ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದ ಸಿದ್ಧಗಂಗೆ ಜಾತ್ರೆಗೆ ಸಂಭ್ರಮದ ತೆರೆ

Last Updated 11 ಫೆಬ್ರುವರಿ 2013, 9:10 IST
ಅಕ್ಷರ ಗಾತ್ರ

ಕೊಪ್ಪಳ: ಉತ್ತರ ಕರ್ನಾಟಕ ಭಾಗದ ಸಿದ್ಧಗಂಗೆ ಎಂದೇ ಖ್ಯಾತಿ ಹೊಂದಿರುವ ಗವಿಮಠದ ಜಾತ್ರಾ ಮಹೋತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಅದರಲ್ಲೂ ಮಹಾರಥೋತ್ಸವ ದಿನ (ಜ. 29) ಆರಂಭಗೊಂಡಿದ್ದ ದಾಸೋಹದಲ್ಲಿ ಸಹಸ್ರಾರು ಜನ ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯತೆಯಿಂದ ಬೀಗಿದರು.

ಗವಿಮಠದ ಜಾತ್ರೆ ಕೇವಲ ಧಾರ್ಮಿಕ ವಿಧಿ-ವಿಧಾನಗಳಿಗೆ ಸೀಮಿತವಾಗಿರಲಿಲ್ಲ ಎಂಬುದು ಈ ವರ್ಷವೂ ಸಾಬೀತಾಗಿದೆ. ರಥೋತ್ಸವ, ಕರ್ತೃ ಗದ್ದುಗೆ ಪೂಜೆ, ಶ್ರೀಗಳಿಂದ ಆಶೀರ್ವಚನ- ಇಂತಹ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಧರ್ಮ ಜಾಗೃತಿಗಾಗಿ ವಿವಿಧ ಮಠಾಧೀಶರಿಂದ ಸಂದೇಶ, ಸಂಗೀತ ಕಚೇರಿಗಳು ಸಹ ನಡೆದವು. ಕೇವಲ ಹಿಂದೂಸ್ತಾನಿ ಪ್ರಕಾರದ ಸಂಗೀತ ಮಾತ್ರವಲ್ಲ, ದಕ್ಷಿಣಾದಿ (ಕರ್ನಾಟಕ ಸಂಗೀತ) ಗಾಯನ ಕೇಳುವ ಅವಕಾಶವನ್ನೂ ಶ್ರೀಮಠ ಜಾತ್ರಾ ಸಂದರ್ಭದಲ್ಲಿ ಒದಗಿಸಿದ್ದು ವಿಶೇಷವಾಗಿತ್ತು.

ಇನ್ನು, ಹಾಸ್ಯಭರಿತ ಮಾತುಗಳಿಂದಲೇ ನಾಡಿನ ಮನೆ ಮಾತಾಗಿರುವ ನಮ್ಮ ಜಿಲ್ಲೆಯವರೇ ಆಗಿರುವ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ ಅವರ ಮಾತಿನ ಮೋಡಿಗೆ ನಕ್ಕು ಮೈ-ಮನಸ್ಸನ್ನು ಹಗುರ ಮಾಡಿಕೊಳ್ಳುವ ಸಂದರ್ಭವನ್ನು ಈ ಜಾತ್ರಾ ಮಹೋತ್ಸವ ಒದಗಿಸಿಕೊಟ್ಟಿತ್ತು.

ನರೇಗಲ್ಲ ಗ್ರಾಮದ ಬಾಲಕ-ಬಾಲಕಿಯರು ನಡೆಸಿಕೊಟ್ಟ ಮಲ್ಲಕಂಬ, ರೋಪ್ ಮಲ್ಲಗಂಬ, ಮುಂಗೈ ಕುಸ್ತಿಯಂತಹ ಸಾಹಸ ಕ್ರೀಡೆಗಳ ಆಯೋಜನೆ ಮೂಲಕ ದೇಸೀ ಆಟಗಳಿಗೆ ಪ್ರೋತ್ಸಾಹ ನೀಡುವ ತನ್ನ ಬದ್ಧತೆ- ಆಸ್ಥೆಯನ್ನು ಶ್ರೀಮಠ ಪ್ರದರ್ಶಿಸಿದೆ ಎಂದರೆ ಅತಿಶಯೋಕ್ತಿಯಾಗದು.

ಇಡೀ ಊರಿನ ಜನ ತಮ್ಮ ಮನೆಗಳ ಮೇಲೆಯೇ ನಿಂತುಕೊಂಡು ಬಾನಂಗಳದಲ್ಲಿ ಪಟಾಕಿ ಮೂಡಿಸುವ ಸುಂದರ ಆಕೃತಿಗಳನ್ನು ನೋಡುವಂತೆ ಮಾಡಿದ್ದು ಸಹ ಈ ಬಾರಿ ಜಾತ್ರೆಯ ವೈಶಿಷ್ಟ್ಯ. ಈ ಹಿಂದಿನ ವರ್ಷಗಳಲ್ಲಿ ಕೈಲಾಸ ಮಂಟಪ ಮತ್ತು ಗವಿಸಿದ್ಧೇಶ್ವರ ಪದವಿ ಕಾಲೇಜಿನ ಮಧ್ಯದ ಸ್ಥಳದಲ್ಲಿ ನಡೆಯುತ್ತಿದ್ದ ಮದ್ದು ಸುಡುವ ಕಾರ್ಯಕ್ರಮವನ್ನು ಈ ವರ್ಷದಿಂದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಮಾಳಿಗೆ ಮೇಲೆ ಸಂಘಟಿಸುವ ಮೂಲಕ ಇಂತಹ ಉತ್ತಮ ಅವಕಾಶವನ್ನು ಕಲ್ಪಿಸಲಾಗಿತ್ತು.

ಇನ್ನು, ದಾಸೋಹದ ವಿಷಯಕ್ಕೆ ಬಂದರೆ, ಜ. 29ರಿಂದ ಫೆ. 10ರ ವರೆಗೆ ನಡೆದ ದಾಸೋಹದಲ್ಲಿ ಪ್ರತಿ ದಿನ ಸರಾಸರಿ 75-80 ಸಾವಿರ ಜನರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ಶ್ರೀಮಠದ ಮೂಲಗಳು ಹೇಳುತ್ತವೆ. ಈ ದಾಸೋಹಕ್ಕಾಗಿ ಶ್ರೀಮಠಕ್ಕೆ ಅರ್ಪಣೆಯಾಗಿರುವ ರೊಟ್ಟಿಗಳ ಸಂಖ್ಯೆ ಅಂದಾಜು 13 ಲಕ್ಷ ಎಂಬುದು ಈ ಭಾಗದ ಭಕ್ತರಲ್ಲಿ ಮಠದ ಬಗ್ಗೆ ಇರುವ ಭಕ್ತಿ-ಅಭಿಮಾನವನ್ನು ತೋರುತ್ತದೆ ಎಂದೇ ಹೇಳಬಹುದು.

ಇನ್ನು, ಜಾತ್ರಾ ಸಂದರ್ಭದಲ್ಲಿ ಭಕ್ತರಲ್ಲಿ ಕಂಡು ಬಂದ ಶಿಸ್ತಿನ ವರ್ತನೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅದೇ ರೀತಿ, ಜಾತ್ರಾ ಮಹೋತ್ಸವದ ಯಶಸ್ಸಿಗೆ ಪೊಲೀಸ್ ಇಲಾಖೆ, ನಗರಸಭೆ, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರವನ್ನು ಮರೆಯುವಂತಿಲ್ಲ ಎಂದು ಗವಿಮಠದ ಶ್ರೀಗಳು ಕೃತಜ್ಞತೆ ಹೇಳುತ್ತಾರೆ.

ಆಟಿಕೆ ಸಾಮಾನು ಸೇರಿದಂತೆ ತರಾವರಿ ವಸ್ತುಗಳ ಮಾರಾಟ, ಮನರಂಜನಾ ಕ್ರೀಡೆಗಳು ಇನ್ನೂ 8-10 ದಿನಗಳ ನಂತರ ಕ್ರಮೇಣ ಕಡಿಮೆಯಾಗುತ್ತವೆ. ಈ ವರ್ಷದ ಜಾತ್ರಾ ಸಂಭ್ರಮದ ನೆನಪಿನೊಂದಿಗೆ ಮುಂದಿನ ವರ್ಷದ ಜಾತ್ರಾ ಮಹೋತ್ಸವಕ್ಕೆ ಶ್ರೀಮಠ, ನಗರದ ಜನತೆ ಸೇರಿದಂತೆ ಭಕ್ತ ಸಮೂಹವೇ ಕಾತರದಿಂದ ಕಾಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT