ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತ ರ ಕರ್ನಾಟಕದ ಮೊದಲ ಪಬ್ಲಿ ಕ್‌ ಶಾಲೆ

ಸೈನಿಕ ಶಾಲೆ ಸಂಸ್ಥಾಪಕ ಕಾಳೆ ಅಭಿಪ್ರಾಯ
Last Updated 24 ಸೆಪ್ಟೆಂಬರ್ 2013, 5:08 IST
ಅಕ್ಷರ ಗಾತ್ರ

ವಿಜಾಪುರ: ‘ರಾಷ್ಟ್ರಪತಿಗಳು ಸನ್ಮಾನಿ­ಸುತ್ತಿರುವುದು ನನ್ನ ಸುದೈವ. ಈ ಕೀರ್ತಿ ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ನಾನು ಅವರೆಲ್ಲರ ಪ್ರತಿನಿಧಿಯಾಗಿ ಈ ಗೌರವ ಸ್ವೀಕರಿಸುತ್ತಿದ್ದೇನೆ’.

ಇಲ್ಲಿಯ ಸೈನಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ­ಗಳಿಂದ ಸನ್ಮಾನಿಸಲ್ಪಡುತ್ತಿ­ರುವ ಸೈನಿಕ ಶಾಲೆಯ ಸಂಸ್ಥಾಪಕ ಶಿಕ್ಷಕ ಜಿ.ಡಿ. ಕಾಳೆ ಅವರ ಮನದಾಳದ ಮಾತಿದು.

83 ವರ್ಷದ ಜಿ.ಡಿ. ಕಾಳೆ  ಮೂಲತಃ ಗದಗನವರು. ಈಗ ಪುತ್ರರೊಂ­ದಿಗೆ ಪುಣೆಯಲ್ಲಿ ನಿವೃತ್ತಿ ಜೀವನ ಕಳೆಯುತ್ತಿದ್ದಾರೆ. ಈ ವಿಶಿಷ್ಟ ಗೌರವಕ್ಕೆ ಪಾತ್ರರಾಗಿರುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ­ದಲ್ಲಿ ಶಾಲೆಯ ಆರಂಭದ ದಿನಗಳನ್ನು ಮೆಲಕು ಹಾಕಿದರು.

ಅದನ್ನು ಅವರ ಮಾತುಗಳಲ್ಲೇ ಕೇಳೋಣ ಬನ್ನಿ, ‘ಕರ್ನಾಟಕದಲ್ಲಿ ಸೈನಿಕ ಶಾಲೆ ಆರಂಭಿಸಬೇಕು ಎಂಬ ನಿರ್ಧಾರ 1963ರ ಮಾರ್ಚ್‌ನಲ್ಲಿ ಆಯಿತು. ಆರಂಭದಲ್ಲಿ ಈ ಶಾಲೆಯನ್ನು ಕೊಡಗಿನ ಕುಶಾಲನಗರದಲ್ಲಿ ಸ್ಥಾಪಿಸುವ ಆಲೋಚನೆ ಇತ್ತು. ಕೊಡಗು ಭಾಗದವರು ಸೈನ್ಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಅದಕ್ಕಾಗಿ ಈ ಶಾಲೆಯನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಬೇಕು ಎಂಬ ಬೇಡಿಕೆ ಬಂತು.

ಬೆಳಗಾವಿಯಲ್ಲಿ ಆರಂಭಿಸಲು ನಿರ್ಧರಿಸಲಾಯಿತಾದರೂ ಅಲ್ಲಿ ಆಗಲೇ ಮಿಲಿಟರಿ ಶಾಲೆ ಇತ್ತು. ಮಾಜಿ ಮುಖ್ಯಮಂತ್ರಿಗಳಾದ ದಿ.ಬಿ.ಡಿ. ಜತ್ತಿ, ಶಿಕ್ಷಣ ಸಚಿವ ದಿ.ಎಸ್‌.ಆರ್‌. ಕಂಠಿ ಅವರ ಅಭಿಪ್ರಾಯದಂತೆ ವಿಜಾಪುರ ನಗರದಲ್ಲಿ ಈ ಶಾಲೆ ಸ್ಥಾಪಿಸಲಾಯಿತು. ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ಪಬ್ಲಿಕ್‌ ಶಾಲೆ ಇದು. ಶಾಲೆ ಆರಂಭಕ್ಕೆ ಬಿಎಲ್‌ಡಿಇ ಸಂಸ್ಥೆಯ ಮುಖ್ಯಸ್ಥ ಬಿ.ಎಂ. ಪಾಟೀಲರು ತಮ್ಮ ವಿಜಯ ಕಾಲೇಜಿನಲ್ಲಿ ಸ್ಥಳಾವಕಾಶ ನೀಡಿದರು. ಹಾಸ್ಟೆಲ್‌ನ್ನೂ ನಮಗೆ ಬಿಟ್ಟುಕೊಟ್ಟರು.

ಹೊಸದಾಗಿ ನೇಮಕಾತಿ ಹೊಂದಿದ ನಾವು ಏಳು ಜನರ ಶಿಕ್ಷಕರು ಸೆಪ್ಟೆಂಬರ್‌ 1, 1963ರಂದು ಸೇವೆಗೆ ಹಾಜರಾದೆವು. ವಿಶೇಷ ಎಂದರೆ ಅಂದು ಭಾನುವಾರ ಇತ್ತು. ಆ ನಂತರ 15 ದಿನಗಳ ಕಾಲ ಬೋಧನಾ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುವ ಕೆಲಸ. ನೋಟ್‌ಬುಕ್‌ ಮತ್ತಿತರ ಉಪಕರಣಗಳ ಪೂರೈಕೆಯಲ್ಲಿ ಪುಸ್ತಕ ವರ್ತಕ ದಿ. ಬಿ.ಪಿ. ಹಿರೇಮಠ ನಮಗೆ ಸಹಯೋಗ ನೀಡಿದರು.

ಆಗಲೇ ಪ್ರವೇಶ ಪರೀಕ್ಷೆ ನಡೆದಿತ್ತು. ವಿದ್ಯಾರ್ಥಿಗಳಿಗೆ 5,6,7,8ನೇ ತರಗತಿಗೆ ಪ್ರವೇಶ ನೀಡಿದೆವು. ಸೆಪ್ಟೆಂಬರ್‌ 16, 1963ರಂದು 57 ಜನ ವಿದ್ಯಾರ್ಥಿಗಳು ಶಾಲೆಗೆ ಹಾಜರಾದರು. ನಂತರದ ವರ್ಷದಲ್ಲಿ ಸರಾಸರಿ 50 ಜನ ಮಕ್ಕಳು ಪ್ರವೇಶ ಪಡೆಯುತ್ತಿದ್ದರು. 1966ರಲ್ಲಿ ಮಾತ್ರ  ಕೇವಲ 27 ವಿದ್ಯಾರ್ಥಿಗಳು ಪ್ರವೇಶ ಪಡೆದರು.

1966ರಲ್ಲಿ ಹೊಸ ಕ್ಯಾಂಪಸ್‌ಗೆ ಬಂದೆವು. ಈಗಿನ ಶಾಲೆಯ ಮುಖ್ಯ ಕಟ್ಟಡ ಮಾತ್ರವಿತ್ತು. ಬಹುತೇಕ ಕಟ್ಟಡಗಳು ಪೂರ್ಣಗೊಂಡಿರಲಿಲ್ಲ. ಚಾಲುಕ್ಯ ಮತ್ತು ಹೊಯ್ಸಳ ಹೌಸ್‌ ಮಾತ್ರ ಇದ್ದವು. ಆ ನಂತರ ಆದಿಲ್‌ಶಾಹಿ, ವಿಜಯನಗರ ಹೌಸ್‌ ನಿರ್ಮಿಸಲಾಯಿತು. ಮೊದಲ ಮೂರು ಬ್ಯಾಚ್‌ಗೆ ರಾಜ್ಯ ಸರ್ಕಾರದ ಪಠ್ಯಕ್ರಮವೇ ಇತ್ತು. ಆ ನಂತರ ಕೇಂದ್ರ ಪಠ್ಯಕ್ರಮ ಅಳವಡಿಸಿ­ಕೊಳ್ಳಲಾಯಿತು. 1978–79 ಸಾಲಿನಲ್ಲಿ  6ರಿಂದ 12ನೇ ತರಗತಿ ವರೆಗೆ ವಿಸ್ತರಣೆ ಆಯಿತು.

ಆರಂಭದಲ್ಲಿ ನಾವು ಪಡೆಯುತ್ತಿದ್ದ ಸಂಬಳ ರೂ. 275 ಮಾತ್ರ. ನಾವೆಲ್ಲ ಶಿಕ್ಷಕರು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದೆವು. ವಿದ್ಯಾರ್ಥಿಗಳು–ಶಿಕ್ಷಕರು ಒಂದು ಕುಟುಂಬದಂತೆ ಇದ್ದೆವು.

ಶಿಕ್ಷಕರ ಸಂಖ್ಯೆ 12ಕ್ಕೆ ಹೆಚ್ಚಿತು. ಟಿ.ಸಿ. ರಾಮಕೃಷ್ಣಯ್ಯ, ಜಾನ್‌ ಮತಿಯಾಸ್‌, ಎಂ. ಸುಬ್ಬಣ್ಣಾಚಾರ್ಯ, ಡಿ.ಜಿ. ಭಾವಸಾರ, ಎಸ್‌.ಆರ್‌.ಎಸ್‌. ರಾಜನ್‌, ಎಸ್‌.ಎಚ್‌. ಹಿರೇಮಠ, ಬಿ.ಸಿ. ಪಾಠಕ, ಅರ್ಜುನರಾವ್‌ ಪವಾರ ಮತ್ತು ನಾನು ಇದ್ದೆವು. ಈ ಶಾಲೆ ವಿಜಾಪುರ ನಗರಕ್ಕೇ ಶಿಸ್ತು ಕಲಿಸಿತು.

ಆರಂಭದಲ್ಲಿ ನಾವು ಕಷ್ಟಗಳನ್ನೂ ಎದುರಿಸಿದೆವು. ಹೊಸ ಕ್ಯಾಂಪಸ್‌ ಒಣ ಭೂಮಿಯಿಂದ ಕೂಡಿತ್ತು.ಏನೇ ಬೇಕಿದ್ದರೂ ತೊರವಿ ನಾಕಾಕ್ಕೆ ಹೋಗಿ ತರಬೇಕಾಗಿತ್ತು. ನೀರು–ವಿದ್ಯುತ್‌ನ ಸಮಸ್ಯೆ ಹೆಚ್ಚಾಗಿತ್ತು. 1968–69ನೇ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಇದರಿಂದ ಶಾಲೆಯ ಬೇಸಿಗೆಯ ರಜೆಯನ್ನು ವಿಸ್ತರಿಸಿ ಮಕ್ಕಳನ್ನು ಮನೆಗೆ ಕಳಿಸಿದ್ದೆವು.

ಆರಂಭದಲ್ಲಿ ಒಬ್ಬ ವಿದ್ಯಾರ್ಥಿಗೆ ಆಹಾರ ಭತ್ಯೆ ದಿನಕ್ಕೆ ರೂ. 2 ಮಾತ್ರ ನೀಡಲಾಗುತ್ತಿತ್ತು. ಈಗ ರೂ. 44 ಇರಬಹುದು. ಬೆಲೆ ಹೆಚ್ಚಿದಂತೆ ಸಂತೆ ತರುವುದು ಕಠಿಣವಾಗುತ್ತಿತ್ತು. ರಾಯಚೂರಿಗೆ ಹೋಗಿ ಗುಣಮಟ್ಟದ ಅಕ್ಕಿಯನ್ನು ತಂದದ್ದೂ ಇದೆ.

ಸೈನಿಕ ಶಾಲೆ ಈಗ ಬಹಳಷ್ಟು ಅಭಿವೃದ್ಧಿಯಾಗಿದೆ. ಇದರಲ್ಲಿ ಹಳೆಯ ವಿದ್ಯಾರ್ಥಿಗಳ ಶ್ರಮ ಅಧಿಕ. ನಾನು 1991ರಲ್ಲಿ ನಿವೃತ್ತನಾದರೂ ಪ್ರತಿ ವರ್ಷವೂ ಶಾಲೆಗೆ ಬಂದು ಹೋಗುತ್ತಿದ್ದೇನೆ. ನಮ್ಮ ಕಾಲದಲ್ಲಿ ಟ.ವಿ, ಕಂಪ್ಯೂಟರ್‌ಗಳು ಇರಲಿಲ್ಲ. ಈಗ ತಂತ್ರಜ್ಞಾನದ ಆವಿಷ್ಕಾರ ಹೆಚ್ಚಿದೆ. ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಬೇಕು. ವೃತ್ತಿ ಗೌರವ ಕಾಪಾಡಬೇಕು ಎಂಬುದು ಶಿಕ್ಷಕ ಸಮುದಾಯಕ್ಕೆ ನನ್ನ ಮನವಿ’.

ಸುವರ್ಣ ಮಹೋತ್ಸವ ನೇರ ಪ್ರಸಾರ ಇಂದು
ವಿಜಾಪುರ:
ರಾಷ್ಟ್ರಪತಿಗಳು ಭಾಗವಹಿಸುವ ಇಲ್ಲಿಯ ಸೈನಿಕ ಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮ ದೂರದರ್ಶನ ಡಿಡಿ-1 ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT