ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮುಂಗಾರು; ಚುರುಕುಗೊಂಡ ಕೃಷಿ

Last Updated 2 ಜುಲೈ 2013, 8:18 IST
ಅಕ್ಷರ ಗಾತ್ರ

ಸೋಮವಾರಪೇಟೆ: ಈ ಬಾರಿ ತಾಲ್ಲೂಕಿನ ಎಲ್ಲೆಡೆ  ಉತ್ತಮ ಮುಂಗಾರು ಮಳೆ ಪ್ರಾರಂಭವಾಗಿದ್ದು, ಇದರಿಂದ ಪುಳಕಿತಗೊಂಡ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಹಲವಾರು ವರ್ಷಗಳ ನಂತರ ಮುಂಗಾರು ಮಳೆ ಜೂನ್‌ನಲ್ಲಿ ಉತ್ತಮವಾಗಿ ಆಗಿದೆ. ಅಲ್ಲದೆ, ಈ ವರ್ಷ ಉತ್ತಮ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ವರದಿಯಿಂದ ರೈತರು ಹರ್ಷಗೊಂಡಿದ್ದು, ಪಾಳುಬಿಟ್ಟಿದ್ದ ಗದ್ದೆಗಳಲ್ಲೂ ಬತ್ತ ಬೆಳೆಯಲು ಸಿದ್ದತೆ ನಡೆಸಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಮುಂಗಾರು ಮಳೆ ಕೈಕೊಡುತ್ತಿದ್ದುದ್ದು ಸಾಮಾನ್ಯವಾಗಿತ್ತು. ಇದರಿಂದಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ಹಿಂದೇಟು ಹಾಕುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಈಗಾಗಲೆ ರೈತರು, ನೇಗಿಲು ಎತ್ತುಗಳೊಂದಿಗೆ ಗದ್ದೆಯ ಮಣ್ಣನ್ನು ಹದಗೊಳಿಸಿದ್ದಾರೆ. ಬತ್ತ ಬಿತ್ತನೆಯಾಗಿ, ಸಸಿಮಡಿಯು ಹಸಿರಾಗಿದೆ.

ಮಳೆ ನಿರಂತರ ಸುರಿಯುತ್ತಿರುವುದರಿಂದ ಕಾಫಿ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ವಿಳಂಬವಾಗಿದೆ. ಬೆಳಗಾರರು ಕಾಫಿ ಬುಡವನ್ನು ಸ್ವಚ್ಚಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದಿನವಿಡಿ ತುಂತುರು ಮಳೆಯಾಗುತ್ತಿರುವುದರಿಂದ ಗೊಬ್ಬರ ಹಾಕಲು ಸಮಸ್ಯೆಯಾಗಿದ್ದು, ಇತರ ಕೆಲಸಗಳು ನೆನೆಗುದಿಗೆ ಬಿದ್ದಿವೆ.

ಮಳೆರಾಯ ಮತ್ತೆ ಪ್ರತ್ಯಕ್ಷ
ಮಡಿಕೇರಿ: ಕಳೆದ 3-4 ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಸೋಮವಾರ ಮಧ್ಯಾಹ್ನ ಪುನಃ ಪ್ರತ್ಯಕ್ಷನಾಗಿದ್ದಾನೆ. ಮಡಿಕೇರಿ, ಮೂರ್ನಾಡು, ನಾಪೋಕ್ಲು, ಗೋಣಿಕೊಪ್ಪ, ಶನಿವಾರಸಂತೆ, ಕೊಡ್ಲಿಪೇಟೆ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿರುವ ಏಕೈಕ ಜಲಾಶಯ ಹಾರಂಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು. ಸೋಮವಾರ ಬೆಳಿಗ್ಗೆ 6 ಗಂಟೆಗೆ ಜಲಾಶಯದಲ್ಲಿ 2857.14 ಅಡಿಗಳಷ್ಟು (ಗರಿಷ್ಠ ಮಟ್ಟ 2859) ನೀರು ಸಂಗ್ರಹವಾಗಿತ್ತು. ಒಳಹರಿವು 3,579 ಕ್ಯೂಸೆಕ್ ಆಗಿದ್ದು, ಜಲಾಶಯದಿಂದ 589 ಕ್ಯೂಸೆಕ್ ನೀರು ಹೊರಬಿಡಲಾಯಿತು.

ಜಲಾಶಯದಿಂದ ನೀರು ಹೊರಬಿಡುತ್ತಿರುವ ಕಾರಣ, ನದಿಯ ತೀರದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಹಾರಂಗಿ ಎಂಜಿನಿಯರ್‌ಗಳು ಮನವಿ ಮಾಡಿದ್ದಾರೆ.

ಮಳೆಯ ವಿವರ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಸರಾಸರಿ 8.36 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 19.38ಮಿ.ಮೀ ಮಳೆಯಾಗಿತ್ತು.
ಜನವರಿಯಿಂದ ಇಲ್ಲಿಯವರೆಗಿನ ಮಳೆ 982.57 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 506.58 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 5.95ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ 28.75ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1413.64ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 696.97ಮಿ.ಮೀ.ಮಳೆ ಆಗಿತ್ತು.

ವೀರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.55ಮಿ.ಮೀ. ಕಳೆದ ವರ್ಷ ಇದೇ ದಿನ 20.68 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 766.71ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 423.96ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 6.57ಮಿ.ಮೀ. ಕಳೆದ ವರ್ಷ ಇದೇ ದಿನ 8.7ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 767.35 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 398.8ಮಿ.ಮೀ ಮಳೆಯಾಗಿತ್ತು.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 2, ನಾಪೋಕ್ಲು 1.8, ಸಂಪಾಜೆ 6, ಭಾಗಮಂಡಲ 14, ವೀರಾಜಪೇಟೆ ಕಸಬಾ 3.8, ಹುದಿಕೇರಿ 24.9, ಶ್ರೀಮಂಗಲ 37.4, ಪೊನ್ನಂಪೇಟೆ 2.20, ಅಮ್ಮತ್ತಿ 5, ಬಾಳಲೆ 2, ಸೋಮವಾರಪೇಟೆ ಕಸಬಾ 2.4, ಶನಿವಾರಸಂತೆ 15.6, ಶಾಂತಳ್ಳಿ 12.6, ಕೊಡ್ಲಿಪೇಟೆ 8.8 ಮಿ.ಮೀ ಮಳೆಯಾಗಿದೆ.

ಶನಿವಾರಸಂತೆ: ಸಾಧಾರಣ ಮಳೆ
ಶನಿವಾರಸಂತೆ:ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಸಾಧಾರಣ ಮಳೆ ಸುರಿದಿದೆ.
ಸಂಜೆ 4 ಗಂಟೆಯಿಂದ 6 ಗಂಟೆಯವರೆಗೂ ಸಾಧಾರಣ ಮಳೆಯಾಗಿದೆ. ಭಾನುವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಮಳೆ ಬಿಡುವು ನೀಡಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಕೃಷಿಕರು ನಾಟಿ ಕೆಲಸದ ಸಿದ್ಧತೆಯಲ್ಲಿದ್ದಾರೆ.

ಹುದಿಕೇರಿ: ನಿರಂತರ ಮಳೆ
ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಹುದಿಕೇರಿ, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ ಮೊದಲಾದ ಭಾಗಕ್ಕೆ ಬೆಳಿಗ್ಗೆಯಿಂದ ಬಿಸಿಲು ಕಾಣಿಸಿಕೊಂಡಿತ್ತು. ಮಧ್ಯಾಹ್ನದ ನಂತರ ನಿರಂತರವಾಗಿ ಮಳೆ ಸುರಿಯಿತು. ಪೊನ್ನಂಪೇಟೆ ಭಾಗಕ್ಕೂ ಸಾಧಾರಣ ಮಳೆಯಾಯಿತು.

ಮೋಡ ಕವಿದ ವಾತಾವರಣದಲ್ಲಿ ಮೈ ನಡುಗಿಸುವ ಚಳಿ ಆರಂಭಗೊಂಡಿದೆ. ಆದರೆ ಗೋಣಿಕೊಪ್ಪಲು ಭಾಗಕ್ಕೆ ಮೋಡ ಕವಿದಿದ್ದು ಮಳೆ ಬೀಳಲಿಲ್ಲ. ಪೊನ್ನಂಪೇಟೆಯಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಗೋಣಿಕೊಪ್ಪಲಿಗೆ ಸಂಜೆಯವೆರೆಗೂ ಬಿಸಿಲು ಕಾಣಿಸಿಕೊಂಡಿತ್ತು.

ಪ್ರತಿ ದಿನ ಮಧ್ಯಾಹ್ನದ ಮೇಲೆ ಹವಾಮಾನದಲ್ಲಿ ವ್ಯತ್ಯಾಸವಾಗುತ್ತಿದ್ದು ಕೆಲವು ಕಡೆ ನಿರಂತರವಾಗಿ ಮಳೆಯಾಗುತ್ತಿದೆ. ತಿತಿಮತಿ, ಆನೆಚೌಕೂರು ಭಾಗದಲ್ಲಿ ಬಿಸಿಲಿತ್ತು. ಆನೇ  ಚೌಕೂರು ಅರಣ್ಯ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು ಕೆರೆಗಳಿಗೆ ನೀರು ಬಂದಿಲ್ಲ.


11 ಸಾವಿರ ಹೆಕ್ಟೆರ್ ಬತ್ತ ಬೆಳೆ ಗುರಿ
ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಸೋಮವಾರಪೇಟೆ ತಾಲ್ಲೂಕಿನಲ್ಲಿ 11 ಸಾವಿರ ಹೆಕ್ಟೆರ್ ಬತ್ತ ಬೆಳೆಯುವ ಗುರಿಯಿದ್ದು, ಈವರೆಗೆ 6 ಸಾವಿರ ಹೆಕ್ಟೆರ್ ಸಸಿ ಮಡಿಯನ್ನು ಮಾಡಲಾಗಿದೆ. 3,500 ಹೆಕ್ಟೆರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಗುರಿಯಿದ್ದು, 2580 ಹೆಕ್ಟೆರ್‌ನಲ್ಲಿ ಈಗಾಗಲೇ ಬಿತ್ತನೆ ಪೂರ್ಣ ಮಾಡಲಾಗಿದೆ. 250 ಹೆಕ್ಟೆರ್ ಹೊಗೆಸೊಪ್ಪು ಗುರಿ ಹೊಂದಿದ್ದು, ಅದರಲ್ಲಿ 115 ಹೆಕ್ಟೆರ್ ತಂಬಾಕು ಬೆಳೆಯಲಾಗಿದೆ. ಇದರೊಂದಿಗೆ ರಾಗಿ ಬಾಳೆ, ಶುಂಠಿ ಬೆಳೆಯಲಾಗುತ್ತಿದೆ.
-ಡಿ.ಪಿ.ಲೋಕೇಶ್


ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ
ಈ ವರ್ಷ ಜೂನ್‌ನಲ್ಲಿ ಉತ್ತಮ ಮುಂಗಾರು ಆಗುತ್ತಿರುವ ಕಾರಣ, ಬತ್ತ ಬಿತ್ತನೆಗೆ ಸಕಾಲವಾಗಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ತಳಿಯ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು, ರೈತರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಬಿತ್ತನೆ ಬೀಜ ಹಾಗೂ ರಾಸಾಯನಿಕ ಔಷಧಿಗಳು ಸಹಕಾರ ಸಂಘಗಳಲ್ಲಿ ದಾಸ್ತಾನು ಇರುವುದರಿಂದ ರೈತರು ಅದನ್ನು ಪಡೆದುಕೊಳ್ಳಲಿ.
-ಡಾ.ಎಚ್.ಸಿ. ರಾಜಶೇಖರ್, ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT