ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಶೈಲಿಯಲ್ಲಿ ಔತಣಕೂಟ

Last Updated 11 ಅಕ್ಟೋಬರ್ 2012, 9:45 IST
ಅಕ್ಷರ ಗಾತ್ರ

ಬೆಳಗಾವಿ: `ಸುವರ್ಣ ಸೌಧ~ವನ್ನು ನಾಡಿಗೆ ಲೋಕಾರ್ಪಣೆ ಮಾಡಲು ಗುರುವಾರ ನಗರಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಉತ್ತರ ಕರ್ನಾಟಕ ಶೈಲಿಯ ಭೋಜನವನ್ನು ಉಣಬಡಿಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ.

ಉದ್ಘಾಟನಾ ಸಮಾರಂಭದ ಬಳಿಕ ಮುಖ್ಯಮಂತ್ರಿಗಳು ಹಾಗೂ ಶಾಸಕರು, ಸಂಸದರೊಂದಿಗೆ ಔತಣಕೂಟದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿಗಳು ಇಚ್ಛಿಸಿರುವುದರಿಂದ `ಸುವರ್ಣ ಸೌಧ~ದ ಬೆಂಕ್ವೆಟ್ ಹಾಲ್‌ನಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ.

`ಸುವರ್ಣ ಸೌಧ~ ಉದ್ಘಾಟಿಸುವ ರಾಷ್ಟ್ರಪತಿಗಳ ಬಾಯನ್ನು ಬೆಳಗಾವಿ ಕುಂದಾ, ಗೋಧಿ ಹುಗ್ಗಿ ಸಿಹಿ ಮಾಡಲಿದೆ. ಉತ್ತರ ಕರ್ನಾಟಕ ಶೈಲಿಯ ಊಟವು ದೇಸಿ ಸಂಸ್ಕೃತಿಯ ಸೊಗಡನ್ನು ಸಾರಲಿದೆ.

ಭೋಜನಕ್ಕೆ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಖಡಕ್ ರೊಟ್ಟಿ ಹಾಗೂ ಚಪಾತಿ ಇದೆ. ಇವುಗಳಿಗೆ ಹಚ್ಚಿಕೊಳ್ಳಲು ರುಚಿ ರುಚಿಯಾದ ಮಡಕಿಕಾಳ ಬಾಜಿ, ಬದನೆಕಾಯಿ ಪಲ್ಲೆ. ಜೊತೆಗೆ ಗುರೆಳ್ಳು ಹಾಗೂ ಶೇಂಗಾ, ಪುಟಾಣಿ ಚಟ್ನಿ ಮತ್ತು ತಣ್ಣನೆಯ ಮೊಸರು ಸಾಥ್ ನೀಡಲಿವೆ.

`ಊಟಕ್ಕೆ ಬೆಳಗಾವಿ ಕುಂದಾ, ಗೋಧಿ ಹುಗ್ಗಿ ಸಿಹಿ ನೀಡಲಿದೆ. ವೆಜ್ ಪಲಾವ್, ಪ್ಲೇನ್ ರೈಸ್ ಜೊತೆಗೆ ನುಗ್ಗಿ ಕಾಯಿ ಸಾಂಬಾರ್, ರಸಂ ಇದೆ. ಊಟದ ರುಚಿಯನ್ನು ಮಿರ್ಚಿ ಬಜ್ಜಿ ಹೆಚ್ಚಿಸಲಿದೆ. ಊಟದ ಬಳಿಕ ತಿನ್ನಲು ವಿವಿಧ ಫ್ಲೇವರ್‌ನ ಐಸ್ ಕ್ರೀಂ ಹಾಗೂ ಸ್ಪೆಶಲ್ ಪಾನ್ ಸಹ ಇಡಲಾಗುವುದು~ ಎಂದು ಬೆಂಕ್ವೆಟ್ ಹಾಲ್‌ನಲ್ಲಿ ಭೋಜನ ಕೂಟದ ವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ವಿಜಾಪುರದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ ಯಡಹಳ್ಳಿ ತಿಳಿಸಿದರು.

ಉತ್ತರ ಭಾರತ ಶೈಲಿ ಊಟದಲ್ಲಿ ತಂದೂರಿ, ನಾನ್, ಕುಲ್ಚಾ ಹಾಗೂ ರುಮಾಲಿ ರೊಟ್ಟಿ, ಪನ್ನೀರ್ ಟೀಕಾ ಮಸಾಲಾ, ಹೈದ್ರಾಬಾದಿ ಚನಾ ಮಸಾಲಾ, ವೆಜ್ ಕೊಲ್ಲಾಪುರಿ ಬಾಜಿ, ಕುಷ್ಕಾ, ದಾಲ್ ತಡಕಾ ಇರಲಿದೆ.
`ಸುವರ್ಣ ಸೌಧ ಉದ್ಘಾಟನೆಯ ಬಳಿಕ ರಾಷ್ಟ್ರಪತಿಗಳು ಸೆಂಟ್ರಲ್ ಹಾಲ್‌ಗೆ ತಾಗಿಕೊಂಡಿರುವ ವಿಐಪಿ ಕೋಣೆಯಲ್ಲಿ 10 ನಿಮಿಷ ವಿಶ್ರಾಂತಿ ಪಡೆಯಲಿದ್ದಾರೆ. ಆ ಬಳಿಕ ಶಾಸಕರು ಹಾಗೂ ಸಂಸದರನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಲಿದ್ದಾರೆ. ಆ ಬಳಿಕ ರಾಷ್ಟ್ರಪತಿಗಳು ರಾಜ್ಯಪಾಲ ಭಾರದ್ವಾಜ ಹಂಸರಾಜ್,  ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವರು, ರಾಜ್ಯ ಸಾರ್ಕಾರದ ಸಚಿವರು, ಸಭಾಧ್ಯಕ್ಷರು, ಸಭಾಪತಿ, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳೊಂದಿಗೆ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಕ್ವೆಟ್ ಹಾಲ್‌ನಲ್ಲಿ ಸುಮಾರು 400 ಜನರು ಕುಳಿತು ಊಟ ಮಾಡಲು ಅಗತ್ಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ~ ಎಂದು ಯಡಹಳ್ಳಿ ವಿವರಿಸಿದರು.

`ಬೆಳಗಾವಿಯ `ಸಾಯಿ ಕೇಟರ್ಸ್‌~ನವರು ಭೋಜನಕ್ಕೆ ಅಗತ್ಯ ಅಡುಗೆಯನ್ನು ಸಿದ್ಧಪಡಿಸಲಿದ್ದಾರೆ. ರಾಷ್ಟ್ರಪತಿಗಳು ಬೆಂಕ್ವೆಟ್ ಹಾಲ್‌ನಲ್ಲಿ ಶಾಸಕರು- ಸಂಸದರೊಂದಿಗೆ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವುದರಿಂದ ಊಟ ಬಡಿಸಲು ಮುಂಬೈನ ಸ್ಟಾರ್ ಹೋಟೆಲ್‌ಗಳ `ಸರ್ವರ್~ಗಳನ್ನು ಕರೆಸಿಕೊಂಡಿದ್ದೇವೆ~ ಎಂದು ತಿಳಿಸಿದರು.

ಬೆಂಕ್ವೆಟ್ ಹಾಲ್ ಪಕ್ಕದಲ್ಲೇ ಸಚಿವಾಲಯದ ಅಧಿಕಾರಿಗಳು, ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು, ರಾಷ್ಟ್ರಪತಿ ಕಚೇರಿ ಅಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಬರುವ ಸಾರ್ವಜನಿಕರಿಗೂ ಸಮಾರಂಭದ ಸ್ಥಳದ ಪಕ್ಕದಲ್ಲೇ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಲ್ಲಿ ಊಟದ ರುಚಿಯನ್ನು ಸವಿಯಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT