ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಪ್ಪ, ಕರುಣ್‌ ಶತಕದ ಸೊಬಗು

ರಣಜಿ ಕ್ರಿಕೆಟ್‌: ಮೊದಲ ದಿನ ಕರ್ನಾಟಕ ಗೌರವಾರ್ಹ ಮೊತ್ತ, ಗೌತಮ್‌ ವೇಗದ ಆಟ
Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಂದರವಾಗಿ ಅರಳಿಕೊಳ್ಳುತ್ತಿದ್ದ ಬುಧವಾರದ ಮುಂಜಾವು ಕರ್ನಾಟಕ ತಂಡಕ್ಕೆ ಹಿತವೆನಿಸಲಿಲ್ಲ. ದಿನದಾಟ ಶುರುವಾಗಿ ಒಂದು ಗಂಟೆ ಕಳೆಯುವುದರ ಒಳಗಾಗಿ ಮೂರು ವಿಕೆಟ್‌ಗಳು ಪತನವಾಗಿದ್ದವು. ಆರಂಭದ ಸಂಕಷ್ಟವನ್ನು ದಿಟ್ಟತನದಿಂದ ಎದುರಿಸಿದ ಅನುಭವಿ ರಾಬಿನ್‌ ಉತ್ತಪ್ಪ ಮತ್ತು ಚೊಚ್ಚಲ ರಣಜಿ ಟೂರ್ನಿ ಆಡುತ್ತಿರುವ ಕರುಣ್‌ ನಾಯರ್‌ ಶತಕ ಗಳಿಸಿ ಮೊದಲ ದಿನದ ‘ಹೀರೋ’ಗಳಾಗಿ ಮೆರೆದಾಡಿದರು.

ಈ ಸಲದ ರಣಜಿ ಋತುವಿನಲ್ಲಿ ಸತತ ಐದು ಪಂದ್ಯಗಳಲ್ಲಿ ಗೆಲುವು ಪಡೆದಿರುವ ವಿನಯ್‌ ಕುಮಾರ್‌ ಬಳಗ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇತಿಹಾಸದ ನಿರಾಸೆಯನ್ನು ಮರೆತು ಸುಂದರ ನಾಳೆಗಳನ್ನು ನಿರ್ಮಿಸಲು ಪಣತೊಟ್ಟಿದೆ. ಇದಕ್ಕೆ ಮೊದಲ ದಿನವೇ ಭರವಸೆಯ ಮುನ್ನುಡಿ ಬರೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಉತ್ತರ ಪ್ರದೇಶ ಎದುರಿನ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಆತಿಥೇಯರು ಮೊದಲ ದಿನದಾಟ ದಲ್ಲಿ 89.2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 297 ರನ್‌ ಕಲೆ ಹಾಕಿದರು.

ಎರಡು ರನ್‌, ಮೂರು ವಿಕೆಟ್‌: ಟಾಸ್‌ ಗೆಲ್ಲುವ ಲೆಕ್ಕಾಚಾರದಲ್ಲಿ ಗೆಲುವು ಪಡೆದ ಆರ್‌.ಪಿ. ಸಿಂಗ್‌ ಸಾರಥ್ಯದ ಉತ್ತರ ಪ್ರದೇಶ ಫೀಲ್ಡಿಂಗ್‌್ ಮಾಡಲು ಮುಂದಾಯಿತು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲ್‌ ಮಾಡಿದ ಅಮಿತ್‌್ ಮಿಶ್ರಾ ಮತ್ತು ಅಂಕಿತ್‌ ರಜಪೂತ್‌ ಆತಿಥೇಯರಿಗೆ ಆರಂಭದಲ್ಲಿಯೇ ಭಾರಿ ಆಘಾತ ನೀಡಿದರು.
ಈ ಸಲದ ರಣಜಿಯಲ್ಲಿ ಅಪೂರ್ವ ಪ್ರದರ್ಶನ ತೋರಿರುವ ಕೆ.ಎಲ್‌. ರಾಹುಲ್‌ ಸೊನ್ನೆ ಸುತ್ತಿ ದರು. ಮೊದಲ ವಿಕೆಟ್‌ ಪತನವಾದಾಗ ಕರ್ನಾಟಕ ತಂಡ 7.3 ಓವರ್‌ಗಳಲ್ಲಿ 14 ರನ್‌ ಗಳಿಸಿತ್ತು. ಇದ ಕ್ಕೆ ಒಂದು ರನ್‌ ಸೇರಿಸುವಷ್ಟರಲ್ಲಿ ಮತ್ತೆ ಎರಡು ವಿಕೆಟ್‌ಗಳು ಪತನವಾದವು. ಆರ್‌. ಸಮರ್ಥ್‌ ಮತ್ತು ಮನೀಷ್‌್ ಪಾಂಡೆ ಅವರಿಗೂ ರನ್‌ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಎರಡು ರನ್‌ ಗಳಿ ಸುವ ಅಂತರದಲ್ಲಿ ಮೂರು ವಿಕೆಟ್‌ ಕಳೆದು ಕೊಂಡು ಪರದಾಡಿದ ಆತಿಥೇಯರಿಗೆ ನೆರವಾಗಿದ್ದು ಉತ್ತಪ್ಪ ಮತ್ತು ಕರುಣ್‌ ಅಮೋಘ ಜೊತೆಯಾಟ.

ಭರವಸೆ ಮೂಡಿಸಿದ ರಾಬಿನ್‌: ಗಾಯಗೊಂಡು ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದ ಉತ್ತಪ್ಪ ಭರ್ಜರಿ ಪುನರಾಗಮನ ಮಾಡಿದರಲ್ಲದೇ, ತಾವು ಫಿಟ್‌ ಎಂದು ಸಾಬೀತು ಮಾಡಿ ಭರವಸೆ ಮೂಡಿಸಿದರು.

ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರೂ ಬೇಗನೆ ಔಟಾದರೂ, ಉತ್ತಪ್ಪ ಒತ್ತಡಕ್ಕೆ ಒಳಗಾಗದೆ ನಿರಾಳವಾಗಿ ಆಡಿದರು. ಆರಂಭದಲ್ಲಿ ಒಂದು, ಎರಡು ರನ್‌ ಕದಿಯುತ್ತಾ ಅರ್ಧಶತಕದ ಗಡಿ ಮುಟ್ಟಿದ ನಂತರ ಕ್ರೀಡಾಂಗಣದ ಮೂಲೆ ಮೂಲೆಗಳಲ್ಲಿ ಬೌಂಡರಿ ಬಾರಿಸಿ ತಂಡವನ್ನು ಸಂಕಷ್ಟದಿಂದ ಮೇಲಕ್ಕೆತ್ತಿದರು.

ಒಡಿಶಾ ಎದುರು ಈ ಸಲದ ಕೊನೆಯ ರಣಜಿ ಪಂದ್ಯ ಆಡಿದ್ದ ಉತ್ತಪ್ಪ ಅಲ್ಲಿ 33 ರನ್‌ ಮಾತ್ರ ಗಳಿಸಿದ್ದರು. ಹಿಂದಿನ ವೈಫಲ್ಯವನ್ನು ಮೆಟ್ಟಿ ನಿಂತ ಅವರು ನಾಲ್ಕು ಗಂಟೆ ಕ್ರೀಸ್‌ನಲ್ಲಿದ್ದು 160 ಎಸೆತಗಳಲ್ಲಿ ಶತಕ ಗಳಿಸಿದರು. ಈ ಬ್ಯಾಟ್ಸ್‌ಮನ್‌ 52.2ನೇ ಓವರ್‌ನ ಪಿಯೂಷ್‌ ಚಾವ್ಲಾ ಎಸೆತದಲ್ಲಿ ನೇರ ಡ್ರೈವ್‌ ಮೂಲಕ ಒಂಟಿ ರನ್‌ ಗಳಿಸಿ ರಣಜಿಯಲ್ಲಿ 12ನೇ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 14ನೇ ಶತಕ ದಾಖಲಿಸಿದರು.

ಉತ್ತಪ್ಪ ಶತಕ ಗಳಿಸಿದ್ದಾಗ ಕರುಣ್‌ ನಾಯರ್‌ 35 ರನ್‌ ಕೂಡಾ ಕಲೆ ಹಾಕಿರಲಿಲ್ಲ. ಕರುಣ್‌ ಆರಂಭದಲ್ಲಿ ರನ್‌ ಗಳಿಸಲು ಸಾಕಷ್ಟು ಪರದಾಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 44.4 ಓವರ್‌ಗಳಲ್ಲಿ 120 ರನ್‌ ಕಲೆ ಹಾಕಿತು. ಈ ವೇಳೆಗಾಗಲೇ ಆತಿಥೇಯರು ಆರಂಭದ ನಿರಾಸೆಯಿಂದ ಹೊರಬಂದಿದ್ದರು. ಆದರೆ, ಶತಕ ಗಳಿಸಿದ ಖುಷಿಯಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾಗಿ ಉತ್ತಪ್ಪ ವಿಕೆಟ್‌ ಒಪ್ಪಿಸಿದರು. 54ನೇ ಓವರ್‌ನ ಮೂರನೇ ಎಸೆತದಲ್ಲಿ ಕ್ರೀಸ್‌ ಬಿಟ್ಟು ಬಂದು ಹೊಡೆಯಲು ಮುಂದಾದಾಗ ವಿಕೆಟ್‌ ಕೀಪರ್‌ ಏಕಲವ್ಯ  ದ್ವಿವೇದಿ ಸ್ಟಂಪ್‌ ಎಗರಿಸಿ ಉತ್ತಪ್ಪ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದಕ್ಕೂ ಮೊದಲು ಉತ್ತಪ್ಪ 38ನೇ ಓವರ್‌ನಲ್ಲಿ ಫೈನ್‌ ಲೆಗ್‌ನಲ್ಲಿ ಬೌಂಡರಿ ಬಾರಿಸಿ ಕ್ಯಾಚ್‌ ಔಟ್‌ ಆಗಿದ್ದರು. ಆರ್‌.ಪಿ. ಸಿಂಗ್‌ ಆ ಔವರ್‌ನ ಬೌಲ್‌ ಮಾಡಿದ್ದರು. ಆದರೆ, ಆ ಎಸೆತ ನೋ ಬಾಲ್‌ ಆಗಿತ್ತು!

ಜೊತೆಯಾಟದ ಸೊಬಗು: ಉತ್ತಪ್ಪ ಔಟಾದಾಗ ತಂಡದ ಒಟ್ಟು ಮೊತ್ತ 135 ಆಗಿತ್ತು. ನಂತರ ಉಪನಾಯಕ ಸಿ.ಎಂ. ಗೌತಮ್‌ ಜೊತೆ ಸೇರಿದ ಕರುಣ್‌ ದಿನದಾಟದ ಅಂತ್ಯದ ವೇಳೆಗೆ ಕರ್ನಾಟಕ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ದೆಹಲಿ ಎದುರು ಕೊನೆಯ ಲೀಗ್‌್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕರುಣ್‌ ಇಲ್ಲಿಯೂ ಮೂರಂಕಿಯ ಗಡಿ ಮುಟ್ಟಿ ಸತತ ಎರಡು ಶತಕಗಳ ಸಂಭ್ರಮಕ್ಕೆ ಒಡೆಯರಾದರು.

ಮೂಲತಃ ರಾಜಸ್ತಾನದ ಜೋಧಪುರದವರಾದ ಕರುಣ್‌ ಥರ್ಡ್‌ ಮ್ಯಾನ್‌ ಬಳಿ ಬೌಂಡರಿ ಬಾರಿಸಿ ಶತಕ ಗಳಿಸಿದರು. 246 ಎಸೆತ ಎದುರಿಸಿದ ಈ ಬ್ಯಾಟ್ಸ್‌ಮನ್‌ 14 ಬೌಂಡರಿ ಮತ್ತು ಲಾಂಗ್‌ಆಫ್‌ನಲ್ಲಿ ಒಂದು ಸಿಕ್ಸ್‌ ಸಿಡಿಸಿದರು. ಉತ್ತರ ಪ್ರದೇಶದ ನಾಯಕ ಆರ್‌.ಪಿ. ಸಿಂಗ್‌ ಪದೇ ಪದೇ ಬೌಲರ್‌ಗಳನ್ನು ಬದಲಿಸಿದರೂ ಕರುಣ್‌ ಕೊಂಚವೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಅವರು ಐದೂವರೆ ಗಂಟೆ ಕ್ರೀಸ್‌ನಲ್ಲಿ ಇದ್ದದ್ದೇ ಇದಕ್ಕೆ ಸಾಕ್ಷಿ.

ರನ್‌ ವೇಗ ಹೆಚ್ಚಿಸಿದ ಗೌತಮ್‌: ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದ ಗೌತಮ್‌ ವೇಗವಾಗಿ ರನ್‌ ಕಲೆ ಹಾಕಿದರು. ಈ ಸಲದ ರಣಜಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಈ ಬ್ಯಾಟ್ಸ್‌ಮನ್‌ ತಂಡಕ್ಕೆ ಅಗತ್ಯವಿದ್ದ ಸಂದರ್ಭ ದಲ್ಲಿ ನೆರವಾದರು. 14 ಬೌಂಡರಿ ಒಳಗೊಂಡಂತೆ 89 ರನ್‌ ಗಳಿಸಿ ‘ನೈಟ್‌ ವಾಚ್‌ಮನ್’ ಆಗಿದ್ದಾರೆ. ಐದನೇ ವಿಕೆಟ್‌ಗೆ ಗೌತಮ್‌ ಮತ್ತು ಕರುಣ್‌ 35.5 ಓವರ್‌ಗಳಲ್ಲಿ 162 ರನ್‌ ಕಲೆ ಹಾಕಿ ದಿನದಾಟದ ಆರಂಭದಲ್ಲಿ ಅನುಭವಿಸಿದ್ದ ನಿರಾಸೆಯನ್ನು ಮರೆಯುವಂತೆ ಮಾಡಿದರು.

ದಿನದಾಟ ಕೊನೆಗೊಳ್ಳಲು ಒಂದು ಓವರ್‌ ಬಾಕಿ ಇದ್ದಾಗ ಕರುಣ್‌ ಅವರು ಅಲಿ ಮುರ್ತೂಜಾ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಆದ್ದರಿಂದ 90ನೇ ಓವರ್‌ ಪೂರ್ಣಗೊಳ್ಳಲು ನಾಲ್ಕು ಎಸೆತಗಳು ಬಾಕಿ ಇರುವಾಗ ದಿನದಾಟಕ್ಕೆ ತೆರೆಬಿತ್ತು.

** ಕರ್ನಾಟಕ ಹೊರತು ಪಡಿಸಿ ಇತರ ಕ್ವಾರ್ಟರ್‌ ಫೈನಲ್‌ ಪಂದ್ಯಗಳ ಸಂಕ್ಷಿಪ್ತ ಸ್ಕೋರ್‌ ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸ್ಕೋರ್ ವಿವರ...
ಕರ್ನಾಟಕ 89.2 ಓವರ್‌ಗಳಲ್ಲಿ 5 ವಿಕೆಟ್‌ಗೆ 297

ರಾಬಿನ್‌ ಉತ್ತಪ್ಪ ಸ್ಟಂಪ್ಡ್‌ ಏಕಲವ್ಯ ದ್ವಿವೇದಿ ಬಿ ಅಲಿ ಮುರ್ತೂಜಾ  100
ಕೆ.ಎಲ್‌. ರಾಹುಲ್‌ ಸಿ. ಏಕಲವ್ಯ ದ್ವಿವೇದಿ ಬಿ ಅಂಕಿತ್‌ ರಜಪೂತ್‌  00
ಆರ್‌. ಸಮರ್ಥ್‌ ಸಿ ಮತ್ತು ಬಿ ಅಮಿತ್‌ ಮಿಶ್ರಾ  00
ಮನೀಷ್‌ ಪಾಂಡೆ ಸಿ ಮೊಹಮ್ಮದ್ ಕೈಫ್‌ ಬಿ ಅಮಿತ್‌ ಮಿಶ್ರಾ  00
ಕರುಣ್‌ ನಾಯರ್‌ ಎಲ್‌ಬಿಡಬ್ಲ್ಯು ಬಿ ಅಲಿ ಮುರ್ತೂಜಾ  100
ಸಿ.ಎಂ. ಗೌತಮ್‌ ಬ್ಯಾಟಿಂಗ್‌  89
ಇತರೆ: (ಲೆಗ್‌ ಬೈ-5, ವೈಡ್‌-1, ನೋ ಬಾಲ್‌-2)
08
ವಿಕೆಟ್‌ ಪತನ: 1-14 (ರಾಹುಲ್‌; 7.3), 2-15 (ಸಮರ್ಥ್‌; 8.4), 3-15 (ಪಾಂಡೆ; 8.5), 4-135 (ಉತ್ತಪ್ಪ; 53.3), 5-297 (ಕರುಣ್‌; 89.2).
ಬೌಲಿಂಗ್‌: ಆರ್‌.ಪಿ. ಸಿಂಗ್‌ 10.4-5-19-0, ಅಂಕಿತ್‌ ರಜಪೂತ್‌ 18-7-39-1, ಅಮಿತ್‌ ಮಿಶ್ರಾ 23-5-70-2, ಅಲಿ ಮುರ್ತೂಜಾ 19.2-3-87-2, ಪಿಯೂಷ್‌ ಚಾವ್ಲಾ 15.2-0-62-0, ಪ್ರಶಾಂತ್‌ ಗುಪ್ತಾ 3-0-15-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT