ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಧಾರಾಕಾರ ಮಳೆ-8 ಮನೆಗೆ ಹಾನಿ

Last Updated 28 ಜೂನ್ 2011, 9:20 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಸೋಮವಾರವೂ ಮುಂದುವರಿಯಿತು. ಕೆಲವೆಡೆ ಗುಡುಗಿನ ಆರ್ಭಟವೂ ಇತ್ತು. ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಕಾಣಿಸಿಕೊಂಡಿತು. ಜಿಲ್ಲೆಯ ಎಂಟು ಕಡೆ ಮನೆಗೆ ಮರ ಬಿದ್ದು ಲಕ್ಷಾಂತರ ರೂಪಾಯಿ ಹಾನಿಯುಂಟಾಗಿದೆ.

ಹಾರಾಡಿ ಗ್ರಾಮದ ತನಿಯ ಪೂಜಾರ್ತಿ ಮನೆಗೆ ಹುಣಸೆಮರ ಬ್ದ್ದಿದು 2 ಲಕ್ಷ ರೂಪಾಯಿ, ಕೋಟೆ ಗ್ರಾಮದ ರಾಜೇಶ್ ಮನೆಗೆ ತೆಂಗಿನಮರ ಬಿದ್ದು 5 ಸಾವಿರ ರೂಪಾಯಿ ಹಾನಿಯಾಗಿದೆ. ಅಂಜಾರು ಗ್ರಾಮದ ಸಂಜೀವ ನಾಯ್ಕ ಮನೆಯ ತಗಡಿನ ಮಾಡಿಗೆ ಮರಬಿದ್ದು, ರೂ 2ಸಾವಿರ, ಹೇರೂರು ಗ್ರಾಮದ ಗೋಪಿ ಪೂಜಾರ್ತಿ ಮನೆಗೆ ಮರಬಿದ್ದು ರೂ 30 ಸಾವಿರ , ಹಂಗಾರಕಟ್ಟೆ ಅನಂತ ನಾಯ್ಕ ಮನೆಗೆ ಮರ ಬಿದ್ದು ರೂ 22 ಸಾವಿರ ಹಾನಿಯಾಗಿದೆ.

ಶಿರ್ವ ಗ್ರಾಮದ ಗಿರಿಜಾ ಪೂಜಾರ್ತಿ ಮನೆಗೆ ಮರ ಬಿದ್ದು ರೂ 50 ಸಾವಿರ, ಪೆರ್ಣಂಕಿಲ ಸುಂದರಿ ಹಾಗೂ ಮಂಜುಳಾ ಎಂಬವರ ಮನೆಗೆ ಒಣಮರ ಮುರಿದು ಬಿದ್ದು ಕ್ರಮಾವಾಗಿ ರೂ 50 ಸಾವಿರ ಹಾಗೂ ರೂ.25 ಸಾವಿರ ಹಾನಿಯಾಗಿದೆ.

ಹಂದಾಡಿ ಗ್ರಾಮದ ಗ್ರಾಮದ ಬೇಳೂರು ಜಡ್ಡು ರವಿರಾಜ್ ಮನೆಗೆ ಭಾನುವಾರ ತಡರಾತ್ರಿ ತೆಂಗಿನ ಮರ ಬಿದ್ದು ರೂ 30 ಸಾವಿರ ಹಾನಿಯಾಗಿದೆ.

ಹಾರುಬೂದಿ ಗುಡ್ಡ ಕುಸಿತ: ಸಾಂತೂರು ಬಳಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಉಷ್ಣವಿದ್ಯುತ್ ಸ್ಥಾವರದ ಹಾರುಬೂದಿಯ ಗುಡ್ಡ ಕುಸಿದು ಬಿದ್ದಿದ್ದು ಸುತ್ತಮುತ್ತಲ ಸುಮಾರು 25 ಎಕರೆ ಕೃಷಿ ಭೂಮಿಯಲ್ಲಿ ಹರಡಿಕೊಂಡಿದೆ.

ಸಂಚಾರ ಅಸ್ತವ್ಯಸ್ತ: ಉಡುಪಿ ಸಿದ್ಧಾರ್ಥ ಹೋಟೆಲ್ ಎದುರು ಸಂಜೆ ಗಾಳಿಮಳೆಗೆ ಮರವೊಂದು ಉರುಳಿ ಕೆಲಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ಇಂದ್ರಾಳಿ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ಮಳೆಯಿಂದಾಗಿ ಉಡುಪಿ ಸರ್ವಿಸ್ ಬಸ್‌ನಿಲ್ದಾಣ, ಸಿಟಿ ಬಸ್ ನಿಲ್ದಾಣಗಳಲ್ಲಿ ಜನ ದಟ್ಟಣೆ ಕಡಿಮೆ ಇತ್ತು.

 ಶ್ರೀಕೃಷ್ಣಮಠದ ರಾಜಾಂಗಣದದ ಪಾರ್ಕಿಂಗ್ ಪ್ರದೇಶದಲ್ಲಿ ಬೆರಳೆಣಿಕೆಯ ವಾಹನಗಳಿದ್ದವು. ಪ್ರಮುಖ ರಸ್ತೆಯ್ಲ್ಲಲೂ ವಾಹನ ಸಂಚಾರ ಕಡಿಮೆಇತ್ತು.

ಉಕ್ಕಿ ಹರಿದ ತೋಡು: ಕಲ್ಸಂಕ ತೋಡಿನಲ್ಲಿ ಕೆಸರು ನೀರು ಉಕ್ಕಿ ಹರಿಯಿತು. ಬನ್ನಂಜೆ, ಮೂಡನಿಡಂಬೂರಿನ ಬಹುತೇಕ ತಗ್ಗು ಪ್ರದೇಶ ಜಲಾವೃತ ವಾಗಿತ್ತು. ಚರಂಡಿಗಳು ಕಟ್ಟಿಕೊಂಡು ರಸ್ತೆಗಳಲ್ಲಿ ನೀರು ಹರಿಯಿತು. ಮಲ್ಪೆ ಹನುಮಂತನಗರದಲ್ಲಿ ಒಳಚರಂಡಿ ನೀರು ಮನೆಗಳ ಒಳಗೆ ನುಗ್ಗಿತ್ತು.

ಗಂಗೊಳ್ಳಿಯಲ್ಲಿ ಒಳಚರಂಡಿಯಲ್ಲಿ ತ್ಯಾಜ್ಯ ಸಿಲುಕಿ ನೀರು ಸರಾಗವಾಗಿ ಸಮುದ್ರದ ಕಡೆಗೆ ಹೋಗಲಿಕ್ಕೆ ಸಾಧ್ಯವಾಗದೇ ಮನೆಗಳಿಗೆ ನೀರು ನುಗ್ಗಿತ್ತು. ಕುಂದಾಪುರದ ಸೌಪರ್ಣಿಕಾ ನದಿ ತುಂಬಿ ಕೃತಕ ನೆರೆ ಸೃಷ್ಟಿಯಾಗಿತ್ತು.

ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾ ದ್ಯಂತ ಸರಾಸರಿ ಮಿಮೀ 55.44 ಮಿಮೀ ಮಳೆಯಾ ಗಿದೆ. ಉಡುಪಿಯಲ್ಲಿ 34.7 ಮಿಮೀ, ಕುಂದಾಪುರದಲ್ಲಿ 49.4 ಮಿಮೀ ಹಾಗೂ ಕಾರ್ಕಳದಲ್ಲಿ 82.2 ಮಿಮೀ ಮಳೆ ದಾಖಲಾಗಿದೆ.

ಗುಡುಗಿನ ಆರ್ಭಟ: ಭಾನುವಾರ ತಡರಾತ್ರಿ ಗುಡುಗಿನ ಆರ್ಭಟವೂ ಸೇರಿತ್ತು. ಮಳೆಯಿಂದಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯೂ ಸೇರಿಕೊಂಡಿತ್ತು.

ಕಾರ್ಕಳ: 3 ಮನೆಗೆ ಹಾನಿ
ಕಾರ್ಕಳ:
ತಾಲ್ಲೂಕಿನ ವಿವಿಧ ಭಾಗಗಳಲ್ಲಿಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ  ಶುಕ್ರವಾರವೂ ಮುಂದುವರಿದಿದ್ದು, ನದಿಗಳು ತುಂಬಿ ಹರಿದಿವೆ.  ಮೂರು ಮನೆಗಳಿಗೆ ಹಾನಿ ಉಂಟಾಗಿದೆ.

ಮಾಳ ಗ್ರಾಮದ ಮಲ್ಲಾರು ನಿವಾಸಿ ಕಿಟ್ಟಣ್ಣ ಹೆಗ್ಡೆ ಮನೆಯ ಗೋಡೆ ಕುಸಿದು ರೂ. 5 ಸಾವಿರ ಹಾನಿ, ಕಡ್ತಲ ಗ್ರಾಮದ ಬೀಜು ಎಂಬವರ ವಾಸದ ಮನೆಗೆ ಹಾನಿಯಾಗಿ ರೂ 10 ಸಾವಿರ ಹಾನಿ ಉಂಟಾಗಿದೆ.  ಕುಕ್ಕುಜೆ ಗ್ರಾಮದ ಅಶೋಕ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ತೆರವುಗೊಳಿಸಿದ ಕಟ್ಟಡಗಳು, ಅರ್ಧದಲ್ಲೇ ಸ್ಥಗಿತಗೊಂಡ ಕಾಮಗಾರಿಗಳಿಂದಾಗಿ ಪೇಟೆಯ ಚರಂಡಿಗಳಲ್ಲಿ ನೀರು ಹರಿವಿಗೆ ಅಡಚಣೆ ಉಂಟಾಗಿತ್ತು. ಸಾಣೂರು ಗ್ರಾಮದ ಶಾಂಭವಿ ನದಿ ಉಕ್ಕಿ ಹರದಿದ್ದು, ತಟದ ಗದ್ದೆಗಳಲ್ಲಿ ನೀರು ತುಂಬಿತ್ತು.   

ರಕ್ಷಣೆ: ತಾಲ್ಲೂಕಿನ ಎಣ್ಣೆಹೊಳೆ ಎಂಬಲ್ಲಿ ನದಿಯ ನೀರಿನ ಮಟ್ಟ ಏರಿದ ಪರಿಣಾಮ ನದಿ ದಡದಲ್ಲಿ ಬೀಡುಬಿಟ್ಟಿದ್ದ ಹಕ್ಕಿಪಿಕ್ಕಿ ಜನಾಂಗದ ಕುಟುಂಬಗಳು ಅಪಾಯಕ್ಕೆ ಸಿಲುಕುವ ಸಂಭವವಿತ್ತು. ವಿಷಯ ತಿಳಿದ ತಹಸೀಲ್ದಾರ್ ಜಗನ್ನಾಥ್ ರಾವ್ ಸ್ಥಳಕ್ಕಾ ಗಮಿಸಿ ನದಿ ದಂಡೆಯಲ್ಲಿ ಟೆಂಟ್‌ಕಟ್ಟಿದ್ದ ಹಕ್ಕಿಪಿಕ್ಕಿ ಕುಟುಂಬಗಳನ್ನು ಸಮೀಪದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT