ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಅರಣ್ಯದಲ್ಲಿ ಕಲ್ಲು ಗಣಿ ನರ್ತನ

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟಗಳ ಹೃದಯ ಭಾಗದಂತಿರುವ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ, ಕಲ್ಲುಗಣಿ ಮಾಫಿಯಾ ಕೈಗೆ ಸಿಲುಕಿ ತತ್ತರಿಸುತ್ತಿದೆ. ಜಿಲ್ಲೆಯ 74 ಸ್ಥಳಗಳಲ್ಲಿ ದಟ್ಟ ಅರಣ್ಯದ ಮಧ್ಯದಲ್ಲೇ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕುಮ್ಮಕ್ಕಿನಲ್ಲೇ ಕಲ್ಲು ಗಣಿ ಮಾಫಿಯಾದ ರುದ್ರನರ್ತನ ನಡೆದಿದೆ ಎಂಬುದು ಇತ್ತೀಚೆಗೆ ನಡೆದ ತನಿಖೆಯಲ್ಲಿ ಬಯಲಿಗೆ ಬಂದಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕಾರವಾರ ಮತ್ತು ಹೊನ್ನಾವರ ಅರಣ್ಯ ವಿಭಾಗಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಅರಣ್ಯ ಇಲಾಖೆಯ ಜಾಗೃತ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಆರ್.ಗೋಕುಲ್ ತನಿಖೆ ನಡೆಸಿದ್ದರು.

ಮೇ 30ರಂದು ಜಾಗೃತ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಒಂಬತ್ತು ಪುಟಗಳ ಮಧ್ಯಂತರ ವರದಿ ಸಲ್ಲಿಸಿರುವ ಅವರು, ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡುತ್ತಿದ್ದ ವ್ಯಕ್ತಿಗಳೇ ಕಲ್ಲು ಗಣಿ ಮಾಫಿಯಾದಲ್ಲಿ ಸಕ್ರಿಯವಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಶಿರಸಿ, ಕಾರವಾರ ಮತ್ತು ಹೊನ್ನಾವರ ಅರಣ್ಯ ವಿಭಾಗಗಳ 74 ಸ್ಥಳಗಳಲ್ಲಿ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಶಿರಸಿ ವಿಭಾಗದ ಶಿರಸಿ ತಾಲ್ಲೂಕಿನಲ್ಲಿ ಎರಡು ಮತ್ತು ಸಿದ್ದಾಪುರ ತಾಲ್ಲೂಕಿನ ಮೂರು ಕಡೆಗಳಲ್ಲಿ ಅಕ್ರಮ ಕಲ್ಲು ಗಣಿಗಳಿವೆ. ಕಾರವಾರ ವಿಭಾಗದ ಕಾರವಾರ ತಾಲ್ಲೂಕಿನಲ್ಲಿ 15 ಮತ್ತು ಅಂಕೋಲಾ ತಾಲ್ಲೂಕಿನ ಮೂರು ಸ್ಥಳಗಳಲ್ಲಿ ಅರಣ್ಯದೊಳಗೆ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
 
ಹೊನ್ನಾವರ ವಿಭಾಗದ ಹೊನ್ನಾವರ ತಾಲ್ಲೂಕಿನ 18, ಭಟ್ಕಳ ತಾಲ್ಲೂಕಿನ 19, ಮುಂಡಗೋಡ ತಾಲ್ಲೂಕಿನ ಮೂರು ಮತ್ತು ಯಲ್ಲಾಪುರ ತಾಲ್ಲೂಕಿನ ಒಂದು ಕಡೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿದೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಕಲ್ಲು ಗಣಿಗಳಿಗೆ ಮಾತ್ರ ಅನುಮತಿ ಇದೆ. ಆದರೆ, 92 `ಕ್ರಷರ್~ಗಳು ಕಾರ್ಯನಿರ್ವಹಿಸುತ್ತಿವೆ. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತೆಗೆದ ಕಲ್ಲುಗಳನ್ನು ಈ ಕ್ರಷರ್‌ಗಳಿಗೆ ಬಳಸಲಾಗುತ್ತಿದೆ.

ಅರಣ್ಯ ಇಲಾಖೆಯು ಜಿಲ್ಲಾ ಕಾರ್ಯಪಡೆ ಸಭೆಯಲ್ಲೇ ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಕ್ರಷರ್‌ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕೋರಿಕೆಯನ್ನೂ ಜಿಲ್ಲಾಡಳಿತದ ಮುಂದಿಡಲಾಗಿತ್ತು. ಅಕ್ರಮವಾಗಿ ತೆಗೆದ ಕಲ್ಲುಗಳನ್ನು ಕ್ರಷರ್‌ಗಳು ಬಳಸುತ್ತಿವೆ ಎಂಬುದು ಮನವರಿಕೆ ಆದರೂ ಈವರೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಮಾಹಿತಿ ವರದಿಯಲ್ಲಿದೆ.

`ಉತ್ತರ ಕನ್ನಡ ಜಿಲ್ಲೆ ರಾಜ್ಯದ ಒಟ್ಟು ಅರಣ್ಯ ಪ್ರದೇಶದಲ್ಲಿನ ಶೇಕಡ 25ರಷ್ಟನ್ನು ಒಳಗೊಂಡಿದೆ. ದಟ್ಟ ಅರಣ್ಯದ ಮಧ್ಯ ಭಾಗದಲ್ಲೇ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಕೈಗಾ ಅಣು ಸ್ಥಾವರದ ಸಮೀಪ, `ಸೀ ಬರ್ಡ್~ ನೌಕಾನೆಲೆಯ ಸುತ್ತಮುತ್ತ ಹಾಗೂ ದಾಂಡೇಲಿ ಹುಲಿ ಅಭಯಾರಣ್ಯದ ವ್ಯಾಪ್ತಿಯಲ್ಲೂ ಸ್ಫೋಟಕಗಳನ್ನು ಬಳಸಿ ಅಕ್ರಮವಾಗಿ ಕಲ್ಲು ತೆಗೆಯಲಾಗುತ್ತಿದೆ. ಈಗಿನ ಪ್ರಮಾಣದಲ್ಲೇ ಅಕ್ರಮ ಗಣಿಗಾರಿಕೆ ಮುಂದುವರಿದಲ್ಲಿ ಉತ್ತರ ಕನ್ನಡ ಜಿಲ್ಲೆ ಬಳ್ಳಾರಿ ಜಿಲ್ಲೆಯಂತಾಗುವ ಅಪಾಯವಿದೆ~ ಎಂದು ಗೋಕುಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಭಾವಿಗಳ ಕುಮ್ಮಕ್ಕು: ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪ್ರಭಾವಿಗಳು, ಹಿರಿಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವುದಕ್ಕೆ ತನಿಖೆಯ ವೇಳೆ ಸಾಕ್ಷ್ಯಗಳು ದೊರೆತಿವೆ. ಜಿಲ್ಲೆಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘವು ಸಲ್ಲಿಸಿರುವ ಮನವಿಯಲ್ಲಿ ಈ ಕುರಿತ ಸ್ಪಷ್ಟ ಮಾಹಿತಿ ಇದೆ.

`ಅಭಿವೃದ್ಧಿ ಕಾಮಗಾರಿಗಳಿಗೆ ಕಲ್ಲು ಬಳಕೆ~ ವಿಷಯವನ್ನು ಮುಂದಿಟ್ಟುಕೊಂಡು ಒತ್ತಡ ಹೇರಲಾಗುತ್ತಿದೆ. ಒತ್ತಡಕ್ಕೆ ಮಣಿಯದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿಗಳನ್ನು ರಾಜಕೀಯ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಲಾಗುತ್ತಿದೆ ಎಂಬ ಅಂಶ ವರದಿಯಲ್ಲಿದೆ.

ಜಿಲ್ಲೆಯ ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ ಅರಣ್ಯಾಧಿಕಾರಿಗಳ ವಿರುದ್ಧ ಚುನಾಯಿತ ಜನಪ್ರತಿನಿಧಿಗಳ ನೇತೃತ್ವದಲ್ಲೇ ಪ್ರತಿಭಟನೆ ನಡೆದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರು ಸೇರಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿರುವ ಘಟನೆಗಳ ವಿಡಿಯೊ ತುಣುಕುಗಳನ್ನೂ ವರದಿಯ ಜೊತೆ ನೀಡಲಾಗಿದೆ.

ಮುಳುವಾಗುತ್ತಿದೆ `ಅಭಿವೃದ್ಧಿ~
2010ರ ಜನವರಿಯಲ್ಲಿ ತಾವು ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿದ್ದಾಗ ಅಕ್ರಮ ಕಲ್ಲುಗಣಿಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, 2010ರ ಫೆಬ್ರುವರಿ 11ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, `ಅಭಿವೃದ್ಧಿ ಕಾಮಗಾರಿ~ಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಆ ವರ್ಷದ ಮಾರ್ಚ್ ಅಂತ್ಯದವರೆಗೆ ಅನಧಿಕೃತ ಕಲ್ಲು ಗಣಿಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಅಲ್ಲಿ ತೆಗೆಯುವ ಕಲ್ಲಿನ ಮಾರುಕಟ್ಟೆ ದರದ ಮೊತ್ತವನ್ನು ವಸೂಲಿ ಮಾಡಿ, ಸಾಗಣೆಗೆ ಸಮ್ಮತಿಸಲು ನಿರ್ಧರಿಸಲಾಗಿತ್ತು.

ಆದರೆ, ಈ ವಿಷಯ ಲೋಕಾಯುಕ್ತದವರೆಗೂ ತಲುಪಿತು. ಮೇ ಅಂತ್ಯದವರೆಗೂ ಅನಧಿಕೃತ ಕಲ್ಲು ಗಣಿಗಳನ್ನು ಮುಂದುವರಿಸಲು ಅವಕಾಶ ನೀಡುವಂತೆ ಮಾರ್ಚ್ 17ರಂದು ಆಗಿನ ಲೋಕಾಯುಕ್ತರು, ಚುನಾಯಿತ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಹಾಜರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ನಂತರ ನಡೆಯುವ ಕಾಮಗಾರಿಗಳಿಗೆ ಜಿಲ್ಲೆಯ ಹೊರಗಿನಿಂದ ಕಲ್ಲು ಪೂರೈಕೆಗೆ ವ್ಯವಸ್ಥೆ ಮಾಡುವ ಅಥವಾ ಅರಣ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಹೊಸ ಕಲ್ಲು ಗಣಿಗಳಿಗೆ ಅನುಮತಿ ಪಡೆಯುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು.

ನಂತರವೂ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. 2010-11ರಲ್ಲಿ 700 ಪ್ರಕರಣಗಳನ್ನು ಕಾರವಾರ ವಿಭಾಗ ಒಂದರಲ್ಲೇ ದಾಖಲಿಸಲಾಗಿದೆ. ಕಾರವಾರ ನೌಕಾನೆಲೆಯ ಮುಖ್ಯಸ್ಥರ ಕೋರಿಕೆಯಂತೆ ನೌಕಾನೆಲೆ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ನೌಕಾನೆಲೆಯ ಅಭಿವೃದ್ಧಿ ವಿಭಾಗ ವಿವಿಧ ಕಾಮಗಾರಿಗಳಿಗೆ ಕಲ್ಲು ಅಗತ್ಯವಿದೆ ಎಂಬ ಕಾರಣ ನೀಡಿ ಅಕ್ರಮಕ್ಕೆ ಪ್ರೋತ್ಸಾಹಿಸುತ್ತಿದೆ. ನೌಕಾನೆಲೆಗಾಗಿ ಪ್ರತ್ಯೇಕ ಗಣಿಗಳಿಗೆ ಅನುಮತಿ ಪಡೆಯುವಂತೆ ಅರಣ್ಯ ಇಲಾಖೆ ನೀಡಿದ ಸಲಹೆಯನ್ನು ಪಾಲಿಸುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT