಸಿ ಉತ್ಸವ-2011’ದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಎಲ್ಲ ಕಲೆಗಳೂ ಆರಾಧನಾ ಕಲೆಯಾಗಿಯೇ ಇದ್ದವು. ತದನಂತರದಲ್ಲಿ ಅವುಗಳಲ್ಲಿ ಬಹಳಷ್ಟು ಪ್ರದರ್ಶನ ಕಲೆಯಾಗಿ ಮಾರ್ಪಾಟಾಗಿವೆ. ಹಾಗಂತ ಇಂತಹ ಆರಾಧನೆಗಳನ್ನು ಉಳಿಸಿಕೊಳ್ಳುವ ಮೂಲಕ ಮೌಢ್ಯತೆಯನ್ನು ಬೆಳೆಸಬೇಕಾ ಅಥವಾ ನಿರ್ದಿಷ್ಟ ಚೌಕಟ್ಟಿನಲ್ಲಿ ಇದನ್ನು ಉಳಿಸಿಕೊಂಡು ಹೋಗಲು ಸಾಧ್ಯವೇ ಎನ್ನುವ ಬಗ್ಗೆಯೂ ಚರ್ಚೆಗಳಾಗಬೇಕು ಎಂದರು.

ಆರಾಧನಾ ಕಲೆಗಳು ಎಷ್ಟೇ ದೂರವಿದ್ದರೂ ಅವುಗಳ ಮೂಲ ‘ಧ್ವನಿ’ ಒಂದೇ ಆಗಿರುತ್ತವೆ. ಒಂದೊಂದು ಭೂತಕ್ಕೂ ಒಂದೊಂದು ಇತಿಹಾಸ ಇರುತ್ತದೆ. ಅವೆಲ್ಲವನ್ನೂ ಕೆದಕುತ್ತ ಹೋದರೆ ಧಾರ್ಮಿಕ, ಸಾಮಾಜಿಕದ ಎಲ್ಲ ರೂಪಗಳನ್ನೂ ನಾವು ಅರ್ಥೈಸಿಕೊಳ್ಳಲು ಸಾಧ್ಯ. ಬಹಳಷ್ಟು ಸಂದರ್ಭದಲ್ಲಿ ಭೂತಾರಾಧನೆಯಿಂದ ನ್ಯಾಯಾಲಯಕ್ಕೆ ಹೋಗಬೇಕಾದ ಸಮಸ್ಯೆ ಬಗೆ ಹರಿಸಿದ ನಿದರ್ಶನಗಳಿವೆ. ಹೀಗಾಗಿ ಸಾಮಾಜಿಕವಾಗಿ ಕೂಡ ಭೂತಾರಾಧನೆಯಿಂದ ಬಹಳಷ್ಟು ಕೆಲಸಗಳಾಗಿವೆ. ಪ್ರತಿಯೊಂದು ಭೂತಗಳ ಹಿಂದೆಯೂ ರೋಚಕ ಕಥೆಗಳಿವೆ ಎಂದರು.

ಕೇರಳಕ್ಕೂ ತುಳುನಾಡಿಗೂ ಅನಾದಿ ಕಾಲದಿಂದಲೂ ಸಂಬಂಧವಿದೆ, ಸಾಮ್ಯತೆಗಳಿವೆ. ಅಲ್ಲಿನ ಬಹಳಷ್ಟು ಭೂತಾರಾದನೆ, ದೈವಾರಾಧನೆಗಳಲ್ಲಿ ತುಳುನಾಡಿನ ಸಾಮ್ಯತೆಗಳಿವೆ. ನಿರ್ದಿಷ್ಟ ಕಾಲಘಟ್ಟದಲ್ಲಿ ಜನರ ನಂಬಿಕೆ, ಶ್ರದ್ಧೆಗಳ ಮೂಲಕ ಬೆಳೆದು ಬಂದ ಈ ಆರಾಧನಾ ಪದ್ಧತಿಗಳನ್ನು ಸೂಕ್ತವಾಗಿ ಅಧ್ಯಯನ ಮಾಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಹೇಮಲತಾ, ನಿಜ ಅರ್ಥದಲ್ಲಿ ಉಡುಪಿ ಸಂಸ್ಕೃತಿ ರಾಜಧಾನಿ ಅಂತ ಅನ್ನಿಸುತ್ತಿದೆ. ಸದಾ ಕಾಲ ಇಂತಹ ಚಟುವಟಿಕೆಗಳು ನಡೆಯುತ್ತವೆ. ಇದಕ್ಕೆ ಕಾರಣ ಈ ಭಾಗದಲ್ಲಿನ ಜನರ ಆರ್ಥಿಕ ಸ್ಥಿತಿಗತಿಗಳೂ ಕಾರಣವಿರಬಹುದು. ಇಂತಹ ಚಟುವಟಿಕೆಗಳನ್ನು ಉತ್ತರ ಕರ್ನಾಟಕದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಕೇರಳದ ಜಾನಪದ ವಿದ್ವಾಂಸ ರಾಘವನ್ ಪಯ್ಯಾನಡ ಮಾತನಾಡಿ, ಕೇರಳ ಹಾಗೂ ತುಳುನಾಡಿನ ಆರಾಧನಾ ಕಲೆಗಳಲ್ಲಿ ಸಾಮ್ಯತೆಗಳಿದ್ದು ಅಲ್ಲಿನ ಹಲವುಆರಾಧನಾ ಕಲೆಗಳು ತುಳುನಾಡಿನ ಆರಾಧನಾ ಕಲೆಗಳನ್ನು ಹೋಲುತ್ತವೆ. ಆ ದೃಷ್ಟಿಯಿಂದ ಅವುಗಳನ್ನು ಇಲ್ಲಿ ಪ್ರದರ್ಶನ ಕಲೆಯಾಗಿಸಿ ಅಧ್ಯಯನ ಮಾಡುವುದು ಸೂಕ್ತವಾದದ್ದು ಎಂದರು.

ಅಕಾಡೆಮಿ ಆಫ್ ಜನರಲ್ ಎಜುಕೇಷನ್‌ನ ಡಾ.ಎಚ್.ಶಾಂತಾರಾಂ ಅಧ್ಯಕ್ಷತೆ ವಹಿಸಿದ್ದರು.ಪ್ರಾದೇಶಿಕ ಜಾನಪದ ಅಧ್ಯಯನ ಕೇಂದ್ರದ ಹೇರಂಜೆ ಕೃಷ್ಣಭಟ್ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟ್ರಮಣ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT