ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾದಿಂದ ಮೂರನೇ ಪರಮಾಣು ಪರೀಕ್ಷೆ

Last Updated 12 ಫೆಬ್ರುವರಿ 2013, 9:22 IST
ಅಕ್ಷರ ಗಾತ್ರ

ಪ್ಯೊಂಗ್‌ಯಾಂಗ್ / ಸಿಯೋಲ್ (ಐಎಎನ್‌ಎಸ್) : ಶತ್ರುದೇಶವಾದ ಅಮೆರಿಕದ ನೀತಿಗೆ ವಿರುದ್ಧವಾಗಿ ದೇಶದ ಭದ್ರತೆಯನ್ನು ಮತ್ತಷ್ಟು ಸುರಕ್ಷಿತಗೊಳಿಸಲು ಉತ್ತರ ಕೊರಿಯಾ ತನ್ನ ಮೂರನೇ ಪರಮಾಣು  ಪರೀಕ್ಷೆಯನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದೆ. ಬೆನ್ನಲ್ಲೇ ದಕ್ಷಿಣ ಕೊರಿಯಾ ಗಡಿಯಲ್ಲಿ ತನ್ನ ಸೇನೆಯನ್ನು ಕಟ್ಟೆಚ್ಚರದಲ್ಲಿ ಇರಿಸಿದೆ.

ಉತ್ತರ ಕೊರಿಯಾದ ಕಿಲ್ಜು ಎಂಬಲ್ಲಿ ಬೆಳಗ್ಗೆ 11. 57ರ ವೇಳೆಗೆ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಈ ಪ್ರದೇಶದಲ್ಲಿ 4.9ರಷ್ಟು ತೀವ್ರತೆಯ ಕೃತಕ ಭೂಕಂಪ ಸಂಭವಿಸುವುದರೊಂದಿಗೆ ಪರಮಾಣು ಪರೀಕ್ಷೆಯ ವಿಚಾರ ಜಗತ್ತಿನ ಗಮನಕ್ಕೆ ಬಂದಿತು.

ಪರಮಾಣು  ಪರೀಕ್ಷೆ ಯಶಸ್ವಿಯಾಗಿರುವುದಾಗಿ ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎಯನ್ನು ಉಲ್ಲೇಖಿಸಿ ಕ್ಸಿನ್‌ಕ್ಸಿನ್‌ಹುವಾ ವರದಿ ಮಾಡಿದೆ.

ಇದರಿಂದಾಗಿ ಗಡಿ ಭಾಗದಲ್ಲಿ ಸಂಭವಿಸಬಹುದಾದ ಪ್ರಚೊದನೆಯನ್ನು ತಡೆಯಲು ದಕ್ಷಿಣ ಕೊರಿಯಾ ತನ್ನ ಸೇನೆಗೆ ಮುನ್ನೆಚ್ಚರಿಕೆ ನೀಡಿದೆ. ಅಲ್ಲದೆ ಉತ್ತರ ಕೊರಿಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ದ. ಕೊರಿಯಾದ ರಕ್ಷಣಾ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಡಿ. 12ರಂದು ರಾಕೆಟ್ ಉಡಾವಣೆಯನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ನಿಶಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ನಿರ್ಣಯವೊಂದನ್ನು ತೆಗೆದುಕೊಂಡಿತ್ತು.  ಇದಕ್ಕೆ  ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಉತ್ತರ ಕೊರಿಯಾ ಅಮೆರಿಕವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷಿಪಣಿ ಮತ್ತು ಪರಮಾಣು ಪರೀಕ್ಷೆ ನಡೆಸುವ ಶಪಥ ಕೈಗೊಂಡಿತ್ತು.

ಈ ಮೊದಲು ಉತ್ತರ ಕೊರಿಯಾ 2006 ಮತ್ತು 2009ರಲ್ಲಿ ಇದೇ ರೀತಿಯಲ್ಲಿ ಪರಮಾಣುಪರೀಕ್ಷೆ ನಡೆಸಿತ್ತು.

ಖಂಡನೆ : ಉತ್ತರ ಕೊರಿಯಾದ ಪರಮಾಣು ಪರೀಕ್ಷೆ ನಡೆಸಿರುವುದು ವಿಷಾದನೀಯ ಎಂದು ಜಪಾನ್ ಪ್ರಧಾನಿ ಪ್ರತಿಕ್ರಿಯಿಸಿದರು.

ಇತ್ತ ದಕ್ಷಿಣ ಕೊರಿಯಾ ಸರ್ಕಾರ ಸಹ ಉತ್ತರ ಕೊರಿಯಾದ ಕ್ರಮವನ್ನು ಖಂಡಿಸಿದ್ದು ವಿಶ್ವಸಂಸ್ಥೆಯ ನಿರ್ಣಯದ ಸಂಪೂರ್ಣ ಉಲ್ಲಂಘನೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT