ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ತಾ.ಪಂ. ಚುನಾವಣೆ ಕುತೂಹಲ

Last Updated 10 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ಉಡುಪಿ: ಬಿಜೆಪಿ ಸದಸ್ಯರ ಭಿನ್ನಮತದ ಹಿನ್ನೆಲೆಯಲ್ಲಿ ಉಡುಪಿ ತಾಲ್ಲೂಕು ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಕುತೂಹಲ ಕೆರಳಿಸಿದೆ.

ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಚುನಾವಣೆ ನಡೆಯಲಿದೆ. ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

41 ಸದಸ್ಯ ಬಲದ ತಾಲ್ಲೂಕು ಪಂಚಾಯಿತಿಯಲ್ಲಿ 23 ಸದಸ್ಯರನ್ನು ಹೊಂದಿರುವ ಬಿಜೆಪಿ ಬಹುಮತ ಪಡೆದಿದೆ. ಕಾಂಗ್ರೆಸ್‌ನ 17 ಮತ್ತು ಒಬ್ಬ ಪಕ್ಷೇತರ ಒಬ್ಬ ಸದಸ್ಯ ಇದ್ದಾರೆ. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೆಂಬಲಿಗರ ಎನ್ನಲಾದ ಆರು ಮಂದಿ ಸದಸ್ಯರು ಬಿಜೆಪಿಗೆ ವಿರುದ್ಧವಾಗಿ ಹೋಗುವ ಸಾಧ್ಯತೆ ಇರುವುದರಿಂದ ಫಲಿತಾಂಶ ಕುತೂಹಲ ಕೆರಳಿಸಿದೆ.

`ಬುಧವಾರ ಬೆಳಿಗ್ಗೆ ಎಲ್ಲ ಸದಸ್ಯರನ್ನು ಕೋರ್ ಕಮಿಟಿ ಸಭೆಗೆ ಆಹ್ವಾನಿಸಲಾಗಿದೆ. ಅಲ್ಲಿಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ನಮ್ಮಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಎಲ್ಲ ಸದಸ್ಯರೂ ಸಭೆಗೆ ಹಾಜರಾರುವ ವಿಶ್ವಾಸ ಇದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಗೆಲ್ಲುತ್ತೇವೆ~ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ್‌ಕುಮಾರ್ ಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸುವ ಕುರಿತು ಕಾಂಗ್ರೆಸ್ ಸ್ಪಷ್ಟ ನಿರ್ಧಾರ ಹೊಂದಿದ್ದು ಡಾ. ಸುನೀತಾ ಡಿ ಶೆಟ್ಟಿ ಅಧ್ಯಕ್ಷ ಮತ್ತು ಉಮೇಶ್ ಎ ನಾಯ್ಕ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಲಿದ್ದಾರೆ. ಕುಂದಾಪುರದ ಉಪ ವಿಭಾಗಾಧಿಕಾರಿ ಸದಾಶಿವ ಪ್ರಭು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಂಜೆ ವೇಳೆಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಹೊರ ಬೀಳಲಿದೆ.

ಜಿ.ಪಂ. ಚುನಾವಣೆ ಸಂದರ್ಭದಲ್ಲಿ ಸಹ ಗೊಂದಲಾಗಿತ್ತು. ಬಿಜೆಪಿಯ ಎಂಟು ಮಂದಿ ಸದಸ್ಯರು ಬಂಡಾಯದ ಬಾವುಟ ಹಾರಿಸಿ ಭಿನ್ನ ಬಣವಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಎಂಟೂ ಮಂದಿ ಸಭೆಗೆ ಹಾಜರಾಗಿರಲಿಲ್ಲ. ಬಿಜೆಪಿ ಸದಸ್ಯರೂ ಹಾಜರಾಗದ ಹಿನ್ನೆಲೆಯಲ್ಲಿ ಕೋರಂ ಇಲ್ಲದ ಕಾರಣ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಇದೇ 12ಕ್ಕೆ ಮುಂದೂಡಲಾಗಿದೆ.

ಉಡುಪಿ ತಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿಯ 23 ಸದಸ್ಯರೂ ಒಗ್ಗಟ್ಟಾಗಿ ಇದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರು ಯಾರು ಆಗಬೇಕು ಎಂಬುದನ್ನು ಬುಧವಾರ ಬೆಳಿಗ್ಗೆ ನಿರ್ಧರಿಸಲಾಗುತ್ತದೆ.
ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT