ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಜಿಲ್ಲಾ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ 20ರಂದು ?

Last Updated 10 ಆಗಸ್ಟ್ 2011, 7:30 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಪ್ರಥಮ ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣ ಅಜ್ಜರಕಾಡಿನಲ್ಲಿ ತಲೆ ಎತಿದ್ದು, ಉದ್ಘಾಟನೆ ಭಾಗ್ಯವೇ ಬರುತ್ತಿಲ್ಲ. ಇದೇ 20ರಂದು ಉದ್ಘಾಟನೆ ನಡೆಯಲಿದೆಯೇ ಎಂಬ ಕುತೂಹಲ ಇದೀಗ ನೆಲೆಸಿದೆ.

ಅಜ್ಜರಕಾಡು ಬಳಿಯ ಮಹಾತ್ಮಗಾಂಧಿ ಕ್ರೀಡಾಂಗಣದ ಎದುರಿನಲ್ಲಿಯೇ ಅಂದಾಜು ರೂ.2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣದ ವುಡನ್ ಫ್ಲೋರ್ ಫ್ಲೋರಿಂಗ್ ಕಾಮಗಾರಿ ಕಳೆದ ಎರಡು ವರ್ಷದಿಂದ ಕುಂಟುತ್ತ ಸಾಗಿದೆ. ಕಟ್ಟಡದ ಹೊರ ಆವರಣವನ್ನು ಅಂದಗೊಳಿಸಿ ಸುಣ್ಣಬಣ್ಣ ಹಚ್ಚಿದ್ದು ಈಗ ಮಸುಕಾಗಿದೆ. ಇನ್ನೇನು ಉದ್ಘಾಟನೆಗೆ ಸಿದ್ಧ ಎಂದು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೇಳುತ್ತಲೇ ಬಂದಿದೆ. ಆದರೆ ಇಷ್ಟರವರೆಗೂ ಉದ್ಘಾಟನೆ ಭಾಗ್ಯ ಮಾತ್ರ ಬರಲೇ ಇಲ್ಲ.

ಆದಾಗ್ಯೂ ಈ ನಡುವೆ ಸಿಕ್ಕ ಮಾಹಿತಿಯಂತೆ ಆ.20ರಂದು ಈ ಕ್ರೀಡಾಂಗಣ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗುವ ಸಾಧ್ಯತೆಗಳಿವೆ. ಆದರೆ ಜಿಲ್ಲಾಡಳಿತ ಇದನ್ನು ದೃಢಪಡಿಸುತ್ತಿಲ್ಲ.

ಇಲ್ಲಿಯವರೆಗೂ ಜಿಲ್ಲೆಯಲ್ಲಿ ಸೂಕ್ತವಾದ ಕ್ರೀಡಾಂಗಣವೇ ಇರಲಿಲ್ಲ. ಇಂಥದ್ದೊಂದು ಕ್ರೀಡಾಂಗಣ ಸಿದ್ಧಗೊಳ್ಳುವುದನ್ನು ಕಂಡು ಈ ಭಾಗದ ಕ್ರೀಡಾಪಟುಗಳು ಸಂಭ್ರಮಿಸಿದ್ದರು. ಕ್ರೀಡಾಂಗಣದಿಂದ ಕ್ರೀಡೆಗೆ ದೊಡ್ಡ ಉತ್ತೇಜನ ಸಿಗುತ್ತದೆ ಎನ್ನುವುದು ಕ್ರೀಡಾಪಟುಗಳ ಉತ್ಸಾಹಕ್ಕೆ ಕಾರಣವಾಗಿತ್ತು.

ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಇಲ್ಲಿ ನಡೆಸುವಷ್ಟು ಉತ್ತಮವಾಗಿ ಕ್ರೀಡಾಂಗಣವನ್ನು ಸಿದ್ಧಪಡಿಸಲಾಗಿದೆ. ವಿವಿಧೆಡೆಗಳಲ್ಲಿನ ಕ್ರೀಡಾಂಗಣಗಳನ್ನು ನೋಡಿಕೊಂಡು ಬಂದು ಬಳಿಕ ಇದನ್ನು ನಿರ್ಮಿಸಲಾಗಿದೆ ಎಂದು ಕ್ರೀಡಾ ಇಲಾಖೆ ಹೇಳುತ್ತಲೇ ಬಂದಿದೆ. ಆದರೆ ಕಳೆದ ಎರಡು ವರ್ಷದಿಂದ ನೆಲಹಾಸಿನ ಸಣ್ಣದೊಂದು ಕಾಮಗಾರಿ ಕುಂಟುತ್ತ ಸಾಗಿತ್ತು.

ಒಳಾಂಗಣ ಕ್ರೀಡಾಂಗಣದ ಒಟ್ಟು ವಿಸ್ತೀರ್ಣ 627.15 ಚದರ ಅಡಿಗಳು. ಸ್ವಾಗತ ಕೊಠಡಿ, ಲಾಕರ್ ವ್ಯವಸ್ಥೆ, ನಾಲ್ಕು ಕೊಠಡಿಗಳು, ಮೊದಲ ಮಹಡಿಯಲ್ಲಿ ಸಭಾಂಗಣ, ಗ್ಯಾಲರಿ ಸೇರಿದಂತೆ ಅಚ್ಚುಕಟ್ಟಾಗಿಯೇ ಕಟ್ಟಡ ನಿರ್ಮಾಣವಾಗಿದೆ.

ವಾಲಿಬಾಲ್, ಬ್ಯಾಂಡ್ಮಿಂಟನ್, ಟೆನಿಸ್‌ನಂತಹ ಆಟಗಳಿಗಾಗಿ ಅತ್ಯುತ್ತಮ ರೀತಿಯಲ್ಲಿ ಸಜ್ಜುಗೊಂಡ ಈ ಕ್ರೀಡಾಂಗಣದ ವುಡನ್ ಫ್ಲೋರ್ ಕೆಲಸ ಮಾತ್ರ ಬಾಕಿಯಾಗುತ್ತಲೇ ಬರುತ್ತಿತ್ತು. ಅಂದಾಜು ರೂ. 40 ಲಕ್ಷ ವೆಚ್ಚದ ವುಡನ್ ಫ್ಲೋರಿಂಗ್ ಇದರ ಪ್ರಮುಖ ಭಾಗವಾಗಿದ್ದು ರಾಜ್ಯದ ಇತರೆಡೆಗಳ ಒಳಾಂಗಣ ಕ್ರೀಡಾಂಗಣಕ್ಕೆ ಸರಿಸಾಟಿಯಾಗಿಯೇ ನಿರ್ಮಿಸಲಾಗುತ್ತಿದೆ ಎನ್ನುವ ಹೇಳಿಕೆಯೊಂದು ಕಳೆದ ಒಂದು ವರ್ಷದಿಂದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ, ಜನಪ್ರತಿನಿಧಿಗಳಿಂದ ಕೇಳಿಬರುತ್ತಲೇ ಇತ್ತು.

ಆದರೆ ಈಗ ಕೊನೆಗೂ ವುಡನ್ ಫ್ಲೋರ್ ಸಿದ್ಧಗೊಂಡಿದೆ. ಅಂತಿಮವಾಗಿ ಒಂದಿಷ್ಟು ಸ್ವಚ್ಛತಾ ಕಾರ್ಯ, ಗ್ಯಾಲರಿಯಲ್ಲಿ ಅಲ್ಪಸ್ವಲ್ಪ ಅಂತಿಮ ಹಂತದ ಕಾಮಗಾರಿ ಬಾಕಿ ಉಳಿದಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಇದೇ 20ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಂದ ಈ ಕ್ರೀಡಾಂಗಣ ಉದ್ಘಾಟನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT