ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಪ್ರದರ್ಶನದ ಭರವಸೆ

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): `ಲಂಡನ್ ಒಲಿಂಪಿಕ್ಸ್‌ನ ಟೆನಿಸ್ ಕ್ರೀಡೆಯಲ್ಲಿ ಪದಕಗಳನ್ನು ಗೆಲ್ಲುತ್ತೇವೆ ಎಂದು ಭರವಸೆ ನೀಡುವುದಿಲ್ಲ. ಆದರೆ ಉತ್ತಮ ಪ್ರದರ್ಶನದ ಭರವಸೆ ಮಾತ್ರ ನೀಡಬಲ್ಲೆ~ ಎಂದು ಭಾರತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದರು.

`ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಆದ್ದರಿಂದ ನಾವೂ ಒತ್ತಡದಲ್ಲಿರುತ್ತೇವೆ. ಆದ್ದರಿಂದ ಪದಕದ ಭರವಸೆ ನೀಡಲಾರೆವು. ಖಂಡಿತವಾಗಿಯೂ ಹೇಳುತ್ತೇನೆ, ನಮ್ಮಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತದೆ~ ಎಂದು ಹೈದರಾಬಾದ್‌ನ ಸಾನಿಯಾ ನುಡಿದರು.

ಶುಕ್ರವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಈ ಸಲದ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಡಬಲ್ಸ್ ವಿಭಾಗದಲ್ಲಿ ರುಷ್ಮಿ ಚಕ್ರವರ್ತಿ ಜೊತೆ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆ ಕಣಕ್ಕಿಳಿಯಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತ ಯಾವ ಕ್ರೀಡೆಗಳಲ್ಲಿ ಪದಕ ಗೆಲ್ಲುವ ವಿಶ್ವಾಸವಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ಅವರನ್ನು ಪ್ರಶ್ನಿಸಿದಾಗ, `ಪದಕ ಗೆಲ್ಲುವ ಬಗ್ಗೆ ಭವಿಷ್ಯ ನುಡಿಯಲಾರೆ~ ಎಂದಷ್ಟೇ ಹೇಳಿದರು.

`ಪದಕ ಗೆಲ್ಲುವ ಸಂಖ್ಯೆಯ ಬಗ್ಗೆ ಮುಂಚಿತವಾಗಿ ಏನನ್ನೂ ಹೇಳಲಾರೆ. 2008ರ ಒಲಿಂಪಿಕ್ಸ್‌ಗೆ 56 ಸ್ಪರ್ಧಿಗಳು ಅರ್ಹತೆ ಪಡೆದಿದ್ದರು. ಈ ಸಲ 81ಅಥ್ಲೀಟ್‌ಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ~ ಎಂದು ಮಾಕನ್ ನುಡಿದರು.

ರಾಷ್ಟ್ರೀಯ ಕ್ರೀಡೆ ಹಾಕಿ ಬಗ್ಗೆ ಮಾತನಾಡಿದ ಅವರು, ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದೇ ಪರದಾಡಿದ್ದ ಭಾರತ ಹಾಕಿ ತಂಡ ಈ ಸಲ ಅರ್ಹತೆ ಪಡೆದಿದೆ. ಈಗಿರುವ ತಂಡ ಹಾಕಿ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳಸಬೇಕು ಎಂದು ಸಲಹೆ ನೀಡಿದರು.

ಕೊರೆತೆ ಇರುವುದು ನಿಜ: ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳಲು ಸೌಲಭ್ಯಗಳ ಕೊರತೆಯಿದೆಯಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಕನ್, `ಕೊರತೆಗಳಿರುವುದು ನಿಜ~ ಎಂದು ಒಪ್ಪಿಕೊಂಡರು.

`ಮೊದಲನೆಯದಾಗಿ ಆಟಗಾರರ ದೈಹಿಕ ಸಾಮರ್ಥ್ಯ ಉತ್ತಮಗೊಳ್ಳಬೇಕು. ನಂತರ ಸೌಲಭ್ಯಗಳ ಕೊರತೆಗಳಿವೆ. ರಾತ್ರಿಯ ವೇಳೆಯಲ್ಲೂ ಅಭ್ಯಾಸ ನಡೆಸಲು ಸರಿಯಾಗಿ ಬೆಳಕಿನ ವ್ಯವಸ್ಥೆ ಹಾಗೂ ತರಬೇತಿಗೆ ವೈಜ್ಞಾನಿಕ ಸಿಬ್ಬಂದಿ ಇಲ್ಲದಿರುವುದು. ಹೀಗೆ ಹಲವು ಸಮಸ್ಯೆಗಳಿವೆ. ಅವುಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು~ ಸಚಿವರು ನುಡಿದರು.

`ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2016 ಹಾಗೂ 2020ರ  ಒಲಿಂಪಿಕ್ಸ್ ವೇಳೆಗೆ ಈ ಸಂಖ್ಯೆಯಲ್ಲಿ ಸುಧಾರಣೆ ಕಾಣಲಿದೆ~ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಟೆನಿಸ್ ಆಟಗಾರ ಮಹೇಶ್ ಭೂಪತಿ, ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT